ರೆನ್ಯೂ ಪವರ್ ಪ್ರೈ.ಲಿ. ಕಂಪೆನಿಯು ಕರ್ನಾಟಕ ರಾಜ್ಯ ಸರ್ಕಾರದೊಂದಿಗೆ 50,000 ಕೋಟಿ ರೂ. ಹೂಡಿಕೆಯ ಒಪ್ಪಂದಕ್ಕೆ ಸಹಿ ಹಾಕಿದೆ. ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಈ ಒಪ್ಪಂದ ನಡೆದಿದೆ.
ಮುಂದಿನ 7 ವರ್ಷಗಳಲ್ಲಿ ಕರ್ನಾಟಕದಲ್ಲಿ ನವೀಕರಿಸಬಹುದಾದ ಇಂಧನ, ಬ್ಯಾಟರಿ ಸ್ಟೋರೇಜ್, ಗ್ರೀನ್ ಹೈಡ್ರೋಜನ್ ಘಟಕಗಳನ್ನು ಸ್ಥಾಪನೆ ಮಾಡುವ ಗುರಿಯನ್ನು ರೆನ್ಯೂ ಪವರ್ ಪ್ರೈ.ಲಿ. ಕಂಪೆನಿಯು ಹೊಂದಿದೆ. ಈ ಯೋಜನೆಗಳನ್ನು ಎರಡು ಹಂತಗಳಲ್ಲಿ ಕೈಗೊಳ್ಳಲಾಗುತ್ತದೆ. ಈ ಹೂಡಿಕೆ ಒಪ್ಪಂದ ಪ್ರಮುಖ ಮೈಲಿಗಲ್ಲು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ದಾವೋಸ್ ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿವಿಧ ಕಂಪನಿಗಳ ಮುಖ್ಯಸ್ಥರನ್ನು ಭೇಟಿಯಾಗಿದ್ದಾರೆ. ರಾಜ್ಯದಲ್ಲಿನ ಹೂಡಿಕೆ ಬಗ್ಗೆ ಮಾತುಕತೆ ನಡೆಸಿದ್ದಾರೆ. ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ, ಭಾರ್ತಿ ಎಂಟರ್ ಪ್ರೈಸಸ್ ನ ಸಿಇಒ ಸುನೀಲ್ ಭಾರ್ತಿ ಮಿತ್ತಲ್ ಮತ್ತಿತರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿಯಾಗಿದ್ದಾರೆ.
30 ಸಾವಿರ ಉದ್ಯೋಗ ಸೃಷ್ಟಿ ನಿರೀಕ್ಷೆ
ಮೊದಲ ಹಂತದಲ್ಲಿ ಈಗಾಗಲೇ ಜಾರಿಯಲ್ಲಿರುವ ಯೋಜನೆಗಳಿಗೆ 11,900 ಕೋಟಿ ರೂ.ಗಳ ಬಂಡವಾಳ ಹೂಡಿಕೆ ಮಾಡಲಾಗುತ್ತದೆ. ಮುಂದಿನ 2 ವರ್ಷಗಳಲ್ಲಿ ಯೋಜನೆಗಳು ಕಾರ್ಯಾರಂಭ ಮಾಡಲಾಗುತ್ತದೆ. ಎರಡನೇ ಹಂತದಲ್ಲಿ ನವೀಕರಿಸಬಹುದಾದ ಇಂಧನ ಹಾಗೂ ಗ್ರೀನ್ ಹೈಡ್ರೋಜನ್ ಘಟಕಗಳನ್ನು ಮುಂದಿನ 5 ವರ್ಷಗಳಲ್ಲಿ ಸ್ಥಾಪಿಸಲು 37,500 ಕೋಟಿ ರೂ.ಗಳ ಬಂಡವಾಳವನ್ನು ಹೂಡಿಕೆ ಮಾಡಲಾಗುತ್ತದೆ. ಈ ಎರಡು ಹಂತದ ಯೋಜನೆಗಳಿಂದ ಸುಮಾರು 30 ಸಾವಿರ ಉದ್ಯೋಗ ಸೃಷ್ಟಿಯ ನಿರೀಕ್ಷೆ ಇದೆ ಎಂದು ತಿಳಿಸಿದರು.
ರೆನ್ಯೂ ಪವರ್ ಪ್ರೈ.ಲಿ. ಸಂಸ್ಥೆ
ರೆನ್ಯೂ ಪವರ್ ಪ್ರೈ.ಲಿ. ಸಂಸ್ಥೆ ಭಾರತದಲ್ಲಿ ನವೀಕರಿಸಬಹುದಾದ ಇಂಧನದ ಉತ್ಪಾದನೆಯಲ್ಲಿ ತೊಡಗಿರುವ ಅತ್ಯಂತ ದೊಡ್ಡ ಸಂಸ್ಥೆಯಾಗಿದೆ. ದೇಶದಲ್ಲಿ ರೆನ್ಯೂ ಪವರ್ ಪ್ರೈ.ಲಿ. ಸಂಸ್ಥೆ 9 ರಾಜ್ಯಗಳಲ್ಲಿ 120 ಕ್ಕೂ ಹೆಚ್ಚು ಪವನ, ಸೌರ ಹಾಗೂ ಹೈಡ್ರೋ ಇಂಧನ ಪ್ರಾಜೆಕ್ಟ್‌ಗಳನ್ನು ಸ್ಥಾಪನೆ ಮಾಡಿದೆ. ಕರ್ನಾಟಕ ರಾಜ್ಯದಲ್ಲಿಯೂ ಈಗ ಒಪ್ಪಂದವನ್ನು ಮಾಡಿಕೊಂಡಿದೆ. ಸಂಸ್ಥೆಯು ಪ್ರಸ್ತುತ 12 ಗೀಗಾವ್ಯಾಟ್ ನಷ್ಟು ಇಂಧನವನ್ನು ಉತ್ಪಾದನೆ ಮಾಡುತ್ತಿದೆ.
ರಾಜ್ಯದಲ್ಲಿ ಇನ್ನೊಂದು ಮೆಗಾ ಡಾಟಾ ಸೆಂಟರ್
ಇದಕ್ಕೂ ಮುನ್ನ ಭಾರ್ತಿ ಎಂಟರ್ ಪ್ರೈಸಸ್ ನ ಅಧ್ಯಕ್ಷ ಹಾಗೂ ಸಿಇಓ ಸುನಿಲ್ ಭಾರ್ತಿ ಮಿತ್ತಲ್ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿಯಾಗಿದ್ದಾರೆ. ರಾಜ್ಯದಲ್ಲಿ ಇನ್ನೊಂದು ಮೆಗಾ ಡಾಟಾ ಸೆಂಟರ್ ಸ್ಥಾಪಿಸುವ ಇಚ್ಛೆಯನ್ನು ವ್ಯಕ್ತಪಡಿಸಿದರು. ಈ ವೇಳೆ ರಾಜ್ಯ ಸರ್ಕಾರವು ಎಲ್ಲ ಅಗತ್ಯ ಬೆಂಬಲ ನೀಡುವುದಾಗಿ ಮುಖ್ಯಮಂತ್ರಿ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಕರ್ನಾಟಕದಲ್ಲಿನ ಹೂಡಿಕೆಗಳ ಅವಕಾಶಗಳ ಬಗ್ಗೆ ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಜೊತೆಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಜಾನ್ಸನ್ ಕಂಟ್ರೋಲ್ಸ್ ನ ಸಿ ಇ ಓ ಜಾರ್ಜ್ ಒಲಿವರ್ ಜೊತೆಗೆ ಮಾತುಕತೆ ನಡೆಸಿದರು.
ಲುಲು ಗ್ರೂಪ್ ಜೊತೆ 2000 ಕೋಟಿ ರೂ. ಹೂಡಿಕೆ ಒಪ್ಪಂದ
ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಭಾಗಿಯಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮಾವೇಶದ ಮೊದಲ ದಿನವೆ ಲುಲು ಗ್ರೂಪ್ ಜೊತೆ 2000 ಕೋಟಿ ರೂ. ಹೂಡಿಕೆ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಒಪ್ಪಂದದ ಪ್ರಕಾರ ಲುಲು ರಾಜ್ಯದಲ್ಲಿ 4 ಶಾಪಿಂಗ್ ಮಾಲ್ ಮತ್ತು ಹೈಪರ್ ಮಾರ್ಕೆಟ್ ಹಾಗೂ ರಫ್ತು ಆಧಾರಿತ ಆಹಾರ ಮಳಿಗೆಗಳನ್ನು ಸ್ಥಾಪಿಸಲಿದೆ. ಈ ಮೂಲಕ 10 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.


Click it and Unblock the Notifications