ಬೆಂಗಳೂರಿನ ಎನ್.ಆರ್. ಕಾಲೋನಿಯಲ್ಲಿ ಇರುವ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನ ವಹಿವಾಟಿನಲ್ಲಿ ಅವ್ಯವಹಾರದ ಆರೋಪ ಬಂದಿರುವ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿ ಆಗುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೆಲವು ನಿರ್ಬಂಧ ಹೇರಿದೆ.
ಜನವರಿ 10, 2020ರಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಪೂರ್ವಾನುಮತಿ ಇಲ್ಲದೆ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಸಾಲ ವಿತರಿಸುವಂತಿಲ್ಲ, ನವೀಕರಿಸುವಂತಿಲ್ಲ, ಹೂಡಿಕೆ ಮಾಡುವಂತಿಲ್ಲ, ಸಾಲ ಅಥವಾ ಠೇವಣಿ ಪಡೆಯುವಂತಿಲ್ಲ ಎಂದು ಸೂಚನೆ ನೀಡಲಾಗಿದೆ.
ಮುಂದಿನ ನೋಟಿಸ್ ಹೊರಡಿಸುವ ತನಕ, ಉಳಿತಾಯ ಖಾತೆ ಮತ್ತು ಚಾಲ್ತಿ ಖಾತೆ ಹೊಂದಿರುವ ಗ್ರಾಹಕರು ಮೂವತ್ತೈದು ಸಾವಿರ ರುಪಾಯಿ ತನಕ ನಗದು ಮಾತ್ರ ವಿಥ್ ಡ್ರಾ ಮಾಡಬಹುದು ಎಂದು ಆರ್ ಬಿಐನಿಂದ ತಿಳಿಸಲಾಗಿದೆ.

ಬ್ಯಾಂಕ್ ತನ್ನ ಸಾಲವನ್ನಾಗಲೀ ಮತ್ತು ಯಾವುದೇ ರೀತಿ ಜವಾಬ್ದಾರಿ ಅಂತಾಗಲೀ ಹಣ ಪಾವತಿ ಮಾಡುವಂತಿಲ್ಲ. ಯಾವುದೇ ಆಸ್ತಿ ವಿಚಾರದಲ್ಲಿ ಸಂಧಾನ, ವ್ಯವಸ್ಥೆ ಅಥವಾ ಮಾರಾಟ, ವರ್ಗಾವಣೆ ಮಾಡುವಂತಿಲ್ಲ ಎಂದು ಕೂಡ ಸೂಚನೆಯನ್ನು ನೀಡಲಾಗಿದೆ. ಬ್ಯಾಂಕ್ ನ ಹಣಕಾಸು ಸ್ಥಿತಿ ಉತ್ತಮಗೊಳ್ಳುವ ತನಕ ವ್ಯವಹಾರ ನಿರ್ಬಂಧ ಮುಂದುವರಿಯಲಿದೆ.
ಈಗಿನ ರಿಸರ್ವ್ ಬ್ಯಾಂಕ್ ಸೂಚನೆಯ ಅರ್ಥವು ಬ್ಯಾಂಕ್ ನ ಲೈಸೆನ್ಸ್ ಅನ್ನು ರದ್ದು ಮಾಡಿದೆ ಎಂದಲ್ಲ ಎಂಬುದನ್ನು ಸ್ಪಷ್ಟಪಡಿಸಲಾಗಿದೆ. ಜನವರಿ ಹತ್ತರಿಂದ ಆರು ತಿಂಗಳ ಕಾಲ ಈ ಸೂಚನೆ ಜಾರಿಯಲ್ಲಿ ಇರುತ್ತದೆ ಮತ್ತು ಆ ನಂತರ ಮತ್ತೊಮ್ಮೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬ್ಯಾಂಕಿಂಗ್ ರೆಗ್ಯುಲೇಷನ್ ಕಾಯ್ದೆ 1949ರ ಸೆಕ್ಷನ್ 35A ಹಾಗೂ 56ರ ಅಡಿಯಲ್ಲಿ ಈ ಸೂಚನೆ ನೀಡಲಾಗಿದೆ ಎಂದು ರಿಸರ್ವ್ ಬ್ಯಾಂಕ್ ನ ಚೀಫ್ ಜನರಲ್ ಮ್ಯಾನೇಜರ್ ಯೋಗೇಶ್ ದಯಾಳ್ ತಿಳಿಸಿದ್ದಾರೆ.


Click it and Unblock the Notifications