ಕರ್ನಾಟಕದ ಸರ್ಕಾರಿ ಉದ್ಯೋಗಿಗಳು ವೇತನ ಪರಿಷ್ಕರಣೆಗಾಗಿ ಕಾಯುತ್ತಿದ್ದಾರೆ. ಆದರೆ ಈ ಉದ್ಯೋಗಿಗಳಿಗೆ ಇಲ್ಲೊಂದು ನಿರಾಸೆಯ ಸುದ್ದಿಯಿದೆ. 7ನೇ ವೇತನ ಆಯೋಗದ ಅವಧಿಯನ್ನು ಮತ್ತೆ ಆರು ತಿಂಗಳ ಕಾಲ ವಿಸ್ತರಣೆ ಮಾಡಿದೆ. ಇದರಿಂದಾಗಿ ಸದ್ಯಕ್ಕೆ ವೇತನ ಪರಿಷ್ಕರಣೆ ಮಾಡಲಾಗುತ್ತಿಲ್ಲ.
ನವೆಂಬರ್‌ನಲ್ಲಿ ರಾಜ್ಯ ಸರ್ಕಾರ ಸುಧಾಕರ್ ರಾವ್ ಅಧ್ಯಕ್ಷತೆಯ 7ನೇ ರಾಜ್ಯ ವೇತನ ಆಯೋಗದ ವರದಿಯನ್ನು ಪಡೆಯುವ ನಿರೀಕ್ಷೆಯಿತ್ತು. ಆದರೆ ಆಯೋಗದ ಅವಧಿ ವಿಸ್ತರಣೆ ಮಾಡಲಾಗಿದೆ. ಸೋಮವಾರ ಈ ಬಗ್ಗೆ ಆದೇಶವನ್ನು ಹೊರಡಿಸಲಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ 2ನೇ ಬಾರಿಗೆ ರಾಜ್ಯ ವೇತನ ಆಯೋಗದ ಅವಧಿ ವಿಸ್ತರಿಸಲಾಗಿದೆ. ಪ್ರಸ್ತುತ 7ನೇ ರಾಜ್ಯ ವೇತನ ಆಯೋಗದ ಕಾಲಾವಧಿಯು ನವೆಂಬರ್ 18 ರಂದು ಕೊನೆಯಾಗಬೇಕಾಗಿತ್ತು. ಆದರೆ ಈಗ ಈ ಆದೇಶದ ಕಾಲಾವಧಿಯನ್ನು 2024 ರ ಮಾರ್ಚ್ 15 ರವರೆಗೆ ವಿಸ್ತರಿಸಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಕರ್ನಾಟಕ ಸರ್ಕಾರ ನವೆಂಬರ್‌ನಲ್ಲಿಯೇ 7ನೇ ರಾಜ್ಯ ವೇತನ ಆಯೋಗದ ವರದಿ ಸ್ವೀಕಾರ ಮಾಡಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ವೇತನ ಆಯೋಗದ ಅವಧಿಯನ್ನು 2024ರ ಮಾರ್ಚ್ ತನಕ ವಿಸ್ತರಣೆ ಮಾಡಲಾಗಿದೆ. ಆದ್ದರಿಂದ ವೇತನ ಪರಿಷ್ಕರಣೆಯ ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರಿಗೆ ಈಗ ನಿರಾಸೆಯಾಗಿದೆ.
ಸೆಪ್ಟೆಂಬರ್ 29ರಂದು ವೇತನ ಆಯೋಗದ ಅಧ್ಯಕ್ಷ ಸುಧಾಕರ್ ರಾವ್ ಹಾಗೂ ಸದಸ್ಯರ ನಿಯೋಗ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಯಾಗಿತ್ತು. ಆದ್ದರಿಂದ ಆಯೋಗ ವರದಿಯನ್ನು ನವೆಂಬರ್‌ನಲ್ಲಿಯೇ ನೀಡಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು.
ಮುಂದೆ ಯಾವಾಗ ಪರಿಷ್ಕರಣೆ?
ಏಪ್ರಿಲ್ ಅಥವ ಮೇ ತಿಂಗಳಿನಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಆದ್ದರಿಂದ ನೀತಿ ಸಂಹಿತೆ ಜಾರಿಗೆ ಬಂದರೆ ವೇತನ ಪರಿಷ್ಕರಣೆಯ ಬಗ್ಗೆ ಸರ್ಕಾರದ ಘೋಷಣೆ ಮತ್ತಷ್ಟು ಮುಂದೂಡಿಕೆ ಆಗಲಿದೆ. ಈ ಸರ್ಕಾರಿ ನೌಕರರು ವೇತನ ಆಯೋಗದ ವರದಿ ಎದುರು ನೋಡುತ್ತಿದ್ದಾರೆ.
ವರದಿಯನ್ನು ಸಲ್ಲಿಸಿದ ಬಳಿಕವೇ ವೇತನ ಪರಿಷ್ಕರಣೆಯ ಆಗ್ರಹ ಕೇಳಿ ಬರಲಿದೆ. ಗ್ಯಾರಂಟಿ ಯೋಜನೆಗಳ ಜಾರಿ ಬಳಿಕ ಸಂಪನ್ಮೂಲ ಸಂಗ್ರಹತ್ತ ಗಮನ ಹರಿಸಿದೆ. ಇಂತಹ ಸಂದರ್ಭದಲ್ಲಿ ವೇತನ ಪರಿಷ್ಕರಣೆ ಕಷ್ಟವಾಗಲಿದೆ. ಈ ನಿಟ್ಟಿನಲ್ಲಿ ಆರ್ಥಿಕ ಇಲಾಖೆ 7ನೇ ರಾಜ್ಯ ವೇತನ ಆಯೋಗದ ಅವಧಿ ವಿಸ್ತರಿಸಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಕೆ ಮಾಡಿತ್ತು. ಅದಕ್ಕೆ ಈಗ ಒಪ್ಪಿಗೆ ಸಿಕ್ಕಿದೆ.
ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ರಾಜ್ಯದ ಸರ್ಕಾರಿ ನೌಕರರು ಮುಷ್ಕರ ನಡೆಸಲು ಪ್ರಾರಂಭಿಸಿದ್ದು, ಆಗ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ 7ನೇ ರಾಜ್ಯ ವೇತನ ಆಯೋಗದ ಅಂತಿಮ ವರದಿಯನ್ನು ಕಾಯ್ದಿರಿಸಿ ಮೂಲ ವೇತನದ ಶೇಕಡ 17 ರಷ್ಟು ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಿತ್ತು. ಏಪ್ರಿಲ್‌ನಿಂದಲೇ ಸರ್ಕಾರಿ ನೌಕರರಿಗೆ ಮಧ್ಯಂತರ ಪರಿಹಾರದ ಲಾಭ ಲಭ್ಯವಾಗಿದೆ. ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೆ ಸುಮಾರು 10,500 ಕೋಟಿ ರೂಪಾಯಿ ಅಧಿಕ ಹೊರೆಯಾಗಿದೆ.


Click it and Unblock the Notifications