ಆನ್‌ಲೈನ್ ಫುಡ್ ಡೆಲವರಿ ಸೇವೆಯನ್ನು ನೀಡುವ ಜೊಮ್ಯಾಟೊ ಸಂಸ್ಥೆಯು ಈಗ ಮೆಟಾ, ಟ್ವಿಟ್ಟರ್‌ನಂತೆ ತನ್ನ ಉದ್ಯೋಗಿಗಳನ್ನು ಕೆಲಸದಿಂದ ವಜಾಮಾಡಲು ಮುಂದಾಗಿದೆ. ಈಗಾಗಲೇ ಜೊಮ್ಯಾಟೊವನ್ನು ಕಟ್ಟಿ ಬೆಳೆಸಿದ, ಸಹ-ಸಂಸ್ಥಾಪಕ ಮೋಹಿತ್ ಗುಪ್ತಾ ರಾಜೀನಾಮೆ ನೀಡಿದ್ದಾರೆ. ಈ ನಡುವೆ ಸಂಸ್ಥೆಯು ಸುಮಾರು ಶೇಕಡ 3ರಷ್ಟು ಉದ್ಯೋಗ ಕಡಿತವನ್ನು ಮಾಡುವುದಾಗಿ ಘೋಷಣೆ ಮಾಡಿದೆ.
ಪ್ರಮುಖವಾಗಿ ಸಂಸ್ಥೆಯಲ್ಲಿ ತನ್ನ ವೆಚ್ಚವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಜೊಮ್ಯಾಟೊ ಈ ಹಾದಿಯನ್ನು ಹಿಡಿದಿದೆ. ಈ ಬಗ್ಗೆ ಶನಿವಾರ ಘೋಷಣೆ ಮಾಡಿದೆ. ಹಲವಾರು ಸಾಮಾಜಿಕ ಜಾಲತಾಣ ಸಂಸ್ಥೆಗಳು ತಮ್ಮ ಸಂಸ್ಥೆಯಲ್ಲಿ ನಷ್ಟವನ್ನು ಸರಿದೂಗಿಸಲು ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುತ್ತಿರುವ ನಡುವೆಯೇ ಜೊಮ್ಯಾಟೊ ಈ ನಿರ್ಧಾರವನ್ನು ಕೈಗೊಂಡಿದೆ.
"ಉದ್ಯೋಗಿಗಳು ಯಾವ ರೀತಿ ಉದ್ಯೋಗ ಮಾಡುತ್ತಿದ್ದಾರೆ ಎಂದು ನೋಡಿಕೊಂಡು ಶೇಕಡ 3ರಷ್ಟು ಮಂದಿಯನ್ನು ಕೆಲಸದಿಂದ ತೆಗೆದುಹಾಕಲಾಗುತ್ತದೆ. ಅದಕ್ಕೂ ಅಧಿಕ ಏನಿಲ್ಲ," ಎಂದು ಜೊಮ್ಯಾಟೊ ವಕ್ತಾರರು ತಿಳಿಸಿದ್ದಾರೆ. ಅಂದರೆ ಸಂಸ್ಥೆಯಲ್ಲಿ ಸುಮಾರು 3,800 ಉದ್ಯೋಗಿಗಳು ತಮ್ಮ ಕೆಲಸ ಕಳೆದುಕೊಳ್ಳಲಿದ್ದಾರೆ.
ಜೊಮ್ಯಾಟೊ ಈ ಹಿಂದೆ ಮಾಡಿದ್ದು ಇದೇ!
ಇನ್ನು ಕೊರೊನಾ ಸಾಂಕ್ರಾಮಿಕ ಬಳಿಕ ತನ್ನ ಆದಾಯದಲ್ಲಿ ಭಾರೀ ಕಡಿತ ಉಂಟಾದಾ ಜೊಮ್ಯಾಟೊ ಈ ಉದ್ಯೋಗ ವಜಾ ಹಾದಿಯನ್ನು ತುಳಿದಿತ್ತು. 2020ರ ಮೇ ತಿಂಗಳಿನಲ್ಲಿ ಜೊಮ್ಯಾಟೊ ಸುಮಾರು 520 ಮಂದಿ ಅಂದರೆ ತಮ್ಮ ಸಿಬ್ಬಂದಿಗಳ ಪೈಕಿ ಸುಮಾರು ಶೇಕಡ 13ರಷ್ಟು ಜನರನ್ನು ಕೆಲಸದಿಂದ ವಜಾ ಮಾಡಿತ್ತು. ಇನ್ನು ಇತ್ತೀಚೆಗೆ ಸಂಸ್ಥೆಯಲ್ಲಿ ಉನ್ನತ ಸ್ಥಾನದಲ್ಲಿದ್ದ ರಾಹುಲ್ ಗಾಂಜಾವೋ ಕೂಡಾ ಸಂಸ್ಥೆಯನ್ನು ತೊರೆದಿದ್ದಾರೆ.
ರಾಜೀನಾಮೆ ಸರಣಿ
ಈ ತಿಂಗಳಿನಲ್ಲೇ ಜೊಮ್ಯಾಟೊದ ಸಹ-ಸಂಸ್ಥಾಪಕ ಮೋಹಿತ್ ಗುಪ್ತಾ ತನ್ನ ರಾಜೀನಾಮೆಯನ್ನು ಘೋಷಣೆ ಮಾಡಿದ್ದಾರೆ. ಮೋಹಿತ್ ಗುಪ್ತಾ ಜೊಮ್ಯಾಟೊ ಸಂಸ್ಥೆಯಲ್ಲಿ ಸುಮಾರು 4.5 ವರ್ಷಗಳ ಕಾಲ ಕಾರ್ಯನಿರ್ವಹಣೆ ಮಾಡಿದ್ದರು. ಈ ಹಿಂದೆ ಸಿಇಒ ಆಗಿದ್ದರು. ಕಳೆದ ಹಲವು ವಾರಗಳಿಂದ ಜೊಮ್ಯಾಟೊದಿಂದ ಹೊರನಡೆಯುತ್ತಿರುವ ಮೂರನೇ ಪ್ರಮುಖ ಉದ್ಯೋಗಿ ಮೋಹಿತ್ ಗುಪ್ತಾ ಆಗಿದ್ದಾರೆ. "ನಾನು ಜೊಮ್ಯಾಟೊವನ್ನು ತೊರೆದು ಇನ್ನೂ ಅಧಿಕ ಸಾಹಸ ತುಂಬಿದ ಜೀವನದೆಡೆ ಸಾಗುತ್ತಿದ್ದೇನೆ," ಎಂದು ಮೋಹಿತ್ ಗುಪ್ತಾ ಹೇಳಿಕೊಂಡಿದ್ದಾರೆ.
ನಷ್ಟದಲ್ಲಿ ಜೊಮ್ಯಾಟೊ
ಜೊಮ್ಯಾಟೊ ಕಳೆದ ಹಲವಾರು ತಿಂಗಳುಗಳಿಂದ ಭಾರೀ ನಷ್ಟವನ್ನು ಅನುಭವಿಸುತ್ತಿದೆ. ಇದರಿಂದಾಗಿ ಜೊಮ್ಯಾಟೊದ ಹಿರಿಯ ಉದ್ಯೋಗಿಗಳು ಸಂಸ್ಥೆಯನ್ನು ತೊರೆಯುವ ನಿರ್ಧಾರವನ್ನು ಮಾಡಿದ್ದಾರೆ. ಹಣಕಾಸು ವರ್ಷ 2022-23ರ ಸೆಪ್ಟೆಂಬರ್ ವೇಳೆಗೆ ಅಂತ್ಯವಾಗುವ ಎರಡನೇ ತ್ರೈಮಾಸಿದಲ್ಲಿ ಸಂಸ್ಥೆಯು 250.8 ಕೋಟಿ ರೂಪಾಯಿ ನಷ್ಟವನ್ನು ದಾಖಲಿಸಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ಜೊಮ್ಯಾಟೊ ನಿವ್ವಳ ಆದಾಯ 434.9 ಕೋಟಿ ರೂಪಾಯಿ ಆಗಿತ್ತು.
ಜೊಮ್ಯಾಟೊ ಸ್ಟಾಕ್ ಮಾರುಕಟ್ಟೆಯಲ್ಲಿಯೂ ಪಾತಾಳಕ್ಕೆ ಇಳಿಯುತ್ತಿದೆ. ಕಳೆದ ವರ್ಷದಿಂದ ಈ ವರ್ಷಕ್ಕೆ ಷೇರು ಮೌಲ್ಯವು ಸುಮಾರು ಶೇಕಡ 58ರಷ್ಟು ಇಳಿಕೆಯಾಗಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಜೊಮ್ಯಾಟೊ ಷೇರು ಭಾರೀ ಏರಿಕೆಯಾಗಿ ರೂಪಾಯಿ 161.90ಕ್ಕೆ ತಲುಪಿತ್ತು. ಆದರೆ ಈ ವರ್ಷದ ವೇಳೆಗೆ ಭಾರೀ ಕುಸಿದಿದೆ. ಶುಕ್ರವಾರ ಜೊಮ್ಯಾಟೊ ಬಿಎಸ್‌ಇಯಲ್ಲಿ 67.15 ರೂಪಾಯಿಗೆ ಲೀಸ್ಟಿಂಗ್ ಆಗಿದೆ.


Click it and Unblock the Notifications