ಕೊರೊನಾ ಪ್ರಭಾವದಿಂದ ನಾನಾ ವಲಯಗಳ ವ್ಯವಹಾರಗಳು ನಲುಗಿಹೋಗಿವೆ. ಇಂಥ ಸನ್ನಿವೇಶದಲ್ಲಿ ಹುಂಡೈ ಮೋಟಾರ್ ಇಂಡಿಯಾವು "Click-to-Buy" ಆನ್ ಲೈನ್ ಮಾರಾಟ ಪ್ಲಾಟ್ ಫಾರ್ಮ್ ಘೋಷಣೆ ಮಾಡಿದೆ. ಅದರ ಮೂಲಕವೇ ಯಾರಾದರೂ, ಹುಂಡೈ ಕಾರಿನ ಯಾವುದಾದರೂ ಮಾಡೆಲ್ ಬುಕ್ ಮಾಡಬಹುದು ಹಾಗೂ ಖರೀದಿ ಮಾಡಬಹುದು.
ಇದರ ಜತೆಗೆ ಮಾರಾಟದ ನಂತರ 360 ಡಿಜಿಟಲ್ ಸರ್ವೀಸ್ ಮತ್ತು ಕಾಂಟ್ಯಾಕ್ಟ್ ಲೆಸ್ ಸೇವೆಯ ಅನುಭವವನ್ನು ಕೂಡ ಪಡೆಯಬಹುದು. ಇದೀಗ ಹುಂಡೈನಿಂದ ಐದು ಹೊಸ ಯೋಜನೆಗಳು ಬಂದಿವೆ. ಗ್ರಾಹಕರ ಮೇಲೆ ತಕ್ಷಣವೇ ಬೀಳುವ ಆರ್ಥಿಕ ಹೊರೆಯನ್ನು ತಗ್ಗಿಸುವ ಉದ್ದೇಶದಿಂದ ಈ ಯೋಜನೆ ಪರಿಚಯಿಸಲಾಗಿದೆ.
ಮೂರು ತಿಂಗಳು ಕಡಿಮೆ ಇಎಂಐ ಯೋಜನೆ
ಈ ಸ್ಕೀಮ್ ಅಡಿಯಲ್ಲಿ ಗ್ರಾಹಕರಿಗೆ 3, 4 ಅಥವಾ 5 ವರ್ಷದ ಸಾಲವನ್ನು ನೀಡಲಾಗುತ್ತದೆ. ಮೊದಲ ಮೂರು ತಿಂಗಳ ಇಎಂಐ ಅನ್ನು ಮಾಮೂಲಿಗಿಂತ ಅತ್ಯಂತ ಕಡಿಮೆ ಕಟ್ಟಿಸಿಕೊಳ್ಳಲಾಗುತ್ತದೆ. ನಾಲ್ಕನೇ ತಿಂಗಳ ನಂತರ ಉಳಿದ ಮೊತ್ತವನ್ನು ಲೆಕ್ಕ ಹಾಕಿ, ಬಾಕಿ ಅವಧಿಯನ್ನು ಗಮನದಲ್ಲಿ ಇಟ್ಟುಕೊಂಡು ಇಎಂಐ ನಿರ್ಧರಿಸಲಾಗುತ್ತದೆ.
ಸ್ಟೆಪ್- ಅಪ್ ಯೋಜನೆ
ಈ ಸ್ಟೆಪ್- ಅಪ್ ಯೋಜನೆಯಲ್ಲಿ ಗ್ರಾಹಕರು ಮೊದಲ ವರ್ಷದಲ್ಲಿ ತಿಂಗಳ ಕಂತು ಲಕ್ಷ ರುಪಾಯಿಗೆ 1234ರಂತೆ ಪಾವತಿ ಮಾಡುತ್ತಾರೆ. ಆ ನಂತರದ ವರ್ಷಗಳಲ್ಲಿ ಇಎಂಐ ಅನ್ನು 11%ನಂತೆ 7 ವರ್ಷಗಳ ಅವಧಿಗೆ ಹೆಚ್ಚಿಸುತ್ತಾ ಸಾಗಲಾಗುತ್ತದೆ. ಇದರಿಂದ ಮೊದಲ ವರ್ಷದಲ್ಲಿ ಗ್ರಾಹಕರಿಗೆ ದೊಡ್ಡ ಇಎಂಐ ಪಾವತಿ ಮಾಡಬೇಕು ಎಂಬ ಆತಂಕ ಇರುವುದಿಲ್ಲ.
ಬಲೂನ್ ಸ್ಕೀಂ
ಆರಂಭದಲ್ಲಿ ಕಡಿಮೆ ಮೊತ್ತವನ್ನು ಕಟ್ಟಿ, ಆ ನಂತರದ ಹಂತದಲ್ಲಿ ಹೆಚ್ಚಿನ ಮೊತ್ತವನ್ನು ತಿಂಗಳ ಕಂತುಗಳಾಗಿ ಕಟ್ಟುವ ನಂಬಿಕೆ ಇರುವವರಿಗೆ ಈ ಯೋಜನೆ. ಈ ಬಲೂನ್ ಸ್ಕೀಂನಲ್ಲಿ ಐದು ವರ್ಷದ ಅವಧಿಗೆ ಕಡಿಮೆ ಇಎಂಐ ಕಟ್ಟುವಂತೆ ಸೂಚನೆ ನೀಡಲಾಗುತ್ತದೆ. ಅದು ಸಾಮಾನ್ಯವಾಗಿ ಕಟ್ಟಬೇಕಾದ ಇಎಂಐಗಿಂತ 14 ಪರ್ಸೆಂಟ್ ಕಡಿಮೆ ಇರುತ್ತದೆ. ಮೊದಲ ಇಎಂಐನಿಂದ ಐವತ್ತೆಂಟನೇ ತಿಂಗಳವರೆಗೂ ಹೀಗೇ ಇರುತ್ತದೆ. ಆದರೆ ಸಾಲದ ಅವಧಿಯ ಕೊನೆ ತಿಂಗಳು 25% ಸಾಲ ಮರುಪಾವತಿ ಇರುತ್ತದೆ.
ಹೆಚ್ಚಿನ ಅವಧಿಯ ಯೋಜನೆ
ತಿಂಗಳ ಖರ್ಚನ್ನು ನಿಭಾಯಿಸಿ, ಕಾರಿನ ಸಾಲವನ್ನು ಸಹ ಕಟ್ಟಿಕೊಂಡು ಹೋಗುವುದು ಕಷ್ಟವಾಗುತ್ತದೆ ಎಂದುಕೊಳ್ಳುವವರಿಗೆ ಈ ಯೋಜನೆ. ಆದ್ದರಿಂದ ಇಎಂಐ ಮೊತ್ತವು ಕಡಿಮೆ ಆಗಲಿ ಎಂಬ ಉದ್ದೇಶದಿಂದ ಹುಂಡೈನಿಂದ ಎಂಟು ವರ್ಷದ ತನಕ ಸಾಲವನ್ನು ನೀಡಲಾಗುತ್ತಿದೆ.
ಕಡಿಮೆ ಡೌನ್ ಪೇಮೆಂಟ್ ಯೋಜನೆ
ಡೌನ್ ಪೇಮೆಂಟ್ ಹೆಚ್ಚು ಕಟ್ಟಲಿಕ್ಕೆ ಆಗಲ್ಲ ಅನ್ನೋರಿಗೆ ಈ ಯೋಜನೆ ಇದೆ. ಫೈನಾನ್ಷಿಯರ್ಸ್ ನಿಂದ 100 ಪರ್ಸೆಂಟ್ ಆನ್ ರೋಡ್ ಸಾಲವನ್ನು ಆಯ್ಕೆ ಮಾಡಿಕೊಳ್ಳಬಹುದು. ಮೂರು ತಿಂಗಳ ಕಡಿಮೆ ಇಎಂಐ, ಸ್ಟೆಪ್ ಅಪ್, ಬಲೂನ್ ಸ್ಕೀಂ ಹುಂಡೈ ಕಾರುಗಳು ಎಲ್ಲವಕ್ಕೂ ಅನ್ವಯ ಆಗುತ್ತವೆ. ದೀರ್ಘಾವಧಿ ಸಾಲ ಯೋಜನೆ ಮತ್ತು ಕಡಿಮೆ ಡೌನ್ ಪೇಮೆಂಟ್ ಯೋಜನೆಗಳು ಹುಂಡೈನ ಆಯ್ದ ಮಾಡೆಲ್ ಗಳಿಗೆ ಮಾತ್ರ ಲಭ್ಯವಿವೆ.


Click it and Unblock the Notifications