ವಾರಪೂರ್ತಿ ಕಷ್ಟಪಟ್ಟು ದುಡಿದು, ಒಂದು ದಿನ ವಿಶ್ರಾಂತಿ ತೆಗೆದುಕೊಳ್ಳಲು ಭಾನುವಾರವನ್ನು ಎದುರು ನೋಡುತ್ತಿರುತ್ತೇವೆ. ಎಲ್ಲಾ ಕಚೇರಿಗಳು, ಶಾಲೆಗಳು, ಕಾಲೇಜುಗಳು ಸಹ ಭಾನುವಾರ ರಜಾ ದಿನವಾಗಿರುತ್ತೆ. ಆದರೆ ಈ ಭಾನುವಾರ ಸಾರ್ವಜನಿಕ ರಜಾದಿನವಾಗಿ ಏಕೆ ಜಾರಿಗೆ ಬಂದಿದೆ. ಇದನ್ನು ಏಕೆ ಜಾರಿಗೆ ತರಲಾಯಿತು ಎಂದು ನಿಮಗೆ ತಿಳಿದಿದ್ಯಾ? ಈ ಲೇಖನದಲ್ಲಿ ಆ ಪ್ರಶ್ನೆಗಿದೆ ಉತ್ತರ.
ಭಾನುವಾರ ವಿಶ್ವದಾದ್ಯಂತ ಸಾರ್ವಜನಿಕ ರಜಾ ದಿನವಾಗಿರುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಈ ರಜಾ ದಿನ ಹೇಗೆ ಬಂತು ಅನ್ನೋದು ಆಸಕ್ತಿದಾಯಕ ವಿಷಯವಾಗಿದೆ.
ಭಾರತದಲ್ಲಿ ಭಾನುವಾರ ಸೂರ್ಯನಿಗಾಗಿ ಮೀಸಲು
ಭಾರತೀಯ ವೈದಿಕ ವಿಜ್ಞಾನದ ಪ್ರಕಾರ, ಪ್ರತಿದಿನ ಪ್ರಮುಖ ಗ್ರಹಗಳಿಗೆ ಮೀಸಲಾಗಿರುತ್ತದೆ. ಅಂದರೆ ಸಂಪೂರ್ಣವಾಗಿ ಒಂಬತ್ತು ಗ್ರಹಗಳು, ಅದರಲ್ಲಿ ಭಾನುವಾರ ಸೂರ್ಯನಿಗಾಗಿ ಮೀಸಲಾಗಿರುತ್ತದೆ. ಸೂರ್ಯನನ್ನು ಜೀವನದ ಮುಂಚೂಣಿಯಲ್ಲಿ ಪರಿಗಣಿಸಲಾಗಿದೆ. ಆದರೆ ಪ್ರಾಚೀನ ಭಾರತದಲ್ಲಿ ಸಾಪ್ತಾಹಿಕ ರಜಾದಿನಗಳು ಇರಲಿಲ್ಲ, ಆದರೂ ಹಬ್ಬಗಳ ಆಚರಣೆಗಳು ಇದ್ದವು, ಜನರು ಇಡೀ ದಿನ ಆಚರಣೆಯೊಂದಿಗೆ ತೊಡಗಿಸಿಕೊಂಡಿದ್ದರಿಂದ ರಜಾದಿನವೆಂದು ಪರಿಗಣಿಸಲಾಗುತ್ತಿತ್ತು. ಪ್ರಾಚೀನ ಕಾಲದಿಂದಲೂ ಭಾನುವಾರ ಸೂರ್ಯ ದೇವರಿಗಾಗಿ ಮೀಸಲಾದ ದಿನವಾಗಿದೆ.
ಪ್ರಪಂಚದ ಹೆಚ್ಚಿನ ಪ್ರಾಚೀನ ನಾಗರಿಕತೆಗಳಲ್ಲಿ, ಸೂರ್ಯ ದೇವರಿಗೆ ಪ್ರಮುಖ ಪ್ರಾಮುಖ್ಯತೆ ನೀಡಲಾಗಿದೆ. ಜನರು ಭಾನುವಾರದಿಂದೇ ತಮ್ಮ ಪ್ರಾರ್ಥನೆಯನ್ನು ಅರ್ಪಿಸುತ್ತಿದ್ದರು ಮತ್ತು ಈ ಸಂಪ್ರದಾಯವು ಬಹುತೇಕ ಪ್ರಾಚೀನ ನಾಗರಿಕತೆಯೊಂದಿಗೆ ಸಾಮಾನ್ಯವಾಗಿತ್ತು. ಭಾನುವಾರ ದೈವಿಕ ದಿನವಾದ್ದರಿಂದ, ಭಾನುವಾರವನ್ನು ರಜಾದಿನವೆಂದು ಪರಿಗಣಿಸಲಾಗುತ್ತದೆ.
ಬ್ರಿಟಿಟ್ ಆಳ್ವಿಕೆಯಲ್ಲಿ ವಾರಕ್ಕೆ ಏಳು ದಿನವು ಕೆಲಸ ಮಾಡಬೇಕಿತ್ತು!
ಭಾರತವು ಬ್ರಿಟಿಷ್ ಆಳ್ವಿಕೆಯಲ್ಲಿದ್ದಾಗ, ಭಾರತದಲ್ಲಿನ ಗಿರಣಿ ಕಾರ್ಮಿಕರು ವಾರದ ಎಲ್ಲಾ ಏಳು ದಿನಗಳವರೆಗೆ ಶ್ರಮಿಸಬೇಕಾಗಿತ್ತು. ವಿಶ್ರಾಂತಿ ಪಡೆಯಲು ಅವರಿಗೆ ಯಾವುದೇ ರಜಾದಿನಗಳು ಅಥವಾ ಯಾವುದೇ ರೀತಿಯ ರಜೆ ಸಿಗುತ್ತಿರಲಿಲ್ಲ. ಆದರೆ ಬ್ರಿಟಿಷ್ ಅಧಿಕಾರಿಗಳು ಮತ್ತು ಬ್ರಿಟಿಷ್ ಕಾರ್ಮಿಕರು ಪ್ರತಿ ಭಾನುವಾರ ಚರ್ಚ್‌ಗೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಿದ್ದರು.
1 ದಿನ ರಜೆಯ ಪ್ರಸ್ತಾಪವನ್ನು ಮಂಡಿಸಿದ ನಾರಾಯಣ್ ಮೇಘಾಜಿ ಲೋಖಂಡೆ
ವಾರಪೂರ್ತಿ ಭಾರತೀಯರು ಕಷ್ಟ ಪಟ್ಟು ದುಡಿದ್ರೆ, ಬ್ರಿಟಿಷ್ ಅಧಿಕಾರಿಗಳು ಮಾತ್ರ ಭಾನುವಾರ ರಜೆ ತೆಗೆದುಕೊಳ್ಳುತ್ತಿದ್ದರು ಮತ್ತು ಚರ್ಚ್‌ಗಳಿಗೆ ಪ್ರಾರ್ಥನೆ ಸಲ್ಲಿಸಲು ತೆರಳುತ್ತಿದ್ದರು. ಈ ಸಮಯದಲ್ಲಿ ಇದರ ವಿರುದ್ಧ ಧ್ವನಿಯೆತ್ತಿದ್ದ ಗಿರಣಿ ಕಾರ್ಮಿಕರ ನಾಯಕರಾಗಿದ್ದ ನಾರಾಯಣ್ ಮೇಘಾಜಿ ಲೋಖಂಡೆ, ಬ್ರಿಟಿಷರ ಮುಂದೆ ಸಾಪ್ತಾಹಿಕ ರಜೆಯ ಪ್ರಸ್ತಾಪವನ್ನು ಮಂಡಿಸಿದರು.
"ಆರು ದಿನಗಳ ಕಾಲ ಶ್ರಮಿಸಿದ ನಂತರ, ಕಾರ್ಮಿಕರು ತಮ್ಮ ದೇಶ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸಲು ಒಂದು ದಿನವನ್ನು ಪಡೆಯಬೇಕು. ಭಾನುವಾರ ಹಿಂದೂ ದೇವತೆ ‘ಖಂಡೋಬಾ' ದಿನ. ಆದ್ದರಿಂದ ಭಾನುವಾರವನ್ನು ರಜಾದಿನವೆಂದು ಘೋಷಿಸಬೇಕು ". ಎಂದು ಲೋಖಂಡೆ ಬ್ರಿಟೀಷರ ಮುಂದೆ ಪ್ರಸಾಪ ಮಾಡಿದರು. ಆದರೆ ಅವರ ಪ್ರಸ್ತಾಪವನ್ನು ಬ್ರಿಟಿಷ್ ಅಧಿಕಾರಿಗಳು ತಿರಸ್ಕರಿಸಿದರು.
ಸೋಲೊಪ್ಪಿಕೊಳ್ಳದ ಕಾರ್ಮಿಕರ ನಾಯಕ, 7 ವರ್ಷಗಳ ಹೋರಾಟಕ್ಕೆ ಜಯ
ಕಾರ್ಮಿಕರ ಪ್ರಸ್ತಾಪವನ್ನು ಬ್ರಿಟೀಷರು ತಿರಸ್ಕರಿಸಿದರೂ, ಅಷ್ಟಕ್ಕೆ ಹೋರಾಟ ನಿಲ್ಲಲಿಲ್ಲ. ವಾರಕ್ಕೆ ಒಂದು ದಿನ ರಜೆ ಸಿಗುವವರೆಗೂ ಹೋರಾಟವನ್ನು ಮುಂದುವರೆಸಿದರು. 1884ರಲ್ಲಿ ಮೊದಲ ಕಾರ್ಮಿಕ ಸಂಘಟನೆ 'ಬಾಂಬೆ ಮಿಲ್ ಹ್ಯಾಂಡ್ಸ್ ಅಸೋಸಿಯೇಷನ್'ನ್ನು ಸ್ಥಾಪಿಸಿ ಅದರ ಮೂಲಕ ಕೆಲವು ಹೋರಾಟಗಳನ್ನು ಮಾಡಿ ಕಾರ್ಮಿಕರಿಗೆ ಭಾನುವಾರ ರಜೆ ಸಿಗುವಂತೆ ಮಾಡಿದರು.
7 ವರ್ಷಗಳ ಸುದೀರ್ಘ ಹೋರಾಟದ ನಂತರ, ಜೂನ್ 10, 1890 ರಂದು ಬ್ರಿಟಿಷ್ ಸರ್ಕಾರ ಭಾನುವಾರವನ್ನು ರಜಾದಿನವೆಂದು ಘೋಷಿಸಿತು. ಭಾನುವಾರ ರಜಾದಿನವೆಂದು ಘೋಷಣೆ ಬಳಿಕ ಕಾರ್ಮಿಕರಿಗೆ ಮಧ್ಯಾಹ್ನದ ವೇಳೆ ಅರ್ಧ ಗಂಟೆ ವಿರಾಮ ನೀಡಬೇಕು ಎಂಬುದನ್ನು ಜಾರಿಗೊಳಿಸಿದ್ದರು. ನಾರಾಯಣ್ ಮೇಘಾಜಿ ಲೋಖಂಡೆ ಅವರ ಸ್ಮರಣಾರ್ಥವಾಗಿ ಭಾರತೀಯ ಅಂಚೆ ಇಲಾಖೆಯು 2005 ಮೇ 3ರಂದು ಪೋಸ್ಟಲ್ ಸ್ಟಾಂಪ್ ಬಿಡುಗಡೆ ಮಾಡಿತು.


Click it and Unblock the Notifications