ಅರವತ್ತು ದಿನವೋ ಎಂಬತ್ತು ದಿನವೋ ತಮ್ಮ ಕಾಲ್ ಶೀಟ್ ನೀಡುವ ಆ ಹೀರೋ ಸಂಭಾವನೆ ಅಷ್ಟು ಕೋಟಿಯಂತೆ, ಈ ಹೀರೋಯಿನ್ ಸಂಭಾವನೆ ಇಷ್ಟು ಲಕ್ಷವಂತೆ.... ಎಂಬ ಮಾತೆಲ್ಲ ನೀವು ಕೇಳಿರ್ತೀರಿ ಅಂತಾದರೆ, ಅವರು ಅಷ್ಟೆಲ್ಲ ದುಡ್ಡು ಏನು ಮಾಡಬಹುದು ಎಂಬ ಆಲೋಚನೆ ಬಂದಿರಬಹುದಲ್ವಾ?
ಆದರೆ, ಅವರ ಖರ್ಚಿನ ಬಾಬ್ತು ಎಂದಾದರೂ ಆಲೋಚನೆ ಮಾಡಿದ್ದೀರಾ? ಸಿನಿಮಾ ಎಂಬುದು ಆಕಾಶವಾದರೆ, ಅಲ್ಲಿರುವ ತಾರೆಯರು ಎಲ್ಲರ ಪಾಲಿನ ಕುತೂಹಲ. ಕನ್ನಡದಲ್ಲಿ ಕೋಟ್ಯಂತರ ರುಪಾಯಿ ರೆಮ್ಯುನರೇಷನ್ ಪಡೆಯುವ ನಟರ ಖರ್ಚು ಸಹ ವಿಪರೀತ ಇರುತ್ತದೆ.
ಬಾಡಿಗಾರ್ಡ್ಸ್ ಗಳಿಗೆ ಅಂತಲೇ ತಿಂಗಳಿಗೆ ಮೂರು ಲಕ್ಷ
ಎಲ್ಲಿ ಹೋದರೂ ಜತೆಯಲ್ಲಿ ಬಾಡಿಗಾರ್ಡ್ಸ್ ಇರಲೇಬೇಕು. ಜತೆಗೆ ಕ್ಯಾರವಾನ್. ಪರ್ಸನಲ್ ಮೇಕಪ್ ಅಸಿಸ್ಟೆಂಟ್ಸ್... ಹೀಗೆ ಪಟ್ಟಿ ಮುಂದುವರಿಯುತ್ತದೆ. ಕನ್ನಡದ ಒಬ್ಬರು ಟಾಪ್ ಹೀರೋ ಶೂಟಿಂಗ್ ಗೆಂದು ಮನೆಯಿಂದ ಹೊರಗೆ ಬಂದರೆ ಮುಂದೆ ಆ ಹೀರೋ ಕಾರು ಸಾಗಿದರೆ, ಅದರ ಹಿಂದೆ ಬಾಡಿಗಾರ್ಡ್ಸ್ ಇರುವ ವಾಹನ, ಅವರ ಹಿಂದೆ ಕ್ಯಾರವಾನ್ ಸಾಗುತ್ತದೆ. ಸಿನಿಮಾಗಳು ಇದ್ದಲ್ಲಿ ನಿರ್ಮಾಪಕರೇ ಆ ಕ್ಯಾರವಾನ್ ನ ಖರ್ಚು, ಮೇಕಪ್ ಅಸಿಸ್ಟೆಂಟ್ ಗಳ ಸಂಬಳ ಇತ್ಯಾದಿ ನೋಡಿಕೊಳ್ಳುತ್ತಾರೆ. ಇಲ್ಲದಿದ್ದಲ್ಲಿ ಆ ಹೀರೋ ಎಲ್ಲ ಖರ್ಚು ನೋಡಿಕೊಳ್ಳಬೇಕಾಗುತ್ತದೆ. ಬಾಡಿಗಾರ್ಡ್ಸ್ ಗಳಿಗೆ ಅಂತಲೇ ತಿಂಗಳಿಗೆ ಮೂರು ಲಕ್ಷ ರುಪಾಯಿ ತನಕ ಖರ್ಚು ಬರುತ್ತದೆ. ಕೋಟಿ ಕೋಟಿ ಸಂಭಾವನೆ ಪಡೆಯುವ ಹೀರೋಗಳಿಗೆ ವರ್ಷದಲ್ಲಿ ಹೆಚ್ಚೆಂದರೆ ಎರಡರಿಂದ ಮೂರು ಸಿನಿಮಾ ಇರುತ್ತದೆ. ಕೆಲವು ಬಾರಿಯಂತೂ ವರ್ಷಕ್ಕೆ ಒಂದೇ ಸಿನಿಮಾ ಇರುತ್ತದೆ.
ಡಿಸೈನರ್ ರೂಪಿಸಿದ ದಿರಿಸನ್ನೇ ಧರಿಸುತ್ತಾರೆ
ಆದರೆ, ಈ ಹೀರೋಗಳ್ಯಾರೂ ಸಾಮಾನ್ಯವಾಗಿ ತಮ್ಮ ಪರ್ಸನಲ್ ಮೇಕಪ್ ಅಸಿಸ್ಟೆಂಟ್ ಗಳನ್ನು ಬದಲಾಯಿಸಲ್ಲ. ಜತೆಗೆ ಇವರಿಗೆ ಸಹಾಯಕರಿರುತ್ತಾರೆ. ಅವರಿಗೂ ಅಷ್ಟೇ; ಸಿನಿಮಾಗಳು ಇದ್ದಾಗ ಮಾತ್ರ ನಿರ್ಮಾಪಕರು ಹಣ ಪಾವತಿಸುತ್ತಾರೆ. ಇಲ್ಲದಿದ್ದಲ್ಲಿ ತಾವೇ ಹಣ ನೀಡಬೇಕಾಗುತ್ತದೆ. ಇನ್ನು ಇವರ ಡಯಟ್ ಅಂದರೆ ಆಹಾರ ಪಥ್ಯ ಕ್ರಮಗಳನ್ನು ನೋಡಿಕೊಳ್ಳುವವರು, ಜಿಮ್ ನಲ್ಲಿ ಪರ್ಸನಲ್ ಟ್ರೈನರ್ ಗಳಾಗಿ ಇರುವವರು ಇಂಥವರಿಗೂ ತಿಂಗಳು ತಿಂಗಳು ಇಂತಿಷ್ಟು ಸಂಬಳ ನೀಡಬೇಕಾಗುತ್ತದೆ. ಇವರು ಬಳಸುವ ಸನ್ ಗ್ಲಾಸ್, ವಾಚ್, ಶೂ, ಕಾರು, ಮೊಬೈಲ್ ಫೋನ್ ಬ್ರ್ಯಾಂಡ್ ಮತ್ತಿತರ ವಿಚಾರಗಳಿಗೂ ಖರ್ಚಿರುತ್ತದೆ. ಈ ಪೈಕಿ ಹಲವರು ಡಿಸೈನರ್ ರೂಪಿಸಿದ ದಿರಿಸನ್ನೇ ಧರಿಸುತ್ತಾರೆ. ಅವು ವಿಪರೀತ ದುಬಾರಿ ಆಗುತ್ತವೆ. ಅನಾರೋಗ್ಯವೋ ಮತ್ತೊಂದೋ ಆದಲ್ಲಿ ನಿರ್ದಿಷ್ಟ ಆಸ್ಪತ್ರೆ, ವೈದ್ಯರ ಬಳಿಯೇ ಹೋಗುತ್ತಾರೆ. ಸಾಮಾನ್ಯವಾಗಿ ಅದು ಕೂಡ ದುಬಾರಿ ಆಗಿರುತ್ತದೆ.
ನಟ ದರ್ಶನ್ ಬಳಿ ಎರಡು ಲ್ಯಾಂಬೋರ್ಗಿನಿ
ಈ ನಟರು ಬಳಸುವ ಕಾರುಗಳು, ಅದರ ಖರ್ಚುಗಳ ಬಗ್ಗೆ ಬರೆದರೇ ಮತ್ತೊಂದು ಲೇಖನ ಆಗುತ್ತದೆ. ನಿಮಗೆ ಗೊತ್ತಿರಲಿ: ನಟ ದರ್ಶನ್ ಬಳಿ ಎರಡು ಲ್ಯಾಂಬೋರ್ಗಿನಿ ಇದ್ದರೆ, ಪುನೀತ್ ಅವರ ಬಳಿ ಒಂದು ಲ್ಯಾಂಬೋರ್ಗೀನಿ ಇದೆ. ಸುದೀಪ್ ಅವರ ಬಳಿ ಈಚೆಗೆ ಸಲ್ಮಾನ್ ಖಾನ್ ಉಡುಗೊರೆಯಾಗಿ ನೀಡಿದ ಬಿಎಂಡಬ್ಲ್ಯು ಸೇರಿದಂತೆ ಹಲವು ಕಾರುಗಳಿದ್ದರೆ, ನಟ ಯಶ್ ಬಳಿ ಔಡಿ, ಮರ್ಸಿಡಿಸ್ ಬೆಂಜ್ ಸೇರಿದಂತೆ ಹಲವು ಕಾರುಗಳಿವೆ. ಈ ಕಾರುಗಳ ಮೇಂಟೇನೆನ್ಸ್ ಮತ್ತೊಂದಕ್ಕೆ ವಿಪರೀತ ಖರ್ಚಾಗುತ್ತದೆ. ಸೋಷಿಯಲ್ ಸ್ಟೇಟಸ್ ಕಾಪಾಡಿಕೊಳ್ಳುವುದಕ್ಕೆ ಹಾಗೂ ಸುರಕ್ಷತೆ ಈ ಎರಡೂ ಕಾರಣಕ್ಕಾದರೂ ಈ ರೀತಿಯ ಐಷಾರಾಮಿ ಕಾರುಗಳನ್ನು ಖರೀದಿಸಲೇಬೇಕಾಗುತ್ತದೆ. ಜತೆಗೆ ತಮ್ಮ ಕುಟುಂಬ ಸದಸ್ಯರಿಗೂ ಅಂಥದ್ದೇ ಕಾರುಗಳನ್ನು ಕೊಡಿಸುವ ಅನಿವಾರ್ಯ ಸೃಷ್ಟಿ ಆಗುತ್ತದೆ. ಇನ್ನು ನಟರ ಮನೆ, ಕಚೇರಿ ಎರಡರ ನಿರ್ವಹಣೆ ಕೂಡ ಬಹಳ ಖರ್ಚನ್ನು ಬೇಡುತ್ತವೆ.
ಸಂಭಾವನೆಯ ಶೇಕಡಾ ಮೂವತ್ತೈದರಷ್ಟು ಮೊತ್ತ ಆದಾಯ ತೆರಿಗೆ
ಈ ನಟರು ಎದುರಿಸುವ ರಿಸ್ಕ್, ಷೂಟಿಂಗ್ ವೇಳೆ ಕೈ- ಕಾಲು ಪೆಟ್ಟು ಮಾಡಿಕೊಳ್ಳುವುದು ಸಹ ತುಂಬಾ ಸಾಮಾನ್ಯವಾದ ವಿದ್ಯಮಾನ. ಷೂಟಿಂಗ್ ಇರುವ ವೇಳೆಯಲ್ಲಿ ಆಗುವ ಖರ್ಚನ್ನು ನಿರ್ಮಾಪಕರು ಭರಿಸುತ್ತಾರೇನೋ ನಿಜ. ಆದರೆ ಉಳಿದ ಸಂದರ್ಭದಲ್ಲಿ ನಟರೇ ಕೊಡಬೇಕು. ಯಾವುದೇ ಸಿನಿಮಾದಲ್ಲಿ ಬರುವ ಸಂಭಾವನೆಯ ಶೇಕಡಾ ಮೂವತ್ತೈದರಷ್ಟು ಮೊತ್ತ ಆದಾಯ ತೆರಿಗೆ ಕಟ್ಟಬೇಕಾಗುತ್ತದೆ. ಒಂದು ಕೋಟಿ ಸಂಭಾವನೆ ಪಡೆದರೆ ಸುಮಾರು ಇಪ್ಪತ್ತೈದು- ಮೂವತ್ತು ಲಕ್ಷ ರುಪಾಯಿ ಇನ್ ಕಮ್ ಟ್ಯಾಕ್ಸ್ ಗೆ ಅಂತಲೇ ಕಟ್ಟಬೇಕಾಗುತ್ತದೆ. ಹಾಗಂತ ಇವರ ವೃತ್ತಿ ಬದುಕು ಬಹಳ ದೀರ್ಘವಾಗೇನೂ ಇರುವುದಿಲ್ಲ. ಬೇಡಿಕೆ ಕೂಡ ಒಂದೇ ರೀತಿ ಇರುವುದಿಲ್ಲ. ಬೇಡಿಕೆ ಕುಸಿದ ಸಂದರ್ಭಕ್ಕೆ ಏನಾದರೂ ಉಳಿಸಿಕೊಂಡಿರಬೇಕು. ಇವೆಲ್ಲವನ್ನೂ ಗಮನಿಸಿಯೇ ನಟರು, ಅದರಲ್ಲೂ ಬೇಡಿಕೆಯಲ್ಲಿ ಇರುವ ನಟರು ಅಷ್ಟು ಸಂಭಾವನೆ ಪಡೆಯುತ್ತಾರೆ.


Click it and Unblock the Notifications