For Quick Alerts
ALLOW NOTIFICATIONS  
For Daily Alerts

ಪ್ರತಿಯೊಬ್ಬ ವ್ಯಕ್ತಿಯ ನೆಮ್ಮದಿಯ ಜೀವನಕ್ಕಾಗಿ ಈ ಸೂತ್ರಗಳು ಬಹುಮುಖ್ಯ

ವೃತ್ತಿಜೀವನದಲ್ಲಿ ನಿವೃತ್ತಿ ಹೊಂದುವುದು ಎಂದರೆ ಜೀವನದ ಸಂಧ್ಯಾಕಾಲದ ಆರಂಭ ಎಂದೇ ಹೇಳಬಹುದು. ಈ ಹಂತದಲ್ಲಿ ವೃತ್ತಿ ಜೀವನ ಕೊನೆಗೊಂಡಿರುವುದರಿಂದ ನಿಯಮಿತ ಆದಾಯದ ಮೂಲಗಳು ಸಹ ಬತ್ತಿ ಹೋಗಿರುತ್ತವೆ.

|

ವೃತ್ತಿಜೀವನದಲ್ಲಿ ನಿವೃತ್ತಿ ಹೊಂದುವುದು ಎಂದರೆ ಜೀವನದ ಸಂಧ್ಯಾಕಾಲದ ಆರಂಭ ಎಂದೇ ಹೇಳಬಹುದು. ಈ ಹಂತದಲ್ಲಿ ವೃತ್ತಿ ಜೀವನ ಕೊನೆಗೊಂಡಿರುವುದರಿಂದ ನಿಯಮಿತ ಆದಾಯದ ಮೂಲಗಳು ಸಹ ಬತ್ತಿ ಹೋಗಿರುತ್ತವೆ. ಇದರ ಜೊತೆಗೆ ಆರೋಗ್ಯವು ಸಹ ಕ್ಷೀಣಿಸುವ ಸಾಧ್ಯತೆಗಳಿರುತ್ತವೆ. ಹೀಗಾಗಿ ನೆಮ್ಮದಿಯ ನಿವೃತ್ತಿ ಜೀವನಕ್ಕೆ ಆದಷ್ಟೂ ಮೊದಲೇ ಹಣಕಾಸು ಯೋಜನೆ ರೂಪಿಸಿಕೊಳ್ಳುವುದು ಅಗತ್ಯ. ಯೌವನಾವಸ್ಥೆಯಿಂದಲೇ ನಿವೃತ್ತಿ ಜೀವನಕ್ಕೆ ಬೇಕಾದ ಹಣಕಾಸು ಯೋಜನೆಯನ್ನು ಆರಂಭಿಸಬೇಕಾಗುತ್ತದೆ.

ವೃತ್ತಿ ಜೀವನ ಆರಂಭವಾದಾಗಲೇ ನಿವೃತ್ತ ಜೀವನದ ಸಲುವಾಗಿ ದೊಡ್ಡ ಮೊತ್ತದ ಹಣ ಸಂಗ್ರಹಣೆ ಯೋಜನೆಯನ್ನು ಹಾಕಿಕೊಳ್ಳುವುದು ಜಾಣತನವಾಗಿದೆ. ಮ್ಯೂಚುವಲ್ ಫಂಡ್‌ಗಳು, ಸಾರ್ವಜನಿಕ ಭವಿಷ್ಯ ನಿಧಿ ಮತ್ತು ರಾಷ್ಟ್ರೀಯ ಪಿಂಚಣಿ ಯೋಜನೆ ಸೇರಿದಂತೆ ಇನ್ನೂ ಹಲವಾರು ಹೂಡಿಕೆ ಯೋಜನೆಗಳಲ್ಲಿ ಹಣ ತೊಡಗಿಸುವ ಮೂಲಕ ಇದನ್ನು ಸಾಧಿಸಬಹುದು.

ವಾಸ್ತವವಾಗಿ ಜೀವನದ ಯಾವ ಹಂತದಿಂದ ನಿವೃತ್ತಿ ಯೋಜನೆ ಆರಂಭಿಸಬೇಕು?

ವಾಸ್ತವವಾಗಿ ಜೀವನದ ಯಾವ ಹಂತದಿಂದ ನಿವೃತ್ತಿ ಯೋಜನೆ ಆರಂಭಿಸಬೇಕು?

"ವ್ಯಕ್ತಿಯ ಹಣಕಾಸು ಜವಾಬ್ದಾರಿಗಳು ಹಾಗೂ ಆದಾಯದ ಪ್ರಮಾಣವನ್ನು ದೃಷ್ಟಿಯಲ್ಲಿಟ್ಟುಕೊಂಡು ಆಯಾ ಕಾಲಾವಧಿಯಲ್ಲಿ ನಿವೃತ್ತಿ ಜೀವನಕ್ಕಾಗಿ ಹೂಡಿಕೆ ಆರಂಭಿಸುವುದು ಸೂಕ್ತ." ಎನ್ನುತ್ತಾರೆ ಕೋಟಕ್ ಮ್ಯೂಚುವಲ್ ಫಂಡ್ ಸಂಸ್ಥೆಯ ಪ್ರಾಡಕ್ಟ್ ವಿಭಾಗದ ಸಿಐಓ ಮತ್ತು ಮುಖ್ಯಸ್ಥೆ ಲಕ್ಷ್ಮಿ ಅಯ್ಯರ್.
"ಆರಂಭಿಕ ವರ್ಷಗಳಲ್ಲಿ ರಿಸ್ಕ್ ಇರುವ ಇಕ್ವಿಟಿ ಹೂಡಿಕೆಗಳು ಹಣ ಸಂಗ್ರಹಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ನಂತರದ ಕಾಲಾವಧಿಯಲ್ಲಿ ಅಂದರೆ ನಿವೃತ್ತಿ ಜೀವನ ಹತ್ತಿರವಾಗುತ್ತಿದ್ದಂತೆ ಕಡಿಮೆ ರಿಸ್ಕ್ ಇರುವ ಹೂಡಿಕೆ ಯೋಜನೆಗಳನ್ನು ಆಯ್ದುಕೊಳ್ಳಬೇಕಾಗುತ್ತದೆ. ಯಾವುದೇ ಹೂಡಿಕೆ ಮಾಡುವ ಮುನ್ನ ರಿಸ್ಕ್ ತಡೆಯುವ ಸಾಮರ್ಥ್ಯ ಹಾಗೂ ಎಷ್ಟು ಕಾಲದವರೆಗೆ ಹೂಡಿಕೆ ಮಾಡಬಹುದು ಎಂಬುದನ್ನು ಪರಿಶೀಲಿಸಬೇಕಾಗುತ್ತದೆ" ಎಂದು ಅವರು ಸಲಹೆ ನೀಡುತ್ತಾರೆ.

"ನಿವೃತ್ತಿ ಜೀವನದ ಭದ್ರತೆಗಾಗಿ ಹೆಚ್ಚಿನ ಮೊತ್ತವನ್ನು ಡೆಬ್ಟ್ ಯೋಜನೆಗಳಲ್ಲಿ ಹೂಡಬೇಕು. ನಿವೃತ್ತರಾಗಲಿರುವವರು ತಾನು ಸಂಗ್ರಹಿಸಿದ ಹಣವನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳುವಂತಿಲ್ಲ. ನಿವೃತ್ತಿಯ ನಂತರ ಯಾವುದೇ ನಿರಂತರ ಆದಾಯ ಇರದ ಕಾರಣ ನಿವೃತ್ತಿ ಜೀವನಕ್ಕೆ ಉಪಯೋಗವಾಗುವಂತಹ ನಿರ್ದಿಷ್ಟ ಯೋಜನೆಗಳಲ್ಲಿಯೇ ಹಣ ತೊಡಗಿಸಬೇಕು" ಎನ್ನುತ್ತಾರೆ ಔಗೇನ್ ವೆಲ್ಥ್ ಮ್ಯಾನೇಜಮೆಂಟ್ ಸಂಸ್ಥೆಯ ಸಂಸ್ಥಾಪಕ ಆದಿತ್ಯ ಮಾರು.

ನಿವೃತ್ತ ಜೀವನಕ್ಕಾಗಿ ಯಾವ ವಿಧಾನಗಳಲ್ಲಿ ಹೂಡಿಕೆ ಮಾಡಬೇಕು?

ನಿವೃತ್ತ ಜೀವನಕ್ಕಾಗಿ ಯಾವ ವಿಧಾನಗಳಲ್ಲಿ ಹೂಡಿಕೆ ಮಾಡಬೇಕು?

ನಿವೃತ್ತಿ ಜೀವನದಲ್ಲಿ ನಿರಂತರ ಆದಾಯ ಪಡೆಯುವಂತಾಗಲು ಹಲವಾರು ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು. ಆದರೆ ಈ ಎಲ್ಲ ಯೋಜನೆಗಳಲ್ಲಿ ತೆರಿಗೆ ವಿನಾಯಿತಿ ಸೌಲಭ್ಯ ಸಿಗಬಹುದು ಎಂದು ಹೇಳಲಾಗದು.

ನೆಮ್ಮದಿಯ ನಿವೃತ್ತಿ ಜೀವನಕ್ಕಾಗಿ ಆಯ್ದುಕೊಳ್ಳಬಹುದಾದ 10 ಉತ್ತಮ ಯೋಜನೆಗಳನ್ನು ಈ ಅಂಕಣದಲ್ಲಿ ತಿಳಿಸಲಾಗಿದೆ.

1. ಸ್ಥಿರ ಠೇವಣಿ ಯೋಜನೆ (ಎಫ್‌ಡಿ)

1. ಸ್ಥಿರ ಠೇವಣಿ ಯೋಜನೆ (ಎಫ್‌ಡಿ)

ನಿಶ್ಚಿತ ಠೇವಣಿ ಅಥವಾ ಫಿಕ್ಸೆಡ್ ಡಿಪಾಸಿಟ್‌ಗಳು ನಿವೃತ್ತ ಜೀವನದಲ್ಲಿ ನಿರಂತರ ಆದಾಯ ಪಡೆಯಲು ಉತ್ತಮ ವಿಧಾನವಾಗಿವೆ. ಇವುಗಳಲ್ಲಿ ಆದಾಯದ ಸ್ಥಿರತೆ ಇರುವುದರಿಂದ ನಿವೃತ್ತರಿಗೆ ಇವು ಸಹಕಾರಿಯಾಗಿವೆ. ಎಫ್‌ಡಿ ಬಡ್ಡಿದರಗಳು ವಿವಿಧ ಬ್ಯಾಂಕುಗಳಲ್ಲಿ ಬೇರೆ ತೆರನಾಗಿರುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅಂಚೆ ಕಚೇರಿ ಶಾಖೆಗಳು ಹಾಗೂ ಕಂಪನಿಗಳಲ್ಲಿ ಸಹ ಎಫ್‌ಡಿ ಯೋಜನೆಗಳಿವೆ. ಆದರೆ ಕಾರ್ಪೊರೇಟ್ ಸಂಸ್ಥೆಗಳಲ್ಲಿನ ಹೂಡಿಕೆಯ ಆದಾಯ ಖಾತರಿದಾಯಕವಾಗಿರುವುದಿಲ್ಲ.

2. ಹಿರಿಯ ನಾಗರಿಕರ ಉಳಿತಾಯ ಯೋಜನೆ

2. ಹಿರಿಯ ನಾಗರಿಕರ ಉಳಿತಾಯ ಯೋಜನೆ

60 ವರ್ಷ ವಯಸ್ಸಾದ ಬಳಿಕವೇ ಈ ಹಿರಿಯ ನಾಗರಿಕರ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಬಹುದು. ಯಾವುದೇ ವ್ಯಕ್ತಿ ಸ್ವಯಂ ನಿವೃತ್ತಿ ಪಡೆದಲ್ಲಿ ೫೫ನೇ ವಯಸ್ಸಿನಲ್ಲಿಯೇ ಈ ಯೋಜನೆ ಪಡೆದುಕೊಳ್ಳಲು ಅವಕಾಶವಿದೆ. ಓರ್ವ ವ್ಯಕ್ತಿ ವೈಯಕ್ತಿಕವಾಗಿ ಅಥವಾ ಜಂಟಿಯಾಗಿ ಗರಿಷ್ಠ 15 ಲಕ್ಷ ರೂ.ಗಳನ್ನು (ಸಾವಿರದ ಗುಣಕಗಳಲ್ಲಿ) ಯೋಜನೆಯಲ್ಲಿ ತೊಡಗಿಸಬಹುದು. ಇದರಲ್ಲಿ ಆದಾಯ ತೆರಿಗೆ ಕಾಯ್ದೆ ೮೦ಸಿ ಪ್ರಕಾರ ತೆರಿಗೆ ವಿನಾಯಿತಿ ಸೌಲಭ್ಯವಿದೆ. 2018ರ ಡಿಸೆಂಬರ್ ನಲ್ಲಿ ಕೊನೆಗೊಳ್ಳುವ ತ್ರೈಮಾಸಿಕದ ಪ್ರಕಾರ ಈ ಯೋಜನೆಯಲ್ಲಿ ಶೇ. 8.7 ಬಡ್ಡಿದರ ನಿಗದಿಪಡಿಸಲಾಗಿದೆ.

3. ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ

3. ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ

ಡಿಸೆಂಬರ್ ತ್ರೈಮಾಸಿಕದಲ್ಲಿ ಕೊನೆಗೊಳ್ಳುವ ಅವಧಿಯ ಪ್ರಕಾರ ಈ ಯೋಜನೆಯಲ್ಲಿ ವಾರ್ಷಿಕ ಶೇ. 7.7 ರಷ್ಟು ಬಡ್ಡಿದರ ನಿಗದಿಪಡಿಸಲಾಗಿದೆ. ಆಂಚೆ ಕಚೇರಿ ಮಾಸಿಕ ಆದಾಯ ಯೋಜನೆಯ ಪಕ್ವತಾ ಅವಧಿ ಐದು ವರ್ಷಗಳಾಗಿದ್ದು, ಏಕವ್ಯಕ್ತಿ ಖಾತೆಯಲ್ಲಿ ಗರಿಷ್ಠ 4.5 ಲಕ್ಷ ರೂ. ಹಾಗೂ ಜಂಟಿ ಖಾತೆಯಾದರೆ ಗರಿಷ್ಠ 9 ಲಕ್ಷ ರೂ. ಹೂಡಿಕೆ ಮಾಡಬಹುದು. ಇದರಲ್ಲಿ ಬರುವ ಆದಾಯ ತೆರಿಗೆಗೆ ಒಳಪಟ್ಟಿರುತ್ತದೆ.

4. ಮಾಸಿಕ ಆದಾಯ ಯೋಜನೆಗಳು

4. ಮಾಸಿಕ ಆದಾಯ ಯೋಜನೆಗಳು

ಮಾಸಿಕ ಆದಾಯ ಯೋಜನೆಗಳಲ್ಲಿ ಬಹುತೇಕ ಮೊತ್ತವನ್ನು ಡೆಬ್ಟ್ ಫಂಡ್‌ಗಳಲ್ಲಿ ಹೂಡಲಾಗುತ್ತದೆ. ಹೀಗಾಗಿ ನಿವೃತ್ತರಿಗೆ ಈ ಯೋಜನೆಗಳು ಸುರಕ್ಷಿತ ಆದಾಯ ನೀಡಬಲ್ಲವು.
ಮಾಸಿಕ ಆದಾಯ ಯೋಜನೆಗಳ ಬಗ್ಗೆ ಎಸ್ಸೆಲ್ ವೆಲ್ಥ್ ಸರ್ವಿಸಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಸಿಇಓ ಬ್ರಿಜೇಶ ಪರ್ನಾಮಿ ಹೀಗೆ ಹೇಳುತ್ತಾರೆ;
"ಮಾಸಿಕ ಆದಾಯ ಯೋಜನೆಗಳು ಕಡಿಮೆ ರಿಸ್ಕ್ ಹೊಂದಿದ್ದು, ಉತ್ತಮ ಆದಾಯದೊಂದಿಗೆ ಬೇಕೆಂದಾಗ ಹಣ ಹಿಂಪಡೆಯುವ ಸೌಲಭ್ಯ ಹೊಂದಿವೆ. ನಿವೃತ್ತರು ಮಾಸಿಕ, ತ್ರೈಮಾಸಿಕ ಅಥವಾ ವಾರ್ಷಿಕ ಕಂತುಗಳಲ್ಲಿ ನಿರಂತರ ಆದಾಯ ಪಡೆಯಲು ಈ ಯೋಜನೆಗಳು ಅನುಕೂಲಕರವಾಗಿವೆ."

5. ಇಕ್ವಿಟಿಗಳಲ್ಲಿ ಹೂಡಿಕೆ

5. ಇಕ್ವಿಟಿಗಳಲ್ಲಿ ಹೂಡಿಕೆ

"ಇಕ್ವಿಟಿಗಳಲ್ಲಿ ನೇರವಾಗಿ ಅಥವಾ ಮ್ಯೂಚುವಲ್ ಫಂಡ್‌ಗಳ ಮೂಲಕ ಹೂಡಿಕೆ ಮಾಡಬಹುದು. ಪ್ರಥಮ ಬಾರಿಯ ಹೂಡಿಕೆದಾರರು ಅಥವಾ ಸಣ್ಣ ಹೂಡಿಕೆದಾರರು ಆರಂಭದಲ್ಲಿ ಮ್ಯೂಚುವಲ್ ಫಂಡ್ ಆಯ್ದುಕೊಳ್ಳುವುದು ಉತ್ತಮ. ಪ್ರಸ್ತುತ ಆಯಾ ವ್ಯಕ್ತಿಯ ರಿಸ್ಕ್ ಪ್ರೊಫೈಲ್ ಆಧರಿಸಿ ಶೇಕಡಾವಾರು ಮೊತ್ತವನ್ನು ಇಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ತೊಡಗಿಸಲಾಗುತ್ತದೆ. ಆದಾಗ್ಯೂ ನಿವೃತ್ತಿ ಜೀವನಕ್ಕಾಗಿ ಸಂಗ್ರಹಿಸಿದ ಒಟ್ಟು ಮೊತ್ತದಲ್ಲಿ ಶೇ. ೨೦ ರಿಂದ ೨೫ ರಷ್ಟನ್ನು ಇಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ತೊಡಗಿಸಬಹುದು" ಎನ್ನುತ್ತಾರೆ ಮೇರಿ ಪೂಂಜಿ ಐಎಂಎಫ್ ಪ್ರೈವೇಟ್ ಲಿಮಿಟೆಡ್‌ನ ಸಿಇಓ ಪ್ರದೀಪ ಅಗರ್ವಾಲ್.

6. ಮ್ಯೂಚುವಲ್ ಫಂಡ್‌ಗಳು

6. ಮ್ಯೂಚುವಲ್ ಫಂಡ್‌ಗಳು

ನುರಿತ ಬಂಡವಾಳ ಪರಿಣಿತರು ನಿರ್ವಹಣೆ ಮಾಡುವ ಮ್ಯೂಚುವಲ್ ಫಂಡ್ ಯೋಜನೆಗಳು ಹೂಡಿಕೆಗೆ ಅತ್ಯುತ್ತಮ ಆಯ್ಕೆಯಾಗಿವೆ.
ಮ್ಯೂಚುವಲ್ ಫಂಡ್‌ಗಳ ಕುರಿತು ಫೈವ್ ನಾನ್ಸ್ ಡಾಟ್ ಕಾಂ ಸಂಸ್ಥೆಯ ಸಿಇಓ ದಿನೇಶ ರೋಹಿರಾ ಹೇಳುವುದು ಹೀಗೆ;
"ಮ್ಯೂಚುವಲ್ ಫಂಡ್‌ಗಳಲ್ಲಿನ ಕ್ರಮಬದ್ಧ ಹಣ ಹಿಂತೆಗೆತ ಹೂಡಿಕೆ ಯೋಜನೆಯನ್ನು ಆಯ್ದುಕೊಂಡಲ್ಲಿ ಪ್ರತಿ ತಿಂಗಳು ನಿರಂತರ ಹಾಗೂ ಸುಸ್ಥಿರ ಆದಾಯ ಪಡೆಯಲು ಸಾಧ್ಯ. ದೀರ್ಘಾವಧಿಯಲ್ಲಿ ಹಣದುಬ್ಬರವನ್ನು ಸರಿದೂಗಿಸುವ ಪ್ರಮಾಣದಲ್ಲಿ ಆದಾಯವನ್ನು ಸಹ ನಿರೀಕ್ಷಿಸಬಹುದು.
ಕ್ರಮಬದ್ಧ ಹಣ ಹಿಂತೆಗೆತ ಯೋಜನೆಯಲ್ಲಿ ಹೂಡಿಕೆ ಮೊತ್ತದಿಂದ ಪ್ರತಿತಿಂಗಳು ನಿರ್ದಿಷ್ಟ ಮೊತ್ತದ ಹಣವನ್ನು ಹಿಂಪಡೆಯಬಹುದು. ಇವು ಕ್ರಮಬದ್ಧ ಹೂಡಿಕೆ ಯೋಜನೆಗಳ ವಿರುದ್ಧ ದಿಕ್ಕಿನಲ್ಲಿ ಕಾರ್ಯನಿರ್ವಹಿಸುತ್ತವೆ. ಕ್ರಮಬದ್ಧ ಹೂಡಿಕೆ ವಿಧಾನದಲ್ಲಿ ಪ್ರತಿತಿಂಗಳು ಸಣ್ಣ ಮೊತ್ತವನ್ನು ತೊಡಗಿಸಬೇಕಾಗುತ್ತದೆ. ಆದರೆ ಕ್ರಮಬದ್ಧ ಹಣ ಹಿಂತೆಗೆತ ವಿಧಾನದಲ್ಲಿ ಒಂದು ಬಾರಿ ದೊಡ್ಡ ಮೊತ್ತವನ್ನು ಹೂಡಿಕೆ ಮಾಡಿ ಪ್ರತಿ ತಿಂಗಳು ಸಣ್ಣ ಮೊತ್ತವನ್ನು ಹಿಂಪಡೆಯಬಹುದು."

7. ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್)

7. ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್)

ಪಿಪಿಎಫ್‌ನಲ್ಲಿ ಮೂರು ರೀತಿಯ ತೆರಿಗೆ ವಿನಾಯಿತಿ ಸೌಲಭ್ಯವಿದೆ. ಇದರಲ್ಲಿನ ಮ್ಯಾಚುರಿಟಿ ಮೊತ್ತ ಹಾಗೂ ಸಂಪೂರ್ಣ ಬಡ್ಡಿ ಆದಾಯಕ್ಕೆ ತೆರಿಗೆ ವಿನಾಯಿತಿ ಇರುತ್ತದೆ. ಪಿಪಿಎಫ್ ೧೫ ವರ್ಷಗಳ ಲಾಕ್ ಇನ್ ಅವಧಿ ಹೊಂದಿರುತ್ತದೆ.

8. ಟ್ಯಾಕ್ಸ್ ಫ್ರೀ ಬಾಂಡ್‌ಗಳು

8. ಟ್ಯಾಕ್ಸ್ ಫ್ರೀ ಬಾಂಡ್‌ಗಳು

ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಟ್ಯಾಕ್ಸ್ ಫ್ರೀ ಬಾಂಡ್‌ಗಳು ಲಭ್ಯವಿವೆ. ದೀರ್ಘಾವಧಿಯಲ್ಲಿ ತೆರಿಗೆ ರಹಿತ ಆದಾಯ ನೀಡಬಲ್ಲ ಇವು ನಿವೃತ್ತರಿಗೆ ಅನುಕೂಲಕರವಾಗಿವೆ.
"ಹೆಚ್ಚಿನ ತೆರಿಗೆ ಪಾವತಿಸುವ ವರ್ಗಕ್ಕೆ ಸೇರುವ ಹಿರಿಯ ನಾಗರಿಕರಿಗೆ ಟ್ಯಾಕ್ಸ್ ಫ್ರೀ ಬಾಂಡ್‌ಗಳು ಉತ್ತಮವಾಗಿವೆ. ಸರಿಯಾಗಿ ಯೋಜನೆ ರೂಪಿಸಿದಲ್ಲಿ ಪಾರದರ್ಶಕವಾಗಿ ನಿರಂತರ ಆದಾಯ ಪಡೆಯಲು ಇವು ಅನುಕೂಲಕರವಾಗಿವೆ" ಎನ್ನುತ್ತಾರೆ ರೈಟ್ ಹೊರೈಜನ್ಸ್ ಸ್ಥಾಪಕ ಹಾಗೂ ಸಿಇಓ ಅನೀಲ ರೇಗೊ.
ಹೂಡಿಕೆ ಹಿಂತೆಗೆತದ ಸಮಸ್ಯೆ ಹೊಂದಿರುವುದರಿಂದ ಟ್ಯಾಕ್ಸ್ ಫ್ರೀ ಬಾಂಡ್‌ಗಳು ಅಷ್ಟೊಂದು ಆಕರ್ಷಕವಾಗಿಲ್ಲ ಎಂಬುದು ಇನ್ನು ಕೆಲ ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ.
"ಟ್ಯಾಕ್ಸ್ ಫ್ರೀ ಬಾಂಡ್‌ಗಳು ಸಾಮಾನ್ಯವಾಗಿ ದೀಘಾವಧಿಯ ಲಾಕ್ ಇನ್ ಅವಧಿ ಹೊಂದಿರುವುದರಿಂದ ತುರ್ತು ಸಂದರ್ಭಗಳಲ್ಲಿ ಹೂಡಿಕೆ ಹಿಂತೆಗೆಯುವುದು ಕಷ್ಟಕರ. ಹೀಗಾಗಿ ಇದರಲ್ಲಿ ಹೂಡಿಕೆ ಅಷ್ಟು ಸಮಂಜಸವಲ್ಲ" ಎಂಬುದು ಓರೋವೆಲ್ಥ್ ಸಂಸ್ಥೆಯ ಸಹ ಸಂಸ್ಥಾಪಕ ವಿಜಯ ಕಪ್ಪಾ ಅವರ ಅಭಿಪ್ರಾಯವಾಗಿದೆ.

9. ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್)

9. ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್)

ನಿವೃತ್ತಿ ಜೀವನಕ್ಕಾಗಿ ತಮ್ಮ ವೃತ್ತಿ ಜೀವನದಾದ್ಯಂತ ಹಣ ಉಳಿತಾಯ ಮಾಡಲು ಎನ್‌ಪಿಎಸ್ ಯೋಜನೆಯನ್ನು ಕೇಂದ್ರ ಸರಕಾರ ಆರಂಭಿಸಿದೆ. ನಿವೃತ್ತಿಯ ಸಮಯದಲ್ಲಿ ಎನ್‌ಪಿಎಸ್‌ನಲ್ಲಿ ಸಂಗ್ರಹವಾದ ಒಟ್ಟು ಮೊತ್ತದ ಶೇ. ೬೦ ರಷ್ಟನ್ನು ಏಕಗಂಟಿನಲ್ಲಿ ಹಿಂಪಡೆಯಬಹುದು ಹಾಗೂ ಇನ್ನುಳಿದ ಶೇ. ೪೦ ರಷ್ಟನ್ನು ಪಿಂಚಣಿಗಾಗಿ ಬಿಡಬಹುದು. ಇದರಲ್ಲಿ ೫೦ ಸಾವಿರ ರೂಪಾಯಿ ಮೊತ್ತಕ್ಕೆ ಹೆಚ್ಚುವರಿ ತೆರಿಗೆ ವಿನಾಯಿತಿ ಇರುತ್ತದೆ.

10.	ವರ್ಷಾಶನ ಯೋಜನೆಗಳು

10. ವರ್ಷಾಶನ ಯೋಜನೆಗಳು

ವರ್ಷಾಶನ ಯೋಜನೆಗಳು ತೆರಿಗೆ ಪಾವತಿಯನ್ನು ಮುಂದೂಡಲಾದ ದೀರ್ಘಾವಧಿ ಒಪ್ಪಂದ ಯೋಜನೆಗಳಾಗಿವೆ. ಏಕಗಂಟಿನ ಹೂಡಿಕೆಗೆ ನಿರಂತರ ಆದಾಯವನ್ನು ಇವು ನೀಡುತ್ತವೆ.
ವರ್ಷಾಶನ ಯೋಜನೆಗಳ ಬಗ್ಗೆ ಎಸ್ಸೆಲ್ ವೆಲ್ಥ್ ಸರ್ವಿಸಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಸಿಇಓ ಬ್ರಿಜೇಶ ಪರ್ನಾಮಿ ಹೀಗೆ ಹೇಳುತ್ತಾರೆ;
"ಮುಂದೂಡಲಾದ ವರ್ಷಾಶನ ಯೋಜನೆ ಹಾಗೂ ತಕ್ಷಣದ ವರ್ಷಾಶನ ಯೋಜನೆ ಹೀಗೆ ಎರಡು ರೀತಿಯ ವರ್ಷಾಶನ ಯೋಜನೆಗಳು ಲಭ್ಯವಿವೆ. ಮುಂದೂಡಲಾದ ವರ್ಷಾಶನ ಯೋಜನೆಯಲ್ಲಿ ಏಕಗಂಟಿನಲ್ಲಿ ಅಥವಾ ನಿಗದಿತ ಕಂತುಗಳಲ್ಲಿ ಹೂಡಿಕೆ ಮಾಡಬಹುದು. ಕಂತು ಪಾವತಿ ಅವಧಿ ಮುಗಿದ ನಂತರ ಅಥವಾ ಮ್ಯಾಚುರಿಟಿ ಆದ ನಂತರ ಇದರಲ್ಲಿ ಪಿಂಚಣಿ ಆರಂಭವಾಗುತ್ತದೆ. ತಕ್ಷಣದ ವರ್ಷಾಶನ ಯೋಜನೆಯಲ್ಲಿ ಏಕಗಂಟಿನಲ್ಲಿ ಒಂದು ಬಾರಿ ಹೂಡಿಕೆ ಮಾಡಿ ತಕ್ಷಣವೇ ಪಿಂಚಣಿ ಪಡೆಯಲಾರಂಭಿಸಬಹುದು. ಹೂಡಿಕೆಯ ಮೊತ್ತದ ಆಧಾರದಲ್ಲಿ ಪಿಂಚಣಿ ಮೊತ್ತವನ್ನು ನಿರ್ಧರಿಸಲಾಗುತ್ತದೆ."

English summary

10 Investment Options That May Help You Live A Tension Free Life

Retirement brings the onset of the winter of life. You are no longer in active service, there is no regular source of income and even your health may start failing.
Story first published: Monday, October 8, 2018, 11:28 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X