ಇವತ್ತು ಸ್ವಿಗ್ಗಿ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ , ಸ್ವಿಗ್ಗಿ ಅಷ್ಟರ ಮಟ್ಟಿಗೆ ಮನೆ ಮಾತಾಗಿದೆ. ಕೇವಲ ಏಳು ವರ್ಷದ ಹಿಂದೆ ಮನೆ ಮನೆಗೆ ಊಟ ತಲುಪಿಸುವ ಯೋಚನೆ ಹೊತ್ತು ಶುರುವಾದ ಒಂದು ಸಂಸ್ಥೆ ಇವತ್ತು ಯಾವ ಮಟ್ಟಕ್ಕೆ ಬೆಳೆದು ನಿಂತಿದೆ ನಿಮಗೆ ಗೊತ್ತಾ ? ನಿಮಗೆಲ್ಲ ಬೈಜುಸ್ ಗೊತ್ತೇ ಇರುತ್ತದೆ , ಜೊತೆಗೆ ಪೆಟಿಎಂ ಕೂಡ ಕೇಳಿಯೇ ಇರುತ್ತೀರಿ ಅಲ್ವಾ , ಬೈಜುಸ್ ಭಾರತದ ಅತ್ಯಂತ ಹೆಚ್ಚು ಮೌಲ್ಯ (ವ್ಯಾಲ್ಯೂವೇಶನ್ ) ಹೊಂದಿರುವ ಸಂಸ್ಥೆ ಎನ್ನುವ ಹೆಗ್ಗಳಿಕೆಯನ್ನ ಪಡೆದುಕೊಂಡಿದೆ, ಆ ನಂತರದ ಸ್ಥಾನ ಪೆಟಿಎಂ ಗೆ ಸಿಕ್ಕಿದೆ. ಇದೀಗ ಮೂರನೇ ಸ್ಥಾನದಲ್ಲಿ ಸ್ವಿಗ್ಗಿ ವಿರಾಜಮಾನವಾಗುವ ಸಾಧ್ಯತೆಗಳು ದಟ್ಟವಾಗಿವೆ.
ಅಮೇರಿಕಾ ದೇಶದ ಅಸೆಟ್ ಮ್ಯಾನೇಜ್ಮೆಂಟ್ ಸಂಸ್ಥೆ ಇನ್ವೆಸ್ಕೋ ಮುಂದಾಳತ್ವವದಲ್ಲಿ ಸ್ವಿಗ್ಗಿ 500 ರಿಂದ 600 ಮಿಲಿಯನ್ ಅಮೆರಿಕನ್ ಡಾಲರ್ ಹೊಸ ಹೂಡಿಕೆಯನ್ನ ಪಡೆಯಲು ಮಾತುಕತೆಯಲ್ಲಿ ತೊಡಗಿದೆ. ಈ ಮಾತುಕತೆ ಫಲಪ್ರದವಾಗಲು ಸ್ವಿಗ್ಗಿ ವ್ಯಾಲ್ಯೂವೇಶನ್ 10 ಬಿಲಿಯನ್ ಡಾಲರ್ ಆಗಬೇಕಿದೆ. ಸ್ವಿಗ್ಗಿಗೆ ದೊಡ್ಡ ಸ್ಪರ್ಧಿ ಝೋಮೋಟೋ . ಇದು ಆಗಲೇ ಐಪಿಒ ಇಂದ ಬಹಳಷ್ಟು ಹಣವನ್ನ ಮಾರುಕಟ್ಟೆಯಿಂದ ಎತ್ತಿದೆ , ಜೊತೆಗೆ 5.5 ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯವುಳ್ಳ ಸಂಸ್ಥೆ ಎನ್ನುವ ಹೆಸರನ್ನ ಕೂಡ ಪಡೆದುಕೊಂಡಿದೆ.

ಇದೀಗ ಸ್ವಿಗ್ಗಿ ತನ್ನ ಮಾರುಕಟ್ಟೆಯನ್ನ ಇನ್ನಷ್ಟು ಹಿಗ್ಗಿಸಿ ಕೊಳ್ಳುವ ತವಕದಲ್ಲಿ ಹೊಸ ಹೊಡಿಕೆಯನ್ನ ಬಯಸುತ್ತಿದೆ. ಇನ್ವೆಸ್ಕೋ ಜೊತೆಗೆ ಫಾಲ್ಕನ್ ಎಡ್ಜ್ , ಸಾಫ್ಟ್ ಬ್ಯಾಂಕ್ , ವಿಷನ್ ಫಂಡ್ , ಪ್ರೋಸುಸ್ ಸಂಸ್ಥೆಗಳು ಸ್ವಿಗ್ಗಿಯಲ್ಲಿ ಹೂಡಿಕೆ ಮಾಡಲು ಸಜ್ಜಾಗಿವೆ.
ಕೊರೊನಾಗೆ ಮುಂಚಿನಿಂದಲೇ ಭಾರತದಲ್ಲಿ ಮನೆಯ ಬಾಗಿಲಿಗೆ ಆಹಾರವನ್ನ ತಲುಪಿಸುವ ಈ ಸಂಸ್ಥೆಗಳು ಬಹಳಷ್ಟು ಯಶಸ್ಸನ್ನ ಪಡೆದುಕೊಂಡಿದ್ದವು. ಕೊರೊನೋತ್ತರ ಭಾರತದಲ್ಲಿದು ಇನ್ನಷ್ಟು ಹೆಚ್ಚಾಗಿದೆ. ವಾರಾಂತ್ಯದಲ್ಲಿ ಜನರಿಗೆ ಹೊರಗಡೆ ಟ್ರಾಫಿಕ್ ನಲ್ಲಿ ಹೋಗಿ ತಿನ್ನುವುದಕ್ಕಿಂತ ಮನೆಯಲ್ಲಿ ಕುಳಿತು ತಮ್ಮ ಮನೆಯ ಕಂಫರ್ಟ್ ನಲ್ಲಿ ತಿನ್ನುವುದು ಹೆಚ್ಚು ಇಷ್ಟ ಎನ್ನುವುದು ಸಾಭೀತಾಗಿದೆ. ಈ ವ್ಯಾಪರಕ್ಕೆ ಉಜ್ವಲ ಭವಿಷ್ಯವಿದೆ ಎನ್ನುವುದು ತಿಳಿದು ಇಲ್ಲಿ ನೂರಾರು ಕೋಟಿ ಬಂಡವಾಳ ಹೂಡಲು ವಿದೇಶಿ ಸಂಸ್ಥೆಗಳು ಕೂಡ ಮುಂದೆ ಬರುತ್ತಿವೆ.


Click it and Unblock the Notifications