ವಿಶ್ವದ ಅತ್ಯಂತ ದುಬಾರಿಗಳ ಬಗ್ಗೆ ಆಸಕ್ತಿ ಇರುವವರಿಗೆ ಕೂಡ ಈ ಸುದ್ದಿ ಅಚ್ಚರಿ ನೀಡುತ್ತದೆ. ಇದರಲ್ಲಿ ಎಕನಾಮಿಕ್ಸ್, ಸೈನ್ಸ್, ಸ್ಪೇಸ್ ಸೈನ್ಸ್ ಎಲ್ಲವೂ ಇದೆ. ಮನೆಗಳಲ್ಲಿ ಬಚ್ಚಲು ಮನೆ, ಶೌಚಗೃಹದ ಅಲಂಕಾರಕ್ಕೆ ಏನೇ ಖರ್ಚು ಮಾಡುತ್ತೇವೆ ಅಂದರೆ ಬಹುಸಂಖ್ಯಾತರು ಸಾವಿರಗಳಲ್ಲಿ, ಲಕ್ಷಗಳಲ್ಲಿ ವೆಚ್ಚ ಮಾಡಬಹುದು. ಆದರೆ ಈ ಕಮೋಡ್ (ಸಂಡಾಸು) ಬೆಲೆ 174 ಕೋಟಿ ರುಪಾಯಿ.
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಇದನ್ನು ರೂಪಿಸಿದೆ. ಇದರ ವೆಚ್ಚ 2.30 ಕೋಟಿ USD. ಭಾರತದ ರುಪಾಯಿಗಳಲ್ಲಿ 174 ಕೋಟಿ. ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ (ಐಎಸ್ ಎಸ್) ದಶಕಗಳಿಂದ ಅಮೆರಿಕ ಹಳೇ ತಂತ್ರಜ್ಞಾನದ ಸಂಡಾಸನ್ನೇ ಬಳಸುತ್ತಿತ್ತು. ಇದೀಗ ಹೊಸ ಸಂಡಾಸು ರೂಪಿಸಿದೆ.
ಆರು ವರ್ಷದ ಸಂಶೋಧನೆ
ಐಎಸ್ ಎಸ್ ನಲ್ಲಿ ಹಾಕಲಾಗುವ ಈ ಸಂಡಾಸು ಬಹಳ ವಿಶಿಷ್ಟವಾದದ್ದು. ಇದರ ನಿರ್ಮಾಣಕ್ಕಾಗಿಯೇ ನಾಸಾ ಆರು ವರ್ಷಗಳ ಸಂಶೋಧನೆ ನಡೆಸಿದೆ. ಐಎಸ್ ಎಸ್ ಗೆ ಮಹಿಳೆಯರನ್ನು ಕರೆದೊಯ್ಯುವ ಪ್ರಮಾಣವೂ ಗಣನೀಯವಾಗಿ ಹೆಚ್ಚಾಗುತ್ತಿದೆ. ಆದರೆ ಅಲ್ಲಿದ್ದ ಸಂಡಾಸು ಮಹಿಳೆಯರಿಗೆ ತಕ್ಕಂತೆ ಇರಲಿಲ್ಲ. ಇದರಿಂದ ಸಮಸ್ಯೆ ಆಗುತ್ತಿತ್ತು. ಆದ್ದರಿಂದ ಪುರುಷರು- ಮಹಿಳೆಯರು ಇಬ್ಬರೂ ಬಳಸಬಹುದಾದ ಸಂಡಾಸು ನಿರ್ಮಿಸಲಾಗಿದೆ.
ಗಗನಯಾತ್ರಿಗಳಿಗೆ ಇನ್ನು ಸಮಸ್ಯೆ ಇರುವುದಿಲ್ಲ
ಇದರಿಂದಾಗಿ ಮಹಿಳಾ ಗಗನಯಾತ್ರಿಗಳಿಗೆ ಈಗ ಆಗುತ್ತಿರುವ ಸಮಸ್ಯೆ ಇರುವುದಿಲ್ಲ. ಈ ಸಂಡಾಸಿಗೆ ಯೂನಿವರ್ಸಲ್ ವೇಸ್ಟ್ ಮ್ಯಾನೇಜ್ ಮೆಂಟ್ ಸಿಸ್ಟಮ್ ಎಂದು ನಾಸಾ ಹೆಸರಿಟ್ಟಿದೆ. ಈ ವರ್ಷದ ಸೆಪ್ಟೆಂಬರ್ ನಲ್ಲಿ ಬಾಹ್ಯಾಕಾಶ ಕೇಂದ್ರಕ್ಕೆ ಇದನ್ನು ನಾಸಾ ಕಳುಹಿಸಲಿದೆ. ಈ ಹಿಂದೆ ಬಳಸುತ್ತಿದ್ದ ಸಂಡಾಸನ್ನು ಮೈಕ್ರೋಗ್ರಾವಿಟಿ ಟಾಯ್ಲೆಟ್ ಎಂದು ಕರೆಯಲಾಗುತ್ತಿತ್ತು.
ಕಡಿಮೆ ಸ್ಥಳವೂ ಸಾಕು, ತೂಕವೂ ಕಡಿಮೆ
ಈ ಹೊಸ ಸಂಡಾಸಿಗೆ ಹಿಂದಿನದಕ್ಕಿಂತ ಕಡಿಮೆ ಸ್ಥಳ ಸಾಕಂತೆ. ತೂಕವೂ ಕಡಿಮೆ ಆಗಿದೆ. ಗಗನಯಾತ್ರಿಗಳು ಆರಾಮವಾಗಿ ಕೂರಬಹುದಾದಷ್ಟು ವಿಶಾಲವಾಗಿಯೂ ಇದೆಯಂತೆ. ಇದರಲ್ಲಿ ಮೂತ್ರ ಹಾಗೂ ಮೂಲ ಸುಲಭವಾಗಿ ಪ್ರತ್ಯೇಕಗೊಳ್ಳುತ್ತದೆ. ಜತೆಗೆ ರೀಸೈಕಲ್ ಕೂಡ ವಿಭಿನ್ನವಾಗಿರುತ್ತದೆ ಎಂಬುದು ಸದ್ಯದ ಮಾಹಿತಿ. 2024ರಲ್ಲಿ ನಾಸಾ ನಡೆಸುವ ಚಂದ್ರ ಯಾನದ ಬಾಹ್ಯಾಕಾಶ ನೌಕೆ ಅಥವಾ ರಾಕೆಟ್ ನಲ್ಲೂ ಈ ಹೊಸ ಸಂಡಾಸು ಬಳಸಬಹುದು. ಈ ಚಂದ್ರಯಾನಕ್ಕೆ ಅರ್ಟೆಮಿಸ್ ಮಿಷನ್ ಎಂದು ಹೆಸರಿಡಲಾಗಿದೆ.


Click it and Unblock the Notifications