ಆ ಬಾಲಕನಿಗೆ ಈಗಿನ್ನೂ ಎಂಟು ವರ್ಷ. ಹೆಸರು ರಯಾನ್ ಕಾಜಿ. 2019ನೇ ಇಸವಿಯಲ್ಲಿ ಈ ಬಾಲಕ ತನ್ನ ಯೂ ಟ್ಯೂಬ್ ಚಾನಲ್ ಮೂಲಕ ಮಾಡಿದ ಸಂಪಾದನೆ ಎಷ್ಟು ಗೊತ್ತಾ? $ 26 ಮಿಲಿಯನ್. ಭಾರತದ ರುಪಾಯಿ ಲೆಕ್ಕದಲ್ಲಿ ಹೇಳಬೇಕು ಅಂದರೆ, ನೂರಾ ಎಂಬತ್ತು ಕೋಟಿ ರುಪಾಯಿಗೂ ಹೆಚ್ಚು. ಆ ಮೂಲಕ ಯೂಟ್ಯೂಬ್ ನಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಬಾಲಕ ಎಂದು ಬುಧವಾರ ಫೋರ್ಬ್ಸ್ ನಿಯತಕಾಲಿಕೆ ಸುದ್ದಿ ಮಾಡಿದೆ.
ಕಾಜಿಯ ನಿಜವಾದ ಹೆಸರು ರಯಾನ್ ಗ್ವಾನ್. 2018ರಲ್ಲೂ ಹೆಚ್ಚು ಹಣ ಗಳಿಸಿದ ಬಾಲಕ ಈತ. ಆ ವರ್ಷ $ 22 ಮಿಲಿಯನ್ ಗಳಿಕೆ ಆಗಿತ್ತು. ಆತನ ಚಾನಲ್ 'ರಯಾನ್ ವರ್ಲ್ಡ್' ಆರಂಭವಾಗಿದ್ದು 2015ರಲ್ಲಿ. ಅದನ್ನು ಆರಂಭಿಸಿದ್ದು ಆತನ ಪೋಷಕರು. ಆಗ ರಯಾನ್ ಗೆ ಮೂರು ವರ್ಷ ವಯಸ್ಸು. ಈಗಾಗಲೇ ಆತನ ಚಾನಲ್ ಗೆ 22.9 ಮಿಲಿಯನ್ ಚಂದಾದಾರರಿದ್ದಾರೆ.
ಆರಂಭದಲ್ಲಿ 'ರಯಾನ್ ಟಾಯ್ಸ್ ರಿವ್ಯೂ' ಎನ್ನಲಾಗುತ್ತಿತ್ತು. ಅದರಲ್ಲಿ 'ಅನ್ ಬಾಕ್ಸಿಂಗ್' ವಿಡಿಯೋಗಳು ಇರುತ್ತಿದ್ದವು. ಆತ ಗೊಂಬೆಯನ್ನು ಬಾಕ್ಸ್ ನಿಂದ ತೆಗೆಯುವುದು ಮತ್ತು ಅದರ ಜತೆ ಆಟವಾಡುವ ವಿಡಿಯೋಗಳು ಇರುತ್ತಿದ್ದವು. ಹಲವು ವಿಡಿಯೋಗಳಿಗೆ ನೂರು ಕೋಟಿ ವ್ಯೂಸ್ ಬಂದಿದೆ. ಚಾನಲ್ ಶುರುವಾದಾಗಿನಿಂದ ಈವರೆಗೆ 35 ಬಿಲಿಯನ್ ವ್ಯೂಸ್ ಬಂದಿದೆ.

ಈಚೆಗೆ ಈ ಚಾನಲ್ ಬಗ್ಗೆ ವಿವಿಧ ಆಕ್ಷೇಪಗಳು ಬಂದ ಮೇಲೆ ಹೆಸರು ಬದಲಿಸಲಾಗಿದೆ. ಯೂಟ್ಯೂಬ್ ನ ಮತ್ತೊಂದು ಹೆಸರಾಂತ ಚಾನಲ್ "ಡ್ಯೂಡ್ ಪರ್ಫೆಕ್ಟ್" ಅನ್ನು ಸಹ ರಯಾನ್ ಕಾಜಿ ಚಾನಲ್ ಮೀರಿಸಿದೆ. ಈ ಡ್ಯೂಡ್ ಪರ್ಫೆಕ್ಟ್ ಚಾನಲ್ ಅನ್ನು ನೀವೊಂದು ಸಲ ನೋಡಬೇಕು. ಎಲ್ಲೋ ಹೆಲಿಕಾಪ್ಟರ್, ಎತ್ತರದ ಕಟ್ಟಡಗಳಿಂದ ಕೂಡ ಬ್ಯಾಸ್ಕೆಟ್ ಬಾಲ್ ಅನ್ನು ಗುರಿ ತಲುಪಿಸುವ ಸ್ನೇಹಿತರ ಗುಂಪಿನ ವಿಡಿಯೋಗಳು ಇವು.
ಈ ಡ್ಯೂಡ್ ಪರ್ಫೆಕ್ಟ್ ಚಾನಲ್ ಎರಡನೇ ಸ್ಥಾನದಲ್ಲಿದೆ. ಅದೂ $ 20 ಮಿಲಿಯನ್ ಗಳಿಕೆ ಮೂಲಕ. ಜೂನ್ 1, 2018 ಮತ್ತು ಜೂನ್ 1, 2019ರ ಮಧ್ಯೆ ಮಾಡಿದ ಗಳಿಕೆ ಇದು. ಮೂರನೇ ಸ್ಥಾನದಲ್ಲಿ ಇರುವುದು ರಷ್ಯಾದ ಅನಸ್ತಾಸಿಯ ರಾದ್ ಝಿನ್ ಸ್ಕಾಯ. ಐದು ವರ್ಷ ವಯಸ್ಸಿನ ಆಕೆಯ ಗಳಿಕೆ $ 18 ಮಿಲಿಯನ್. ಆಕೆಯ ಚಾನಲ್ "ಲೈಕ್ ನಾಸ್ತಾಯ ವ್ಲಾಗ್" ಮತ್ತು "ಫನ್ನಿ ಸ್ಟೇಸಿ"ಗೆ 70 ಮಿಲಿಯನ್ ಚಂದಾದಾರರಿದ್ದಾರೆ.


Click it and Unblock the Notifications