ಬೆಂಗಳೂರು, ನ. 11: ಎಲ್ಲೆಲ್ಲೂ ಈಗ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನದ್ದೇ ಸದ್ದು. ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ವಂದೇ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ಕೊಟ್ಟಿದ್ದಾರೆ. ದಕ್ಷಿಣ ಭಾರತದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಾದ ಇದು ಬೆಂಗಳೂರು ಮಾರ್ಗದ ಮೂಲಕ ಚೆನ್ನೈ ಮತ್ತು ಮೈಸೂರು ಮಧ್ಯೆ ಸಂಚರಿಸುತ್ತದೆ.
ಭಾರತದಲ್ಲಿ ಚಾಲನೆಗೊಂಡಿರುವ ಐದನೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಇದಾಗಿದೆ. ಭಾರತದ ಎಂಜಿನ್‌ರಹಿತ ಮೊದಲ ಸೆಮಿ ಹೈಸ್ಪೀಡ್ ಟ್ರೈನ್ ಎನಿಸಿದ ವಂದೇ ಭಾರತ್ ಎಕ್ಸ್‌ಪ್ರೆಸ್ 2019 ಫೆಬ್ರುವರಿ 15ರಂದು ಹಳಿಯ ಮೇಲೆ ಪ್ರಯಾಣಿಕರನ್ನು ಹೊತ್ತು ಸಾಗಿತು. ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ದೆಹಲಿ ಮುಂಬೈ ಮಾರ್ಗದಲ್ಲಿ ಸಂಚರಿಸುತ್ತಿದೆ.
ವೆಚ್ಚ ಎಷ್ಟು?
2019ರಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಚಾಲನೆಗೊಂಡಿತ್ತು. 16 ಬೋಗಿಗಳಿರುವ ಈ ಒಂದು ಎಕ್ಸ್‌ಪ್ರೆಸ್ ರೈಲಿನ ನಿರ್ಮಾಣಕ್ಕೆ ಅಂದಾಜು 115 ಕೋಟಿ ರೂ ಆಗುತ್ತದೆ. ಕೆಲ ಮಾಹಿತಿ ಪ್ರಕಾರ ಒಂದು ರೈಲು ನಿರ್ಮಾಣಕ್ಕೆ ವೆಚ್ಚ 140-200 ಕೋಟಿ ಆಗಬಹುದು ಎನ್ನಲಾಗಿದೆ. ಮುಂದಿನ ಆಗಸ್ಟ್ ತಿಂಗಳಷ್ಟರಲ್ಲಿ 75 ವಂದೇ ಭಾರತ್ ರೈಲುಗಳನ್ನು ತಯಾರಿಸಲಾಗುತ್ತಿದೆ. ಒಟ್ಟಿಗೆ ಅಷ್ಟು ರೈಲು ತಯಾರಾಗುವುದರಿಂದ ಉತ್ಪಾದನೆ ವೆಚ್ಚ ಸ್ವಲ್ಪ ಕಡಿಮೆ ಆಗುವ ನಿರೀಕ್ಷೆ ಇದೆ. ಮುಂದಿನ ಮೂರು ವರ್ಷದಲ್ಲಿ ಬರೋಬ್ಬರಿ 400 ವಂದೇ ಭಾರತ್ ಟ್ರೈನ್‌ಗಳನ್ನು ನಿರ್ಮಿಸುವ ಗುರಿ ರೈಲ್ವೆ ಇಲಾಖೆಗೆ ಇದೆ.
ವಂದೇ ಭಾರತ್ ರೈಲಿಗೆ ವೀಲ್ ಮತ್ತು ಆಕ್ಸಲ್ ಅನ್ನು ಉಕ್ರೇನ್‌ನಿಂದ ಆಮದು ಮಾಡಿಕೊಳ್ಳಲಾಗುತ್ತಿತ್ತು. ರಷ್ಯಾ ಯುದ್ಧ ಆರಂಭವಾದ ಕಾರಣ ರೈಲು ಸಿದ್ಧಗೊಳ್ಳಲು ತಡವಾಯಿತು. ಉಕ್ರೇನ್‌ನಿಂದ 128 ಚಕ್ರಗಳನ್ನು ಟ್ರಕ್‌ಗಳ ಮೂಲಕ ರೊಮೇನಿಯಾಗೆ ಸಾಗಿಸಿ ಅಲ್ಲಿಂದ ವಿಮಾನಗಳ ಮೂಲಕ ಚೆನ್ನೈಗೆ ತರಲಾಯಿತು. ಅಲ್ಲಿಂದ ಹೈದರಾಬಾದ್‌ನಲ್ಲಿರುವ ಫ್ಯಾಕ್ಟರಿಗೆ ಸಾಗಿಸಿ ಅಸೆಂಬಲ್ ಮಾಡಲಾಯಿತು.
ಈಗ ವ್ಹೀಲ್ ಮತ್ತು ಆಕ್ಸಲ್‌ಗೆ ಉಕ್ರೇನ್ ಮೇಲೆ ಅವಲಂಬಿತವಾಗುವುದರ ಬದಲು ಚೆಕ್ ಗಣರಾಜ್ಯ, ಪೋಲ್ಯಾಂಡ್, ಅಮೆರಿಕದಿಂದಲೂ ತರಿಸಲು ಭಾರತ್ ಆರ್ಡರ್ ಕೊಟ್ಟಿದೆ. ಕೆಲ ವರದಿಗಳ ಪ್ರಕಾರ ಚೀನಾದಿಂದ ವ್ಹೀಲ್‌ಗಳನ್ನು ಆಮದು ಮಾಡಿಕೊಳ್ಳುವ ಸಾಧ್ಯತೆ ಇದೆ.
ಏನು ವಿಶೇಷತೆ?
ಈ ರೈಲಿನ ಬ್ರೇಕಿಂಗ್ ವ್ಯವಸ್ಥೆ ಅತ್ಯಾಧುನಿಕದ್ದಾಗಿದೆ. ಅಪಘಾತ ತಡೆಯುವ ಸಾಧ್ಯತೆ ಕಡಿಮೆ ಮಾಡಬಲ್ಲ ಟಿಸಿಎಎಸ್ ಅಥವಾ ಕವಚ್ ಎನ್ನಲಾಗುವ ವ್ಯವಸ್ಥೆ ಇದೆ. ಕೇಂದ್ರೀಕೃತ ಕೋಚ್ ಮಾನಿಟರಿಂಗ್ ಸಿಸ್ಟಂ ಅಳವಡಿಸಲಾಗಿದೆ. ರೈಲಿನ ಎಲೆಕ್ಟ್ರಿಕ್ ಭಾಗಗಳಿಂದ ಹಿಡಿದು ಕ್ಲೈಮೇಟ್ ಕಂಟ್ರೋಲ್‌ವರೆಗೂ ಎಲ್ಲವನ್ನೂ ಒಬ್ಬ ವ್ಯಕ್ತಿ ರಿಯಲ್-ಟೈಮ್‌ನಲ್ಲಿ ಮಾನಿಟರ್ ಮಾಡಲಾಗುವಂತಹ ವ್ಯವಸ್ಥೆ ಇದೆ.
ಅಗ್ನಿ ಅಪಘಾತ ತಪ್ಪಿಸಲು ಹಲವು ಸುರಕ್ಷಿತ ಕ್ರಮಗಳನ್ನು ಅಳವಡಿಸಲಾಗಿದೆ. ಪ್ರತಿಯೊಂದು ಬೋಗಿಯಲ್ಲೂ ಪ್ರಯಾಣಿಕರಿರುವ ಸ್ಥಳದಲ್ಲಿ ಮತ್ತು ಬಾಗಿಲು ಇರುವ ಸ್ಥಳದಲ್ಲಿ ಡಿಸಾಸ್ಟರ್ ಲೈಟ್, ಎಮರ್ಜೆನ್ಸಿ ಲೈಟ್ ಹಾಕಲಾಗಿದೆ. ಪ್ರತಿಯೊಂದು ಬೋಗಿಗೂ ಅಳವಡಿಸಲಾಗಿರುವ ಎಮರ್ಜೆನ್ಸಿ ವಿಂಡೋಗಳ ಸಂಖ್ಯೆಯನ್ನು ಎರಡರಿಂದ ನಾಲ್ಕಕ್ಕೆ ಹೆಚ್ಚಿಸಲಾಗಿದೆ. ಎಮರ್ಜೆನ್ಸಿ ಪುಷ್ ಬಟನ್‌ಗಳು ಪ್ರಯಾಣಿಕರಿಗೆ ಸುಲಭವಾಗಿ ಸಿಗುವ ರೀತಿಯಲ್ಲಿ ಸ್ಥಾಪಿತವಾಗಿರುತ್ತವೆ. ತುರ್ತು ಸ್ಥಿತಿಯಲ್ಲಿ ಲೋಕೋ ಪೈಲಟ್ ಜೊತೆ ಮಾತನಾಡಲು ಟಾಕ್ ಬ್ಯಾಕ್ ಯೂನಿಟ್‌ಗಳನ್ನು ಸುಲಭವಾಗಿ ಸಿಗುವಂತೆ ಮಾಡಲಾಗಿದೆ.
ವಂದೇ ಮಾತರಂ ರೈಲಿನ ಬಹುತೇಕ ಭಾಗಗಳನ್ನು ದೇಶೀಯವಾಗಿ ನಿರ್ಮಿಸಲಾಗಿದೆ. ಈ ರೈಲು ಆಟೊಮ್ಯಾಟಿಕ್ ಡೋರ್‌ಗಳನ್ನು ಹೊಂದಿರುತ್ತವೆ. ಅಂದರೆ ಡೋರ್‌ನಲ್ಲಿ ಸೆನ್ಸಾರ್ ಅಳವಡಿಸಲಾಗಿರುತ್ತದೆ. ರೈಲಿನ ಕಿಟಕಿ ದೊಡ್ಡದಾಗಿರುತ್ತದೆ. ಲಗೇಜ್‌ಗೆ ಜಾಗ ಹೆಚ್ಚು ವಿಶಾಲವಾಗಿರುತ್ತದೆ.
ಪ್ರಯಾಣ ದರ ಎಷ್ಟು?
ಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಇಂದು ಚಾಲನೆಗೊಂಡು ಬೆಂಗಳೂರಿನಿಂದ ಚೆನ್ನೈಗೆ ಹೊರಟಿದೆ. ಇದೇ ಶನಿವಾರದಿಂದ (ನ. 12) ನಿಯಮಿತವಾಗಿ ರೈಲು ಚಾಲನೆಯಲ್ಲಿರಲಿದೆ. ಚೆನ್ನೈ ಸೆಂಟ್ರಲ್ ಸ್ಟೇಷನ್‌ನಿಂದ ಬೆಳಗ್ಗೆ 5:50ಕ್ಕೆ ಹೊರಡುವ ಈ ರೈಲು ಮೈಸೂರನ್ನು ಮಧ್ಯಾಹ್ನ 12:20ಕ್ಕೆ ತಲುಪಲಿದೆ. ಬೆಳಗ್ಗೆ 10:20ಕ್ಕೆ ಬೆಂಗಳೂರಿಗೆ ಬರುತ್ತದೆ. ಅಂದರೆ ಚೆನ್ನೈನಿಂದ ಬೆಂಗಳೂರಿಗೆ ನಾಲ್ಕೂವರೆ ಗಂಟೆಗೆ ಬಂದರೆ, ಬೆಂಗಳೂರಿನಿಂದ ಮೈಸೂರಿಗೆ ಕೇವಲ 2 ಗಂಟೆಯಲ್ಲಿ ಹೋಗುತ್ತದೆ.
ಇನ್ನು, ಮೈಸೂರಿನಿಂದ ಮಧ್ಯಾಹ್ನ 1:05ಕ್ಕೆ ನಿರ್ಗಮಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬೆಂಗಳೂರನ್ನು ಮಧ್ಯಾಹ್ನ 2:55ಕ್ಕೆ ಮುಟ್ಟಿ ಚೆನ್ನೈಯನ್ನು ಸಂಜೆ 7:30ಕ್ಕೆ ತಲುಪಲಿದೆ.
ಮೈಸೂರು ಮತ್ತು ಚೆನ್ನೈ ಮಧ್ಯೆ ಬೆಂಗಳೂರಿನಲ್ಲಿ ಮಾತ್ರ ನಿಲುಗಡೆ ಇರಲಿದೆ. ಉಳಿದಂತೆ ಈ ಎಕ್ಸ್‌ಪ್ರೆಸ್ ರೈಲು ಬಹುತೇಕ ನಾನ್‌ಸ್ಟಾಪ್. ಇನ್ನು ಪ್ರಯಾಣ ದರದ ವಿಚಾರಕ್ಕೆ ಬಂದರೆ ಎಕನಾಮಿ ಕ್ಲಾಸ್ ಮತ್ತು ಎಕ್ಸಿಕ್ಯೂಟಿವ್ ಕ್ಲಾಸ್ ಹೀಗೆ ಪ್ರತ್ಯೇಕ ದರ ಇದೆ.
ಚೆನ್ನೈನಿಂದ ಮೈಸೂರಿಗೆ ಎಕನಾಮಿ ಕ್ಲಾಸ್‌ನಲ್ಲಿ ಹೋಗಲು 921 ರೂ ಅಗುತ್ತದೆ. ಎಕ್ಸಿಕ್ಯೂಟಿವ್ ಕ್ಲಾಸ್‌ನಲ್ಲಿ ಪ್ರಯಾಣಿಸಲು 1,880 ರೂ ದರ ಇದೆ.
ಮೈಸೂರಿನಿಂದ ಬೆಂಗಳೂರಿಗೆ ಹೋಗಲು ಎಕನಾಮಿ ಕ್ಲಾಸ್‌ಗೆ 368 ರು, ಎಕ್ಸಿಕ್ಯೂಟಿವ್ ಕ್ಲಾಸ್‌ಗೆ 768 ರೂ ಅಗುತ್ತದೆ.
ರೈಲಿನ ವೇಗ ಎಷ್ಟು?
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಟೆಸ್ಟಿಂಗ್ ಹಂತದಲ್ಲಿ ಗಂಟೆಗೆ 180 ಕಿಮೀ ವೇಗದಲ್ಲಿ ಸಾಗಿತ್ತು. ಆದರೆ, ಪ್ರಾಯೋಗಿಕವಾಗಿ ಈ ರೈಲಿನ ಗರಿಷ್ಠ ವೇಗ 130 ಕಿಮೀ ಎನ್ನಲಾಗಿದೆ. ಯಾಕೆಂದರೆ 180 ಕಿಮೀ ವೇಗದಲ್ಲಿ ರೈಲು ಸಾಗಲು ಬೇಕಾದ ಸಮರ್ಪಕ ಹಳಿ ವ್ಯವಸ್ಥೆ ನಮ್ಮಲ್ಲಿ ಇನ್ನೂ ರೂಪುಗೊಂಡಿಲ್ಲ. ಸದ್ಯದ ಸ್ಥಿತಿಯಲ್ಲಿ ಗಂಟೆಗೆ 80ರಿಂದ 100 ಕಿಮೀ ವೇಗದಲ್ಲಿ ವಂದೇ ಭಾರತ್ ರೈಲು ಸಾಗುತ್ತಿದೆ.
ಚೆನ್ನೈನಿಂದ ಮೈಸೂರಿನ ಮಧ್ಯೆ ಇರುವ ಸುಮಾರು 500 ಕಿ ಮೀ ದೂರವನ್ನು ಆರೂವರೆಗೆ ಗಂಟೆಯಲ್ಲಿ ಇದು ಕ್ರಮಿಸುತ್ತದೆ. ಅಂದರೆ, ಗಂಟೆಗೆ ಸುಮಾರು 80-100 ಕಿ ಮೀ ವೇಗದಲ್ಲಿ ಇದು ಸಾಗುತ್ತದೆ. ದೆಹಲಿ ಮುಂಬೈ ಮಾರ್ಗದಲ್ಲಿ ಈ ರೈಲು ಗರಿಷ್ಠ 120 ಕಿಮೀ ವೇಗದಲ್ಲಿ ಹೋಗಬಲ್ಲುದು.


Click it and Unblock the Notifications