ಮನೆಯಲ್ಲಿ ಅಡುಗೆ ಮಾಡಿಲ್ಲ ಆನ್‌ಲೈನ್ ಫುಡ್ ಆರ್ಡರ್ ಮಾಡು ಎನ್ನುತ್ತಿದ್ದ ಜನರು, ಇದೀಗ ಫುಡ್ ಆರ್ಡರ್ ಮಾಡೋಕು ಮುನ್ನ ಯೋಚಿಸಬೇಕಾಗಿದೆ. ಆನ್‌ಲೈನ್ ಆಹಾರ ವಿತರಣೆಯಲ್ಲಿ ಮುಂಚೂಣಿಯಲ್ಲಿರುವ ಝೊಮ್ಯಾಟೊ, ಸ್ವಿಗ್ಗಿ ತನ್ನ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ನೀಡಲಿದ್ದು, ಮುಂಬರುವ ದಿನಗಳಲ್ಲಿ ಆಹಾರೋತ್ಪನ್ನಗಳ ಬೆಲೆ ಹೆಚ್ಚಿಸುವ ಸಾಧ್ಯತೆ ಇದೆ.
ಕಂಪನಿಯಲ್ಲಿ ಆದಾಯ ಪ್ರಮಾಣದಲ್ಲಿ ಇಳಿಕೆಯಾಗಿರುವುದರಿಂದ, ಗ್ರಾಹಕರ ಜೇಬಿಗೆ ಕತ್ತರಿ ಹಾಕಲು ಮುಂದಾಗಿರುವ ಈ ಆನ್‌ಲೈನ್ ಫುಡ್ ಆರ್ಡರ್ ಕಂಪನಿಗಳು ರಿಯಾಯಿತಿ(Discount) ಸೌಲಭ್ಯವನ್ನು ನಿಲ್ಲಿಸಿವೆ.

ಕಳೆದ ಒಂದೂವರೆ ವರ್ಷದಿಂದ ಝೊಮ್ಯಾಟೊ, ಸ್ವಿಗ್ಗಿ ಕಂಪನಿಗಳ ಆದಾಯ ಮಟ್ಟ ತಟಸ್ಥವಾಗಿದ್ದು, ಬೆಳವಣಿಗೆ ದರ ಕುಂಠಿತಗೊಂಡಿದೆ. ಜೊತೆಗೆ ಆನ್‌ಲೈನ್ ಫುಡ್ ಆರ್ಡರ್ ಮಾಡುವ ಗ್ರಾಹಕರ ಸಂಖ್ಯೆಯು ಇಳಿಕೆಯಾಗಿದ್ದು, ಕಂಪನಿಗಳಿಗೆ ಆರ್ಥಿಕ ಹಿಂಜರಿತದ ಬಿಸಿ ತಟ್ಟಿದೆ ಎಂದು 'ಎಕನಾಮಿಕ್ ಟೈಮ್ಸ್' ವರದಿ ಮಾಡಿದೆ.
ಆಗಸ್ಟ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಕಂಪನಿಯ ಬೆಳವಣಿಗೆ ದರ 1 ರಿಂದ 2 ಪರ್ಸೆಂಟ್ ಕಡಿಮೆಯಾಗಿದೆ. ಹೀಗಾಗಿ ಝೊಮ್ಯಾಟೊ, ಸ್ವಿಗ್ಗಿ ಮತ್ತು ಉಬರ್ ಈಟ್ಸ್ ರಿಯಾಯಿತಿ ಮತ್ತು ಪ್ರಚಾರವನ್ನು ಕಡಿಮೆಗೊಳಿಸಿವೆ ಎಂದು ಬಹು ಹೂಡಿಕೆದಾರರು ಮತ್ತು ಉದ್ಯಮದ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಜೂನ್‌ನಿಂದ ಅಕ್ಟೋಬರ್‌ವರೆಗೆ ಆರ್ಡರ್ ಪ್ರಮಾಣದಲ್ಲಿ 2 ಪರ್ಸೆಂಟ್ ಇಳಿಕೆಯಾಗಿದ್ದು, ಆಫರ್ ನೀಡಿದ ಸಂದರ್ಭದಲ್ಲಿ ಮಾತ್ರ ಫುಡ್ ಖರೀದಿಸಲು ಗ್ರಾಹಕರು ಹೆಚ್ಚು ಒಲವು ತೋರಿದ್ದಾರೆ.
ಆದರೆ ಅಕ್ಟೋಬರ್ ತಿಂಗಳಿನಲ್ಲಿ ನವರಾತ್ರಿ, ದಸರಾ, ದೀಪಾವಳಿ ಹಬ್ಬಗಳಿಂದಾಗಿ ವಹಿವಾಟು ಉತ್ತಮವಾಗಿ ನಡೆದಿತ್ತು. 1 ರಿಂದ 2 ಪರ್ಸೆಂಟ್‌ನಷ್ಟು ಬೆಳವಣಿಗೆಯಾಗಿತ್ತು. ಆದರೆ ಅದಕ್ಕೂ ಮೊದಲು ಮತ್ತು ನಂತರ ವ್ಯವಹಾರವು ಸ್ಥಿರವಾಗಿ ಬೆಳೆಯುತ್ತಿದೆ ಎಂದು ವರದಿಯಾಗಿದೆ. ಡಿಸೆಂಬರ್ ಕೊನೆಯಲ್ಲಿ ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಆರಂಭದಲ್ಲಿ ವಹಿವಾಟು ಉತ್ತಮಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.


Click it and Unblock the Notifications