ಭಾರತ ದೇಶದಲ್ಲಿ ಚಲಾವಣೆಯಲ್ಲಿದ್ದ 2000 ರೂಪಾಯಿ ಮುಖಬೆಲೆಯ ನೋಟು ಚಲಾವಣೆ ಸ್ಥಗಿತಗೊಳಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ನಿರ್ಧಾರ ಮಾಡಿದೆ. 2000 ರೂಪಾಯಿ ನೋಟನ್ನು ಸ್ಥಗಿತಗೊಳಿಸಿ, ಅದನ್ನು ವಾಪಾಸ್ ಪಡೆಯಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಆದೇಶಿಸಿದೆ.
ಹಾಗೆಯೇ ಈ ನೋಟುಗಳನ್ನು ಸೆಪ್ಟೆಂಬರ್ 30, 2023ರ ಒಳಗಾಗಿ ಬ್ಯಾಂಕ್‌ಗಳಲ್ಲಿ ಬದಲಾವಣೆ ಮಾಡುವಂತೆ ಆರ್‌ಬಿಐ ತಿಳಿಸಿದೆ. ಪ್ರಸ್ತುತ 2000 ರೂಪಾಯಿ ನೋಟು ಮೌಲ್ಯವನ್ನು ಹೊಂದಿರುತ್ತದೆ. ಅದರ ಚಲಾವಣೆಯನ್ನು ಮಾತ್ರ ನಿಷೇದ ಮಾಡಿ, ನೋಟು ಬದಲಾವಣೆಗೆ ಸಮಯವನ್ನು ನೀಡಲಾಗಿದೆ. ಆದರೆ ಅಕ್ಟೋಬರ್ 1ರಿಂದ ಈ ನೋಟು ಸಂಪೂರ್ಣವಾಗಿ ಬ್ಯಾನ್ ಆಗುತ್ತದೆ.

ಶುಕ್ರವಾರ ಈ ಬಗ್ಗೆ ಆರ್‌ಬಿಐ ಹೇಳಿಕೆಯನ್ನು ನೀಡಿದೆ. "ಭಾರತೀಯ ರಿಸರ್ವ್ ಬ್ಯಾಂಕ್ 'ಕ್ಲೀನ್ ನೋಟ್ ಪಾಲಿಸಿ'ಯ ಅನುಸಾರವಾಗಿ, 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ನಿರ್ಧರಿಸಲಾಗಿದೆ. ಆದರೆ 2000 ರೂಪಾಯಿ ನೋಟುಗಳು ಕಾನೂನುಬದ್ಧವಾಗಿ ಮುಂದುವರಿಯಲಿವೆ. ನೋಟು ಬದಲಾವಣೆ ಮಾಡಲು ಸೆಪ್ಟೆಂಬರ್ 20, 2023ರವರೆಗೆ ಸಮಯವಕಾಶ ನೀಡಲಾಗಿದೆ. ಸಮಯಕ್ಕೆ ಸರಿಯಾಗಿ ಬದಲಾವಣೆ ಮಾಡಬೇಕು," ಎಂದು ತಿಳಿಸಿದೆ.
ಆರ್‌ಬಿಐನ ಸುತ್ತೋಲೆ ಬೇರೇನು ಹೇಳುತ್ತದೆ?
ಇನ್ನು ತನ್ನ ಈ ನಿರ್ಧಾರವನ್ನು ವಿವರಿಸಿರುವ ಆರ್‌ಬಿಐ, "ಶೇಕಡ 89ರಷ್ಟು 2000 ರೂಪಾಯಿಯ ನೋಟುಗಳನ್ನು ಮಾರ್ಚ್ 2017ಕ್ಕಿಂತ ಮೊದಲು ಬಿಡುಗಡೆ ಮಾಡಲಾಗಿದೆ. ಅದರ ಅಂದಾಜು ಉತ್ತಮ ಗುಣಮಟ್ಟ ಅವಧಿ 4-5 ವರ್ಷಗಳಲ್ಲಿ ಅಂತ್ಯವಾಗಲಿದೆ. ಈ ಚಲಾವಣೆಯಲ್ಲಿರುವ ಬ್ಯಾಂಕ್ ನೋಟುಗಳ ಒಟ್ಟು ಮೌಲ್ಯವು ಮಾರ್ಚ್ 31, 2018ರಲ್ಲಿ 6.73 ಲಕ್ಷ ಕೋಟಿ ರೂಪಾಯಿ ಆಗಿತ್ತು," ಎಂದು ಉಲ್ಲೇಖ ಮಾಡಲಾಗಿದೆ.
"ಆದರೆ ಮಾರ್ಚ್ 31, 2023 ರ ವೇಳೆಗೆ ಚಲಾವಣೆಯಲ್ಲಿರುವ 2000 ರೂಪಾಯಿ ಮುಖಬೆಲೆಯ ನೋಟು ಮೌಲ್ಯವು 3.62 ಲಕ್ಷ ಕೋಟಿ ರೂಪಾಯಿಗೆ ಇಳಿಕೆಯಾಗಿದೆ. ಸಾಮಾನ್ಯವಾಗಿ ಈ ನೋಟುಗಳನ್ನು ವಹಿವಾಟಿಗೆ ಬಳಕೆ ಮಾಡಲಾಗುತ್ತಿಲ್ಲ ಎಂಬುವುದು ಕೂಡಾ ಗಮನಕ್ಕೆ ಬಂದಿದೆ. ಇದಲ್ಲದೆ, ಇತರ ಮುಖಬೆಲೆಯ ನೋಟುಗಳ ದಾಸ್ತಾನು ಸಾರ್ವಜನಿಕರ ಕರೆನ್ಸಿ ಅವಶ್ಯಕತೆಗಳನ್ನು ಪೂರೈಸುವುದನ್ನು ಎಂದಿನಂತೆ ಮುಂದುವರಿಸುತ್ತದೆ," ಎಂದು ಸುತ್ತೋಲೆಯಲ್ಲಿದೆ.
2000 ರೂಪಾಯಿ ನೋಟು ಬದಲಾಯಿಸುವುದು ಹೇಗೆ?
"ಸಾರ್ವಜನಿಕರು ತಮ್ಮ ಬ್ಯಾಂಕ್ ಖಾತೆಗಳಿಗೆ 2,000 ರೂಪಾಯಿ ನೋಟುಗಳನ್ನು ಜಮೆ ಮಾಡಬಹುದು ಅಥವಾ ಯಾವುದೇ ಬ್ಯಾಂಕ್ ಶಾಖೆಯಲ್ಲಿ 2000 ರೂಪಾಯಿ ನೋಟನ್ನು ನೀಡಿ ಬೇರೆ ಮುಖಬೆಲೆಯ ನೋಟನ್ನು ಪಡೆದುಕೊಳ್ಳಬಹುದು," ಎಂದು ಆರ್‌ಬಿಐ ಹೇಳಿದೆ. "ಬ್ಯಾಂಕ್ ಖಾತೆಗಳಿಗೆ ಸಾಮಾನ್ಯವಾಗಿ ಹೇಗೆ ನೋಟು ಜಮೆ ಮಾಡಲಾಗುತ್ತದೆಯೋ ಹಾಗೆಯೇ ನೋಟನ್ನು ಜಮೆ ಮಾಡಬಹುದು. ಅದಕ್ಕೆ ಯಾವುದೇ ನಿರ್ಬಂಧವಿಲ್ಲ," ಎಂದು ಕೂಡಾ ಉಲ್ಲೇಖಿಸಲಾಗಿದೆ.


Click it and Unblock the Notifications