ಬೆಂಗಳೂರಿನ ವಿಠ್ಠಲ್ ಮಲ್ಯ ರಸ್ತೆಯಲ್ಲಿ ಇರುವ ಯು.ಬಿ. ಸಿಟಿ ಟವರ್ಸ್ ನಿಂದ ಬಾಡಿಗೆ ಕಚೇರಿಯನ್ನು ಖಾಲಿ ಮಾಡಿಕೊಂಡು, ಸದ್ದಿಲ್ಲದೆ ಹೊರಬಂದಿದ್ದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್, ಇದೀಗ ತನ್ನ ಮಾರ್ಕೆಟಿಂಗ್ ತಂಡವನ್ನು ಪ್ರಮುಖ ಮೆಟ್ರೋ ನಗರಗಳಲ್ಲಿ ಕಡಿಮೆ ಬಾಡಿಗೆ ಕಚೇರಿಗೆ ಸ್ಥಳಾಂತರ ಮಾಡುತ್ತಿದೆ.
ವಾಹನಗಳ ಮಾರಾಟವೇ ಕುಸಿದಿರುವುದರಿಂದ ಬಾಡಿಗೆ ಮತ್ತೊಂದಕ್ಕೆ ಹೆಚ್ಚಿನ ವೆಚ್ಚ ಮಾಡುವುದು ಬೇಡ ಎಂದು ಕಂಪೆನಿ ತೀರ್ಮಾನಿಸಿದೆ. ಕೊರೊನಾ ನಂತರವಂತೂ ಪರಿಸ್ಥಿತಿ ಮತ್ತೂ ಗಂಭೀರವಾಗಿದೆ. "ಈ ವರ್ಷ ಬಾಡಿಗೆ ಖರ್ಚಿನಲ್ಲಿ ಕಂಪೆನಿಗೆ ಕೆಲವು ಕೋಟಿ ರುಪಾಯಿ ಉಳಿಸುವುದು ನಮ್ಮ ಉದ್ದೇಶ" ಎಂದು ಟೊಯೊಟಾ ಮೋಟಾರ್ಸ್ ಉಪಾಧ್ಯಕ್ಷ ಶೇಖರ್ ವಿಶ್ವನಾಥನ್ ಅವರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಫೀಲ್ಡ್ ನಲ್ಲಿ ಕೆಲಸ ಮಾಡಲು ನೇಮಕ
ಮುಂಬೈ, ದೆಹಲಿ, ಕೋಲ್ಕತ್ತಾ ಮತ್ತು ಬೆಂಗಳೂರಿನಲ್ಲಿನ ದುಬಾರಿ ಬಾಡಿಗೆಯ ಕಚೇರಿಗಳನ್ನು ಖಾಲಿ ಮಾಡಿ, ಸಣ್ಣ ಕಚೇರಿಗಳಿಗೆ ಮಾರ್ಕೆಟಿಂಗ್ ತಂಡವನ್ನು ಸ್ಥಳಾಂತರ ಮಾಡಲಾಗುತ್ತದೆ. ಆ ಮೂಲಕ ವೆಚ್ಚ ಕಡಿತ ಮಾಡಲಾಗುತ್ತದೆ. ಇದರ ಜತೆಗೆ ಫೀಲ್ಡ್ ನಲ್ಲಿ ಹೆಚ್ಚು ಕೆಲಸ ಮಾಡುವುದಕ್ಕೆ ನೇಮಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
14 ವರ್ಷಗಳ ಹಿಂದೆ ಯುಬಿ ಸಿಟಿಯಲ್ಲಿ ಬಾಡಿಗೆಗೆ
6200 ಉದ್ಯೋಗಿಗಳಿರುವ ಕಂಪೆನಿಯು 14 ವರ್ಷಗಳ ಹಿಂದೆ ಯುಬಿ ಸಿಟಿಯಲ್ಲಿ ಬಾಡಿಗೆಗೆ ಕಟ್ಟಡ ಪಡೆದಿತ್ತು. ಎರಡು ಅಂತಸ್ತಿನ ತಲಾ 25 ಸಾವಿರ ಚದರಡಿಯ ಜಾಗ ಬಾಡಿಗೆಗೆ ಪಡೆಯಲಾಗಿತ್ತು. ಆದರೆ ಕೆಲ ವರ್ಷದ ಹಿಂದೆ ಒಂದು ಅಂತಸ್ತು ಖಾಲಿ ಮಾಡಿತ್ತು. ಇನ್ನು ಮುಂದೆ ಕೊರೊನಾ ಲಾಕ್ ಡೌನ್ ನಿರ್ಬಂಧ ಸಡಿಲವಾದ ಮೇಲೆ ಬಿಡದಿ ಕೈಗಾರಿಕೆ ಪ್ರದೇಶದಲ್ಲೇ ಎಚ್ ಆರ್, ಫೈನಾನ್ಸ್, ಕಾನೂನು ವಿಭಾಗ ಸೇರಿ ಕಾರ್ಪೊರೇಟ್ ತಂಡ ಕೆಲಸ ಮಾಡಲಿದೆ.
ಸರ್ಕಾರದ ತೆರಿಗೆ ನೀತಿಯಿಂದ ಸಂಕಷ್ಟ
ಸರ್ಕಾರ ವಿಧಿಸಿದ ಗಡುವಿಗೂ ಮುಂಚೆಯೇ ಬಿಎಸ್ 6 ವಾಹನಗಳ ಉತ್ಪಾದನೆ ಆರಂಭಿಸಿದ ಕಂಪೆನಿ ಟೊಯೊಟಾ ಕಿರ್ಲೋಸ್ಕರ್. ಆದರೆ ಹೈಬ್ರಿಡ್ ಕಾರುಗಳ ಮೇಲೆ ಜಿಎಸ್ ಟಿ ಹಾಗೂ ಸೆಸ್ ಸೇರಿ 43 ಪರ್ಸೆಂಟ್ ಹಾಕಲು ಶುರು ಮಾಡಿದ ಮೇಲೆ ಕ್ಯಾಮ್ರಿ ಕಾರಿನ ಮಾರಾಟಕ್ಕೆ ಹೊಡೆತ ಬಿತ್ತು. ಆ ಕಾರಣಕ್ಕೆ ಇತರ ಹೈಬ್ರಿಡ್ ಮಾಡೆಲ್ ಗಳನ್ನು ಸಹ ಅಮಾನತು ಮಾಡಲಾಯಿತು.
ಮೂರು ತಿಂಗಳ ಹಿಂದೆ ತೆಗೆದುಕೊಂಡ ನಿರ್ಧಾರ
ಕೊರೊನಾಗೂ ಮುಂಚೆಯೇ ಯು.ಬಿ. ಸಿಟಿ ಕಚೇರಿ ಖಾಲಿ ಮಾಡುವುದಕ್ಕೆ ನಿರ್ಧಾರ ಮಾಡಿದ್ದೆವು. ನಮ್ಮ ಕಾರ್ಪೊರೇಟ್ ಕಚೇರಿಯನ್ನು ಬಿಡದಿಗೆ ಸ್ಥಳಾಂತರ ಮಾಡುವುದಕ್ಕೆ ಮೂರು ತಿಂಗಳು ಸಮಯ ಹಿಡಿಯಿತು. ನಮ್ಮ ಮುಂಬೈ, ದೆಹಲಿ, ಕೋಲ್ಕತ್ತಾ, ಬೆಂಗಳೂರಿನ ಮಾರ್ಕೆಟಿಂಗ್ ತಂಡಗಳು ಸಣ್ಣ ಕಚೇರಿಗೆ, ಒಟ್ಟಾಗಿ ಕೆಲಸ ಮಾಡುವಂಥ ಸ್ಥಳಗಳಿಗೆ ಶೀಘ್ರವೇ ಬದಲಾಗಲಿದ್ದಾರೆ ಎಂದು ಶೇಖರ್ ವಿಶ್ವನಾಥನ್ ತಿಳಿಸಿದ್ದಾರೆ.


Click it and Unblock the Notifications