ದೀಪಾವಳಿ ಸಂಭ್ರಮದಲ್ಲಿದ್ದ ಜಿಲ್ಲೆಯ ಜನತೆಗೆ ಭಾರತೀಯ ರೈಲ್ವೆಯು ಗುಡ್ ನ್ಯೂಸ್ ಅನ್ನು ಇತ್ತೀಚೆಗೆ ನೀಡಿದೆ. ಬೆಂಗಳೂರು-ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಬೆಳಗಾವಿಯವರೆಗೆ ವಿಸ್ತರಣೆ ಮಾಡಿದೆ. ಅಂದರೆ ಬೆಳಗಾವಿಯ ಜನರು ಬೆಂಗಳೂರಿನಿಂದ ಬೆಳಗಾವಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ಮೂಲಕ ಪ್ರಯಾಣ ಮಾಡಬಹುದಾಗಿದೆ.
ಈ ಆದೇಶವನ್ನು ರೈಲ್ವೆ ಸಚಿವಾಲಯ ನೀಡಿದೆ. ಹಾಗೆಯೇ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಎಕ್ಸ್‌ನಲ್ಲಿ ಅಂದರೆ ಈ ಹಿಂದಿನ ಟ್ವಿಟ್ಟರ್‌ನಲ್ಲಿ ಮಾಹಿತಿಯನ್ನು ನೀಡಿದ್ದಾರೆ. ಈ ರೈಲಿನ ವೇಳಾಪಟ್ಟಿಯನ್ನು ನಾವಿಲ್ಲಿ ನೀಡಿದ್ದೇವೆ, ಮುಂದೆ ಓದಿ...

ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ ಈರಣ್ಣ ಕಡಾಡಿ
"ಬೆಳಗಾವಿ ಜಿಲ್ಲೆಯ ಜನರ ಹಲವಾರು ದಿನಗಳ ಬೇಡಿಕೆಯನ್ನು ಈಡೇರಿಸಲಾಗಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲನ್ನು ಬೆಂಗಳೂರು-ಧಾರವಾಡ ದಿಂದ ಬೆಳಗಾವಿಯವರೆಗೆ ವಿಸ್ತರಣೆ ಮಾಡಿ ರೈಲ್ವೆ ಸಚಿವಾಲಯ ಆದೇಶ ನೀಡಿದೆ. ನನ್ನ ಮನವಿಗೆ ಸ್ಪಂದಿಸಿ ಶೀಘ್ರ ರೈಲಿನ ವ್ಯವಸ್ಥೆ ಮಾಡಿದ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರಿಗೆ ಹಾಗೂ ರೈಲ್ವೆ ಇಲಾಖೆಗೆ ನಾನು ಧನ್ಯವಾದ ಸಲ್ಲಿಸುತ್ತೇನೆ," ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ತಮ್ಮ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ವಂದೇ ಭಾರತ್ ವೇಳಾಪಟ್ಟಿ ಇಲ್ಲಿದೆ
ವಂದೇ ಭಾರತ್ ರೈಲು ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಆದರೆ ದಿನಾಂಕವನ್ನು ಇನ್ನೂ ಕೂಡಾ ನಿಗದಿ ಮಾಡಲಾಗಿಲ್ಲ. ಆದರೆ ಶೀಘ್ರವೇ ಬೆಂಗಳೂರು ಬೆಳಗಾವಿ ನಡುವೆ ವಂದೇ ಭಾರತ್ ರೈಲು ಸಂಚರಿಸಲಿದೆ ಎಂದು ವರದಿಯು ಹೇಳುತ್ತದೆ.
ರೈಲು ಸಂಖ್ಯೆ 20661 ಬೆಂಗಳೂರು-ಬೆಳಗಾವಿ ಬೆಳಗ್ಗೆ 5.45 ಕ್ಕೆ ಬೆಂಗಳೂರು ನಿಲ್ದಾಣದಿಂದ ಹೊರಟು ಮಧ್ಯಾಹ್ನ 01.30 ಗಂಟೆಗೆ ಬೆಳಗಾವಿ ತಲುಪಲಿದೆ. ರೈಲು ಸಂಖ್ಯೆ 20662 ಮಧ್ಯಾಹ್ನ 02 ಗಂಟೆಗೆ ಬೆಳಗಾವಿಯಿಂದ ಹೊರಟು ರಾತ್ರಿ 10.10 ಕ್ಕೆ ಬೆಂಗಳೂರು ನಿಲ್ದಾಣ ತಲುಪಲಿದೆ.
ಈ ಹಿಂದೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಬೆಂಗಳೂರು- ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಯನ್ನು ಬೆಳಗಾವಿಗೆ ವಿಸ್ತಾರ ಮಾಡುವಂತೆ ಮನವಿ ಮಾಡಿದ್ದರು. ಹಾಗೆಯೇ ಈ ಭಾಗದ ಜನಪ್ರತಿನಿಧಿಗಳು ಕೂಡ ಮನವಿ ಮಾಡಿದ್ದರು. ಈ ಮನವಿಗೆ ಈಗ ರೈಲ್ವೆ ಸಚಿವಾಲಯ ಸ್ಪಂಧಿಸಿದೆ.
ದೇಶದಾದ್ಯಂತ ಬರಲಿವೆ 500 ವಂದೇ ಭಾರತ್ ಎಕ್ಸ್‌ಪ್ರೆಸ್
ರೈಲ್ವೆ ಪ್ರಯಾಣಿಕರಿಗೆ ರೈಲ್ವೇ ಸಚಿವಾಲಯವು ಸಿಹಿಸುದ್ದಿಯೊಂದನ್ನು ನೀಡಿದೆ. ರೈಲ್ವೇ ಸಚಿವಾಲಯವು 2024 ರ ವೇಳೆಗೆ ಸುರಕ್ಷತಾ ಕವಚಗಳನ್ನು ಹೊಂದಿರುವ 500 ಕ್ಕೂ ಹೆಚ್ಚು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಆರಂಭ ಮಾಡಲು ಸಜ್ಜಾಗುತ್ತಿದೆ ಎಂದು ವರದಿಯಾಗಿದೆ.
ಚೆನ್ನೈನಲ್ಲಿರುವ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯು 2024 ರಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ನ 500-550 ಕೋಚ್‌ಗಳನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ ಎಂದು ಐಸಿಎಫ್‌ನಲ್ಲಿ ಜನರಲ್ ಮ್ಯಾನೇಜರ್ ಬಿಜಿ ಮಲ್ಯ ಹೇಳಿದ್ದಾರೆ. ಈ ವರ್ಷ 75 ರೈಲುಗಳನ್ನು ತಯಾರಿಸಲು ಕಾರ್ಖಾನೆ ಯೋಜಿಸಿದೆ. ಇವುಗಳಲ್ಲಿ 63 8-ಕಾರ್ ರೇಕ್‌ಗಳು ಮತ್ತು 12 16-ಕಾರ್ ರೇಕ್‌ಗಳು ಸೇರಿವೆ.


Click it and Unblock the Notifications