ವಾಹನ ಉದ್ಯಮದಿಂದ ಕೇಳಿಬರುತ್ತಿದ್ದ ಬಹುಕಾಲದ ಬೇಡಿಕೆ ಈಡೇರಿಸುವ ಸಾಧ್ಯತೆ ಬಗ್ಗೆ ಜಿಎಸ್ ಟಿ ಸಮಿತಿಯು ಆಲೋಚಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಹೇಳಿದ್ದಾರೆ. ದ್ವಿಚಕ್ರ ವಾಹನಗಳ ಮೇಲೆ ಜಿಎಸ್ ಟಿ ದರ ಕಡಿಮೆ ಮಾಡಬೇಕು ಎಂಬುದು ಆ ಉದ್ಯಮದ ಬೇಡಿಕೆ ಆಗಿದೆ. ಸದ್ಯಕ್ಕೆ 28% ಸ್ಲ್ಯಾಬ್ ನಲ್ಲಿ ತೆರಿಗೆ ಹಾಕಲಾಗುತ್ತಿದೆ.
ಕಾನ್ಫಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ಸದಸ್ಯರ ಜತೆಗೆ ಸಂವಾದ ನಡೆಸುವ ವೇಳೆ ನಿರ್ಮಲಾ ಈ ಮಾತನ್ನು ಹೇಳಿದ್ದಾರೆ. ದ್ವಿಚಕ್ರ ವಾಹನ ವಿಲಾಸಿಯೂ ಅಲ್ಲ, ಪಾಪದ ಉತ್ಪನ್ನವೂ (ಸಿಗರೇಟ್, ಮದ್ಯ ಮುಂತಾದವನ್ನು ಸಿನ್ ಪ್ರಾಡಕ್ಟ್ ಎನ್ನಲಾಗುತ್ತದೆ) ಅಲ್ಲ. ಆದ್ದರಿಂದ ದರ ಪರಿಷ್ಕರಣೆಗೆ ಅವಕಾಶ ಇದೆ. ಇದನ್ನು ಜಿಎಸ್ ಟಿ ಸಮಿತಿ ಮುಂದೆ ಇಡಲಾಗುವುದು ಎಂದು ಕೇಂದ್ರ ಸಚಿವೆ ತಿಳಿಸಿರುವುದಾಗಿ ಸಿಐಐ ಮಾಹಿತಿ ನೀಡಿದೆ.
ಸೆಪ್ಟೆಂಬರ್ 17ನೇ ತಾರೀಕು ಜಿಎಸ್ ಟಿ ಸಭೆ
ಜಿಎಸ್ ಟಿ ಸಮಿತಿಯು ಗುರುವಾರ (ಆಗಸ್ಟ್ 27, 2020) ಸಭೆ ಸೇರಲಿದೆ. ರಾಜ್ಯಗಳ ಪರಿಹಾರದ ಬಗ್ಗೆ ಚರ್ಚಿಸುವುದು ಈ ಸಭೆಯ ಒಂದಂಶದ ಕಾರ್ಯ ಸೂಚಿ ಆಗಿದೆ. ಮೂಲಗಳು ತಿಳಿಸುವ ಪ್ರಕಾರ, ಸೆಪ್ಟೆಂಬರ್ 17ನೇ ತಾರೀಕು ನಡೆಯುವ ಸಭೆಯಲ್ಲಿ ದ್ವಿಚಕ್ರ ವಾಹನದ ವಿಚಾರ ಕೈಗೆತ್ತಿಕೊಳ್ಳಲಾಗುವುದು. ಹಬ್ಬದ ಸೀಸನ್ ನಲ್ಲಿ ಮಾರಾಟ ಹೆಚ್ಚಳಕ್ಕೆ ಅನುಕೂಲ ಆಗುವಂತೆ ಜಿಎಸ್ ಟಿ ದರದ ಸಮಸ್ಯೆ ನಿವಾರಿಸಲಾಗುವುದು.
ಹಂತ ಹಂತವಾಗಿ ತೆರಿಗೆ ಕಡಿಮೆ ಮಾಡುವಂತೆ ಬೇಡಿಕೆ
ಆಟೋಮೊಬೈಲ್ ಗಳ ಮೇಲಿನ ಜಿಎಸ್ ಟಿ ದರವನ್ನು ಹಂತಹಂತವಾಗಿ ಕಡಿಮೆ ಮಾಡುವಂತೆ ಪ್ರಯಾಣಿಕರ ವಾಹನಗಳ ಉದ್ಯಮದಿಂದ ಬೇಡಿಕೆ ಬಂದಿದೆ. ಮೊದಲ ಹಂತದಲ್ಲಿ ದ್ವಿಚಕ್ರ ವಾಹನಗಳ ಮೇಲೆ ದರ ಕಡಿತ ಮಾಡುವಂತೆ ಕೇಳಲಾಗಿದೆ. ನಂತರದ ಹಂತದಲ್ಲಿ ಕಾರು ಮುಂತಾದವುಗಳ ಮೇಲಿನ ತೆರಿಗೆ ಮುಂದೂಡುವಂತೆ ಕೇಳಿಕೊಳ್ಳಲಾಗಿದೆ.
ಎರಡು ಕೋಟಿಯಷ್ಟು ಜನರಿಗೆ ಅನುಕೂಲ
ಈ ನಿರ್ಧಾರಗಳಿಂದ ಸರ್ಕಾರಕ್ಕೆ ಆಗುತ್ತಿರುವ ಆದಾಯ ನಷ್ಟವನ್ನು ತಡೆಯಬಹುದು. ಅದೇ ಸಂದರ್ಭದಲ್ಲಿ ದ್ವಿಚಕ್ರ ವಾಹನಗಳನ್ನು ಖರೀದಿ ಮಾಡಬೇಕು ಎಂದಿರುವ ಅಂದಾಜು ಎರಡು ಕೋಟಿಯಷ್ಟು ಜನರಿಗೂ ಅನುಕೂಲ ಆಗುತ್ತದೆ ಎಂದು ಮನವರಿಕೆ ಮಾಡಿಕೊಡಲಾಗಿದೆ. ಈ ಮಧ್ಯೆ ಎಂಎಸ್ ಎಂಇಗೆ ಸಾಲ ಒದಗಿಸಲು ಘೋಷಿಸಿದ್ದ ಮೂರು ಲಕ್ಷ ಕೋಟಿ ರುಪಾಯಿ ಕ್ರೆಡಿಟ್ ಗ್ಯಾರಂಟಿ ಸ್ಕೀಮ್ ಅನ್ನು ಇನ್ನಷ್ಟು ವಿಸ್ತರಿಸಲು ಸರ್ಕಾರ ಆಲೋಚಿಸುತ್ತಿದೆ ಎಂದು ನಿರ್ಮಲಾ ತಿಳಿಸಿದ್ದಾರೆ.


Click it and Unblock the Notifications