ಫೆ.1, 2019 ರಂದು ಮಂಡಿಸಲಾದ ಮಧ್ಯಂತರ ಬಜೆಟ್‌ನಲ್ಲಿ ತೆರಿಗೆ ವಿಷಯಕ್ಕೆ ಸಂಬಂಧಪಟ್ಟಂತೆ ತೀರಾ ದೊಡ್ಡ ಘೋಷಣೆಗಳು ಇರಲಿಲ್ಲ. ಸಾರ್ವತ್ರಿಕ ಚುನಾವಣೆಯ ನಂತರ ಬರುವ ಹೊಸ ಸರಕಾರ 2019ರ ಜುಲೈನಲ್ಲಿ ಮತ್ತೆ ಹೊಸ ಬಜೆಟ್ ಮಂಡಿಸುತ್ತದೆ.
ದೇಶದ ಸಾಮಾನ್ಯ ಜನರಿಗೆ ಬಜೆಟ್‌ನಲ್ಲಿ ಯಾವೆಲ್ಲ ರೀತಿಯ ತೆರಿಗೆ ವಿನಾಯಿತಿಗಳು ಸಿಗಬಹುದು ಎಂಬ ವಿಷಯ ಬಗ್ಗೆ ಬಜೆಟ್‌ಗೆ ಮುನ್ನ ಬಹುದೊಡ್ಡ ಚರ್ಚೆಯ ವಿಷಯವಾಗಿತ್ತು. ಆದರೆ ಫೆ.1, 2019 ರಂದು ಮಂಡಿಸಲಾದ ಮಧ್ಯಂತರ ಬಜೆಟ್‌ನಲ್ಲಿ ತೆರಿಗೆ ವಿಷಯಕ್ಕೆ ಸಂಬಂಧಪಟ್ಟಂತೆ ತೀರಾ ದೊಡ್ಡ ಘೋಷಣೆಗಳು ಇರಲಿಲ್ಲ. ಸಾರ್ವತ್ರಿಕ ಚುನಾವಣೆಯ ನಂತರ ಬರುವ ಹೊಸ ಸರಕಾರ 2019ರ ಜುಲೈನಲ್ಲಿ ಮತ್ತೆ ಹೊಸ ಬಜೆಟ್ ಮಂಡಿಸುತ್ತದೆ ಎಂಬ ಕಾರಣದಿಂದಲೇ ಕೇಂದ್ರ ಸರಕಾರ ತೆರಿಗೆದಾರರಿಗೆ 'ಮಧ್ಯಂತರ' ರಿಲೀಫ್ ಮಾತ್ರ ನೀಡಿದೆ ಎನಿಸುತ್ತದೆ. ಈ ಬಜೆಟ್‌ನಲ್ಲಿ ಸಾಮಾನ್ಯ ತೆರಿಗೆದಾರರಿಗೆ ಸಿಕ್ಕ ಕೆಲ ತೆರಿಗೆ ವಿನಾಯಿತಿಗಳು ಹೀಗಿವೆ. ಭಾರತದಲ್ಲಿ ಈ 25 ಆದಾಯಗಳಿಗೆ ತೆರಿಗೆ ಇಲ್ಲ!
ತೆರಿಗೆ ದರಗಳು
ತೆರಿಗೆ ದರ ಅಥವಾ ಸ್ಲ್ಯಾಬ್‌ಗಳಲ್ಲಿ ಯಾವುದೇ ಬದಲಾವಣೆಯನ್ನು ಮಾಡಲಾಗಿಲ್ಲ. ಆದಾಗ್ಯೂ ವಾರ್ಷಿಕ 5 ಲಕ್ಷ ರೂ.ಗಳವರೆಗೆ ಆದಾಯ ಹೊಂದಿರುವವರಿಗೆ 12,500 ರೂ. ತೆರಿಗೆ ಕಡಿತವನ್ನು ಘೋಷಣೆ ಮಾಡಲಾಗಿದೆ. ಇದಕ್ಕೂ ಮುನ್ನ 3.5 ಲಕ್ಷ ರೂ.ಗಳವರೆಗೆ ಆದಾಯ ಹೊಂದಿರುವವರಿಗೆ 2,500 ರೂ. ತೆರಿಗೆ ವಿನಾಯಿತಿ ಸೌಲಭ್ಯ ನೀಡಲಾಗುತ್ತಿತ್ತು. ಆದರೆ ತೆರಿಗೆಗೆ ಒಳಪಡುವ ಆದಾಯ 5 ಲಕ್ಷ ರೂ. ಮೀರಿದಲ್ಲಿ ಯಾವುದೇ ವಿನಾಯಿತಿ ಅನ್ವಯಿಸುವುದಿಲ್ಲ ಎಂಬುದು ಗೊತ್ತಿರಲಿ. ಮಧ್ಯಂತರ ಬಜೆಟ್ 2019: ವಿಶ್ಲೇಷಕರು/ಅರ್ಥಶಾಸ್ತ್ರಜ್ಞರಿಂದ ಟೀಕೆಗೆ ಒಳಪಟ್ಟ 10 ಪ್ರಮುಖ ಯೋಜನೆಗಳು
ಸ್ಟ್ಯಾಂಡರ್ಡ ಡಿಡಕ್ಷನ್ ಮಟ್ಟ ಹೆಚ್ಚಳ
ಈ ಬಜೆಟ್‌ನಲ್ಲಿ ಸಂಬಳ ಪಡೆಯುವ ಕರದಾತರಿಗಾಗಿ ಸ್ಟ್ಯಾಂಡರ್ಡ ಡಿಡಕ್ಷನ್ ಅನ್ನು ಮತ್ತೆ ಜಾರಿಗೆ ತರಲಾಗಿದೆ. ಸ್ಟ್ಯಾಂಡರ್ಡ ಡಿಡಕ್ಷನ್ ಮಟ್ಟವನ್ನು 40 ಸಾವಿರ ರೂ. ಗಳಿಂದ 50 ಸಾವಿರ ರೂ.ಗಳಿಗೆ ಹೆಚ್ಚಿಸುವ ಪ್ರಸ್ತಾಪ ಮಾಡಲಾಗಿದೆ. ಬಹುತೇಕ ಎಲ್ಲ ಸಂಬಳ ಪಡೆಯುವ ಉದ್ಯೋಗಿಗಳ ಸಮೂಹಕ್ಕೆ ಇದರ ಲಾಭ ಸಿಗಲಿದೆ. ಇದರಿಂದ ಸುಮಾರು 2080 ರೂ.ಗಳಿಂದ 3588 ರೂ. ಗಳವರೆಗೆ ತೆರಿಗೆ ವಿನಾಯಿತಿ ಸಿಗಬಹುದು. (ಎಲ್ಲ ಸರ್ಚಾರ್ಜ್ ಹಾಗೂ ಸೆಸ್ ಸೇರಿಸಿ)
ಮನೆ ಆಸ್ತಿ
ಒಬ್ಬ ವ್ಯಕ್ತಿ ಎರಡು ಅಥವಾ ಅದಕ್ಕೂ ಹೆಚ್ಚು ಮನೆಗಳ ಒಡೆಯನಾಗಿದ್ದಲ್ಲಿ ಒಂದು ಮನೆಯನ್ನು ಮಾತ್ರ ಆತನ ವಾಸದ ಮನೆ ಎಂದು ಪರಿಗಣಿಸಲಾಗುತ್ತಿತ್ತು. ಇನ್ನುಳಿದ ಮನೆಗಳನ್ನು ಬಾಡಿಗೆ ಕೊಟ್ಟಿಲ್ಲವಾದರೂ ಅವನ್ನು ಬಾಡಿಗೆಗೆ ನೀಡಲಾಗಿದೆ ಎಂದೇ ಪರಿಗಣಿಸಿ ನಿರ್ದಿಷ್ಟ ಮೊತ್ತದ ಬಾಡಿಗೆ ಲೆಕ್ಕದಲ್ಲಿ ತೆರಿಗೆ ವಿಧಿಸಲಾಗುತ್ತಿತ್ತು.
ಆದರೆ ಪ್ರಸ್ತುತ 2019ರ ಮಧ್ಯಂತರ ಬಜೆಟ್‌ನಲ್ಲಿ ಒಬ್ಬ ವ್ಯಕ್ತಿಗೆ ಎರಡು ಮನೆಗಳನ್ನು ವಾಸದ ಮನೆಗಳಾಗಿ ಪರಿಗಣಿಸುವ ಘೋಷಣೆ ಮಾಡಲಾಗಿದೆ. ಅಂದರೆ ಎರಡನೆ ಮನೆಯನ್ನು ಬಾಡಿಗೆಗೆ ನೀಡಲಾದ ಮನೆ ಎಂದು ಪರಿಗಣಿಸಲಾಗುವುದಿಲ್ಲ ಹಾಗೂ ಅದಕ್ಕೆ ಯಾವುದೇ ತೆರಿಗೆ ನೀಡಬೇಕಿಲ್ಲ.
ಯಾವುದೇ ಗೃಹಸಾಲವನ್ನು ಹೊಂದಿರದೆ ಇರುವ ಎಲ್ಲ ತೆರಿಗೆ ಪಾವತಿದಾರರಿಗೆ ಈ ಎರಡು ವಾಸದ ಮನೆ ತೆರಿಗೆ ವಿನಾಯಿತಿ ಸೌಲಭ್ಯ ಅನ್ವಯಿಸುತ್ತದೆ. ಆದರೆ ಗೃಹಸಾಲ ಪಡೆದು ಅದರ ಬಡ್ಡಿಗೆ ತೆರಿಗೆ ವಿನಾಯಿತಿ ಕ್ಲೇಮ್ ಮಾಡುವವರಿಗೆ ಈ ನಿಯಮ ವಿರುದ್ಧ ಪರಿಣಾಮ ಬೀರುವಂತಿದೆ. ಈಗಿನ ನಿಯಮಗಳನ್ವಯ ಸ್ವಂತ ವಾಸದ ಎರಡು ಮನೆಗಳ ಗೃಹಸಾಲದ ಮೇಲೆ ಗರಿಷ್ಠ 2 ಲಕ್ಷ ರೂ. ಮೊತ್ತಕ್ಕೆ ಮಾತ್ರ ತೆರಿಗೆ ವಿನಾಯಿತಿ ಲಭಿಸುತ್ತದೆ.
ಪ್ರಸ್ತುತ ಮನೆ ಕಟ್ಟಿದ ನಂತರ 'ಕಂಪ್ಲೀಶನ್ ಸರ್ಟಿಫಿಕೇಟ್' ಪಡೆದ ಹಣಕಾಸು ವರ್ಷದ ಕೊನೆಯಲ್ಲಿ ಮನೆಯ ಮೌಲ್ಯವನ್ನು ಶೂನ್ಯವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಇದಕ್ಕೆ ಯಾವುದೇ ತೆರಿಗೆ ಕಟ್ಟಬೇಕಿಲ್ಲ. ಈಗ ಈ ತೆರಿಗೆ ರಹಿತ ಅವಧಿಯನ್ನು 1 ವರ್ಷದಿಂದ 2 ವರ್ಷಗಳಿಗೆ ಹೆಚ್ಚಿಸುವ ಪ್ರಸ್ತಾವನೆ ಇದೆ.
ಬಡ್ಡಿ ಹಾಗೂ ಬಾಡಿಗೆ ಆದಾಯಕ್ಕೆ ಟಿಡಿಎಸ್
ಟಿಡಿಎಸ್ ಅನ್ವಯಿಸುವ ಪ್ರಸ್ತುತ 10 ಸಾವಿರ ರೂ. ಬಡ್ಡಿ ಆದಾಯ ಮಿತಿಯನ್ನು 40 ಸಾವಿರ ರೂಪಾಯಿಗಳಿಗೆ ಹೆಚ್ಚಿಸುವ ಪ್ರಸ್ತಾವನೆ ಇದೆ (ಸೆಕ್ಯೂರಿಟೀಸ್‌ಗಳ ಮೇಲೆ ಸಿಗುವ ಬಡ್ಡಿ ಹೊರತು ಪಡಿಸಿ). ಇದು ಸಣ್ಣ ಆದಾಯದ, ಕೆಲಸಕ್ಕೆ ಹೋಗದ ಮನೆ ಹೆಣ್ಣು ಮಕ್ಕಳು ಹಾಗೂ ಪಿಂಚಣಿದಾರರಿಗೆ ದೊಡ್ಡ ರಿಲೀಫ್ ಆಗಿದೆ. ಬರೀ ಟ್ಯಾಕ್ಸ್ ರಿಫಂಡ್ ಪಡೆಯಲೆಂದೇ ಟ್ಯಾಕ್ಸ್ ರಿಟರ್ನ ಫೈಲ್ ಮಾಡುವ ಗೋಳು ಇನ್ನು ತಪ್ಪಲಿದೆ.
ಅಲ್ಲದೆ ಬಾಡಿಗೆ ಆದಾಯದ ಮೇಲೆ ವಿಧಿಸಲಾಗುವ ಟಿಡಿಎಸ್ ಮಿತಿಯನ್ನು ಈಗಿರುವ ಮಟ್ಟದ 1,80,000 ರೂ.ಗಳಿಂದ 2,40,000 ರೂ.ಗಳಿಗೆ ಹೆಚ್ಚಿಸಲಾಗಿದೆ.
ಕ್ಯಾಪಿಟಲ್ ಗೇನ್ಸ್
ಪ್ರಸ್ತುತ ನಿಯಮಗಳ ಅನುಸಾರ ವಾಸದ ಮನೆಯನ್ನು ಮಾರಿದಾಗ ಸಿಗುವ ದೀರ್ಘಾವಧಿ ಕ್ಯಾಪಿಟಲ್ ಗೇನ್ಸ್ ಮೊತ್ತವನ್ನು ಮತ್ತೊಂದು ವಾಸದ ಮನೆ ಕೊಳ್ಳಲು ಹೂಡಿಕೆ ಮಾಡಿದ್ದಲ್ಲಿ ಸಂಪೂರ್ಣ ಮೊತ್ತಕ್ಕೆ ತೆರಿಗೆ ವಿನಾಯಿತಿ ನೀಡಲಾಗುತ್ತಿತ್ತು.
ಈಗ ಈ ಸೌಲಭ್ಯವನ್ನು ಮತ್ತೂ ವಿಸ್ತರಿಸಿ 2 ಕೋಟಿ ರೂ. ಮೊತ್ತದವರೆಗೆ 2 ವಾಸದ ಮನೆಗಳ ಕ್ಯಾಪಿಟಲ್ ಗೇನ್ಸ್‌ಗೆ ತೆರಿಗೆ ವಿನಾಯಿತಿ ನೀಡುವ ಪ್ರಸ್ತಾವನೆ ಇದೆ. ಈ ಸೌಲಭ್ಯ ಒಬ್ಬ ವ್ಯಕ್ತಿಗೆ ಜೀವನದಲ್ಲಿ ಒಮ್ಮೆ ಮಾತ್ರ ನೀಡಲಾಗುವುದು. ಈಗಿರುವ ಒಂದು ಆಸ್ತಿಯನ್ನು ಮಾರಿ ಬಂದ ಹಣವನ್ನು ಹಲವಾರು ಆಸ್ತಿಗಳ ಮೇಲೆ ಹೂಡಿಕೆ ಮಾಡುವುದು ಇನ್ನು ಸುಲಭವಾಗಲಿದೆ.
ಕೊನೆ ಮಾತು
ಸಾಮಾನ್ಯ ತೆರಿಗೆದಾರನಿಗೆ ಈ ಬಾರಿಯ ಮಧ್ಯಂತರ ಬಜೆಟ್‌ನಲ್ಲಿ ದೊಡ್ಡ ಕೊಡುಗೆಗಳು ಸಿಕ್ಕಿಲ್ಲವೆಂದೇ ಹೇಳಬಹುದು. ಅದರಲ್ಲೂ ಹೆಚ್ಚಿನ ಆದಾಯ ವರ್ಗದ ಜನಕ್ಕೆ ಯಾವುದೇ ಬೆನೆಫಿಟ್ ಇಲ್ಲ. ಮುಂಬರುವ ಬಜೆಟ್‌ಗಳಲ್ಲಿ ಈ ವರ್ಗದ ಜನರ ತೆರಿಗೆ ಹೊರೆ ಕಡಿಮೆ ಮಾಡಲು ಏನು ಮಾಡಲಾಗುತ್ತದೆ ಎಂಬುದನ್ನು ಕಾದು ನೋಡಬೇಕಷ್ಟೆ.


Click it and Unblock the Notifications