ಕ್ವಾಲ್ ಕಾಮ್ ವೆಂಚರ್ಸ್ ನಿಂದ ಜಿಯೋ ಪ್ಲಾಟ್ ಫಾರ್ಮ್ ನ 0.15 ಪರ್ಸೆಂಟ್ ಷೇರು ಪಾಲು ಖರೀದಿ ಅಥವಾ 730 ಕೋಟಿ ರುಪಾಯಿ ಹೂಡಿಕೆ ಮಾಡಲಾಗುವುದು ಎಂದು ಭಾನುವಾರ ಕಂಪೆನಿಯ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ. ಎರಡು ತಿಂಗಳಿಗೂ ಕಡಿಮೆ ಅವಧಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ನ ಟೆಲಿಕಾಂ ಮತ್ತು ಡಿಜಿಟಲ್ ವ್ಯವಹಾರದಲ್ಲಿ ಷೇರು ಖರೀದಿ ಮಾಡುತ್ತಿರುವ ಹನ್ನ್ನೆರಡನೇ ಹೂಡಿಕೆದಾರ ಕಂಪೆನಿ ಇದು.
ಕ್ವಾಲ್ ಕಾಮ್ ಹೂಡಿಕೆಯೊಂದಿಗೆ ರಿಲಯನ್ಸ್ ಜಿಯೋ ಪ್ಲಾಟ್ ಫಾರ್ಮ್ ನಲ್ಲಿ ಆಗಿರುವ ಒಟ್ಟು ಬಂಡವಾಳ ಹೂಡಿಕೆ ಮೊತ್ತ 1,18,318.45 ಕೋಟಿ ಅಥವಾ 25.24 ಪರ್ಸೆಂಟ್ ಖರೀದಿ ಆದಂತಾಗುತ್ತದೆ. ಈ ಹೂಡಿಕೆಯನ್ನು ಮಾರುಕಟ್ಟೆ ನಿಯಂತ್ರಕರು ಒಪ್ಪಬೇಕು ಹಾಗೂ ಇನ್ನೂ ಕೆಲ ಅನುಮತಿಗಳನ್ನು ಪಡೆಯಬೇಕಾಗುತ್ತದೆ.
ರಿಲಯನ್ಸ್ ಜಿಯೋಗೆ 40 ಕೋಟಿ ಗ್ರಾಹಕರು
ಸದ್ಯ ರಿಲಯನ್ಸ್ ಜಿಯೋದ ಈಕ್ವಿಟಿ ಮೌಲ್ಯ 4.91 ಲಕ್ಷ ಕೋಟಿ ರುಪಾಯಿ ಇದ್ದರೆ, ಎಂಟರ್ ಪ್ರೈಸ್ ಮೌಲ್ಯ 5.16 ಲಕ್ಷ ಕೋಟಿ ಇದೆ. ರಿಲಯನ್ಸ್ ಜಿಯೋಗೆ ಭಾರತದಲ್ಲಿ 40 ಕೋಟಿಯಷ್ಟು ಗ್ರಾಹಕರಿದ್ದಾರೆ. ಇದರ ಹೊರತಾಗಿ ಇತರೆ ಡಿಜಿಟಲ್ ಆಸ್ತಿ ಹಾಗೂ ಹೂಡಿಕೆಗಳು ಇವೆ.
ಹನ್ನೆರಡು ಹೂಡಿಕೆದಾರರು
ಕ್ವಾಲ್ ಕಾಮ್ ವೆಂಚರ್ಸ್ ಗೂ ಮುನ್ನ ಇಂಟೆಲ್ ಕ್ಯಾಪಿಟಲ್, ಫೇಸ್ ಬುಲ್, ಅಬುಧಾಬಿ ಇನ್ವೆಸ್ಟ್ ಮೆಂಟ್ ಅಥಾರಿಟಿ ಮತ್ತು ಮುಬದಾಲ, ಸಿಲ್ವರ್ ಲೇಕ್, ವಿಸ್ಟಾ ಈಕ್ವಿಟಿ ಪಾರ್ಟನರ್ಸ್, ಜನರಲ್ ಅಟ್ಲಾಂಟಿಕ್, ಕೆಕೆಆರ್, ಟಿಪಿಜಿ, ಎಲ್ ಕಾಟರ್ಟನ್ ಮತ್ತು ಸೌದಿ ಅರೇಬಿಯಾದ ಪಬ್ಲಿಕ್ ಇನ್ವೆಸ್ಟ್ ಮೆಂಟ್ ಫಂಡ್ ರಿಲಯನ್ಸ್ ಜಿಯೋ ಪ್ಲಾಟ್ ಫಾರ್ಮ್ ನಲ್ಲಿ ಹೂಡಿಕೆ ಮಾಡಿವೆ.
53,124 ಕೋಟಿ ಮೌಲ್ಯದ ಹಕ್ಕಿನ ಷೇರು
ಮಾರ್ಚ್ 2021ರೊಳಗೆ ರಿಲಯನ್ಸ್ ಇಂಡಸ್ಟ್ರೀಸ್ ಅನ್ನು ಸಾಲಮುಕ್ತ ಮಾಡುವ ಉದ್ದೇಶದಿಂದ 53,124 ಕೋಟಿ ಮೌಲ್ಯದ ಹಕ್ಕಿನ ಷೇರುಗಳನ್ನು (ರೈಟ್ಸ್ ಇಶ್ಯೂ) ಈಗಾಗಲೇ ವಿತರಿಸಿದೆ. ಅಂದ ಹಾಗೆ ಕ್ವಾಲ್ ಕಾಮ್ ವೆಂಚರ್ಸ್ ಕಂಪೆನಿ 2000ನೇ ಇಸವಿಯಿಂದ ಟೆಕ್ನಾಲಜಿ ಕಂಪೆನಿಗಳಲ್ಲಿ ಹೂಡಿಕೆ ಮಾಡುತ್ತಾ ಬರುತ್ತಿದೆ.


Click it and Unblock the Notifications