ಭಾರತ್‌ಪೇಯಿಂದ ಮ್ಯಾನೆಜಿಂಗ್ ಡೈರೆಕ್ಟರ್ (ಎಂಡಿ) ಸ್ಥಾನದಿಂದ ವಿವಾದಾತ್ಮಕವಾಗಿ ಹೊರ ನಡೆದ ಅಶ್ನೀರ್ ಗ್ರೋವರ್ ವಿರುದ್ಧ ಈಗ ಎಫ್‌ಐಆರ್ ದಾಖಲಾಗಿದೆ. ಭಾರತ್‌ಪೇಯಲ್ಲಿನ ಉನ್ನತ ನಾಯಕತ್ವದ ಸ್ಥಾನದಿಂದ ಹೊರ ನಡೆದ ಬಳಿಕ ಅಶ್ನೀರ್ ಗ್ರೋವರ್ ಮತ್ತು ಅವರ ಕುಟುಂಬ ಕಾನೂನು ತೊಂದರೆಗೆ ಸಿಲುಕಿದೆ. ಕಂಪನಿಯನ್ನು ಒಳಗೊಂಡಿರುವ ಬೃಹತ್ ಬಹುಕೋಟಿ ವಂಚನೆ ಪ್ರಕರಣದಲ್ಲಿ ಅಶ್ನೀರ್ ಗ್ರೋವರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಇಕಾನಮಿಕ್ ಆಫೆನ್‌ಸೆಸ್ ವಿಂಗ್ (ಇಒಡಬ್ಲ್ಯೂ ಅಥವಾ ಆರ್ಥಿಕ ಅಪರಾಧಗಳ ವಿಭಾಗ) ಬುಧವಾರ ಅಶ್ನೀರ್ ಗ್ರೋವರ್ ಮತ್ತು ಅವರ ಪತ್ನಿ ಮಾಧುರಿ ಗ್ರೋವರ್ ಜೈನ್ ಸೇರಿದಂತೆ ಅಶ್ನೀರ್ ಗ್ರೋವರ್ ಕುಟುಂಬದ ಅನೇಕ ಸದಸ್ಯರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಎಫ್‌ಐಆರ್‌ನಲ್ಲಿ ಸಂಸ್ಥೆಯ ಇತರೆ ಸದಸ್ಯರಾದ ದೀಪಕ್ ಗುಪ್ತಾ, ಸುರೇಶ್ ಜೈನ್ ಮತ್ತು ಶ್ವೇತಾಂಕ್ ಜೈನ್ ಹೆಸರು ಕೂಡಾ ಉಲ್ಲೇಖವಾಗಿದೆ.

ಅಶ್ನೀರ್ ಗ್ರೋವರ್ ವಿರುದ್ಧದ ಎಫ್‌ಐಆರ್ ಅನ್ನು 409 (ಸಾರ್ವಜನಿಕ ಸೇವಕರಿಂದ ಅಥವಾ ಬ್ಯಾಂಕರ್, ವ್ಯಾಪಾರಿ ಅಥವಾ ಏಜೆಂಟ್‌ನಿಂದ ಕ್ರಿಮಿನಲ್ ನಂಬಿಕೆ ಉಲ್ಲಂಘನೆ), 420 (ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿ ವಿತರಣೆಗೆ ಪ್ರೇರೇಪಿಸುವುದು), 467 (ಮೌಲ್ಯದ ಖೋಟಾ) ನಂತಹ ಹಲವಾರು ಗಂಭೀರ ಅಪರಾಧಗಳ ಅಡಿಯಲ್ಲಿ ದಾಖಲು ಮಾಡಲಾಗಿದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...
ಅಶ್ನೀರ್ ಗ್ರೋವರ್ ವಿರುದ್ಧ ಎಫ್‌ಐಆರ್ ದಾಖಲಿಸಿರುವುದೇಕೆ?
ಅಶ್ನೀರ್ ಗ್ರೋವರ್ ಮತ್ತು ಅವರ ಪತ್ನಿ ಮಾಧುರಿ ಗ್ರೋವರ್ ಜೈನ್ ವಿರುದ್ಧ ಭಾರತ್‌ಪೇ ದೂರು ದಾಖಲು ಮಾಡಿದೆ. 2022ರಲ್ಲಿ ದೆಹಲಿ ಪೊಲೀಸರ ಬಳಿ ಭಾರತ್‌ಪೇ ತನ್ನ ಮಾಜಿ ಎಂಡಿ ಅಶ್ನೀರ್ ಗ್ರೋವರ್ ವಿರುದ್ಧ ದೂರನ್ನು ದಾಖಲು ಮಾಡಿದೆ. ಅಶ್ನೀರ್ ಗ್ರೋವರ್ 81 ಕೋಟಿ ರೂಪಾಯಿಯ ವಂಚನೆ ಮಾಡಿದ್ದಾರೆ, ಕ್ರಿಮಿನಲ್ ನಂಬಿಕೆಯ ಉಲ್ಲಂಘನೆ, ಪಿತೂರಿ, ವಂಚನೆ, ಫೋರ್ಜರಿ ಮತ್ತು ಸಾಕ್ಷ್ಯ ನಾಶಪಡಿಸಿದ ಆರೋಪದ ಬಗ್ಗೆ ದೂರು ದಾಖಲು ಮಾಡಲಾಗಿದೆ.
ಇದಲ್ಲದೆ, ಕಂಪನಿಯು ಅಶ್ನೀರ್ ಗ್ರೋವರ್ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ಸಿವಿಲ್ ಮೊಕದ್ದಮೆ ಹೂಡಿದೆ. ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಲ್ಲಾ ಆರೋಪಿಗಳಿಂದ 88 ಕೋಟಿ ರೂಪಾಯಿ ನಷ್ಟವನ್ನು ವಸೂಲಿ ಮಾಡುವಂತೆ ಕೋರಿದೆ. ಇದಲ್ಲದೆ, ಭಾರತ್‌ಪೇಯಲ್ಲಿ ಸಂಸ್ಥಾಪಕ ಟ್ಯಾಗ್ ಅನ್ನು ಬಳಸದಂತೆ ತಡೆಯಲು ಸಿಂಗಾಪುರದಲ್ಲಿ ಹಕ್ಕು ಸಲ್ಲಿಸಲಾಗಿದೆ.
ಈ ಬಗ್ಗೆ ಅಧಿಕೃತ ಹೇಳಿಕೆಯನ್ನು ನೀಡಿರುವ ಭಾರತ್‌ಪೇ, "ಅಶ್ನೀರ್ ಗ್ರೋವರ್ ವಿರುದ್ಧದ ಎಫ್‌ಐಆರ್ ನೋಂದಣಿಯು ಸರಿಯಾದ ಹೆಜ್ಜೆಯಾಗಿದೆ. ಕುಟುಂಬವು ಅವರ ವೈಯಕ್ತಿಕ ಹಣದ ಲಾಭಕ್ಕಾಗಿ ಮಾಡಿದ ವಿವಿಧ ಅನುಮಾನಾಸ್ಪದ ವಹಿವಾಟುಗಳನ್ನು ಬಹಿರಂಗಪಡಿಸುತ್ತದೆ. ಈ ಎಫ್‌ಐಆರ್ ಈಗ ಕಾನೂನು ಜಾರಿ ಸಂಸ್ಥೆಗಳಿಗೆ ಅಪರಾಧದ ಬಗ್ಗೆ ಆಳವಾಗಿ ತನಿಖೆ ಮಾಡಲು ಮತ್ತು ಅಪರಾಧಿಗಳನ್ನು ಅನುವು ಮಾಡಿಕೊಡುತ್ತದೆ," ಎಂದು ತಿಳಿಸಿದೆ.
"ನಮ್ಮ ದೇಶದ ನ್ಯಾಯಾಂಗ ಮತ್ತು ಕಾನೂನು ವವಸ್ಥೆಯ ಮೇಲೆ ನಾವು ಸಂಪೂರ್ಣ ನಂಬಿಕೆಯನ್ನು ಹೊಂದಿದ್ದೇವೆ. ಈ ಪ್ರಕರಣವು ಅದರ ತಾರ್ಕಿಕ ಅಂತ್ಯವನ್ನು ತಲುಪುತ್ತದೆ ಎಂಬ ಆಶಾವಾದವನ್ನು ನಾವು ಹೊಂದಿದ್ದೇವೆ. ನಾವು ಅಧಿಕಾರಿಗಳಿಗೆ ಸಾಧ್ಯವಿರುವ ಎಲ್ಲ ಸಹಕಾರವನ್ನು ನೀಡುವುದನ್ನು ಮುಂದುವರಿಸುತ್ತೇವೆ," ಎಂದು ಕೂಡಾ ಭಾರತ್‌ಪೇ ಹೇಳಿದೆ.


Click it and Unblock the Notifications