ಆ ವ್ಯಕ್ತಿಯ ಹೆಸರು ವಾರೆನ್ ಬಫೆಟ್. ಈಗ ಅವರ ವಯಸ್ಸು 89 ವರ್ಷ. ಷೇರು ಮಾರ್ಕೆಟ್ ಹಾಗೂ ವಾರೆನ್ ಬಫೆಟ್ ಹೆಸರು ಸಮಾನಾರ್ಥಕ ಪದಗಳಿದ್ದಂತೆ. ಆದರೆ ವಾರೆನ್ ಬಫೆಟ್ ಯಶಸ್ವಿ ಬಿಜಿನೆಸ್ ಮ್ಯಾನ್ ಅಂತಷ್ಟೇ ಅಲ್ಲದೆ ದಾನ ಕಾರ್ಯಗಳಿಂದಲೂ ಜನ ಮೆಚ್ಚುಗೆ ಗಳಿಸಿದ್ದಾರೆ. ವಿಪರೀತ ಪ್ರೀತಿ ಪಡೆದಿದ್ದಾರೆ.
ಉಳಿತಾಯ ಮತ್ತು ಹೂಡಿಕೆ ಜತೆಗೆ ಸ್ವಭಾವ, ನಡವಳಿಕೆ ಮತ್ತು ರೂಢಿ ಮಾಡಿಕೊಂಡ ಗುಣಗಳು ಹೇಗೆ ಒಬ್ಬ ವ್ಯಕ್ತಿಯನ್ನು ವಿಶಿಷ್ಟವಾಗಿ ರೂಪಿಸುತ್ತದೆ ಎಂಬುದಕ್ಕೆ ವಾರೆನ್ ಬಫೆಟ್ ಕೇರ್ ಆಫ್ ಅಡ್ರೆಸ್ ಇದ್ದಂತೆ. ಅಮೆರಿಕ ಮೂಲದ ವಾರೆನ್ ಬಫೆಟ್ ಬಗ್ಗೆ ಆಸಕ್ತಿಕರ ಎನಿಸುವ ಅಂಶಗಳನ್ನು ಈ ದಿನದ ಲೇಖನದಲ್ಲಿ ತಿಳಿಸುತ್ತಿದ್ದೇವೆ.
ಬಿಸ್ಕೆಟ್- ಚಾಕೊಲೇಟ್ ಅನ್ನೋ ವಯಸ್ಸಲ್ಲೇ ಷೇರು ಖರೀದಿ
11 ವರ್ಷದ ಬಾಲಕ ಆ ವಯಸ್ಸಿನಲ್ಲಿ ಏನು ಮಾಡಬಹುದು? ಅಪ್ಪ ಅಥವಾ ಅಮ್ಮ ಕೊಟ್ಟ ದುಡ್ಡಿನಲ್ಲಿ ಚಾಕೊಲೇಟ್, ಬಿಸ್ಕೆಟ್, ವಿಡಿಯೋ ಗೇಮ್ ಹೀಗೆ ಏನಾದರೂ ಖರೀದಿ ಮಾಡುವುದರ ಬಗ್ಗೆ ಆಲೋಚನೆ ಮಾಡಬಹುದು. ಆದರೆ ವಾರೆನ್ ಬಫೆಟ್ ತಮ್ಮ 11ನೇ ವಯಸ್ಸಿನಲ್ಲಿ 1942ನೇ ಇಸವಿಯಲ್ಲಿ ಮೊದಲ ಬಾರಿಗೆ ಸಿಟೀಸ್ ಸರ್ವೀಸ್ ಎಂಬ ಷೇರನ್ನು $ 38ಕ್ಕೆ ಖರೀದಿಸಿದರು. ವಾರೆನ್ ಬಫೆಟ್ ಅದೆಂಥ ಜಾಣರು ಹಾಗೂ ಶ್ರಮಜೀವಿ ಅಂದರೆ, ಅವರ ಕುಟುಂಬ ಒಮಾಹಕ್ಕೆ ತೆರಳಿದಾಗ ಅಲ್ಲಿ ವಾಷಿಂಗ್ಟನ್ ಪೋಸ್ಟ್ ಅನ್ನು ಪ್ರತಿ ಬೆಳಗ್ಗೆ ಹಾಕುತ್ತಿದ್ದರು. ಅದರಿಂದ ಅವರಿಗೆ $ 175 ಬರುತ್ತಿತ್ತು (ಆಗಿನ ಸಮಯಕ್ಕೆ ಒಬ್ಬರು ಶಿಕ್ಷಕರು ದುಡಿಯುವುದಕ್ಕಿಂತ ಹೆಚ್ಚಿನ ಮೊತ್ತ ಅದಾಗಿತ್ತು). ಅದರ ಜತೆಗೆ ಬಳಕೆಯಾದ ಗಾಲ್ಫ್ ಬಾಲ್ ಗಳ ಮಾರಾಟ, ಅಂಚೆ ಚೀಟಿ ಸಂಗ್ರಹ ಇತ್ಯಾದಿ ಮಾಡುತ್ತಿದ್ದರು.ಬಫೆಟ್ ಗೆ 16 ವರ್ಷ ತುಂಬುವುದರೊಳಗೆ 53 ಸಾವಿರ ಅಮೆರಿಕನ್ ಡಾಲರ್ ಉಳಿತಾಯ ಮಾಡಿದ್ದರು.
ಹಾರ್ವರ್ಡ್ ಬಿಜಿನೆಸ್ ಸ್ಕೂಲ್ ನಲ್ಲಿ ತಿರಸ್ಕೃತ
ನೆಬ್ರಸ್ಕ ವಿ.ವಿ.ಯಿಂದ ಪದವಿ ಪಡೆದ ಬಫೆಟ್ ಹಾರ್ವರ್ಡ್ ಬಿಜಿನೆಸ್ ಸ್ಕೂಲ್ ನಲ್ಲಿ ಅರ್ಜಿ ಹಾಕಿಕೊಂಡಿದ್ದರು. ಅಲ್ಲಿ ಅವರನ್ನು ಸೇರಿಸಿಕೊಳ್ಳಬೇಕೋ ಬೇಡವೋ ಎಂಬುದಕ್ಕೆ ಒಂದು ಸಂದರ್ಶನ ನಿಗದಿ ಆಗಿತ್ತು. ಅಲ್ಲಿನ ಸಿಬ್ಬಂದಿಯೊಬ್ಬರು, ಇದನ್ನು ಮರೆತುಬಿಡು. ನೀನು ಹಾರ್ವಡ್ ಗೆ ಹೋಗಲ್ಲ ಎಂದರು. ಆ ಘಟನೆಯಿಂದ ಬಫೆಟ್ ಗೆ ಇನ್ನಿಲ್ಲದಂತೆ ಬೇಸರವಾಯಿತು. ಆದರೆ ತನ್ನ ಸ್ಫೂರ್ತಿಯಾದ ಬೆಂಜಮಿನ್ ಗ್ರಹಾಂ (ಮೌಲ್ಯಯುತ ಹೂಡಿಕೆ ಪಿತಾಮಹ) ಮತ್ತು ಡೇವಿಡ್ ಡಾಡ್ ಅವರು ಕೊಲಂಬಿಯಾ ಬಿಜಿನೆಸ್ ಸ್ಕೂಲ್ ನಲ್ಲಿ ಪ್ರೊಫೆಸರ್ ಆಗಿದ್ದರು. "ನಾನು ಆಗಸ್ಟ್ ಮಧ್ಯದಲ್ಲಿ ಪತ್ರ ಬರೆದೆ. ಡಿಯರ್ ಪ್ರೊ. ಡಾಡ್. ನೀವೆಲ್ಲ ಬದುಕಿಲ್ಲ ಅಂದುಕೊಂಡಿದ್ದೆ. ಆದರೆ ನೀವು ಕೊಲಂಬಿಯಾದಲ್ಲಿ ಪಾಠ ಮಾಡುತ್ತಿದ್ದೀರಿ. ನಾನು ಅಲ್ಲಿಗೆ ಬರಬೇಕು" ಎಂದು ಪತ್ರ ಬರೆದಿದ್ದರಂತೆ ಬಫೆಟ್. ಅಲ್ಲಿಗೆ ಹೋಗಿ, ಆ ನಂತರ ಸೇರ್ಪಡೆಯಾದರು.
1958ರಿಂದ ಅದೇ ಮನೆಯಲ್ಲಿ ಇದ್ದಾರೆ
ಶತಕೋಟ್ಯಧಿಪತಿ ವಾರೆನ್ ಬಫೆಟ್ ಅರಮನೆಯಂಥ ಕಡೆ ಇರಬಹುದು, ವಿಶ್ರಾಂತಿ ತೆಗೆದುಕೊಳ್ಳುವುದಕ್ಕೆ ವಿಲಾಸಿ ವಿಲ್ಲಾ, ಓಡಾಡಲು ಪರಮ ದುಬಾರಿ ಕಾರು ಇರುತ್ತದೆ ಎಂಬುದೇ ಹಲವರ ಊಹೆಯಾಗಿರುತ್ತದೆ. ಆದರೆ ಬಫೆಟ್ ವಿಚಾರದಲ್ಲಿ ಅದು ಎಂದೂ ಆಗಿಲ್ಲ. ಬಫೆಟ್ 1958ರಿಂದಲೂ ಒಮಾಹದ ಅದೇ ಮನೆಯಲ್ಲಿ ವಾಸವಿದ್ದಾರೆ. 31,500 ಅಮೆರಿಕನ್ ಡಾಲರ್ ಗೆ ಈ ಮನೆ ಖರೀದಿಸಿದ್ದು, ಇದರಲ್ಲಿ 5 ಬೆಡ್ ರೂಂ ಮತ್ತು 2.5 ಬಾತ್ ರೂಂ ಇದೆ. ವಾರೆನ್ ಬಫೆಟ್ ಜತೆ ಊಟ ಮಾಡಲು ಬಿಡ್ ಮಾಡುತ್ತಾರೆ. ಅದರ ಮೂಲಕ ಬರುವ ಹಣವನ್ನು ದಾನ ಕಾರ್ಯಗಳಿಗೆ ಬಳಸುತ್ತಾರೆ. ಹಾಗೆ ಅವರ ಜತೆ ಊಟ ಮಾಡಲು 34 ಲಕ್ಷ ಡಾಲರ್ ತನಕ ಹಣ ನೀಡಲು ತಯಾರಿರುತ್ತಾರೆ. 2000ನೇ ಇಸವಿಯಿಂದ ವಾರ್ಷಿಕವಾಗಿ ಹೀಗೆ ಹಣ ಸಂಗ್ರಹಿಸಲಾಗುತ್ತಿದೆ. ಅಲ್ಲಿಂದ ಇಲ್ಲಿಯ ತನಕ 20 ಮಿಲಿಯನ್ ಅಮೆರಿಕನ್ ಡಾಲರ್ ಗೂ ಹೆಚ್ಚು ಮೊತ್ತ ಸಂಗ್ರಹವಾಗಿದೆ.
ಪ್ರತಿ ದಿನ 37 ಮಿಲಿಯನ್ ಡಾಲರ್ ಗಳಿಕೆ
2013ನೇ ಇಸವಿಯ ಕೊನೆಗೆ ಬಫೆಟ್ ಅವರ ನಿವ್ವಳ ಆಸ್ತಿ ಮೌಲ್ಯ 59 ಬಿಲಿಯನ್ ಅಮೆರಿಕನ್ ಡಾಲರ್ ಇತ್ತು. ಆ ವರ್ಷದ ಆರಂಭದಲ್ಲಿ 46 ಬಿಲಿಯನ್ ಅಮೆರಿಕನ್ ಡಾಲರ್ ಇತ್ತು. ಅಂದರೆ ಆ ವರ್ಷದಲ್ಲಿ ಬಫೆಟ್ ಪ್ರತಿ ದಿನ 37 ಮಿಲಿಯನ್ ಡಾಲರ್ ಗಳಿಸಿದ್ದರು. ಅವರು ಹೂಡಿಕೆ ಮಾಡಿದ್ದ ಷೇರಿನ ಬೆಲೆಗಳಲ್ಲಿ ಏರಿಕೆ ಆಗಿದ್ದರಿಂದ ಇಷ್ಟು ದೊಡ್ಡ ಮೊತ್ತದ ಸಂಪತ್ತು ಸಂಗ್ರಹಣೆ ಆಗಿತ್ತು. ಇನ್ನು ಯಶಸ್ಸು ಯಾವುದೇ ವಯಸ್ಸಿನಲ್ಲಿ ಬರಬಹುದು ಎನ್ನುವುದಕ್ಕೆ ವಾರೆನ್ ಬಫೆಟ್ ಅತ್ಯುತ್ತಮ ಉದಾಹರಣೆ. 60 ವರ್ಷ ತುಂಬುವ ಮೊದಲು ಕೂಡ ಬಫೆಟ್ ಅತ್ಯಂತ ಯಶಸ್ವಿ ವ್ಯಕ್ತಿ. 52ನೇ ವಯಸ್ಸಿನಲ್ಲಿ ಅವರ ನಿವ್ವಳ ಆಸ್ತಿ ಮೌಲ್ಯ 376 ಮಿಲಿಯನ್ ಡಾಲರ್ ಇತ್ತು. ಅವರ ಆಸ್ತಿಯ ಶೇಕಡಾ 94ರಷ್ಟು ಬಂದಿದ್ದು 60 ವರ್ಷ ಕಳೆದ ನಂತರ. ಆಗ ಅವರ ಆಸ್ತಿ ಮೌಲ್ಯ 3.8 ಬಿಲಿಯನ್ ಡಾಲರ್ ಗೂ ಹೆಚ್ಚಾಗಿತ್ತು.
ದಿನಕ್ಕೆ ಐನೂರು ಪುಟಗಳ ಓದು
ವಾರೆನ್ ಬಫೆಟ್ ಬೆಳಗ್ಗೆ ಹಾಸಿಗೆ ಬಿಟ್ಟು ಏಳುವಾಗ ಪತ್ರಿಕೆ ಓದುವ ಮೂಲಕ ದಿನ ಆರಂಭವಾಗುತ್ತದೆ. ಅವರ ಅಂದಾಜಿನ ಪ್ರಕಾರ, ಒಂದು ದಿನಕ್ಕೆ ಶೇಕಡಾ 80ರಷ್ಟು ಸಮಯವನ್ನು ಓದುವುದಕ್ಕೆ ಅಂತಲೇ ಮೀಸಲಿಡುತ್ತಾರೆ. ಹಿಂದೊಮ್ಮೆ, ನಿಮ್ಮ ಯಶಸ್ಸಿಗೆ ಕಾರಣ ಏನು ಎಂದು ಬಫೆಟ್ ಅವರನ್ನು ಕೇಳಲಾಗಿತ್ತು. "ಪ್ರತಿ ದಿನ ಐನೂರು ಪುಟಗಳಷ್ಟು ಓದುತ್ತೇನೆ. ಅದು ಜ್ಞಾನದ ಮೂಲ. ಅದು ಬಡ್ಡಿಯ ರೂಪದಲ್ಲಿ ಬೆಳೆಯುತ್ತದೆ" ಎಂದಿದ್ದರು ಬಫೆಟ್. "ನಾನು ಯಾವುದೇ ವಸ್ತುವನ್ನು ಇಪ್ಪತ್ತು ಅಥವಾ ಇಪ್ಪತ್ತೈದು ವರ್ಷಗಳ ಕಾಲ ಬಳಕೆ ಮಾಡದೆ ಬಿಸಾಡುವುದಿಲ್ಲ" ಎಂದಿದ್ದರು ಅವರು ಬಳಕೆ ಮಾಡುವ ಮೊಬೈಲ್ ಫೋನ್ ಬಗ್ಗೆ ಸಂದರ್ಶನವೊಂದರಲ್ಲಿ ಕೇಳಿದಾಗ. ಇನ್ನೊಂದು ವಿಚಾರ, ಬಫೆಟ್ ಮೇಲ್ ಮಾಡುವುದು ತೀರಾ ವಿರಳ.
85 ಪರ್ಸೆಂಟ್ ನಷ್ಟು ಬರ್ಕ್ ಷೈರ್ ಹಾಥ್ ವೇ ಷೇರುಗಳ ದಾನ
ಇಂಥ ಯಶಸ್ವಿ ಬಿಜಿನೆಸ್ ಮನ್ ವಾರೆನ್ ಬಫೆಟ್ ಮಹಾ ದಾನಿ. 2006ರಲ್ಲಿ ಅವರೊಂದು ಘೋಷಣೆ ಮಾಡಿದರು. ಅದಕ್ಕೆ ವಿಶ್ವದಾದ್ಯಂತ ಮೆಚ್ಚುಗೆ ವ್ಯಕ್ತವಾಯಿತು. ಅದೇನು ಘೋಷಣೆ ಅಂತೀರಾ? ನಿಧಾನಕ್ಕೆ 85 ಪರ್ಸೆಂಟ್ ನಷ್ಟು ಬರ್ಕ್ ಷೈರ್ ಹಾಥ್ ವೇ ಷೇರುಗಳನ್ನು 5 ಫೌಂಡೇಷನ್ ಗಳಿಗೆ ನೀಡುವುದಾಗಿ ಹೇಳಿದ್ದರು. ಆಗಿನಿಂದ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದ್ದಾರೆ. 2016ರ ಜುಲೈನಲ್ಲಿ 2.86 ಬಿಲಿಯನ್ ಡಾಲರ್ ಗೂ ಹೆಚ್ಚಿನ ಬರ್ಕ್ ಷೈರ್ ಹಾಥ್ ವೇ ಷೇರುಗಳನ್ನು ಐದು ಫೌಂಡೇಷನ್ ಗಳಿಗೆ ದೇಣಿಗೆ ನೀಡಿದರು. ಅದರಲ್ಲಿ ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಷನ್ ಕೂಡ ಒಂದು. 2014 ಮತ್ತು 2015ರಲ್ಲಿ 2.8 ಬಿಲಿಯನ್ ನಷ್ಟು ದಾನ ಮಾಡಿದ್ದಾರೆ.


Click it and Unblock the Notifications