ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮೇ ತಿಂಗಳಿನಲ್ಲಿ 2000 ರೂಪಾಯಿ ನೋಟನ್ನು ಚಲಾವಣೆಯಿಂದ ವಾಪಾಸ್ ಪಡೆದಿದೆ. ಬ್ಯಾಂಕುಗಳಲ್ಲಿ ನಾವು 2000 ರೂಪಾಯಿ ನೋಟು ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಹಾಗೆಯೇ ನಾವು ಮನೆಯಲ್ಲೇ ಕುಳಿತು 2000 ರೂಪಾಯಿ ನೋಟನ್ನು ಬದಲಾವಣೆ ಮಾಡುವ ಆಯ್ಕೆಯನ್ನು ಅಮೆಜಾನ್ ನಮಗೆ ನೀಡಿದೆ.
ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಅಮೆಜಾನ್ ಗುರುವಾರ ಕ್ಯಾಶ್ ಆನ್ ಡೆಲಿವರಿ ಸೇವೆಯಲ್ಲಿ 2000 ರೂಪಾಯಿ ನೋಟುಗಳನ್ನು ಬದಲಾವಣೆ ಮಾಡುವ ಪ್ರಕ್ರಿಯೆಯಲ್ಲಿ ಅಪ್‌ಡೇಟ್ ಅನ್ನು ಪರಿಚಯಿಸಿದೆ. "ಕ್ಯಾಶ್ ಆನ್ ಡೆಲಿವರಿ (ಸಿಒಡಿ) ಪಾವತಿಗಳು ಮತ್ತು ಕ್ಯಾಶ್‌ಲೋಡ್‌ಗಳಿಗಾಗಿ 2000 ರೂಪಾಯಿ ನೋಟುಗಳನ್ನು ಸ್ವೀಕರಿಸುವುದನ್ನು ನಾವು ಸೆಪ್ಟೆಂಬರ್ 19 ರಿಂದ ನಿಲ್ಲಿಸುತ್ತೇವೆ," ಎಂದು ಅಮೆಜಾನ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಹೇಳಿದೆ.

"ಅಮೆಜಾನ್ ಪ್ರಸ್ತುತ 2000 ರೂಪಾಯಿ ಕರೆನ್ಸಿ ನೋಟುಗಳನ್ನು ಸ್ವೀಕರಿಸುತ್ತಿದೆ. ಆದರೆ ಸೆಪ್ಟೆಂಬರ್ 19, 2023 ರಿಂದ, ನಾವು ನಗದು ಲೋಡ್‌ಗಳಿಗಾಗಿ 2,000 ರೂಪಾಯಿ ಕರೆನ್ಸಿ ನೋಟುಗಳನ್ನು ಸ್ವೀಕರಿಸುವುದಿಲ್ಲ ಅಥವಾ ಅಮೆಜಾನ್ ಮೂಲಕ ಮಾಡಿದ ಆರ್ಡರ್‌ಗಳಿಗಾಗಿ ಕ್ಯಾಶ್ ಆನ್ ಡೆಲಿವರಿ (COD) ಪಾವತಿಗಳನ್ನು ನಾವು ಸ್ವೀಕರಿಸುವುದಿಲ್ಲ," ಎಂದು ತಿಳಿಸಿದೆ.
ಥರ್ಡ್-ಪಾರ್ಟಿ ಕೊರಿಯರ್ ಪಾಲುದಾರರ ಮೂಲಕ ಉತ್ಪನ್ನವನ್ನು ತಲುಪಿಸಿದರೆ 2000 ರೂಪಾಯಿ ಕರೆನ್ಸಿ ನೋಟುಗಳನ್ನು ಸ್ವೀಕರಿಸಲಾಗುತ್ತದೆ ಎಂದು ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಸೇರಿಸಿದೆ. ಯಾವುದೇ ಗ್ರಾಹಕರು 2000 ರೂಪಾಯಿ ನೋಟುಗಳನ್ನು ಹೊಂದಿದ್ದರೆ, ಅಮೆಜಾನ್ ಮೂಲಕ ಬದಲಾವಣೆ ಮಾಡಲು ಇನ್ನು ಕೆಲವೇ ದಿನಗಳು ಬಾಕಿ ಇದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) 19 ಮೇ 2023 ರಂದು ಚಲಾವಣೆಯಿಂದ 2000 ರೂಪಾಯಿ ನೋಟುಗಳನ್ನು ತೆಗೆದುಕೊಂಡಿದೆ. ಜನರು ತಮ್ಮಲ್ಲಿರುವ 2000 ರೂಪಾಯಿ ನೋಟುಗಳನ್ನು ಬದಲಾವಣೆ ಮಾಡಲು ಬ್ಯಾಂಕುಗಳಿಗೆ ಹೋಗಬಹುದು. ನೋಟುಗಳನ್ನು ಡೆಪಾಸಿಟ್ ಮಾಡಬಹುದು ಅಥವಾ ಬದಲಾವಣೆ ಮಾಡಿಕೊಳ್ಳಬಹುದು.
ಆರ್‌ಬಿಐ ತನ್ನ ಮಾರ್ಗಸೂಚಿಗಳಲ್ಲಿ 2000 ರೂಪಾಯಿ ಮೌಲ್ಯದ ನೋಟುಗಳನ್ನು ಡೆಪಾಸಿಟ್ ಮಾಡಲು ಅಥವಾ ವಿನಿಮಯ ಮಾಡಿಕೊಳ್ಳಲು ಸುಮಾರು ನಾಲ್ಕು ತಿಂಗಳ ಕಾಲಾವಕಾಶ ನೀಡಿದೆ. 2000 ರೂಪಾಯಿ ಮುಖಬೆಲೆಯ ಬ್ಯಾಂಕ್‌ನೋಟುಗಳನ್ನು ಸೆಪ್ಟೆಂಬರ್ 30, 2023 ರೊಳಗೆ ಬದಲಾಯಿಸಬೇಕು ಅಥವಾ ಡೆಪಾಸಿಟ್ ಮಾಡಬೇಕು ಎಂದು ಆರ್‌ಬಿಐ ಹೇಳಿದೆ.
ಚಲಾವಣೆಯಲ್ಲಿದ್ದ 2000 ರೂಪಾಯಿ ನೋಟುಗಳಲ್ಲಿ ಶೇಕಡ 50 ರಷ್ಟು ನೋಟುಗಳನ್ನು ವಾಪಾಸ್ ಪಡೆಯುವ ಬಗ್ಗೆ ಘೋಷಣೆ ಮಾಡಿದ 20 ದಿನಗಳಲ್ಲಿ ಬ್ಯಾಂಕ್‌ಗಳಿಗೆ ಹಿಂತಿರುಗಿಸಲಾಗಿದೆ ಎಂದು ಆರ್‌ಬಿಐ ಹೇಳಿದೆ. ಜೂನ್ 30 ರವರೆಗೆ 2.72 ಟ್ರಿಲಿಯನ್ ರೂಪಾಯಿ ಮೌಲ್ಯದ 2000 ರೂಪಾಯಿ ನೋಟುಗಳನ್ನು ವಾಪಾಸ್ ನೀಡಲಾಗಿದೆ.
ಇನ್ನು 3.32 ಲಕ್ಷ ಕೋಟಿ ರೂಪಾಯಿ ಮೌಲ್ಯದ 2,000 ರೂಪಾಯಿಯ ಬ್ಯಾಂಕ್ ನೋಟುಗಳು ಅಥವಾ ಚಲಾವಣೆಯಲ್ಲಿರುವ ಶೇಕಡ 93 ರಷ್ಟು ಕರೆನ್ಸಿ ನೋಟುಗಳು ಬ್ಯಾಂಕ್‌ಗೆ ವಾಪಾಸ್ ನೀಡಲಾಗಿದೆ ಎಂದು ಸೆಪ್ಟೆಂಬರ್ 1 ರಂದು ಆರ್‌ಬಿಐ ಹೇಳಿದೆ. ಆಗಸ್ಟ್ 31 ರಂದು ವಹಿವಾಟಿನ ಕೊನೆಯಲ್ಲಿ ಚಲಾವಣೆಯಲ್ಲಿರುವ 2,000 ರೂಪಾಯಿ ನೋಟುಗಳು 0.24 ಲಕ್ಷ ಕೋಟಿ ರೂಪಾಯಿ ಆಗಿದೆ. ಸ್ವೀಕರಿಸಿದ ಒಟ್ಟು ನೋಟುಗಳಲ್ಲಿ, ಸುಮಾರು ಶೇಕಡ 87ರಷ್ಟು ಡೆಪಾಸಿಟ್ ರೂಪದಲ್ಲಿ ಮತ್ತು ಉಳಿದ ಶೇಕಡ 13ರಷ್ಟು ನೋಟುಗಳನ್ನು ಬದಲಾವಣೆ ಮಾಡಲಾಗಿದೆ.


Click it and Unblock the Notifications