ಟ್ವಿಟ್ಟರ್ ಅನ್ನು ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾದ ಎಲಾನ್ ಮಸ್ಕ್ ಖರೀದಿ ಮಾಡಿದ ಬಳಿಕ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ. ಸಂಸ್ಥೆಯ ನಿಯಮದಲ್ಲಿ, ರಚನೆಯಲ್ಲಿ, ಕಾರ್ಯವೈಖರಿಯಲ್ಲಿ, ಫೀಚರ್‌ಗಳನ್ನು ಬದಲಾವಣೆಯನ್ನು ಮಾಡಲಾಗಿದೆ. ಏಪ್ರಿಲ್ 1ರಿಂದ (ಶನಿವಾರ) ಟ್ವಿಟ್ಟರ್ ಖಾತೆಯ ಬ್ಲ್ಯೂ ವೆರಿಫಿಕೇಷನ್ ತೆಗೆದು ಹಾಕಲು ಎಲಾನ್ ಮಸ್ಕ್ ಸಜ್ಜಾಗಿದ್ದಾರೆ. ಈ ಹಿಂದೆ ಈ ಬಗ್ಗೆ ಘೋಷಣೆ ಮಾಡಿದ್ದಾರೆ. ಈ ಎಲ್ಲ ಬೆಳವಣಿಗೆಯ ನಡುವೆ ಶ್ವೇತಭವನ (ವೈಟ್‌ಹೌಸ್) ಅಧಿಕೃತ ಟ್ವಿಟ್ಟರ್ ಪ್ರೊಫೈಲ್ ವೆರಿಫಿಕೇಷನ್‌ಗಾಗಿ ಪಾವತಿಸಲು ಹಿಂಜರಿದಿದೆ ಎಂದು ವರದಿಯಾಗಿದೆ.
ವರದಿಯ ಪ್ರಕಾರ ಶ್ವೇತಭವನದ ಡಿಜಿಟಲ್ ತಂತ್ರದ ನಿರ್ದೇಶಕ ರಾಬ್ ಫ್ಲಾಹರ್ಟಿ ಇಮೇಲ್ ಮೂಲಕ ಸಿಬ್ಬಂದಿಗಳಿಗೆ ಈ ಬಗ್ಗೆ ಸೂಚನೆಯನ್ನು ನೀಡಿದ್ದಾರೆ. "ಟ್ವಿಟ್ಟರ್ ಬ್ಲ್ಯೂ ವ್ಯಕ್ತಿ-ಮಟ್ಟದ ವೆರಿಫಿಕೇಷನ್ ಸೇವೆಯನ್ನು ಒದಗಿಸುವುದಿಲ್ಲ ಎಂಬುವುದು ನಮಗೆ ತಿಳಿದಿರುವ ಮಾಹಿತಿಯಾಗಿದೆ. ಹೀಗಾಗಿ ಬ್ಲ್ಯೂ ಚೆಕ್ ಗುರುತು ಈಗ ಖಾತೆಗೆ ಯಾರು ಪಾವತಿ ಮಾಡುತ್ತಾರೋ ಆ ಬಳಕೆದಾರರ ವೆರಿಫಿಕೇಷನ್ ಆಗಿ ಕಾರ್ಯನಿರ್ವಹಣೆ ಮಾಡುತ್ತದೆ," ಎಂದು ಇಮೇಲ್‌ನಲ್ಲಿ ಉಲ್ಲೇಖ ಮಾಡಲಾಗಿದೆ.

ಈ ಸೂಚನೆಯು ಸರ್ಕಾರಿ ಏಜೆನ್ಸಿಗಳಿಗೆ ಕಡ್ಡಾಯವಾಗಿ ಅನ್ವಯಿಸುವುದಿಲ್ಲ. ಆದರೆ ವರದಿಯು ಶ್ವೇತಭವನದ ಯೋಜನೆಗಳೊಂದಿಗೆ ಪರಿಚಿತವಾಗಿರುವ ಮೂಲವನ್ನು ಉಲ್ಲೇಖಿಸಿದೆ. ಭವಿಷ್ಯದಲ್ಲಿ ಶ್ವೇತಭವನ ಕೆಲವು ಏಜೆನ್ಸಿಗಳು ಮತ್ತು ಇಲಾಖೆಗಳಿಗೆ ಮಾರ್ಗದರ್ಶನವನ್ನು ಕಳುಹಿಸಬಹುದು ಎಂದು ಹೇಳಿದೆ. ಇನ್ನು ಕೆಲವು ಶ್ವೇತಭವನದ ಅಧಿಕಾರಿಗಳಾದಂತಹ ಅಧ್ಯಕ್ಷ ಮತ್ತು ಉಪಾಧ್ಯಕ್ಷರುಗಳ ಟ್ವಿಟ್ಟರ್ ಖಾತೆಯು ಗ್ರೇ ಚೆಕ್‌ಮಾರ್ಕ್ ಅನ್ನು ಹೊಂದಿದೆ.
ಟ್ವಿಟರ್‌ನ ನವೀಕರಿಸಿದ ನೀತಿಗಳ ಪ್ರಕಾರ, ಅದರ ಹೊಸ ಅರ್ಹತಾ ಅವಶ್ಯಕತೆಗಳನ್ನು ಪೂರೈಸದ ಫೆಡರಲ್ ಏಜೆನ್ಸಿ ಖಾತೆಗಳಿಗೆ ವೆರಿಫಿಕೇಷನ್ ಅನ್ನು ಖಾತರಿಪಡಿಸಲು ಇನ್ನು ಮುಂದೆ ಸಾಧ್ಯವಾಗುವುದಿಲ್ಲ ಎಂದು ಫ್ಲಾಹೆರ್ಟಿ ತನ್ನ ಇಮೇಲ್‌ನಲ್ಲಿ ಹೇಳಿದ್ದಾರೆ. ಈ ನಡುವೆ ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟ್ಟರ್ ಶುಕ್ರವಾರ ತನ್ನ 'ಸಂಸ್ಥೆಗಳಿಗಾಗಿ ಪರಿಶೀಲನೆ' ಸೇವೆಯು ಈಗ ಜಾಗತಿಕವಾಗಿ ಲಭ್ಯವಿದೆ ಎಂದು ಘೋಷಣೆ ಮಾಡಿದೆ.
ಜಾಗತಿಕವಾಗಿ ಜನಪ್ರಿಯವಾದ ಸಾಮಾಜಿಕ ಮಾಧ್ಯಮ ಸಂಸ್ಥೆಯಾದ ಟ್ವಿಟ್ಟರ್ ಬ್ಲ್ಯೂಟಿಕ್ ಹೊರತಾಗಿ ಬೇರೆ ಬೇರೆ ಬಣ್ಣಗಳ ವೆರಿಫೀಕೇಷನ್ ಟಿಕ್ ಅನ್ನು ಆರಂಭಿಸಿದೆ. ಈ ಹಿಂದೆ ಕೊಂಚ ರಿಯಾಯಿತಿ ದರದಲ್ಲಿ ಮಸ್ಕ್‌ನ ಸಂಸ್ಥೆ ಟ್ವಿಟ್ಟರ್ ಬ್ಲ್ಯೂ ಟಿಕ್ ಅನ್ನು ಪರಿಚಯಿಸಿದ್ದು, ಈಗ ಗೋಲ್ಡ್ ಟಿಕ್‌ಗಳ ಬಗ್ಗೆ ಸುದ್ದಿಯಾಗುತ್ತಿದೆ. ಟ್ವಿಟ್ಟರ್ ವೆರಿಫಿಕೇಷನ್ ಬ್ಯಾಡ್ಜ್‌ಗಾಗಿ ಸಂಸ್ಥೆಗಳಿಗೆ ಮಾಸಿಕವಾಗಿ ಸುಮಾರು 1,000 ಯುಎಸ್ ಡಾಲರ್ ವಿಧಿಸಬಹುದು ಮತ್ತು ಹೆಚ್ಚುವರಿಯಾಗಿ ಪ್ರತಿ ಸಂಬಂಧಿತ ಖಾತೆಗೆ 50 ಯುಎಸ್ ಡಾಲರ್ ಅನ್ನು ವಿಧಿಸಬಹುದು ಎಂದು ವರದಿಯಾಗಿದೆ.
ಜನವರಿಯಲ್ಲಿ ಟ್ವಿಟ್ಟರ್ ಬ್ಯುಜಿನೆಸ್ ಸಂಸ್ಥೆಗಳಿಗೆ ತನ್ನ ವೆರಿಫೀಕೇಷನ್ ಅನ್ನು ಬಿಡುಗಡೆ ಮಾಡಿದೆ. ಟ್ವಿಟ್ಟರ್ ಬ್ಯುಜಿನೆಸ್, "ನಾವು ಶೀಘ್ರವೇ ಸಂಸ್ಥೆಗಳಿಗೆ ವೆರಿಫಿಕೇಷನ್ ಅನ್ನು ಬಿಡುಗಡೆ ಮಾಡಲಿದ್ದೇವೆ. ಅದನ್ನು ಈ ಹಿಂದೆ ಬ್ಲ್ಯೂ ಫಾರ್ ಬ್ಯುಜಿನೆಸ್ ಎಂದು ಕರೆಯಲಾಗುತ್ತಿತ್ತು," ಎಂದು ತಿಳಿಸಿದೆ. ಇನ್ನೊಂದು ಟ್ವೀಟ್‌ನಲ್ಲಿ ಸಂಸ್ಥೆಯು, "ನೀವು ಚಂದಾದಾರಾಗಿ ನಿಮ್ಮ ಮತ್ತು ನಿಮ್ಮ ಉದ್ಯಮಕ್ಕೆ ಉದ್ಯಮ ಖಾತೆ ಮತ್ತು ಅಫೀಲಿಯೇಷನ್ ಬ್ಯಾಡ್ಜ್ ಲಭ್ಯವಾಗಲಿದೆ," ಎಂದು ಹೇಳಿಕೊಂಡಿದೆ.
ಬ್ಲ್ಯೂ ಟಿಕ್ ಅರ್ಥವೇನು?
ಸೆಲೆಬ್ರೆಟಿಗಳು, ರಾಜಕಾರಣಿಗಳು, ಪ್ರಮುಖ ವ್ಯಕ್ತಿಗಳಿಗೆ ಟ್ವಿಟ್ಟರ್ ನೀಡುವ ಅಥಂಟಿಫಿಕೇಷನ್ ಬ್ಲ್ಯೂ ಟಿಕ್ ಆಗಿದೆ. ಹಾಗೆಯೇ ಈ ಖಾತೆಯನ್ನು ಟ್ವಿಟ್ಟರ್ ವೆರಿಫೈ ಮಾಡಿದೆ ಎಂಬುವುದಕ್ಕೆ ಈ ಬ್ಲ್ಯೂ ಟಿಕ್ ಸಾಕ್ಷಿಯಾಗಿದೆ. ಈ ಖಾತೆ ಸ್ಪಾಮ್ ಅಲ್ಲ, ನಕಲಿ ಅಲ್ಲ ಎಂಬುವುದಕ್ಕೂ ಇದು ಸಾಕ್ಷಿಯಾಗಿದೆ.


Click it and Unblock the Notifications