ರಾಮಮಂದಿರ ಉದ್ಘಾಟನೆಗಾಗಿ ಅಯೋಧ್ಯೆಗೆ ಭೇಟಿ ನೀಡಲು ಬಯಸುವ ಭಕ್ತರಿಗೆ ಸಿಹಿ ಸುದ್ದಿಯೊಂದು ಇಲ್ಲಿದೆ. ಜನವರಿ 22 ರಂದು ಬಹು ನಿರೀಕ್ಷಿತ ಮಹಾಮಸ್ತಕಾಭಿಷೇಕ ನಡೆಯಲಿದೆ. ಅದಕ್ಕೂ ಮುನ್ನ ಭಾರತೀಯ ರೈಲ್ವೇ ವ್ಯಾಪಕ ಕಾರ್ಯಾಚರಣೆಗೆ ಸಜ್ಜಾಗಿದೆ.
ಹಿಂದೂ ಭಕ್ತರಿಗೆ ತೀರ್ಥಯಾತ್ರೆಗೆ ಅನುಕೂಲವಾಗುವಂತೆ ದೇಶದ ವಿವಿಧ ಭಾಗಗಳಿಂದ 1,000 ವಿಶೇಷ ರೈಲುಗಳನ್ನು ಆರಂಭಿಸಲು ಸಜ್ಜಾಗಿದೆ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಈ ರೈಲುಗಳ ಕಾರ್ಯಾಚರಣೆಯು ಜನವರಿ 19 ರಂದು ಪ್ರಾರಂಭವಾಗಲಿದೆ.

ಇದು ಭವ್ಯವಾದ ಉದ್ಘಾಟನೆಯ ಮೊದಲ 100 ದಿನಗಳಲ್ಲಿ, ಪವಿತ್ರ ನಗರಕ್ಕೆ ಭೇಟಿ ನೀಡಲು ಭಕ್ತರಿಗೆ ಸಾಕಷ್ಟು ಅವಕಾಶವನ್ನು ನೀಡುತ್ತದೆ. ಈ ರೈಲುಗಳು ಯಾವೆಲ್ಲ ಪ್ರಮುಖ ನಗರಗಳಲ್ಲಿ ಇರಲಿದೆ, ಎಲ್ಲಿಗೆ ಸಂಪರ್ಕ ಹೊಂದಲಿದೆ ಎಂಬ ವಿವರವನ್ನು ನಾವಿಲ್ಲಿ ನೀಡಿದ್ದೇವೆ ಮುಂದೆ ಓದಿ....
ಯಾವೆಲ್ಲ ನಗರಕ್ಕೆ ವಿಶೇಷ ರೈಲುಗಳು
ವಿಶೇಷ ರೈಲುಗಳು ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಪುಣೆ, ಕೋಲ್ಕತ್ತಾ, ನಾಗ್ಪುರ, ಲಕ್ನೋ ಮತ್ತು ಜಮ್ಮು ಸೇರಿದಂತೆ ಪ್ರಮುಖ ನಗರಗಳನ್ನು ಅಯೋಧ್ಯೆಗೆ ಸಂಪರ್ಕಿಸಲಿವೆ. "ಈ ಉದ್ದೇಶಿತ ರೈಲುಗಳ ಸಂಖ್ಯೆಯನ್ನು ಬೇಡಿಕೆಯನ್ನು ಪರಿಗಣಿಸಿ ನಿಯೋಜಿಸಬಹುದು. ಹೆಚ್ಚಿನ ಸಂಖ್ಯೆಯ ಜನರಿಗೆ ಸೌಲಭ್ಯ ಕಲ್ಪಿಸಲು ಅಯೋಧ್ಯೆಯಲ್ಲಿ ನಿಲ್ದಾಣವನ್ನು ನವೀಕರಿಸಲಾಗಿದೆ," ಎಂದು ಪತ್ರಿಕೆಯು ಮೂಲಗಳನ್ನು ಉಲ್ಲೇಖಿಸಿದೆ.
ಸಾರಿಗೆ ವ್ಯವಸ್ಥೆಗಳ ಜೊತೆಗೆ, ಭಾರತೀಯ ರೈಲ್ವೆಯ ಅಡುಗೆ ಮತ್ತು ಟಿಕೆಟ್ ವಿಭಾಗವು ಉದ್ಘಾಟನೆಯ 10-15 ದಿನಗಳಲ್ಲಿ ಸೇವೆಗಳನ್ನು ಒದಗಿಸಲು ಹಗಲಿರುಳು ಶ್ರಮಿಸುತ್ತಿದೆ, ಭಕ್ತರ ಒಳಹರಿವಿನ ನಿರೀಕ್ಷೆಯಲ್ಲಿದೆ. ರಾಮಮಂದಿರ ಉದ್ಘಾಟನೆಯ ಸಮಯದಲ್ಲಿ ಮತ್ತು ನಂತರ ಭಕ್ತರ ಬೇಡಿಕೆಗಳನ್ನು ಪೂರೈಸಲು ಅಧಿಕಾರಿಗಳು ಹಲವಾರು ಆಹಾರ ಮಳಿಗೆಗಳನ್ನು ಸ್ಥಾಪಿಸಲು ಯೋಜಿಸುತ್ತಿದ್ದಾರೆ.
ಪುನರಾಭಿವೃದ್ಧಿಗೊಂಡ ಅಯೋಧ್ಯೆ ರೈಲು ನಿಲ್ದಾಣವು ಪ್ರತಿದಿನ ಸುಮಾರು 50,000 ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ. ಇದು ಜನವರಿ 15 ರ ವೇಳೆಗೆ ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.
ಜನವರಿ 22 ರಂದು ಭಗವಾನ್ ಶ್ರೀರಾಮನ ವಿಗ್ರಹದ ಪ್ರತಿಷ್ಠಾಪನೆಯ ನಂತರ, ಜನವರಿ 23 ರಿಂದ ದೇವಾಲಯವು ಸಾರ್ವಜನಿಕರಿಗೆ ತೆರೆದಿರುತ್ತದೆ. 1,800 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಭವ್ಯವಾದ ದೇವಾಲಯದ ನೆಲಮಟ್ಟವು ಈ ವರ್ಷದ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ.
ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ರಾಮಮಂದಿರ ಟ್ರಸ್ಟ್ ಉದ್ಘಾಟನೆಯ ವ್ಯವಸ್ಥೆಗಳನ್ನು ನೋಡಿಕೊಳ್ಳುತ್ತಿದೆ. ಮಹತ್ವದ ದಿನದಂದು ಪ್ರಸಾದ ವಿತರಣೆಗೆ ವಿಶೇಷ ವ್ಯವಸ್ಥೆ ಇರಲಿದೆ. 320 ಅಡಿ ದೂರದಿಂದ ಭಗವಾನ್ ರಾಮ ಲಲ್ಲಾವನ್ನು ನೋಡಲು ಭಕ್ತರಿಗೆ ಅವಕಾಶವಿದೆ. ಪ್ರತಿನಿತ್ಯ ಸುಮಾರು 2 ಲಕ್ಷ ಜನರಿಗೆ ಮೂರ್ತಿಯ ದರ್ಶನ ಏರ್ಪಡಿಸಲಾಗುವುದು.


Click it and Unblock the Notifications