ನಮ್ಮ ಭವಿಷ್ಯದಲ್ಲಿ ಯಾವುದೇ ತೊಂದರೆ ಉಂಟಾಗಬಾರದು ಎಂಬ ಬಯಕೆಯನ್ನು ನಾವು ಹೊಂದಿದ್ದರೆ ಅದಕ್ಕಾಗಿ ಈಗಲೇ ತಯಾರಿ ಮಾಡುವುದು ಅತೀ ಮುಖ್ಯ ಎಂದು ಹಲವಾರು ತಜ್ಞರುಗಳು ಹೇಳುತ್ತಾರೆ. ನಾವು ಈಗಲೇ ಹಣ ಉಳಿತಾಯ ಮಾಡಿದರೆ ನಮ್ಮ ಮುಂದಿನ ಜೀವನ ಸರಳ, ಸರಾಗವಾಗಲಿದೆ, ಹಣಕಾಸಿನ ತುರ್ತು ಸ್ಥಿತಿ ಬಂದಾಗ ಹಣಕ್ಕಾಗಿ ಅಲೆದಾಡುವ, ಸಾಲ ಮಾಡುವ ಪರಿಸ್ಥಿತಿ ಬಂದೊದಗುವುದಿಲ್ಲ ಎಂಬುವುದು ಸಾಮಾನ್ಯ ಮಾತಾಗಿದೆ.
ಈ ಕಾರಣದಿಂದಾಗಿಯೇ ಹೂಡಿಕೆ ವಿಚಾರಕ್ಕೆ ಬಂದಾಗ ತೆರಿಗೆ ಉಳಿತಾಯ ಮಾಡುವ, ನಿವೃತ್ತಿ ಪ್ರಯೋಜನವನ್ನು ನೀಡುವ ಹೀಗೆ ನಮಗೆ ಯಾವುದರಿಂದ ಲಾಭ ಇದೆಯೋ ಅಲ್ಲಿ ಹೂಡಿಕೆ ಮಾಡುತ್ತೇವೆ. ಆದರೆ ನಾವು ನಮ್ಮ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಹೂಡಿಕೆ ಮಾಡುವುದನ್ನು ಮರೆಯುವುದು ಹೆಚ್ಚಲ್ಲವೇ?

ನಾವು ನಮ್ಮ ನಿವೃತ್ತಿ ಜೀವನದ ಬಗ್ಗೆ ಹೇಗೆ ಚಿಂತೆ ಹೊಂದಿರುತ್ತೇವೆಯೋ ಹಾಗೆಯೇ ನಮ್ಮ ಮಕ್ಕಳ ಭವಿಷ್ಯದ ಬಗ್ಗೆಯೂ ಚಿಂತೆ ಹೊಂದಿರಬೇಕು. ಮಕ್ಕಳ ಭವಿಷ್ಯಕ್ಕಾಗಿ, ಶಿಕ್ಷಣಕ್ಕಾಗಿ ನಾವು ಅವರು ಸಣ್ಣ ವಯಸ್ಸಿನಲ್ಲಿ ಇರುವಾಗಲೇ ಹೂಡಿಕೆ ಮಾಡಿದರೆ ಮುಂದೆ ಮಕ್ಕಳಿಗೆ ಮಾತ್ರವಲ್ಲ ಅದು ನಮಗೂ ಸಹಾಯಕವಾಗಲಿದೆ. ಅದಕ್ಕಾಗಿ ಎಷ್ಟು ಸಣ್ಣ ವಯಸ್ಸಿನಲ್ಲಿ ಹೂಡಿಕೆ ಮಾಡಲು ಸಾಧ್ಯವೋ ಆಗಲೇ ಮಾಡಿಬಿಡಬೇಕು. ನಿಮ್ಮ ಮಕ್ಕಳಿಗಾಗಿ ನೀವು ಮಾಡಬಹುದಾದ ಹೂಡಿಕೆ ಆಯ್ಕೆಗಳನ್ನು ನಾವಿಲ್ಲಿ ವಿವರಿಸಿದ್ದೇವೆ ಮುಂದೆ ಓದಿ....
1. ಸುಕನ್ಯಾ ಸಮೃದ್ಧಿ ಯೋಜನೆ
ಸುಕನ್ಯಾ ಸಮೃದ್ಧಿ ಯೋಜನೆಯು ಪೋಷಕರು ತಮ್ಮ ಹೆಣ್ಣು ಮಕ್ಕಳಿಗಾಗಿ ಹಣ ಉಳಿತಾಯ ಮಾಡಲು ಪ್ರೋತ್ಸಾಹವನ್ನು ನೀಡುವ ಯೋಜನೆಯಾಗಿದೆ. ನಿಮ್ಮ ಮಗಳಿಗೆ ಹತ್ತು ವರ್ಷವಾಗುವಾಗ ನೀವು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡಲು ಆರಂಭ ಮಾಡಬಹುದಾಗಿದೆ. ಅಂಚೆ ಕಚೇರಿ ಅಥವಾ ಬ್ಯಾಂಕ್‌ಗಳಲ್ಲಿ ನೀವು ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಯನ್ನು ತೆರೆಯಬಹುದಾಗಿದೆ.
ಈ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ವಾರ್ಷಿಕವಾಗಿ ಕನಿಷ್ಠ ಹೂಡಿಕೆ ಮಿತಿಯು ಒಂದು ಸಾವಿರ ರೂಪಾಯಿ ಆಗಿದೆ. ಹಾಗೆಯೇ ಗರಿಷ್ಠ ಹೂಡಿಕೆ ಮಿತಿಯು 1.5 ಲಕ್ಷ ರೂಪಾಯಿ ಆಗಿದೆ. ಸುಕನ್ಯಾ ಸಮೃದ್ಧಿ ಯೋಜನೆಯು ಸರ್ಕಾರದ ಯೋಜನೆಯಾಗಿದೆ. ಈ ಯೋಜನೆಯು ಹೆಣ್ಣು ಮಕ್ಕಳಿಗಾಗಿ ಪೋಷಕರು ಹೂಡಿಕೆ ಮಾಡಲು ಉತ್ತೇಜನ ನೀಡುತ್ತದೆ.
2. ಸವರನ್ ಗೋಲ್ಡ್ ಬಾಂಡ್ (ಎಸ್‌ಜಿಬಿ)
ಮಾರುಕಟ್ಟೆಯಲ್ಲಿ ಯಾವುದೇ ಸ್ಥಿತಿ ಇದ್ದರೂ ಕೂಡಾ ಚಿನ್ನವನ್ನು ಎಂದಿಗೂ ಕೂಡಾ ಸುರಕ್ಷಿತ ಹೂಡಿಕೆ ಎಂದೇ ಪರಿಗಣನೆ ಮಾಡಲಾಗುತ್ತದೆ. ತುರ್ತು ಸಂದರ್ಭ ಬಂದಾಗ ನಮ್ಮ ಕೊನೆಯ ಆಯ್ಕೆ ಎಂದಿಗೂ ಚಿನ್ನ ಅಡವು ಇಡುವುದು ಆಗಿರುತ್ತದೆ. ನೀವು ಫಿಸಿಕಲ್ ಗೋಲ್ಡ್ ಅನ್ನು ಖರೀದಿ ಮಾಡಿ ಅದರ ಸುರಕ್ಷತೆಯ ಬಗ್ಗೆ ಆತಂಕ ಪಡುವ ಬದಲಾಗಿ ಇ - ಗೋಲ್ಡ್‌ನಲ್ಲಿ ಹೂಡಿಕೆ ಮಾಡುವುದು ಉತ್ತಮ ಎಂಬುವುದು ತಜ್ಞರ ಅಭಿಪ್ರಾಯವಾಗಿದೆ. ಇದು ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಮಾಡುವ ಹೂಡಿಕೆ ಆಯ್ಕೆಗಳಲ್ಲಿ ಒಂದಾಗಿದೆ.
3. ರೆಕ್ಯೂರಿಂಗ್ ಮತ್ತು ಫಿಕ್ಸಿಡ್ ಡೆಪಾಸಿಟ್
ನೀವು ಮಕ್ಕಳಿಗಾಗಿ ಮಾಡಬಹುದಾದ ಕೊಂಚ ಕಡಿಮೆ ಅಪಾಯಕಾರಿಯಾದ ಹೂಡಿಕೆ ಆಯ್ಕೆಗಳಲ್ಲಿ ರೆಕ್ಯೂರಿಂಗ್ ಡೆಪಾಸಿಟ್ (ಆರ್‌ಡಿ) ಮತ್ತು ಫಿಕ್ಸಿಡ್ ಡೆಪಾಸಿಟ್ (ಎಫ್‌ಡಿ) ಕೂಡಾ ಉತ್ತಮ ಆಯ್ಕೆಯಾಗಿದೆ. ನಾವು ಮಾರುಕಟ್ಟೆಯ ಇತರೆ ಹೂಡಿಕೆ ಆಯ್ಕೆಗಳನ್ನು ನೋಡಿದಾಗ ಈ ಆರ್‌ಡಿ, ಎಫ್‌ಡಿಯಿಂದ ಅಧಿಕ ರಿಟರ್ನ್ ಪಡೆಯಲು ಸಾಧ್ಯವಾಗದು ಎಂದು ಅನಿಸಬಹುದು. ಆದರೆ ಮಾರುಕಟ್ಟೆಯಲ್ಲಿನ ಸುರಕ್ಷತೆಯ ವಿಚಾರಕ್ಕೆ ಬಂದಾಗ ಇದು ಉತ್ತಮ ಆಯ್ಕೆಯಾಗಿದೆ. ನಿಮ್ಮ ಮಕ್ಕಳಿಗಾಗಿ ನೀವು ಮಾಡಬಹುದಾದ ಉತ್ತಮ ಹೂಡಿಕೆ ಆಯ್ಕೆ ಇದಾಗಿದೆ.
4. ಪಿಪಿಎಫ್
ನೀವು ಮಕ್ಕಳಿಗಾಗಿ ಹೂಡಿಕೆ ಮಾಡಲು ಬಯಸಿದರೆ ಅದಕ್ಕೆ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಉತ್ತಮ ಆಯ್ಕೆಯಾಗಿದೆ. ಯಾಕೆಂದರೆ ಈ ಯೋಜನೆಯಲ್ಲಿ 15 ವರ್ಷಗಳ ಲಾಕಿನ್ ಅವಧಿ ಇದೆ. ಲಾಕಿನ್ ಅವಧಿ ಇದ್ದಾಗ ನೀವು ಹೂಡಿಕೆಯನ್ನು ಬೇರೆ ಯಾವುದೇ ಉದ್ದೇಶಗಳಿಗಾಗಿ ಬಳಕೆ ಮಾಡಲು ಸಾಧ್ಯವಾಗದು. ಅದರಿಂದಾಗಿ ಹಣವು ಮಕ್ಕಳ ಭವಿಷ್ಯಕ್ಕಾಗಿ ಉಳಿತಾಯವಾಗುತ್ತದೆ. ಆದರೆ ಉತ್ತಮ ರಿಟರ್ನ್ ಅನ್ನು ಪಡೆಯಲು ನೀವು ವಾರ್ಷಿಕವಾಗಿ 1 ಲಕ್ಷ ರೂಪಾಯಿಯಾದರೂ ಹೂಡಿಕೆ ಮಾಡಬೇಕಾಗುತ್ತದೆ.
5. ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್
ಹಣ ಉಳಿತಾಯ ಮಾಡಲು ನಮ್ಮ ಮುಂದೆ ಇರುವ ಇನ್ನೊಂದು ಉತ್ತಮ ಆಯ್ಕೆ ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಆಗಿದೆ. ಯಾರಲ್ಲಿ ಕಡಿಮೆ ಆದಾಯ ಇರುತ್ತದೆಯೋ ಅವರೂ ಕೂಡಾ ಕಡಿಮೆ ಮೊತ್ತವಾದರೂ ಒಂದು ಯೋಜನೆಯಡಿಯಲ್ಲಿ ಹೂಡಿಕೆ ಮಾಡುವ ಅವಕಾಶವನ್ನು ನೀಡುವ ಯೋಜನೆ ಇದಾಗಿದೆ. ಅಷ್ಟು ಮಾತ್ರವಲ್ಲದೆ ಇದರಲ್ಲಿ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಇದೆ.


Click it and Unblock the Notifications