ದೇಶದ ಅತೀ ದೊಡ್ಡ ಐಪಿಒ ಆಗಲಿರುವ ಎಲ್‌ಐಸಿ ಐಪಿಒದ ಚಂದಾದಾರಿಕೆ ಈಗಾಗಲೇ ಆರಂಭವಾಗಿದೆ. ಹತ್ತು ಗಂಟೆಗೆ ಆರಂಭವಾದ ಚಂದಾದಾರಿಕೆಯು ಎರಡು ಗಂಟೆಯಲ್ಲಿ ಶೇಕಡ 12 ಚಂದಾದಾರಿಕೆ ಅರ್ಜಿಯನ್ನು ಸ್ವೀಕಾರ ಮಾಡಿದೆ. ಚಂದಾದಾರಿಕೆ ಆರಂಭವಾದ ಹತ್ತು ನಿಮಿಷದಲ್ಲೇ ಶೇಕಡ ಒಂದರಷ್ಟು ಚಂದಾದಾರಿಕೆಗೆ ಅರ್ಜಿ ಸಲ್ಲಿಕೆಯಾಗಿದೆ. ಆದರೆ ಟ್ರೇಡ್ ಯೂನಿಯನ್‌ಗಳು, ಕೆಲವು ಉದ್ಯಮಿಗಳು, ಸಾಮಾಜಿಕ ಕಾರ್ಯಕರ್ತರು ವಿರೋಧ ಮಾಡುತ್ತಿದ್ದಾರೆ.
ಎಲ್‌ಐಸಿ ಐಪಿಒ ಬಗ್ಗೆ ಸರ್ಕಾರ ಮಾಹಿತಿ ನೀಡಿದ ಆರಂಭದಲ್ಲೇ ವಿರೋಧಗಳು ವ್ಯಕ್ತವಾಗಿದೆ. ಎಲ್‌ಐಸಿಯಲ್ಲಿ ಐಪಿಒ ಹೊರತರುವ ಕೇಂದ್ರದ ಪ್ರಸ್ತಾಪವನ್ನು ವಿರೋಧ ಮಾಡಲು ವಿಶಾಖ ಉಕ್ಕು ಪರಿರಕ್ಷಣಾ ಹೋರಾಟ ಸಮಿತಿ (ವಿಯುಪಿಪಿಸಿ) ಪ್ರತಿನಿಧಿಗಳು ಕಾರ್ಮಿಕರಿಗೆ ಕರೆ ನೀಡಿದ್ದಾರೆ. ವಿಶಾಖಪಟ್ಟಣಂ ಸ್ಟೀಲ್ ಪ್ಲಾಂಟ್‌ನ (ವಿಎಸ್‌ಪಿ) ಆಡಳಿತ ಕಟ್ಟಡದ ಎದುರು ಧರಣಿ ನಡೆಸಿದ್ದಾರೆ.
ಹಲವು ಕಡೆಗಳಲ್ಲಿ ಎಲ್‌ಐಸಿ ಐಪಿಒ ವಿರೋಧ ಮಾಡಿ ಪ್ರತಿಭಟನೆಗಳನ್ನು ನಡೆಸಲಾಗಿದೆ. ಮೈಸೂರಿನಲ್ಲಿ ಎಲ್‌ಐಸಿ ಉದ್ಯೋಗಿಗಳು ಈ ಐಪಿಒ ವಿರುದ್ಧವಾಗಿ ಹೋರಾಟ ನಡೆಸಿದ್ದಾರೆ. ಹಾಗೆಯೇ ಬಾಂಬೆ ಹೈಕೋರ್ಟ್‌ಗೆ ಕೂಡಾ ಈ ಐಪಿಒ ವಿರೋಧ ಮಾಡಿ ಅರ್ಜಿ ಸಲ್ಲಿಸಲಾಗಿದೆ. ಆದರೆ ಹೈಕೋರ್ಟ್ ಎಲ್‌ಐಸಿ ಐಪಿಒಗೆ ತಡೆನೀಡಲು ನಿರಾಕರಿಸಿದೆ. ಅಷ್ಟಕ್ಕೂ ದೇಶದ ಅತೀ ದೊಡ್ಡ ಐಪಿಒಗೆ ಅದರ ಉದ್ಯೋಗಿಗಳು ಸೇರಿದಂತೆ ಹಲವಾರು ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿರುವುದು ಏಕೆ, ಇಲ್ಲಿದೆ ವಿವರ ಮುಂದೆ ಓದಿ...
ಎಲ್‌ಐಸಿ ಐಪಿಒಗೆ ವಿರೋಧವೇಕೆ?
ದೇಶದ ಅತೀ ದೊಡ್ಡ ಐಪಿಒ ಆಗಲಿರುವ ಎಲ್‌ಐಸಿ ಐಪಿಒಗೆ ಹಲವಾರು ವಲಯಗಳಿಂದ ವಿರೋಧ ವ್ಯಕ್ತವಾಗಿದೆ. ಅದಕ್ಕೆ ಮುಖ್ಯ ಕಾರಣ ಖಾಸಗೀಕರಣವಾಗಿದೆ. ಖಾಸಗೀಕರಣಕ್ಕೆ ಇದು ಮೊದಲ ಹೆಜ್ಜೆ ಎಂದು ಆರೋಪ ಮಾಡಲಾಗಿದೆ. ಈ ಐಪಿಒ ಮೂಲಕ ಹಲವಾರು ವರ್ಷಗಳಿಂದ ಸರ್ಕಾರದ ಅಧೀನದಲ್ಲೇ ಇರುವ ಸಂಸ್ಥೆಯನ್ನು ಕೂಡಾ ಸರ್ಕಾರವು ಖಾಸಗೀಕರಣದತ್ತ ತಲ್ಲುತಿದೆ. ಐಪಿಒ ನೆಪದಲ್ಲಿ ಖಾಸಗೀಕರಣ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. "ಕೇಂದ್ರ ಸರ್ಕಾರ 5,000 ಕೋಟಿಯಲ್ಲಿ ಎಲ್ ಐಸಿ ಸ್ಥಾಪಿಸಿ ಇಂದು 32 ಲಕ್ಷ ಕೋಟಿ ಮೌಲ್ಯದ ಆಸ್ತಿ ಸಂಗ್ರಹಿಸಿದೆ. ರಾಷ್ಟ್ರದ ಆರ್ಥಿಕತೆಯನ್ನು ಬಲಪಡಿಸುವ ಉದ್ದೇಶದಿಂದ ಕಾರ್ಪೊರೇಷನ್ ಲಾಭದಿಂದ ಶೇಕಡ 95 ಪಾಲಿಸಿದಾರರಿಗೆ ಷೇರುಗಳನ್ನು ನೀಡಲು ಮೋದಿ ಸರ್ಕಾರ ಯೋಜಿಸುತ್ತಿದೆ. ಇದು ಸಾರ್ವಜನಿಕ ಆಸ್ತಿಗಳನ್ನು ಮಾರಾಟ ಮಾಡುವುದಲ್ಲದೆ ಬೇರೇನೂ ಅಲ್ಲ, ಐಪಿಒ ವಿರೋಧಿಸುವುದು ನಾಗರಿಕರ ಜವಾಬ್ದಾರಿಯಾಗಿದೆ," ಎಂದು ಐಟಿಯುಸಿ ರಾಷ್ಟ್ರೀಯ ಉಪಾಧ್ಯಕ್ಷ ಡಿ.ಆದಿನಾರಾಯಣ ಹೇಳಿದ್ದಾರೆ. "ಈಗಾಗಲೇ ಸರ್ಕಾರವುಯ ಬಹುತೇಕ ಎಲ್ಲಾ ವಲಯಗಳನ್ನು ಖಾಸಗೀಕರಣ ಮಾಡಿದೆ. ಎಲ್ಲಾ ವಲಯಗಳು ಖಾಸಗೀಕರಣವಾದರೆ ಮುಂದೆ ಅಪಾಯ ಕಟ್ಟಿಟ್ಟ ಬುತ್ತಿ. ಯಾವುದೇ ದೇಶವಾದರೂ ಸರ್ಕಾರದ ಸೊತ್ತು ಇರುವುದು ಅತ್ಯಗತ್ಯ. ಕಾರ್ಪೋರೇಟ್ ಸಂಸ್ಥೆಗಳ ಅಧೀನಕ್ಕೆ ದೇಶ ಒಳಗಾಗಲಿದೆ," ಎಂದು ಸಾಮಾಜಿಕ ಕಾರ್ಯಕರ್ತರು, ಸಂಘಟನೆಗಳು ಆತಂಕ ವ್ಯಕ್ತಪಡಿಸಿದೆ.
ಐಪಿಒಗೆ ಎಲ್‌ಐಸಿ ನೌಕರರ ವಿರೋಧ
ನಿಗಮದ ಖಾಸಗೀಕರಣಕ್ಕೆ ದಾರಿ ಮಾಡಿಕೊಟ್ಟಿದೆ ಎಂಬ ಕಾರಣಕ್ಕೆ ಎಲ್‌ಐಸಿಯ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಅನ್ನು ಎಲ್‌ಐಸಿ ನೌಕರರು ಕೂಡಾ ವಿರೋಧ ಮಾಡಿದ್ದಾರೆ. ಮೈಸೂರು ವಿಭಾಗದ ಎಲ್‌ಐಸಿ ನೌಕರರ ಸಂಘವು ಆಯೋಜಿಸಿದ್ದ ಸಮಾವೇಶದಲ್ಲಿ ಎಲ್‌ಐಸಿ ಐಪಿಒಗೆ ವಿರೋಧ ವ್ಯಕ್ತವಾಗಿದೆ. ಹಾಗೆಯೇ ಸರ್ಕಾರ ಈ ಐಪಿಒ ಕೈಬಿಡಬೇಕು ಎಂದು ಒತ್ತಾಯ ಕೂಡಾ ಮಾಡಲಾಗಿದೆ. ಈ ಐಪಿಒ ಆತ್ಮನಿರ್ಭರ ಭಾರತ್ ಪರಿಕಲ್ಪನೆಗೆ ವಿರುದ್ಧವಾಗಿದೆ ಎಂದು ಉದ್ಯೋಗಿಗಳು ದೂರಿದ್ದಾರೆ. ಎಲ್‌ಐಸಿಯ ಖಾಸಗೀಕರಣಕ್ಕೆ ಇದು ಮೊದಲ ಹೆಜ್ಜೆಯಾಗಿದೆ ಎಂದು ನೌಕರರ ಸಂಘವು ಹೇಳಿದೆ.
ಎಲ್‌ಐಸಿ ಐಪಿಒ ವಂಚನೆ ಎಂದ ಎಡಪಕ್ಷಗಳು
ಎಲ್‌ಐಸಿ ಐಪಿಒಗೆ ಎಡಪಕ್ಷಗಳು ವಿರೋಧ ಮಾಡಿದೆ. ಇದು "ವಂಚನೆ" ಮತ್ತು "ಮಾರಾಟ" ಎಂದು ಆರೋಪಿಸಿದೆ. ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಈ ಕ್ರಮವನ್ನು "ದೈತ್ಯ ಪ್ರಮಾಣದ ಹಗರಣ" ಮತ್ತು "ಜನರ ಸಂಪನ್ಮೂಲಗಳ ಬೃಹತ್ ಲೂಟಿ" ಎಂದು ಕರೆದಿದ್ದಾರೆ. "ಭಾರತದ ಮೂಲಸೌಕರ್ಯಗಳ ಅಭಿವೃದ್ಧಿಗೆ ಎಲ್‌ಐಸಿ ಅತಿ ದೊಡ್ಡ ಕೊಡುಗೆ ನೀಡಿದೆ. 1956 ರಿಂದ ಇದು 35 ಲಕ್ಷ ಕೋಟಿ ರೂಪಾಯಿ ಕೊಡುಗೆ ನೀಡಿದೆ. ಈಗ ಈ ಹಣವನ್ನು ವಿಶ್ವದ ಷೇರು ಮಾರುಕಟ್ಟೆಗಳಲ್ಲಿ ಖಾಸಗಿ ಲಾಭವನ್ನು ಹೆಚ್ಚಿಸುವ ಪರಭಕ್ಷಕ ವಿದೇಶಿ ನಿಧಿ ವ್ಯವಸ್ಥಾಪಕರ ವಿಲೇವಾರಿಯಲ್ಲಿ ಇರಿಸಲಾಗುತ್ತಿದೆ," ಎಂದು ದೂರಿದ್ದಾರೆ. "ಭಾರತ ಮತ್ತು ನಮ್ಮ ಜನರ ಹಿತದೃಷ್ಟಿಯಿಂದ ಎಲ್‌ಐಸಿ ಐಪಿಒಗೆ ಸಂಬಂಧಿಸಿದ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಬೇಕು. ಕಾರ್ಯವಿಧಾನಗಳು ಭಾರೀ ಹಗರಣವನ್ನು ಒಳಗೊಂಡಿದೆ. ಈ ಐಪಿಒ ರದ್ದುಗೊಳಿಸಿ,'' ಎಂದು ಟ್ವೀಟ್ ಮೂಲಕ ಈ ಹಿಂದೆಯೇ ಒತ್ತಾಯ ಮಾಡಿದ್ದರು. ಇನ್ನು ಭಾರತೀಯ ಕಮ್ಯುನಿಸ್ಟ್ ಪಾರ್ಟಿ (ಸಿಪಿಐ) ಪ್ರಧಾನ ಕಾರ್ಯದರ್ಶಿ ಡಿ ರಾಜಾ, "ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಹಣಗಳಿಸುವ ನೀತಿ ಮತ್ತು ಸಾರ್ವಜನಿಕ ವಲಯದ ಘಟಕಗಳ ಖಾಸಗೀಕರಣದ ಮೂಲಕ ಎಲ್ಲಾ ರಾಷ್ಟ್ರೀಯ ಆಸ್ತಿಗಳನ್ನು ಮಾರಾಟ ಮಾಡುತ್ತಿರುವುದು ವಿಷಾದದ ಸಂಗತಿಯಾಗಿದೆ," ಎಂದು ಹೇಳಿದ್ದಾರೆ. ಈ ನಡೆಯನ್ನು ದುರಂತ ಎಂದು ಕೂಡಾ ಕರೆದಿದ್ದಾರೆ.
ಇದು ಕಾನೂನು ಪ್ರಕಾರವಾಗಿಲ್ಲ ಎಂದ ಸಾಮಾಜಿಕ ಕಾರ್ಯಕರ್ತರು
ಎಲ್‌ಐಸಿ ಐಪಿಒಗೆ ಸಾಮಾಜಿಕ ಕಾರ್ಯಕರ್ತರು ಕೂಡಾ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. "ನಾವು ಸಾರ್ವಜನಿಕ ವಲಯದ ಉದ್ಯಮಗಳನ್ನು ಮಾರಾಟ ಮಾಡುವುದು ಸರಿಯಲ್ಲ. ಪ್ರಾಥಮಿಕವಾಗಿ ಇದು ಕಾನೂನುಬದ್ಧವಾಗಿಲ್ಲ ಮತ್ತು ಅಸಂವಿಧಾನಿಕವೂ ಹೌದು," ಎಂದು ವಿದ್ಯುತ್ ಮತ್ತು ಆರ್ಥಿಕ ವ್ಯವಹಾರಗಳ ಸಚಿವಾಲಯದ ಮಾಜಿ ಕಾರ್ಯದರ್ಶಿ ಇಎಎಸ್ ಶರ್ಮಾ ಹೇಳಿದ್ದಾರೆ. "ನಾವು ಸಂಸತ್ತಿನ ಸುಮಾರು 500 ಸದಸ್ಯರನ್ನು ತಲುಪಿದ್ದೇವೆ ಮತ್ತು ದುರದೃಷ್ಟವಶಾತ್ ನಾವು ಅದೇ ಉತ್ತರವನ್ನು ಪಡೆಯುತ್ತಿದ್ದೇವೆ. ಅವರು ಲ್ಐಸಿಯನ್ನು ಖಾಸಗೀಕರಣಗೊಳಿಸುವುದು ತುಂಬಾ ಮುಖ್ಯ ಎಂಬ ಅಂಶವನ್ನು ಒಪ್ಪುತ್ತಾರೆ. ಆದರೆ ಅದರಿಂದಾಗುವ ಪರಿಣಾಮದ ಬಗ್ಗೆ ಕೇಳಿದಾಗ ಯಾವುದೇ ಪ್ರತಿಕ್ರಿಯೆ ನೀಡಲ್ಲ," ಎಂದು ಅಖಿಲ ಭಾರತ ವಿಮಾ ನೌಕರರ ಸಂಘದ ಮಾಜಿ ಅಧ್ಯಕ್ಷ ಅಮಾನುಲ್ಲಾ ಖಾನ್ ಹೇಳಿದ್ದಾರೆ.


Click it and Unblock the Notifications