ರಿಲಯನ್ಸ್ ಇಂಡಸ್ಟ್ರೀಸ್ ನ ರೀಟೇಲ್ ವ್ಯವಹಾರದಲ್ಲಿ ಹತ್ತಿರ ಹತ್ತಿರ 2 ಸಾವಿರ ಕೋಟಿ ಅಮೆರಿಕನ್ ಡಾಲರ್ ನಷ್ಟು ಮೌಲ್ಯದ ಷೇರನ್ನು ಖರೀದಿ ಮಾಡುವಂತೆ ಅಮೆಜಾನ್ ಗೆ ಪ್ರಸ್ತಾವ ಮುಂದಿಡಲಾಗಿದೆ. ಭಾರತದ ರುಪಾಯಿ ಲೆಕ್ಕದಲ್ಲಿ ಈ ವ್ಯವಹಾರದ ಮೊತ್ತ 1.40 ಲಕ್ಷ ಕೋಟಿಗೂ ಹೆಚ್ಚಾಗುತ್ತದೆ ಎಂದು ಈ ಬೆಳವಣಿಗೆ ಬಗ್ಗೆ ಮಾಹಿತಿ ಇರುವವರು ತಿಳಿಸಿದ್ದಾರೆ.
ರಿಲಯನ್ಸ್ ರೀಟೇಲ್ ವೆಂಚರ್ಸ್ ನಲ್ಲಿ ಹೂಡಿಕೆ ಮಾಡುವ ಸಲುವಾಗಿ ಅಮೆಜಾನ್ ಚರ್ಚೆ ನಡೆಸಿದೆ. ರಿಲಯನ್ಸ್ ಇಂಡಸ್ಟ್ರೀಸ್ ಅಂಗ ಸಂಸ್ಥೆಯಾದ ರಿಲಯನ್ಸ್ ರೀಟೇಲ್ ವೆಂಚರ್ಸ್ ನ 40% ಷೇರಿನ ಪಾಲನ್ನು ಅಮೆಜಾನ್ ಗೆ ಮಾರಾಟ ಮಾಡಬಹುದು ಎಂದು ತಿಳಿಸಲಾಗಿದೆ. ಆದರೆ ಈ ಮಾಹಿತಿ ಹೊರ ಹಾಕಿದ ವ್ಯಕ್ತಿ ತನ್ನ ಗುರುತು ಬಯಲಾಗಬಾರದು ಎಂದು ಷರತ್ತು ಹಾಕಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಐತಿಹಾಸಿಕ ಖರೀದಿ ವ್ಯವಹಾರ
ಒಂದು ವೇಳೆ ರಿಲಯನ್ಸ್ ರೀಟೇಲ್ ವೆಂಚರ್ಸ್ ಖರೀದಿ ವ್ಯವಹಾರ ಯಶಸ್ವಿ ಆಗಿಬಿಟ್ಟರೆ ಭಾರತದಲ್ಲಿ ಹೊಸ ಇತಿಹಾಸ ಸೃಷ್ಟಿ ಆಗಲಿದೆ. ವಿಶ್ವದ ಅತ್ಯಂತ ಶ್ರೀಮಂತ ಬೆಜೋಸ್ ಹಾಗೂ ಏಷ್ಯಾದ ಅತ್ಯಂತ ಸಿರಿವಂತ ಮುಕೇಶ್ ಅಂಬಾನಿ ಮಧ್ಯೆ ವ್ಯವಹಾರ ಸ್ಪರ್ಧೆ ಹೋಗಿ, ಸ್ನೇಹ ಹುಟ್ಟಿಕೊಳ್ಳಲಿದೆ. 2000 ಕೋಟಿ ಅಮೆರಿಕನ್ ಡಾಲರ್ ಅಂದರೆ, ಭಾರತದಲ್ಲಿನ ಅತಿ ದೊಡ್ಡ ಖರೀದಿ ವ್ಯವಹಾರ ಆಗಲಿದೆ. ಅಮೆಜಾನ್ ಗೂ ಇದು ದೊಡ್ಡ ಖರೀದಿಯೇ. ಬ್ಲೂಮ್ ಬರ್ಗ್ ನಲ್ಲಿ ಈ ಬಗ್ಗೆ ಸುದ್ದಿ ಪ್ರಸಾರವಾದ ಮೇಲೆ ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿ ಷೇರು ಗಳಿಕೆಯನ್ನು ಗುರುವಾರ ವಿಸ್ತರಿಸಿಕೊಂಡಿತು. ಮಧ್ಯಾಹ್ನ 12.08ರ ಹೊತ್ತಿಗೆ 4.02% ಏರಿಕೆ ಕಂಡಿತ್ತು. ಇನ್ನು ಅಮೆರಿಕ ಡಾಲರ್ ವಿರುದ್ಧ ರುಪಾಯಿ ಮೌಲ್ಯ 73.1588ರಲ್ಲಿ ವ್ಯವಹಾರ ನಡೆಸುತ್ತಿದೆ.
ಆನ್ ಲೈನ್ ವ್ಯವಹಾರ 73 ಲಕ್ಷ ಕೋಟಿ ರುಪಾಯಿ ಮಾತ್ರ
ಭಾರತದಲ್ಲಿ ಈಗಲೂ ಬಡಾವಣೆತ ಸಣ್ಣ ಕಿರಾಣಿ ಅಂಗಡಿಗಳಲ್ಲಿ ಜನರು ತಮಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡುತ್ತಾರೆ. ಅಮೆಜಾನ್ ಗೆ ರಿಲಯನ್ಸ್ ಮೂಲಕ ದೇಶದ ರೀಟೇಲ್ ಮಾರುಕಟ್ಟೆಯಲ್ಲಿ ಬೆಳವಣಿಗೆಗೆ ಅದ್ಭುತ ಅವಕಾಶ ಇದೆ. ಈಗಲೂ ಭಾರತದಲ್ಲಿ ರೀಟೇಲ್ ಮಾರ್ಕೆಟ್ ನಲ್ಲಿ ಆನ್ ಲೈನ್ ವ್ಯವಹಾರದ ಪಾಲು ಇರುವುದು 73 ಲಕ್ಷ ಕೋಟಿ ರುಪಾಯಿ ಮಾತ್ರ. ಅಂದ ಹಾಗೆ, ಅಮೆಜಾನ್ ನಿಂದ ಯಾವ ಪ್ರಮಾಣದಲ್ಲಿ ಹೂಡಿಕೆ ಮಾಡಲಾಗುವುದು ಎಂಬ ಬಗ್ಗೆ ಅಂತಿಮ ನಿರ್ಧಾರ ಆಗಿಲ್ಲ. ಇನ್ನೂ ಮಾತುಕತೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಅಮೆಜಾನ್ ಪ್ರತಿನಿಧಿಗಳು ಈ ಸುದ್ದಿ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ.
ಕೆಕೆಆರ್ ನಿಂದ ನೂರು ಕೋಟಿ ಡಾಲರ್ ಹೂಡಿಕೆ ಮಾತುಕತೆ
"ನಮ್ಮ ನಿಯಮಾವಳಿ ಪ್ರಕಾರ, ಮಾಧ್ಯಮಗಳ ಊಹೆ ಹಾಗೂ ವದಂತಿಗೆ ಪ್ರತಿಕ್ರಿಯೆ ನೀಡುವಂತಿಲ್ಲ" ಎಂದು ರಿಲಯನ್ಸ್ ವಕ್ತಾರರು ಮಾಧ್ಯಮಗಳಿಗೆ ಇಮೇಲ್ ಮೂಲಕ ಉತ್ತರಿಸಿದ್ದಾರೆ. ಒಂದು ವೇಳೆ ಅಮೆಜಾನ್ ನಿಂದ ರಿಲಯನ್ಸ್ ರೀಟೇಲ್ ನಲ್ಲಿ ಹೂಡಿಕೆಯಾದಲ್ಲಿ ಇದರಿಂದ ಮುಕೇಶ್ ನೇತೃತ್ವದ ಕಂಪೆನಿಗೆ ಬಲ ಬಂದಂತಾಗುತ್ತದೆ. ಈಗಾಗಲೇ ಸಿಲ್ವರ್ ಲೇಕ್ ನಿಂದ ರೀಟೇಲ್ ವ್ಯವಹಾರದಲ್ಲಿ 100 ಕೋಟಿ ಅಮೆರಿಕನ್ ಡಾಲರ್ ಹೂಡಿಕೆ ಮಾಡುವ ಬಗ್ಗೆ ಘೋಷಣೆ ಆಗಿದೆ. ಇನ್ನು ಕೆಕೆಆರ್ ಕನಿಷ್ಠ ನೂರು ಕೋಟಿ ಅಮೆರಿಕನ್ ಡಾಲರ್ ಹೂಡಿಕೆ ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಎಲ್ ಕ್ಯಾಟರ್ ಟನ್ ಕೂಡ ಹೂಡಿಕೆ ಬಗ್ಗೆ ಆಲೋಚಿಸುತ್ತಿದೆ ಎಂದು ಬುಧವಾರ ಬ್ಲೂಮ್ ಬರ್ಗ್ ವರದಿ ಮಾಡಿದೆ.
2000 ಕೋಟಿ ಅಮೆರಿಕನ್ ಡಾಲರ್ ಬಂಡವಾಳ ಸಂಗ್ರಹ
ಕಳೆದ ಕೆಲ ತಿಂಗಳಿಂದ ಮುಕೇಶ್ ಅಂಬಾನಿ ಅವರು ಜಿಯೋ ಪ್ಲಾಟ್ ಫಾರ್ಮ್ಸ್ ಷೇರಿನ ಪಾಲು ಮಾರಾಟ ಮಾಡುವ ಮೂಲಕ 2000 ಕೋಟಿ ಅಮೆರಿಕನ್ ಡಾಲರ್ ಬಂಡವಾಳ ಸಂಗ್ರಹ ಮಾಡಿದ್ದಾರೆ. ಅದರಲ್ಲಿ ಫೇಸ್ ಬುಕ್, ಗೂಗಲ್ ಸೇರಿದಂತೆ ಹಲವು ಕಂಪೆನಿಗಳು ಹೂಡಿಕೆ ಮಾಡಿವೆ. ರಿಲಯನ್ಸ್ ರೀಟೇಲ್ ಎಂಬುದು ರಿಲಯನ್ಸ್ ಇಂಡಸ್ಟ್ರೀಸ್ ನ ಅಂಗಸಂಸ್ಥೆ. ಸೂಪರ್ ಮಾರ್ಕೆಟ್ ಗಳು, ಗ್ರಾಹಕ ಉಪಯೋಗಿ ಎಲೆಕ್ಟ್ರಾನಿಕ್ಸ್ ಸ್ಟೋರ್ ಗಳು, ಕ್ಯಾಶ್ ಎನ್ ಕ್ಯಾರಿ ಹೋಲ್ ಸೇಲ್ ವ್ಯವಹಾರ, ಫ್ಯಾಷನ್ ಔಟ್ ಲೆಟ್ ಗಳು ಹಾಗೂ ಆನ್ ಲೈನ್ ದಿನಸಿ ಮಳಿಗೆ ಜಿಯೋ ಮಾರ್ಟ್ ಕೂಡ ನಡೆಸುತ್ತಿದೆ. ಮಾರ್ಚ್ 2020ಕ್ಕೆ ವರದಿಯಾದಂತೆ ಆದಾಯ 1.63 ಲಕ್ಷ ಕೋಟಿ ರುಪಾಯಿ ಇದೆ. ಏಳು ಸಾವಿರ ಪಟ್ಟಣಗಳಲ್ಲಿ 12 ಸಾವಿರ ಮಳಿಗೆಗಳನ್ನು ನಡೆಸುತ್ತಿದೆ.


Click it and Unblock the Notifications