ಡಿಜಿಟಲ್ ಪಾವತಿಗೆ ಉತ್ತೇಜನೆ ನೀಡಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವಿನೂತನ ಪಿಪಿಐ ಕಾರ್ಡ್ ಬಿಡುಗಡೆಗೆ ಯೋಜನೆ ರೂಪಿಸಿದೆ. ಇತ್ತೀಚಿನ ದಿನಗಳಲ್ಲಿ ನಗದುರಹಿತ ವಹಿವಾಟುಗಳಲ್ಲಿ ತೊಡಗಿಸಿಕೊಳ್ಳುವವರ ಪ್ರಮಾಣ ಹೆಚ್ಚಾಗಿದ್ದು ಅದನ್ನು ಗಮನದಲ್ಲಿಟ್ಟುಕೊಂಡು ಆರ್‌ಬಿಐ ಮುಂಗಡ ಪಾವತಿ(Prepaid payment instrument) ವ್ಯವಸ್ಥೆ ಪರಿಚಯಿಸಲಿದ್ದು, 10,000ವರೆಗೆ ಬಿಲ್ ಪಾವತಿಸಬಹುದಾಗಿದೆ.
ನಗದುರಹಿತ ವಹಿವಾಟಿನ ಪ್ರಮಾಣ ಹೆಚ್ಚಾಗಿದ್ದು ಜನರು ಹಣ ವರ್ಗಾವಣೆ, ಬಿಲ್ ಪಾವತಿಗಳನ್ನು ಕಾರ್ಡ್ ಇಲ್ಲವೆ ಆ್ಯಪ್ ಮೂಲಕ ಮಾಡುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಆರ್‌ಬಿಐ ಪಿಪಿಐ (Prepaid payment instrument) ಕಾರ್ಡ್‌ಗಳನ್ನು ಪರಿಚಿಯಿಸಿದೆ. ಈ ಕಾರ್ಡ್ ಅನ್ನು 10 ಸಾವಿರ ಒಳಗಿನ ಖರೀದಿಗಾಗಿ ಬಳಸಬಹುದು.
ಪಿಪಿಐ ಕಾರ್ಡ್ ಎಲ್ಲೆಲ್ಲಿ ಬಳಸಬಹುದು?
ಪಿಪಿಐ ಕಾರ್ಡ್ ಡಿಜಿಟಲ್ ಪಾವತಿಗಳನ್ನು ಮಾತ್ರ ಮಾಡಲು ಬಳಸಲಾಗುತ್ತದೆ. ನಿಮ್ಮ ಕುಟುಂಬದವರಿಗೆ ಅಥವಾ ಸ್ನೇಹಿತರಿಗೆ ಹಣ ಕಳುಹಿಸಬೇಕಾದರೆ ಪಿಪಿಐ ಕಾರ್ಡ್ ಬಳಕೆ ಮಾಡಬಹುದು. ಏನಾದರೂ ವಸ್ತುವನ್ನು ಖರೀಸಬೇಕೆಂದರೆ ಇಲ್ಲವೆ ಯಾವುದಾದರೂ ಬಿಲ್ ಪಾವತಿ ಮಾಡಲು ಈ ಕಾರ್ಡ್ ಬಳಸಬಹುದಾಗಿದೆ. ಕೆಲವು ಪ್ರಮುಖ ಪಿಪಿಐಗಳಲ್ಲಿ ಪೇಟಿಎಂ, ಮೊಬಿಕ್ವಿಕ್, ಗಿಫ್ಟ್‌ಕಾರ್ಡ್, ಟ್ರಾವೆಲ್, ಡೆಬಿಟ್ , ಕ್ರೆಡಿಟ್ ಕಾರ್ಡ್‌ಗಳು ಸೇರಿವೆ.
ಪಿಪಿಐ ಕಾರ್ಡ್ ಸಿಗುವುದು ಎಲ್ಲಿ?
ಬ್ಯಾಂಕ್ ಮತ್ತು ಬ್ಯಾಂಕೇತರ ಸಂಸ್ಥೆಗಳಲ್ಲಿ 10 ಸಾವಿರ ಮೌಲ್ಯದ ಸೆಮಿ ಕ್ಲೋಸ್ಡ್ ಪಿಪಿಐ ಕಾರ್ಡ್‌ಗಳನ್ನು ವಿತರಿಸಲಾಗುತ್ತದೆ. ಬಳಕೆದಾರರ ಅಗತ್ಯ ವಿವರಗಳನ್ನು ಪಡೆದುಕೊಂಡ ಬಳಿಕವಷ್ಟೇ ಬ್ಯಾಂಕ್ ಕಾರ್ಡ್ ನೀಡುತ್ತದೆ.
ಬ್ಯಾಂಕ್ ಖಾತೆಯಿಂದಲೇ ಹಣ ತುಂಬಿಸಬೇಕು
ಪಿಪಿಐ ಕಾರ್ಡ್‌ಗೆ ಬ್ಯಾಂಕ್ ಖಾತೆಯಿಂದಲೇ ಹಣ ತುಂಬಿಸಿ ಬಳಕೆ ಮಾಡಬಹುದು. ಈ ಮೂಲಕ ಬಿಲ್‌ಗಳ ಪಾವತಿ ಹಾಗೂ ವಸ್ತು/ಸೇವೆಗಳ ಖರೀದಿ ಮಾಡಬಹುದು. ಮುಖ್ಯವಾಗಿ ಡಿಜಿಟಲ್ ಪಾವತಿಗೆ ಮಾತ್ರ ಅವಕಾಶ
10,000 ಮೀರುವಂತಿಲ್ಲ, 1 ಲಕ್ಷದವರೆಗೆ ಮಿತಿ
ಪಿಪಿಐ ಕಾರ್ಡ್‌ಗಳಿಗೆ ತಿಂಗಳಿಗೆ 10,000ಗಿಂತ ಹೆಚ್ಚಿನ ಹಣವನ್ನು ಹಾಕುವಂತಿಲ್ಲ. ಹಣಕಾಸು ವರ್ಷದಲ್ಲಿ ಒಟ್ಟು ಮೊತ್ತವು 1 ಲಕ್ಷ ರುಪಾಯಿ ಮೀರುವಂತಿಲ್ಲ. ಹಣವನ್ನು ವರ್ಗಾವಣೆ ಮಾಡುವುದಾರೆ ಇನ್ನೊಂದು ಪಿಪಿಐ ಕಾರ್ಡ್ ಬಳಕೆದಾರರ ಖಾತೆಗೆ ಮಾತ್ರ ಹಣ ವರ್ಗಾಯಿಸಬಹುದು.
ಮೊಬೈಲ್ ಮೂಲಕ ಮಾಹಿತಿ
ಮೊಬೈಲ್ ಮೂಲಕ ಕಾರ್ಡ್‌ನ ಮಾಹಿತಿ ಮತ್ತು ಖಾತೆಯ ವಿವರಗಳನ್ನು ಪಡೆಯಬಹುದಾಗಿದೆ. ಒಮ್ಮೆ ಕಾರ್ಡ್ ಪಡೆಯಲು ನೀಡಿದ ಮೊಬೈಲ್ ಸಂಖ್ಯೆ ಮತ್ತು ವಿವರಗಳನ್ನು ಬಳಸಿಕೊಂಡು ಪುನಃ ಕಾರ್ಡ್ ಪಡೆಯುವಂತಿಲ್ಲ.
ಪಿಪಿಐ ಕಾರ್ಡ್ ನಿಲ್ಲಿಸುವ ಅವಕಾಶ
ಪಿಪಿಐ ಕಾರ್ಡ್ ಸೇವೆ ಬೇಡ ಎನಿಸಿದ್ದಲ್ಲಿ ಯಾವುದೇ ಸಮಯದಲ್ಲಿ ಬೇಕಾದರೂ ಪಿಪಿಐ ಕಾರ್ಡ್ ಬಳಕೆಯನ್ನು ನಿಲ್ಲಿಸುವ ಅವಕಾಶವಿದೆ. ಕಾರ್ಡ್‌ನಲ್ಲಿ ಹಣವಿದ್ದರೆ ಖಾತೆಯ ಸಂಪೂರ್ಣ ಪರಿಶೀಲನೆಯ ಬಳಿಕ ಹಣವನ್ನು ಬಳಕೆದಾರನ ಖಾತೆಗೆ ವರ್ಗಾಯಿಸಲಾಗುವುದು.


Click it and Unblock the Notifications