ಕೊರೊನಾ ಲಾಕ್ ಡೌನ್ ನಿಂದಾಗಿ ಕರ್ನಾಟಕದಲ್ಲಿ ಸಿಲುಕಿಕೊಂಡಿರುವ ವಲಸಿಗ ಕಾರ್ಮಿಕರನ್ನು ಅವರ ತವರು ರಾಜ್ಯಗಳಿಗೆ ವಾಪಸ್ ಕಳುಹಿಸುವ ನಿಟ್ಟಿನಲ್ಲಿ ರೈಲು ಸೇವೆ ಪುನರಾರಂಭಿಸುವುದಾಗಿ ಗುರುವಾರ ತಿಳಿಸಲಾಗಿದೆ. ಬಿಲ್ಡರ್ಸ್ ಗಳ ಒತ್ತಡದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಕಾರ್ಮಿಕರನ್ನು ಬಲವಂತವಾಗಿ ಇರುವಂತೆ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿತ್ತು.
ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿ ಎನ್. ಮಂಜುನಾಥ್ ಅವರು ಗುರುವಾರದಂದು ವಿವಿಧ ರಾಜ್ಯಗಳಿಗೆ ಪತ್ರ ಬರೆದಿದ್ದಾರೆ. ಬಿಹಾರ, ಜಾರ್ಖಂಡ್, ಮಧ್ಯಪ್ರದೇಶ, ತ್ರಿಪುರಾ, ಮಣಿಪುರ್, ಪಶ್ಚಿಮ ಬಂಗಾಲ ಮತ್ತು ಉತ್ತರಪ್ರದೇಶದ ನೋಡಲ್ ಅಧಿಕಾರಿಗಳಿಗೆ ಪತ್ರ ಬರೆದು, ಶುಕ್ರವಾರದಿಂದ ಆರಂಭಿಸಿ, ಒಂದು ವಾರ ರೈಲು ಸೇವೆ ಒದಗಿಸುವುದಾಗಿ ತಿಳಿಸಿದ್ದಾರೆ.
ಕಾರ್ಮಿಕರು ಇಲ್ಲೇ ಉಳಿಯಬೇಕು: ಸರ್ಕಾರ
ಕರ್ನಾಟಕ ಸರ್ಕಾರವು ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದು, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸಿಲುಕಿಕೊಂಡಿರುವ ಕಾರ್ಮಿಕರು ಮರಳುವುದಕ್ಕೆ ಸೂಕ್ತ ವ್ಯವಸ್ಥೆ ಮಾಡಿಕೊಡಬೇಕು ಎಂದು ಕೇಳಿಕೊಂಡಿದ್ದಾರೆ. ಒಂದು ಸಲ ಲಾಕ್ ಡೌನ್ ವಾಪಸ್ ಪಡೆದ ಮೇಲೆ ಮತ್ತೆ ಆರ್ಥಿಕತೆಗೆ ವೇಗ ನೀಡಲು ಈ ಕಾರ್ಮಿಕರು ಇಲ್ಲೇ ಉಳಿಯಬೇಕು. ವಲಸಿಗ ಕಾರ್ಮಿಕರು ಹಿಂತಿರುಗಿದರೆ ಗ್ರಾಮೀಣ ಭಾಗದ ಮೇಲೆ ಒತ್ತಡ ಹೆಚ್ಚಾಗುತ್ತದೆ ಎಂದು ರಾಜ್ಯ ಸರ್ಕಾರ ಹಾಗೂ ಬಿಲ್ಡರ್ಸ್ ಗಳ ವಾದವಾಗಿತ್ತು.
ಪ್ರತಿ ದಿನ ರೈಲು ತೆರಳುತ್ತದೆ
ಬಿಹಾರ, ಉತ್ತರಪ್ರದೇಶ, ಮಧ್ಯಪ್ರದೇಶ ಮತ್ತು ಜಾರ್ಖಂಡ್ ಗೆ ಶುಕ್ರವಾರದಿಂದ ಪ್ರತಿ ದಿನ ಎರಡು ವಿಶೇಷ ರೈಲು ತೆರಳುತ್ತದೆ. ಇದರ ಜತೆಗೆ ತ್ರಿಪುರಾಗೆ ನಿತ್ಯವೂ ಒಂದು ವಿಶೇಷ ರೈಲು ಇದೆ. ಇನ್ನು ವಲಸಿಗ ಕಾರ್ಮಿಕರು ಪೂರ್ಣ ಪ್ರಮಾಣದಲ್ಲಿ ತೆರಳುವ ತನಕ ಪ್ರತಿ ದಿನವೂ ಮಣಿಪುರಕ್ಕೆ ರೈಲು ತೆರಳುತ್ತದೆ ಎಂದು ಕರ್ನಾಟಕ ಸರ್ಕಾರ ತಿಳಿಸಿದೆ. ರೈಲು ಸೇವೆ ರದ್ದು ಮೇಲೆ ಸಾವಿರಾರು ವಲಸಿಗ ಕಾರ್ಮಿಕರು ತಾವು ಎಲ್ಲಿದ್ದರೋ ಅಲ್ಲೇ ಉಳಿಯುವಂತಾಗಿತ್ತು. ಇದರಿಂದ ಬುಧವಾರ ಆಕ್ರೋಶ ವ್ಯಕ್ತವಾಗಿತ್ತು.
ಹೆಚ್ಚುವರಿಯಾಗಿ 3000 ರು. ಪರಿಹಾರ ಘೋಷಣೆ
ರೈಲು ಸೇವೆ ರದ್ದು ಮಾಡಿದ ಮೇಲೆ ತಮ್ಮ ತವರೂರುಗಳಿಗೆ ಹಲವು ಕಾರ್ಮಿಕರು ನಡೆದುಕೊಂಡೇ ಹೊರಟಿದ್ದರು. ಕೊರೊನಾ ಸಮಯದಲ್ಲಿ ಸಂಕಷ್ಟ ಎದುರಿಸುತ್ತಿರುವುದರಿಂದ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಕರ್ನಾಟಕ ಸರ್ಕಾರವು ಹೆಚ್ಚುವರಿಯಾಗಿ 3000 ರುಪಾಯಿ ಪರಿಹಾರ ಘೋಷಣೆ ಮಾಡಿದೆ. ಆದರೆ ತಜ್ಞರ ಅಭಿಪ್ರಾಯದ ಪ್ರಕಾರ, ವಲಸಿಗ ನೌಕರರ ಪೈಕಿ ಬಹುತೇಕರ ಸ್ಥಿತಿ ಬಹಳ ಚಿಂತಾಜನಕವಾಗಿದೆ. ಜತೆಗೆ ಸರ್ಕಾರದ ಬಳಿ ನೋಂದಣಿ ಕೂಡ ಮಾಡಿಕೊಂಡಿಲ್ಲವಾದ್ದರಿಂದ ಅವರಿಗೆ ಹಣ ಸಿಗುವುದು ಕೂಡ ಅನುಮಾನ.


Click it and Unblock the Notifications