ಕೊರೊನಾ ವೈರಸ್ ಕಾರಣಕ್ಕೆ ಮಾರ್ಚ್ 20ನೇ ತಾರೀಕಿನಿಂದ ತಿರುಪತಿ ದೇವಾಲಯವು ಭಕ್ತರಿಗೆ ದರ್ಶನಕ್ಕೆ ಲಭ್ಯವಿಲ್ಲ. ಈ ಮಧ್ಯೆ ವೆಂಕಟೇಶ್ವರ ಸ್ವಾಮಿ ದೇವಾಲಯದ ಅಧಿಕಾರಿಗಳು ತಿರುಪತಿಯಲ್ಲಿ ಭಕ್ತರಿಗೆ ಪ್ರಸಾದವಾಗಿ ನೀಡುವ ಲಾಡುವನ್ನು 50 ಪರ್ಸೆಂಟ್ ರಿಯಾಯಿತಿ ದರಕ್ಕೆ ಮಾರಾಟ ಮಾಡಲು ನಿರ್ಧರಿಸಿದ್ದಾರೆ.
ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್, ಇದರ ಜತೆಗೆ ಆಂಧ್ರಪ್ರದೇಶದ ಎಲ್ಲ ಜಿಲ್ಲಾ ಕೇಂದ್ರಗಳಲ್ಲೂ ಮಾರಾಟ ಮಾಡಲು ನಿರ್ಧರಿಸಲಾಗಿದೆ. 175 ಗ್ರಾಮ್ ತೂಕದ ಲಾಡು ಮಾರಾಟದ ಬೆಲೆ 50 ರುಪಾಯಿ. ಅದನ್ನು ಈಗ 25 ರುಪಾಯಿಗೆ ನೀಡಲಾಗುತ್ತದೆ. ದೇವಸ್ಥಾನದ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಈ ನಿರ್ಧಾರವನ್ನು ಮಾಡಿದೆ.
ಲಾಡು ಪ್ರಸಾದ ರಿಯಾಯಿತಿ ದರಕ್ಕೆ
ವಿಶ್ವದ ಶ್ರೀಮಂತ ಹಿಂದೂ ದೇವಾಲಯ ಎನಿಸಿಕೊಂಡಿರುವ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮತ್ತೆ ಭಕ್ತರಿಗೆ ಯಾವಾಗಿಂದ ದರ್ಶನ ಆರಂಭವಾಗುತ್ತದೆ ಎಂಬ ಬಗ್ಗೆ ಅಂದಾಜಿಲ್ಲ. ಈಗಾಗಲೇ ಎರಡು ತಿಂಗಳಿಂದ ದರ್ಶನ ವ್ಯವಸ್ಥೆ ಇಲ್ಲದಂತಾಗಿದೆ. ಆ ಹಿನ್ನೆಲೆಯಲ್ಲಿ ಲಾಡು ಪ್ರಸಾದವನ್ನು ರಿಯಾಯಿತಿ ದರಕ್ಕೆ ವಿತರಿಸಲು ತೀರ್ಮಾನಿಸಲಾಗಿದೆ.
ಹೈದರಾಬಾದ್, ಚೆನ್ನೈ ಮತ್ತು ಬೆಂಗಳೂರಿನಲ್ಲಿ ಮಾರಾಟ
ಟಿಟಿಟಿ ಟ್ರಸ್ಟ್ ಮಂಡಳಿ ಅಧ್ಯಕ್ಷ ವೈ.ವಿ. ಸುಬ್ಬಾ ರೆಡ್ಡಿ ಮಾತನಾಡಿ, ಟಿಟಿಡಿ ಕಲ್ಯಾಣ ಮಂಟಪಗಳಲ್ಲಿ ಹಾಗೂ ಆಂಧ್ರಪ್ರದೇಶದ ಎಲ್ಲ ಹದಿಮೂರು ಜಿಲ್ಲೆಗಳಲ್ಲಿ, ಹೈದರಾಬಾದ್, ಚೆನ್ನೈ ಮತ್ತು ಬೆಂಗಳೂರಿನಲ್ಲಿ ಇರುವ ಮಾಹಿತಿ ಕೇಂದ್ರಗಳಲ್ಲಿ ಪ್ರಸಾದ ದೊರೆಯಲಿದೆ ಎಂದು ಅವರು ತಿಳಿಸಿದ್ದಾರೆ. ದೇವಾಲಯ ಮತ್ತೆ ಯಾವಾಗ ಆರಂಭವಾಗುತ್ತದೆ ಎಂದು ಫೋನ್, ಇಮೇಲ್ ನಲ್ಲಿ ಜನರು ವಿಚಾರಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಲಾಕ್ ಡೌನ್ ತೆರವು ನಿರ್ಧಾರದ ಮೇಲೆ ಎಲ್ಲವೂ ಅವಲಂಬಿಸಿದೆ ಎಂದಿದ್ದಾರೆ.
ಇ ಹುಂಡಿ ಮೂಲಕ 1.97 ಕೋಟಿ ಸಂಗ್ರಹ
ಲಾಕ್ ಡೌನ್ ನಿರ್ಬಂಧ ಇರುವ ಮಧ್ಯೆಯೂ ಇ- ಹುಂಡಿ ಮೂಲಕ ಭಕ್ತರು ಉದಾರವಾಗಿ ದೇಣಿಗೆ ನೀಡುತ್ತಿದ್ದಾರೆ. 2020ರ ಏಪ್ರಿಲ್ ನಲ್ಲಿ ಇ ಹುಂಡಿಯಿಂದ ಸಂಗ್ರಹವಾದ ಮೊತ್ತ 1.97 ಕೋಟಿ ರುಪಾಯಿ. ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ 18 ಲಕ್ಷ ರುಪಾಯಿ ಹೆಚ್ಚು ಸಂಗ್ರಹ ಆಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಲಾಡು ಬೇಕಿದ್ದವರಿಗೆ ಸಂಪರ್ಕ ಸಂಖ್ಯೆ
ಯಾರಿಗಾದರೂ ಹೆಚ್ಚಿನ ಸಂಖ್ಯೆಯಲ್ಲಿ ಲಾಡು ಪ್ರಸಾದ ಬೇಕಿದ್ದಲ್ಲಿ ಮೊಬೈಲ್ ಫೋನ್ ಸಂಖ್ಯೆ 9849575952, 9701092777 ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ. ಅಂದಹಾಗೆ ಲಾಡು ಮಾರಾಟ ಆರಂಭ ಮಾಡುವ ದಿನಾಂಕವನ್ನು ಎರಡ್ಮೂರು ದಿನದಲ್ಲಿ ನಿರ್ಧರಿಸಲಾಗುವುದು ಎಂದು ತಿಳಿಸಲಾಗಿದೆ.


Click it and Unblock the Notifications