ನವದೆಹಲಿ, ಆಗಸ್ಟ್ 10: ವಂದೇ ಭಾರತ್ ರೈಲು ಈಗಾಗಲೇ ದೇಶದ ಬಹುತೇಕ ಭಾಗಗಳಲ್ಲಿ ಸಂಚಾರ ಆರಂಭಿಸಿವೆ. ಇದು ಮಧ್ಯಮ ದೂರದ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಸೇವೆಯಾಗಿದ್ದು, ಇದನ್ನು ಭಾರತೀಯ ರೈಲ್ವೇಗಳು ನಿರ್ವಹಿಸುತ್ತವೆ. ಪ್ರಸ್ತುತ ಎಂಟು ಭೋಗಿಗಳ ವಂದೇ ಭಾರತ್ ರೈಲು ಹಾಗೂ ಹದಿನಾರು ಕೋಚ್‌ಗಳ ರೈಲು ದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ. ರೈಲ್ವೆ ಇದೀಗ ಹಲವು ಮಾರ್ಗಗಳಲ್ಲಿ 20 ಕೋಚ್‌ಗಳ ರೈಲುಗಳನ್ನು ಪರಿಚಯಿಸಲು ಪ್ಲಾನ್ ಮಾಡಿದೆ.
ಇದರ ಮೊದಲ ಹೆಜ್ಜೆಯಾಗಿ ಭಾರತೀಯ ರೈಲ್ವೆಯು 20 ಕೋಚ್‌ಗಳ ವಂದೇ ಭಾರತ್ ರೈಲಿನ ಮೊಟ್ಟ ಮೊದಲ ಪ್ರಯೋಗಿಕ ಸಂಚಾರವನ್ನು ಆ.9 ರಂದು ಅಹಮದಾಬಾದ್ ಮತ್ತು ಮುಂಬೈ ನಡುವೆ ಯಶಸ್ವಿಯಾಗಿ ನಡೆಸಿತು. ಪ್ರಸ್ತುತ, 16 ಬೋಗಿಗಳ ವಂದೇ ಭಾರತ್ ರೈಲುಗಳು ಈ ಮಾರ್ಗದಲ್ಲಿ ಒಡಾಟ ನಡೆಸುತ್ತವೆ. ಪ್ರತಿ 16 ಬೋಗಿಗಳ ರೈಲು 1,128 ಪ್ರಯಾಣಿಕರಿಗೆ ಅವಕಾಶ ಕಲ್ಪಿಸುತ್ತದೆ, ಇದರಲ್ಲಿ ಎರಡು ಪ್ರಥಮ ದರ್ಜೆ ವಿಭಾಗಗಳು ತಲಾ 52 ಆಸನಗಳು ಮತ್ತು ಚೇರ್ ಕಾರ್ ಕಂಪಾರ್ಟ್‌ಮೆಂಟ್‌ಗಳು ತಲಾ 78 ಪ್ರಯಾಣಿಕರ ಸಂಚಾರಕ್ಕೆ ಅವಕಾಶವಿದೆ.

ಹೊಸ 20 ಬೋಗಿಗಳ ರೈಲು ಸುಮಾರು 25 ಪ್ರತಿಶತದಷ್ಟು ಸಾಮರ್ಥ್ಯವನ್ನು ಹೆಚ್ಚಿಸುವ ನಿರೀಕ್ಷೆಯಿದ್ದು ಇದು ಪ್ರಯಾಣಿಕರಿಗೆ ಹೆಚ್ಚಿನ ಸೌಕರ್ಯ ಮತ್ತು ಅನುಕೂಲತೆಯನ್ನು ನೀಡುತ್ತದೆ. ಈ ವಿಸ್ತರಣೆಯಿಂದ ಈ ಹೆಚ್ಚಿನ ಬೇಡಿಕೆಯಿರುವ ಮಾರ್ಗದಲ್ಲಿ ಹೆಚ್ಚು ಅಗತ್ಯವಿರುವ ಪರಿಹಾರವನ್ನು ಒದಗಿಸುತ್ತದೆ.
ವಂದೇ ಭಾರತ್ ಟ್ರಯಲ್ ರನ್:
20 ಬೋಗಿಗಳ ಸೆಮಿ-ಹೈ-ಸ್ಪೀಡ್ ರೈಲು ಕಲುಪುರ್ ರೈಲು ನಿಲ್ದಾಣದಿಂದ ಬೆಳಿಗ್ಗೆ 7 ಗಂಟೆಗೆ ಹೊರಟಿದ್ದು, ಅಹಮದಾಬಾದ್, ವಡೋದರಾ ಮತ್ತು ಸೂರತ್ ಮೂಲಕ ಹಾದುಹೋಗುವ ಮೂಲಕ ಮುಂಬೈ ಸೆಂಟ್ರಲ್ ನಿಲ್ದಾಣಕ್ಕೆ ಮಧ್ಯಾಹ್ನ 12:15 ಕ್ಕೆ ತಲುಪಿತು. ಪ್ರಯೋಗವು ನಾಲ್ಕು ಹೆಚ್ಚುವರಿ C ಕೋಚ್‌ಗಳನ್ನು ಒಳಗೊಂಡಿತ್ತು, ಒಟ್ಟು 14C+2E ಭೋಗಿಗಳನ್ನು ಒಳಗೊಂಡಿತ್ತು.ರೈಲ್ವೇ ಪೋಲೀಸ್ ಫೋರ್ಸ್ (RPF) ಸಿಬ್ಬಂದಿಯನ್ನು ಪ್ರಯೋಗದ ಸಮಯದಲ್ಲಿ ಯಾವುದೇ ಸಂಭಾವ್ಯ ತುರ್ತು ಪರಿಸ್ಥಿತಿಗಳನ್ನು ನಿರ್ವಹಿಸಲು ಮಾರ್ಗದುದ್ದಕ್ಕೂ ಕ್ರಾಸಿಂಗ್‌ಗಳು ಮತ್ತು ನಿಲ್ದಾಣಗಳಲ್ಲಿ ನಿಯೋಜಿಸಲಾಗಿತ್ತು. ರೈಲು ಗಂಟೆಗೆ 130 ಕಿಲೋಮೀಟರ್ ವೇಗವನ್ನು ಹೊಂದಿತ್ತು. ಇನ್ಮುಂದೆ ಮುಂಬೈ-ಅಹಮದಾಬಾದ್ ಮಾರ್ಗದಲ್ಲಿ ವಂದೇ ಭಾರತ್ ರೈಲುಗಳು ಗಂಟೆಗೆ 160 ಕಿಮೀ ವೇಗದಲ್ಲಿ ಪ್ರಯೋಗಕ್ಕೆ ಒಳಗಾಗುವ ಸಾಧ್ಯತೆಯಿದೆ ಎಂದು ವರದಿಗಳಾಗಿವೆ.
ಪ್ರಸ್ತುತ 120-130 kmph ನಿಂದ 160 kmph ಗೆ ವೇಗವನ್ನು ಅಪ್‌ಗ್ರೇಡ್ ಮಾಡುವುದರಿಂದ ಮುಂಬೈ ಮತ್ತು ಅಹಮದಾಬಾದ್ ನಡುವಿನ 5.25-ಗಂಟೆಗಳ ಪ್ರಯಾಣದ ಸಮಯವನ್ನು ಕನಿಷ್ಠ 45-60 ನಿಮಿಷಗಳಷ್ಟು ಕಡಿಮೆ ಆಗುವ ಸಾಧ್ಯತೆಗಳಿವೆ. ಇನ್ನೊಂದೆಡೆ ಮುಂಬೈ-ಸೂರತ್-ವಡೋದರಾ-ದೆಹಲಿ ಕಾರಿಡಾರ್ ಕೂಡ 160 ಕಿಲೋಮೀಟರ್‌ಗೆ ಅಪ್‌ಗ್ರೇಡ್ ಮಾಡಲು ಸಿದ್ಧವಾಗಿದೆ.
ವಂದೇ ಭಾರತ್ ವಿಸ್ತರಣೆ:
ಪ್ರತಿ ರಾಜ್ಯದಲ್ಲೂ ತಾರತಮ್ಯವಿಲ್ಲದೆ ವಂದೇ ಭಾರತ್ ರೈಲುಗಳನ್ನು ಪರಿಚಯಿಸಲಾಗುತ್ತಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಸಂಸತ್ತಿಗೆ ಈ ಹಿಂದೆ ತಿಳಿಸಿದ್ದರು. 150 ರಿಂದ 200 ಕಿಲೋಮೀಟರ್‌ಗಳ ನಡುವಿನ ಅಂತರವನ್ನು ಪ್ರಾದೇಶಿಕ ಮಾರ್ಗಗಳಿಗಾಗಿ ವಿನ್ಯಾಸಗೊಳಿಸಲಾದ ವಂದೇ ಮೆಟ್ರೋದ ಯೋಜನೆಗಳನ್ನು ಅವರು ಘೋಷಿಸಿದ್ದರು. ಪ್ರಸ್ತುತ ಪರೀಕ್ಷೆಯಲ್ಲಿರುವ ವಂದೇ ಮೆಟ್ರೋ ಶೀಘ್ರದಲ್ಲೇ ಪ್ರಾರಂಭವಾಗುವ ನಿರೀಕ್ಷೆಯಿದ್ದು ಇದು ಪ್ರಯಾಣಿಕರಿಗೆ ಹೆಚ್ಚುವರಿ ವೈಶಿಷ್ಟ್ಯಗಳನ್ನು ನೀಡಲಿದೆ.
102 ವಂದೇ ಭಾರತ್ ರೈಲು ಸೇವೆಗಳು :
ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಭಾರತೀಯ ರೈಲ್ವೇಯು ಬ್ರಾಡ್ ಗೇಜ್ ಎಲೆಕ್ಟ್ರಿಫೈಡ್ ನೆಟ್‌ವರ್ಕ್‌ನಲ್ಲಿ 102 ವಂದೇ ಭಾರತ್ ರೈಲು ಸೇವೆಗಳನ್ನು ನಿರ್ವಹಿಸುತ್ತಿದೆ ಎಂದು ಹೇಳಿದ್ದರು. ಈ ಸೇವೆಗಳು 760 ಕಿಲೋಮೀಟರ್‌ಗಳಷ್ಟು ದೂರವನ್ನು ಒಳಗೊಂಡಿರುತ್ತವೆ. ರಾಜಧಾನಿ ಮತ್ತು ಇತರ ಸೂಪರ್‌ಫಾಸ್ಟ್ ರೈಲುಗಳನ್ನು ವಂದೇ ಭಾರತ್ ರೈಲುಗಳು ಬದಲಾಯಿಸಬಹುದೇ ಎಂಬ ಪ್ರಶ್ನೆಗೆ, ಅಸ್ತಿತ್ವದಲ್ಲಿರುವ ಯಾವುದೇ ರೈಲು ಸೇವೆಗಳನ್ನು ಸ್ಥಗಿತಗೊಳಿಸದೆ ಹೊಸ ಸೇವೆಗಳನ್ನು ಪರಿಚಯಿಸಲಾಗುತ್ತಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದರು.


Click it and Unblock the Notifications