ಯುನೈಟೆಡ್ ಸ್ಟೇಟ್ಸ್ ಮೂಲದ ಖಾಸಗಿ ಈಕ್ವಿಟಿ ಸಂಸ್ಥೆ ಸಿಲ್ವರ್ ಲೇಕ್ ಗೆ 1 ಬಿಲಿಯನ್ ಯುಎಸ್ ಡಿ ಮೌಲ್ಯದ ರಿಲಯನ್ಸ್ ರೀಟೇಲ್ ಷೇರಿನ ಪಾಲನ್ನು ಮಾರಾಟ ಮಾಡಲು ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಮಾತುಕತೆ ನಡೆಸಿದೆ. ಅಂದ ಹಾಗೆ ರಿಲಯನ್ಸ್ ರೀಟೇಲ್ ಮೌಲ್ಯ 5700 ಕೋಟಿ ಅಮೆರಿಕನ್ ಡಾಲರ್ ಇದೆ ಎಂದು ಮಾಧ್ಯಮಗಳಿಗೆ ಮೂಲಗಳು ತಿಳಿಸಿವೆ.
ಈ ಹಿಂದೆ ವರದಿ ಆಗಿದ್ದ ಪ್ರಕಾರ, ರಿಲಯನ್ಸ್ ರೀಟೇಲ್ ನಲ್ಲಿ 10% ಪಾಲನ್ನು ಮಾರಾಟ ಮಾಡಿ, 570 ಕೋಟಿ ಅಮೆರಿಕನ್ ಡಾಲರ್ ಸಂಗ್ರಹಿಸಲಾಗುವುದು ಎನ್ನಲಾಗಿತ್ತು. ಈ ವರ್ಷದ ಆರಂಭದಲ್ಲಿ ಸಿಲ್ವರ್ ಲೇಕ್ ನಿಂದ ರಿಲಯನ್ಸ್ ಜಿಯೋದಲ್ಲಿ 10,202 ಕೋಟಿ ರುಪಾಯಿ ಮೌಲ್ಯದ ಷೇರು ಖರೀದಿ ಮಾಡಲಾಯಿತು. 2.08% ಈಕ್ವಿಟಿ ಷೇರು ತನ್ನದಾಗಿಸಿಕೊಂಡಿತು.
ಜಿಯೋ ಪ್ಲಾಟ್ ಫಾರ್ಮ್, ರಿಲಯನ್ಸ್ ರೀಟೇಲ್ ಮೌಲ್ಯ 12,300 ಕೋಟಿ USD
ಫೇಸ್ ಬುಕ್, ಗೂಗಲ್, ಕ್ವಾಲ್ ಕಾಂ, ಕೆಕೆಆರ್ ಸೇರಿದಂತೆ ಹದಿಮೂರು ಹೂಡಿಕೆದಾರರಿಗೆ ರಿಲಯನ್ಸ್ ಜಿಯೋದ 32.97% ಪಾಲನ್ನು ಮಾರಾಟ ಮಾಡಿ, 1.52 ಲಕ್ಷ ಕೋಟಿ ರುಪಾಯಿಯನ್ನು ರಿಲಯನ್ಸ್ ಸಂಗ್ರಹಿಸಿದೆ. ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿಯು ಭಾರತದ ಅತಿ ದೊಡ್ಡ ಲಿಸ್ಟೆಡ್ ಖಾಸಗಿ ಕಂಪೆನಿ. ಮಾರುಕಟ್ಟೆ ಮೌಲ್ಯ 13.91 ಲಕ್ಷ ಕೋಟಿ ಇದೆ. ಸಿಲ್ವರ್ ಲೇಕ್ ನಿಂದ ಹೂಡಿಕೆ ಮಾಡಿದಾಗ ಜಿಯೋ ಪ್ಲಾಟ್ ಫಾರ್ಮ್ ಮೌಲ್ಯ 6600 ಕೋಟಿ USDಗೂ ಹೆಚ್ಚಿತ್ತು. ಈಗ ರಿಲಯನ್ಸ್ ರೀಟೇಲ್ ನಲ್ಲಿ ಸಿಲ್ವರ್ ಲೇಕ್ ಹೂಡಿಕೆ ಮಾಡುವಾಗ 5700 ಕೋಟಿ USD ಇದೆ. ಜಿಯೋ ಪ್ಲಾಟ್ ಫಾರ್ಮ್ ಹಾಗೂ ರಿಲಯನ್ಸ್ ರೀಟೇಲ್ ಎರಡೂ ಸೇರಿ ಒಟ್ಟು ಮೌಲ್ಯ 12,300 ಕೋಟಿ USD ಆಗುತ್ತದೆ.
ರಿಲಯನ್ಸ್ ರೀಟೇಲ್ ಲಾಭ 5448 ಕೋಟಿ
ರಿಲಯನ್ಸ್ ರೀಟೇಲ್ ನ ಒಟ್ಟು ವಹಿವಾಟು 1,62,936 ಕೋಟಿ ರುಪಾಯಿ ಇದ್ದು, ಈ ಹಿಂದಿನ ಆರ್ಥಿಕ ವರ್ಷದ ಕೊನೆಗೆ ನಿವ್ವಳ ಲಾಭ 5448 ಕೋಟಿ ಬಂದಿದೆ. ಮಾರುಕಟ್ಟೆ ತಜ್ಞರ ಪ್ರಕಾರ, ರಿಲಯನ್ಸ್ ಇಂಡಸ್ಟ್ರೀಸ್ ಅನ್ನು ತಂತ್ರಜ್ಞಾನ ಹಾಗೂ ರೀಟೇಲ್ ಕಂಪೆನಿಯಾಗಿ ರೂಪಿಸಲು ಮುಕೇಶ್ ಅಂಬಾನಿ ಪ್ರಯತ್ನಿಸುತ್ತಿದ್ದಾರೆ. ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ರಿಲಯನ್ಸ್ ನ ಸಾಂಪ್ರದಾಯಿಕ ವ್ಯವಹಾರವಾದ ತೈಲದಿಂದ ಕೆಮಿಕಲ್ ತನಕದ ವ್ಯವಹಾರದಲ್ಲಿ ಹಿಂಜರಿತ ಆಗಿದೆ. ಆ ಹಿನ್ನೆಲೆಯಲ್ಲಿ ಮುಕೇಶ್ ನಿರ್ಧಾರ ಮಾಡಿದ್ದಾರೆ ಎನ್ನುತ್ತಾರೆ.
ರೀಟೇಲ್ ಕ್ಷೇತ್ರದಲ್ಲಿ ಈಗ ನಂಬರ್ ಒನ್
ಕಳೆದ ವಾರ ರಿಲಯನ್ಸ್ ಇಂಡಸ್ಟ್ರೀಸ್ ನಿಂದ ಕಿಶೋರ್ ಬಿಯಾನಿ ಅವರ ಫ್ಯೂಚರ್ ಗ್ರೂಪ್ ನ ರೀಟೇಲ್, ಲಾಜಿಸ್ಟಿಕ್ಸ್, ವೇರ್ ಹೌಸಿಂಗ್ ಹಾಗೂ ಹೋಲ್ ಸೇಲ್ ವ್ಯವಹಾರವನ್ನು ಸ್ಲಂಪ್ ಸೇಲ್ ಆಧಾರದಲ್ಲಿ 24,713 ಕೋಟಿಗೆ ಖರೀದಿ ಮಾಡಲಾಗಿದೆ. ಅಮೆಜಾನ್, ವಾಲ್ ಮಾರ್ಟ್ ಗೆ ಸೇರಿದ ಫ್ಲಿಪ್ ಕಾರ್ಟ್ ಎದುರಿಸಲು ಅಂಬಾನಿ ಸಿದ್ಧರಾಗುತ್ತಿದ್ದಾರೆ. ಫ್ಯೂಚರ್ ಗ್ರೂಪ್ ಖರೀದಿ ಮೂಲಕ ರಿಲಯನ್ಸ್ ರೀಟೇಲ್ ಭಾರತದ ರೀಟೇಲ್ ವಲಯದಲ್ಲಿ ಟಾಪ್ ಆಗಿದೆ. ರಾಧಾಕಿಶನ್ ದಮಾನಿ ನೇತೃತ್ವದ ಅವೆನ್ಯೂ ಸೂಪರ್ ಮಾರ್ಟ್ ಅನ್ನು ಎರಡನೇ ಸ್ಥಾನಕ್ಕೆ ಸರಿಸಿದೆ.


Click it and Unblock the Notifications