ನಾವು ಯಾವುದೇ ಹೊಸ ಉದ್ಯಮವನ್ನು ಆರಂಭ ಮಾಡಬೇಕಾದರೆ ಅದಕ್ಕೆ ನಮ್ಮದೇ ಆದ ತಯಾರಿ ಮಾಡುವುದು ಮುಖ್ಯವಾಗುತ್ತದೆ. ಸರಿಯಾದ ಪ್ಲ್ಯಾನ್ ಮಾಡಬೇಕಾಗುತ್ತದೆ. ಯಾವ ಸ್ಥಳ, ಯಾವ ಉದ್ಯಮ, ಗ್ರಾಹಕರು ಎಷ್ಟಿರಬಹುದು, ಹೂಡಿಕೆ ಎಷ್ಟು ಮಾಡಬೇಕಾಗುತ್ತದೆ, ಈ ರೀತಿ ಹತ್ತು ಹಲವು ವಿಚಾರಗಳನ್ನು ನಾವು ಬಗೆಹರಿಸಬೇಕಾಗುತ್ತದೆ. ನೀವು ಯಾವುದೇ ಒಂದು ವಹಿವಾಟನ್ನು, ಉದ್ಯಮವನ್ನು ಆರಂಭ ಮಾಡುವುದು ಎಂದಿಗೂ ಕೂಡಾ ಕೊಂಚ ಕಷ್ಟ ಹೌದು. ಹಣ, ಪ್ಲ್ಯಾನ್ ಎಲ್ಲವೂ ಬೇಕಾಗುತ್ತದೆ.
ಹಾಗೆಯೇ ವಹಿವಾಟನ್ನು ಆರಂಭಿಸಿದ ಬಳಿಕ ಅದರ ಬೇಡಿಕೆ ಹೇಗಿದೆ ಎಂಬುವುದರ ಆಧಾರದಲ್ಲಿ ಆ ವಹಿವಾಟನ್ನು ಯಶಸ್ವಿಯಾಗಿ ನಡೆಸುವುದು ಕೂಡಾ ಒಂದು ಸವಾಲಾಗಿದೆ. ಅಂತಹ ವ್ಯವಹಾರಗಳಲ್ಲಿ ಅಥವಾ ಬ್ಯುಸಿನೆಸ್‌ನಲ್ಲಿ ಎಟಿಎಂ ಫ್ರಾಂಚೈಸಿ ಬ್ಯುಸಿನೆಸ್ ಕೂಡಾ ಒಂದಾಗಿದೆ. ನೀವು ಇಲ್ಲಿ ಸಣ್ಣ ಮೊತ್ತದ ಹೂಡಿಕೆಯನ್ನು ಮಾಡಿ ಅಧಿಕ ರಿಟರ್ನ್ ಅನ್ನು ಪಡೆಯಬಹುದಾಗಿದೆ. ಅಂದರೆ ನೀವು ಒಂದೇ ಬಾರಿಗೆ, ರಿಫಂಡ್ ಪಡೆಯಲು ಅವಕಾಶವಿರುವ 5 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, ಮಾಸಿಕವಾಗಿ 60,000-70,000 ರೂಪಾಯಿ ಆದಾಯವನ್ನು ಪಡೆಯಲು ಸಾಧ್ಯವಾಗುತ್ತದೆ.

ಎಟಿಎಂ ಫ್ರಾಂಚೈಸಿ ಬಗ್ಗೆ ಇಲ್ಲಿದೆ ವಿವರ
ಎಸ್‌ಬಿಐ, ಐಸಿಐಸಿಐ, ಎಚ್‌ಡಿಎಫ್‌ಸಿ, ಪಿಎನ್‌ಬಿ, ಯುಬಿಐನಂತಹ ಬ್ಯಾಂಕ್‌ಗಳು ಎಟಿಎಂ ಸೇವೆಯನ್ನು ನೀಡುತ್ತದೆ. ನೀವು ಅದರ ಸೇವೆಯನ್ನು ಪಡೆಯುತ್ತಿರುತ್ತೀರಿ. ಆದರೆ ಎಟಿಎಂಗಳನ್ನು ಸ್ಥಾಪಿಸುವ ಬ್ಯಾಂಕ್‌ಗಳು ವಾಸ್ತವವಾಗಿ ಈ ಬ್ಯಾಂಕುಗಳು ಗುತ್ತಿಗೆದಾರರನ್ನು ನೇಮಿಸಿ ಈ ಎಟಿಎಂಗಳನ್ನು ಇನ್‌ಸ್ಟಾಲ್ ಮಾಡುಕೊಳ್ಳುತ್ತದೆ. ಈ ಗುತ್ತಿಗೆದಾರರು ಬೇರೆ ಬೇರೆ ಸೈಟ್‌ಗಳಲ್ಲಿ ಎಟಿಎಂ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳುತ್ತಾರೆ. ಇದಕ್ಕಾಗಿ ಹಲವಾರು ಬ್ಯಾಂಕ್‌ಗಳು ಗುತ್ತಿಗೆದಾರರೊಂದಿಗೆ ಅಗ್ರಿಮೆಂಟ್ ಅನ್ನು ಮಾಡಿಕೊಳ್ಳುತ್ತಾರೆ.
ಭಾರತದಲ್ಲಿ ಎಟಿಎಂಗಳನ್ನು ಇನ್‌ಸ್ಟಾಲ್ ಮಾಡಲು, ಬಹುತೇಕ ಬ್ಯಾಂಕುಗಳು ಟಾಟಾ ಇಂಡಿಕ್ಯಾಷ್, ಮುತ್ತೂಟ್ ಎಟಿಎಂ, ಇಂಡಿಯಾ ಒನ್ ಎಟಿಎಂಗೆ ಗುತ್ತಿಗೆಯನ್ನು ನೀಡುತ್ತದೆ. ನೀವು ಎಸ್‌ಬಿಐನಲ್ಲಿ ಅಥವಾ ಬೇರೆ ಯಾವುದೇ ಬ್ಯಾಂಕ್‌ನಲ್ಲಿ ಎಟಿಎಂ ಫ್ರಾಂಚೈಸಿ ಪಡೆಯಲು ಬಯಸಿದರೆ ಅಧಿಕೃತ ವೆಬ್‌ಸೈಟ್ ಮೂಲಕ ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ. ಎಟಿಎಂ ಫ್ರಾಂಚೈಸಿಯ ನೆಪದಲ್ಲಿ ಅನೇಕ ವಂಚನೆಗಳು ನಡೆಯುತ್ತಿರುವ ಕಾರಣದಿಂದಾಗಿ ಜಾಗರೂಕರಾಗಿರಿ. ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ಮಾತ್ರ ಅರ್ಜಿಯನ್ನು ಸಲ್ಲಿಸಿ.
ಎಟಿಎಂ ಫ್ರಾಂಚೈಸಿಗೆ ಇವುಗಳು ಅಗತ್ಯ
ನೀವು ಒಂದು ಎಟಿಎಂ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಬೇಕಾದರೆ ನಿಮಗೆ ಸುಮಾರು 50ರಿಂದ 80 ಸ್ಕ್ವೇರ್ ಫೀಟ್‌ನಷ್ಟು ಜಾಗ ಬೇಕಾಗುತ್ತದೆ. ಹಾಗೆಯೇ ಜನರು ಎಲ್ಲಿ ಸುಲಭವಾಗಿ ನೋಡಲು ಸಾಧ್ಯವೋ ಅಂತಹ ಪ್ರದೇಶದಲ್ಲಿ ಎಟಿಎಂ ಇನ್‌ಸ್ಟಾಲ್ ಮಾಡಬೇಕಾಗುತ್ತದೆ. ಹಾಗೆಯೇ ಒಂದು ಎಟಿಎಂನಿಂದ ಕನಿಷ್ಠ 100 ಮೀಟರ್ ಅಂತರದಲ್ಲಿ ಇರಬೇಕಾಗುತ್ತದೆ. ನಿರಂತರವಾಗಿ ಎಲೆಕ್ಟ್ರಿಸಿಟಿ ಸರಬರಾಜು ಎಟಿಎಂನಲ್ಲಿ ಕಡ್ಡಾಯವಾಗಿ ಇರಬೇಕಾಗುತ್ತದೆ.
ಕ್ಯಾಬಿನ್ ಕಲ್ಲಿನ ಗೋಡೆಗಳು ಮತ್ತು ಕಾಂಕ್ರೀಟ್ ಛಾವಣಿಯೊಂದಿಗೆ ದೀರ್ಘಕಾಲೀನವಾಗಿ ಉಳಿಯುವಂತಹ ಕಟ್ಟದ ರಚನೆಯಾಗಿರಬೇಕು. ಇನ್ನು ಒಂದು ಸೊಸೈಟಿಯಲ್ಲಿ ಎಟಿಎಂ ಅನ್ನು ಇನ್‌ಸ್ಟಾಲ್ ಮಾಡುವುದಾದರೆ, V-SAT ಅನ್ನು ಸ್ಥಾಪಿಸಲು ನೀವು ಸೊಸೈಟಿ ಅಥವಾ ಅಧಿಕಾರಿಗಳಿಂದ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಪಡೆಯಬೇಕಾಗುತ್ತದೆ.
ಯಾವೆಲ್ಲ ದಾಖಲೆಗಳು ಬೇಕು?
* ಗುರುತಿನ ಪುರಾವೆ- ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಐಡಿ
* ವಿಳಾಸ ಪುರಾವೆ- ರೇಷನ್ ಕಾರ್ಡ್, ಎಲೆಟ್ರಿಸಿಟಿ ಬಿಲ್
* ಬ್ಯಾಂಕ್ ಖಾತೆ ವಿವರ ಮತ್ತು ಪಾಸ್‌ಬುಕ್ ಪ್ರತಿ
* ಫೋಟೋ, ಇಮೇಲ್ ಐಡಿ, ಫೋನ್ ನಂಬರ್
* ಸಂಸ್ಥೆಗೆ ಬೇಕಾದ ಬೇರೆ ಫಾರ್ಮ್ ಅಥವಾ ದಾಖಲೆಗಳು
* ಜಿಎಸ್‌ಟಿ ಸಂಖ್ಯೆ
* ಸಂಸ್ಥೆಯ ಹಣಕಾಸು ಮಾಹಿತಿ
ಎಟಿಎಂ ಫ್ರಾಂಚೈಸಿಯಿಂದ ದೊರೆಯುವ ಆದಾಯ
ನೀವು ಎಟಿಎಂ ಫ್ರಾಂಚೈಸಿಗೆ ಅರ್ಜಿ ಸಲ್ಲಿಸಿ ನಿಮ್ಮ ಅರ್ಜಿಯು ಅನುಮೋದನೆಯಾದರೆ, ನೀವು ಸೆಕ್ಯೂರಿಟಿ ಡೆಪಾಸಿಟ್ ಆಗಿ ಎರಡು ಲಕ್ಷ ರೂಪಾಯಿ ಮತ್ತು ಆಪರೇಷನಲ್ ಕ್ಯಾಪಿಟಲ್ ಆಗಿ 3 ಲಕ್ಷ ರೂಪಾಯಿಯನ್ನು ಪಾವತಿ ಮಾಡಬೇಕಾಗುತ್ತದೆ. ಅಂದರೆ ಒಟ್ಟಾಗಿ 5 ಲಕ್ಷ ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ, ಇದು ಸಂಸ್ಥೆಯಿಂದ ಸಂಸ್ಥೆಗೆ ಬದಲಾವಣೆಯಾಗುತ್ತದೆ. ಎಟಿಎಂ ಇನ್‌ಸ್ಟಾಲ್ ಮಾಡಿದ ಬಳಿಕ ಜನರು ಅದನ್ಜು ಬಳಕೆ ಮಾಡಲು ಆರಂಭ ಮಾಡುತ್ತಾರೆ. ಪ್ರತಿ ವಹಿವಾಟಿಗೆ ನಿಮಗೆ 8 ರೂಪಾಯಿ ಲಭ್ಯವಾಗುತ್ತದೆ. ಹಣಕಾಸೇತರ ವಹಿವಾಟಿಗೆ 2 ರೂಪಾಯಿ ಲಭ್ಯವಾಗುತ್ತದೆ. ಒಟ್ಟಾರೆಯಾಗಿ ನೀವು ಮಾಸಿಕವಾಗಿ 60,000-70,000 ರೂಪಾಯಿ ದುಡಿಯುವ ಅವಕಾಶವಿರುತ್ತದೆ.


Click it and Unblock the Notifications