ರೈಲ್ವೇಯ ಪ್ರಯಾಣಿಕರ ಸಾಮರ್ಥ್ಯವನ್ನು ಪ್ರಸ್ತುತ 800 ಕೋಟಿಯಿಂದ 1,000 ಕೋಟಿಗೆ ಹೆಚ್ಚಿಸಲು ಮುಂಬರುವ ನಾಲ್ಕು ಐದು ವರ್ಷಗಳಲ್ಲಿ 3,000 ಹೊಸ ರೈಲುಗಳನ್ನು ಪರಿಚಯಿಸುವ ಯೋಜನೆ ಜಾರಿ ಮಾಡಲಾಗುತ್ತದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದು ತಮ್ಮ ಸಚಿವಾಲಯದ ಮತ್ತೊಂದು ಗುರಿಯಾಗಿದೆ ಎಂದು ಸಚಿವರು ಹೇಳಿದರು. ಪ್ರಸ್ತುತ, ರೈಲ್ವೇಯು ವಾರ್ಷಿಕವಾಗಿ ಸುಮಾರು 800 ಕೋಟಿ ಪ್ರಯಾಣಿಕರನ್ನು ಸಾಗಿಸುತ್ತಿದೆ ಎಂದು ವೈಷ್ಣವ್ ಈ ಸಂದರ್ಭದಲ್ಲೇ ಉಲ್ಲೇಖಿಸಿದ್ದಾರೆ.

"ಜನಸಂಖ್ಯೆಯು ಹೆಚ್ಚುತ್ತಿರುವ ಕಾರಣ ನಾವು ನಾಲ್ಕರಿಂದ ಐದು ವರ್ಷಗಳಲ್ಲಿ ಸಾಮರ್ಥ್ಯವನ್ನು 1,000 ಕೋಟಿಗೆ ಹೆಚ್ಚಿಸಬೇಕಾಗಿದೆ. ಇದಕ್ಕಾಗಿ, ನಮಗೆ 3,000 ಹೆಚ್ಚುವರಿ ರೈಲುಗಳು ಬೇಕಾಗುತ್ತವೆ. ಹೆಚ್ಚುವರಿ ಪ್ರಯಾಣಿಕರ ಸಾಗಾಟಕ್ಕೆ ಇದು ಸಹಾಯವಾಗುತ್ತದೆ," ಎಂದು ಸಚಿವರು ಹೇಳಿದರು.
ರೈಲ್ವೆ ಮೂಲಗಳ ಪ್ರಕಾರ, 69,000 ಹೊಸ ಕೋಚ್‌ಗಳು ಲಭ್ಯವಿದ್ದು, ಪ್ರತಿ ವರ್ಷ ಸುಮಾರು 5,000 ಹೊಸ ಕೋಚ್‌ಗಳನ್ನು ತಯಾರಿಸುತ್ತಿದೆ. ಮೂಲಗಳ ಪ್ರಕಾರ, ರೈಲ್ವೆಯು ಪ್ರತಿ ವರ್ಷ 200 ರಿಂದ 250 ಹೊಸ ರೈಲುಗಳನ್ನು ಆರಂಭಿಸಲಿದೆ.
ಹೆಚ್ಚುವರಿಯಾಗಿ 400 ರಿಂದ 450 ವಂದೇ ಭಾರತ್ ರೈಲುಗಳನ್ನು ಆರಂಭ ಮಾಡಲಿದೆ. ಮುಂಬರುವ ವರ್ಷದಲ್ಲಿಯೇ ಈ ರೈಲುಗಳನ್ನು ಸೇರಿಸಲಾಗುತ್ತದೆ. ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದು ಮತ್ತೊಂದು ಗುರಿಯಾಗಿದೆ ಎಂದು ವೈಷ್ಣವ್ ಹೇಳಿದರು.
ಇನ್ನು ಪ್ರಸ್ತುತ ನಾವು ರೈಲಿನಲ್ಲಿ ಟಿಕೆಟ್ ಬುಕ್ ಮಾಡಿದರೆ ಯಾವುದೇ ಸೀಟ್ ಇಲ್ಲ ಎಂದಾದರೆ ವೇಟಿಂಗ್ ಲಿಸ್ಟ್‌ನಲ್ಲಿ ಇರುತ್ತೇವೆ. ಆದರೆ ಇನ್ನು ಕೆಲವೇ ವರ್ಷಗಳಲ್ಲಿ ಈ ವೇಟಿಂಗ್ ಲಿಸ್ಟ್ ಅನ್ನು ಸಂಪೂರ್ಣವಾಗಿ ರದ್ದು ಮಾಡಲು ರೈಲ್ವೆ ಸಚಿವಾಲಯವು ಮುಂದಾಗಿದೆ ಎಂದು ವರದಿಯಾಗಿದೆ.
2023ರ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ, ಪ್ರಯಾಣಿಕರ ಹಂಚಿಕೆಯಲ್ಲಿ ಗಮನಾರ್ಹ ಬದಲಾವಣೆಯನ್ನು ಡೇಟಾ ಸೂಚಿಸುತ್ತದೆ ಎಂದು ಮೂಲಗಳು ತಿಳಿಸಿವೆ. ಜನರಲ್ ಮತ್ತು ಸ್ಲೀಪರ್ ಕ್ಲಾಸ್‌ಗಳನ್ನು ಒಳಗೊಂಡಂತೆ ನಾನ್-ಎಸಿ ಕೋಚ್‌ಗಳು ಒಟ್ಟು ಪ್ರಯಾಣಿಕರಲ್ಲಿ ಶೇಕಡ 95.3 ರಷ್ಟು ಅಂದರೆ 372 ಕೋಟಿ ಪ್ರಯಾಣಿಕರನ್ನು ಹೊಂದಿದ್ದವು.
ಹಿಂದಿನ ವರ್ಷಕ್ಕೆ ಹೋಲಿಸಿದರೆ ರೈಲಿನಲ್ಲಿ 38 ಕೋಟಿ ಪ್ರಯಾಣಿಕರ ಗಣನೀಯ ಹೆಚ್ಚಳ ಕಂಡುಬಂದಿದೆ. ಇದು ಆರ್ಥಿಕವಾಗಿ ನೋಡಿದಾಗ ಪ್ರಯಾಣದ ಆಯ್ಕೆಗಳಿಗೆ ಜನರು ಕಡಿಮೆ ದರದ ಪ್ರಯಾಣದ ಆಯ್ಕೆಯಾದ ರೈಲುಗಳನ್ನು ಅಧಿಕವಾಗಿ ಆಯ್ಕೆ ಮಾಡುವುದು ಕಂಡು ಬರುತ್ತಿದೆ.


Click it and Unblock the Notifications