ಅನಿವಾಸಿ ಭಾರತೀಯರು (ಎನ್ ಆರ್ ಐ) ಏರ್ ಇಂಡಿಯಾದ ಶೇಕಡಾ ನೂರರಷ್ಟು ಪಾಲನ್ನು ಖರೀದಿ ಮಾಡಬಹುದು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಬುಧವಾರ ಘೋಷಣೆ ಮಾಡಿದರು.
"ಎಫ್ ಡಿಐ (ವಿದೇಶ ನೇರ ಬಂಡವಾಳ) ನೀತಿಯಲ್ಲಿ ತಿದ್ದುಪಡಿ ತಂದಿದ್ದು, ಭಾರತೀಯ ಮೂಲದ ಅನಿವಾಸಿ ಭಾರತೀಯರು ಏರ್ ಇಂಡಿಯಾದ ಶೇಕಡಾ 100ರಷ್ಟು ಪಾಲನ್ನು ಖರೀದಿ ಮಾಡಬಹುದು. ಈ ಹಿಂದೆ ಎನ್ ಆರ್ ಐಗಳಾದವರಿಗೆ ಏರ್ ಇಂಡಿಯಾದಲ್ಲಿ ಷೇರು ಖರೀದಿ ಮಾಡುವುದಕ್ಕೆ ಸಾಧ್ಯವಿದ್ದದ್ದು ಶೇಕಡಾ 49ರಷ್ಟು ಮಾತ್ರ. ಆದರೆ ಈಗ 100 ಪರ್ಸೆಂಟ್ ಖರೀದಿಸಬಹುದು" ಎಂದು ಸಂಪುಟ ಸಭೆಯ ನಂತರ ಅವರು ಹೇಳಿದ್ದಾರೆ.
ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾದ ನೂರರಷ್ಟು ಪಾಲನ್ನೂ ಮಾರಾಟ ಮಾಡಲು ಕೇಂದ್ರ ಸರ್ಕಾರ ಮುಂದಾಗಿರುವುದರ ಹಿನ್ನೆಲೆಯಲ್ಲಿ ಈ ನಿರ್ಧಾರ ಬಂದಿದೆ. ಈಗ ಅನಿವಾಸಿ ಭಾರತೀಯರಿಗೆ ಏರ್ ಇಂಡಿಯಾದ ಶೇಕಡಾ ನೂರರಷ್ಟು ಪಾಲನ್ನು ಖರೀದಿಗೆ ಅವಕಾಶ ಮಾಡಿಕೊಟ್ಟಿರುವುದು SOEC ನಿಯಮಗಳ ಉಲ್ಲಂಘನೆಯಾಗುವುದಿಲ್ಲ.

ಅನಿವಾಸಿ ಭಾರತೀಯರ ಹೂಡಿಕೆಯನ್ನು ದೇಶೀಯ ಹೂಡಿಕೆಯೆಂದು ಪರಿಗಣಿಸಲಾಗುತ್ತದೆ. ಸಬ್ ಸ್ಟ್ಯಾನ್ಷಿಯಲ್ ಓನರ್ ಷಿಪ್ ಅಂಡ್ ಎಫೆಕ್ಟಿವ್ ಕಂಟ್ರೋಲ್ (SOEC) ನಿಯಮಾವಳಿ ಅಡಿಯಲ್ಲಿ ಇದು ಬರುತ್ತದೆ. ಜಾಗತಿಕ ಮಟ್ಟದಲ್ಲಿ ಎಲ್ಲ ವಿಮಾನಯಾನ ಸಂಸ್ಥೆಗಳು ಇದನ್ನು ಪಾಲಿಸುತ್ತವೆ. ಒಂದು ದೇಶದ ವಿಮಾನಯಾನ ಸಂಸ್ಥೆಯ ವಿಮಾನ ಬೇರೆ ದೇಶದಲ್ಲೂ ಹಾರಾಟ ನಡೆಸುತ್ತಿದ್ದರೆ ಒಂದೋ ಆ ಸಂಸ್ಥೆಯಲ್ಲಿ ದೇಶದ ಸರ್ಕಾರ ಅಥವಾ ಆ ದೇಶದ ನಾಗರಿಕರು ಪಾಲನ್ನು ಹೊಂದಿರಬೇಕು.
ಸದ್ಯಕ್ಕೆ ಇರುವ ನಿಯಮಾವಳಿ ಪ್ರಕಾರ, ಅನಿವಾಸಿ ಭಾರತೀಯರು ಏರ್ ಇಂಡಿಯಾದಲ್ಲಿ 49ರಷ್ಟು ಪಾಲನ್ನು ಹೊಂದಿರಬಹುದು. ಸರ್ಕಾರದ ಒಪ್ಪಿಗೆ ಮಾರ್ಗದ ಮೂಲಕ ಕೂಡ 49 ಪರ್ಸೆಂಟ್ ಪಾಲನ್ನು ಮಾತ್ರ ಹೊಂದಿರಬಹುದು.
ಹೊಸ ಬಂಡವಾಳ ಹಿಂತೆಗೆತ ಯೋಜನೆ ಪ್ರಕಾರ, ಏರ್ ಇಂಡಿಯಾಗೆ ಬಿಡ್ ಸಲ್ಲಿಸಿದವರು 23,685.5 ಕೋಟಿ ರುಪಾಯಿ ಸಾಲವನ್ನು ವಹಿಸಿಕೊಂಡರೆ ಆಯಿತು. ಆದರೂ ಸದ್ಯದ ಆಸ್ತಿ ಪ್ರಮಾಣವನ್ನು ಲೆಕ್ಕ ಹಾಕಿಕೊಂಡು, ವ್ಯವಹಾರ ಚುಕ್ತಾ ಮಾಡುವ ವೇಳೆಗೆ ಎಷ್ಟಿರುತ್ತದೆ ಎಂಬುದನ್ನೆಲ್ಲ ಗಣನೆಗೆ ತೆಗೆದುಕೊಂಡು ಅಂತಿಮವಾಗಿ ಸಾಲದ ಬಗ್ಗೆ ತೀರ್ಮಾನ ಮಾಡಲಾಗುತ್ತದೆ.
ಏರ್ ಇಂಡಿಯಾದಿಂದ ಬಂಡವಾಳ ಹಿಂತೆಗೆತಕ್ಕೆ ಇದು ಎರಡನೇ ಬಾರಿಗೆ ಸರ್ಕಾರದಿಂದ ಪ್ರಯತ್ನ ನಡೆಯುತ್ತಿದೆ. ಬಹಳ ಸಮಯದಿಂದ ಇದು ಸಾಧ್ಯವಾಗುತ್ತಿಲ್ಲ.


Click it and Unblock the Notifications