ಕೊರೊನಾವೈರಸ್ ಸೋಂಕು ತಡೆಗಟ್ಟಲು ಮಾರ್ಚ್ 25ರಿಂದ ಹೇರಿದ್ದ ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದಾಗಿ ದೇಶದ ಚಿಲ್ಲರೆ ವಲಯವು ಭಾರೀ ಪ್ರಮಾಣದಲ್ಲಿ ಆಘಾತ ಅನುಭವಿಸಿದೆ. ಸುಮಾರು 5.5 ಲಕ್ಷ ಕೋಟಿಯಷ್ಟು ನಷ್ಟವಾಗಿದೆ ಎಂದು ಅಖಿಲ ಭಾರತ ಚಿಲ್ಲರೆ ವ್ಯಾಪಾರಿಗಳ ಒಕ್ಕೂಟ ಮಂಗಳವಾರ ಹೇಳಿದೆ.
ದೇಶದ 20 ಪರ್ಸೆಂಟ್‌ರಷ್ಟು ಚಿಲ್ಲರೆ ಕ್ಷೇತ್ರದ ವ್ಯಾಪಾರಿಗಳು ಈ ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದು, ಅವರು ಎಂದಿನಂತೆ ವ್ಯಾಪಾರದಲ್ಲಿ ತೊಡಗಲು ಇನ್ನೂ ಕೆಲವು ತಿಂಗಳುಗಳೇ ಬೇಕಾಗಲಿವೆ ಎಂದಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೂಕ್ತ ಆರ್ಥಿಕ ನೆರವನ್ನು ಒದಗಿಸುವ ಮೂಲಕ ಈ ಕ್ಷೇತ್ರದ ವ್ಯಾಪಾರಿಗಳನ್ನು ಬೆಂಬಲಿಸಬೇಕಾಗಿದೆ ಎಂದು ಒಕ್ಕೂಟ ಕೇಳಿಕೊಂಡಿದೆ.

ಚಿಲ್ಲರೆ ವ್ಯಾಪಾರಿಗಳು ಪ್ರತಿದಿನ 15 ಸಾವಿರ ಕೋಟಿ ವ್ಯಾಪಾರ ಮಾಡುತ್ತಿದ್ದರು. 40 ದಿನಗಳಿಂದ ಲಾಕ್ ಡೌನ್ ಜಾರಿಯಾಗಿರುವುದರಿಂದ ಏಳು ಕೋಟಿ ವ್ಯಾಪಾರಿಗಳ ಪೈಕಿ 1.5 ಕೋಟಿ ವ್ಯಾಪಾರಿಗಳು ಶಾಶ್ವತವಾಗಿ ಇನ್ನೂ ಕೆಲವು ತಿಂಗಳುಗಳ ಕಾಲ ವ್ಯಾಪಾರ ಬಂದ್ ಮಾಡುವಂತಾಗಿದೆ. 75 ಲಕ್ಷಕ್ಕೂ ಹೆಚ್ಚಿನ ವ್ಯಾಪಾರಿಗಳು ಮಧ್ಯಮ ಹಂತದಲ್ಲಿದ್ದಾರೆ ಎಂದು ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಬಿಸಿ ಭಾರ್ತಿಯಾ ಮತ್ತು ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೆಲ್ ವಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಒಂದು ಕಡೆ ಚಿಲ್ಲರೆ ವ್ಯಾಪಾರಿಗಳಿಗೆ ತಿಂಗಳ ಸಂಬಳ, ಬಾಡಿಗೆ ಮತ್ತಿತರ ತಿಂಗಳ ವೆಚ್ಚ ತಗುಲಲಿದೆ. ಮತ್ತೊಂದೆಡೆ ಕಠಿಣ ಸಾಮಾಜಿಕ ಅಂತರ ನಿಯಮದಿಂದಾಗಿ ಗ್ರಾಹಕರಿಲ್ಲದೆ ಆದಾಯ ಕಡಿಮೆಯಾಗಿದೆ. ಎಂದಿನಂತೆ ವ್ಯಾಪಾರ ಮಾಡಲು ಪರಿಸ್ಥಿತಿ ಬರಲು ಕನಿಷ್ಠ 6 ರಿಂದ 9 ತಿಂಗಳುಗಳು ಬೇಕಾಗಲಿವೆ. ಕೊರೊನಾ ಚೇತರಿಕೆಯ ಭರವಸೆಗಳು ಬತ್ತಿ ಹೋಗಿವೆ. ಆರ್ಥಿಕ ಹೊಡೆತ ಸಾಂಕ್ರಾಮಿಕ ರೋಗಕ್ಕಿಂತಲೂ ಹೆಚ್ಚಾಗಿದೆ ಎಂದು ಭಾರ್ತಿಯಾ ಮತ್ತು ಖಂಡೆಲ್ ವಾಲ್ ಹೇಳಿಕೊಂಡಿದ್ದಾರೆ.
ಸದ್ಯದಲ್ಲೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತೊಂದು ಸುತ್ತಿನಲ್ಲಿ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಚಿಲ್ಲರೆ ಕ್ಷೇತ್ರದ ಉತ್ತಮ ಆರ್ಥಿಕ ಪರಿಹಾರ ಪ್ಯಾಕೇಜ್ ನೀಡುವಂತೆ CAIT ಮನವಿ ಮಾಡಿಕೊಂಡಿದೆ.


Click it and Unblock the Notifications