ಕೇಂದ್ರ ಸರ್ಕಾರವು ಜನರಿಗೆ ಹಲವು ರೀತಿಯ ಅನುಕೂಲಕರ ಪಿಂಚಣಿ ಯೋಜನೆಗಳನ್ನು ಜಾರಿಗೊಳಿಸಿದೆ. ನೀವು 40 ವರ್ಷ ವಯಸ್ಸಿನವರಾಗಿದ್ದು, ತಿಂಗಳಿಗೆ 5000 ರೂಪಾಯಿ ಪಿಂಚಣಿ ಪಡೆಯಲು ಬಯಸುವಿರಾ? ಹಾಗಾದರೆ, ಇಲ್ಲಿದೆ ನಿಮಗೆ ಬೆಸ್ಟ್ ಆಫರ್.
ನೀವು ಒಂದು ನಿಗದಿತ ಮೊತ್ತವನ್ನು ಹೂಡಿಕೆ ಮಾಡಿ, ಪ್ರತಿ ತಿಂಗಳು ಗ್ಯಾರಂಟಿ ಪಿಂಚಣಿಯನ್ನು ನಿರೀಕ್ಷೆ ಮಾಡುತ್ತಿದ್ದರೆ ಅಂಥವರಿಗೆ ಸೂಕ್ತವೆನಿಸುವ ಯೋಜನೆಯೇ ಅಟಲ್ ಪಿಂಚಣಿ ಯೋಜನೆ (ಎಪಿವೈ). ಹಾಗಾದರೆ, ಕಡಿಮೆ ಹೂಡಿಕೆಯಿಂದ ತಿಂಗಳಿಗೆ 5000 ರೂಪಾಯಿವರೆಗೆ ಖಾತರಿ ಪಿಂಚಣಿ ಮೊತ್ತವನ್ನು ಹೇಗೆ ಪಡೆಯಬಹುದು ಎಂಬುದರ ಮಾಹಿತಿ ಇಲ್ಲಿದೆ, ಮುಂದೆ ಓದಿ...

ಅಟಲ್ ಪಿಂಚಣಿ ಯೋಜನೆ ಅಂದರೇನು?
ಕೇಂದ್ರ ಸರ್ಕಾರವು ಅಟಲ್ ಪಿಂಚಣಿ ಯೋಜನೆಯನ್ನು 2015-16ರ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದು, ವೃದ್ಧಾಪ್ಯದಲ್ಲಿ ಹಾಗೂ ಅಸಂಘಟಿತ ವಲಯದಲ್ಲಿ ದುಡಿಯುವರಿಗೆ ಆರ್ಥಿಕ ಬೆಂಬಲವನ್ನು ಒದಗಿಸುವ ಯೋಜನೆ ಇದಾಗಿದೆ. ಆ ಮೂಲಕ ಕೇಂದ್ರ ಸರ್ಕಾರವು ನಿವೃತ್ತಿ ಜೀವನಕ್ಕೆ ಬೇಕಾಗಿ ಹಣದ ಉಳಿತಾಯ ಮಾಡುವತ್ತ ಉದ್ಯೋಗಸ್ಥರಿಗೆ ಉತ್ತೇಜನವನ್ನು ನೀಡುತ್ತಿದೆ.
ಇನ್ನೊಂದೆಡೆ ಅಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರನ್ನು ಸ್ವಯಂ ಪ್ರೇರಿತರಾಗಿ ಉಳಿತಾಯ ಮಾಡುವ ಮೂಲಕ ತಮ್ಮ ನಿವೃತ್ತಿ ಬದುಕನ್ನು ನೆಮ್ಮದಿಯಿಂದ ಕಳೆಯುವುದಕ್ಕೆ ಈ ಯೋಜನೆ ಪ್ರೇರಣೆಯಾಗಿದೆ. ರಾಷ್ಟ್ರೀಯ ಪಿಂಚಣಿ ಸಿಸ್ಟಮ್(ಎನ್‌ಪಿಎಸ್)ನಡಿ ಪಿಂಚಣಿ ನಿಧಿ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ(ಪಿಎಫ್‌ಆರ್‌ಡಿಎ)ವು ಈ ಯೋಜನೆಯನ್ನು ನಿರ್ವಹಿಸುತ್ತಿದೆ.
ಅಟಲ್ ಪಿಂಚಣಿ ಯೋಜನೆಯಡಿ ಫಲಾನುಭವಿಗಳಿಗೆ ತಿಂಗಳಿಗೆ 1000 ರೂಪಾಯಿಯಿಂದ 5000 ರೂಪಾಯಿವರೆಗೆ ಕನಿಷ್ಟ ಪಿಂಚಣಿಯನ್ನು ಖಾತರಿಪಡಿಸಲಾಗಿದೆ. ಈ ಕನಿಷ್ಟ ಪಿಂಚನಿಯ ಪ್ರಯೋಜನವನ್ನು ಕೇಂದ್ರ ಸರ್ಕಾರವು ಖಾತರಿಪಡಿಸುತ್ತದೆ. ಕೇಂದ್ರವು ಚಂದಾದಾರರ ಕೊಡುಗೆಯ ಶೇಕಡ 50 ರಷ್ಟು ಅಥವಾ ವಾರ್ಷಿಕ 1000 ರೂಪಾಯಿ ಪೈಕಿ ಯಾವುದು ಕಡಿಮೆಯೋ ಅದನ್ನು ನೀಡುತ್ತದೆ.
ಯಾವುದೇ ಮಾನ್ಯತೆಯ ಸೊಷಿಯಲ್ ಸೆಕ್ಯುರಿಟಿ ಯೋಜನೆಗೆ ಒಳಪಡದವರು ಹಾಗೂ ತೆರಿಗೆ ಪಾವತಿಯನ್ನು ಮಾಡದ ಚಂದಾದಾರರಿಗೆ ಕೇಂದ್ರದ ಕೊಡುಗೆ ಕೂಡ ಲಭಿಸುತ್ತದೆ.
ಅಟಲ್ ಪಿಂಚಣಿ ಯೋಜನೆಯು 18ರಿಂದ 40 ವರ್ಷದೊಳಗಿನ ಎಲ್ಲ ಭಾರತೀಯ ನಾಗರಿಕರಿಗೆ ಲಭ್ಯವಿರುತ್ತದೆ.
5000 ರೂಪಾಯಿ ಪಿಂಚಣಿ ಪಡೆಯುವುದು ಹೇಗೆ?
ಈ ಯೋಜನೆಯಡಿ ಆರಂಭದಲ್ಲಿ ಹೂಡಿಕೆ ಮಾಡುವಾಗ, ಮಾಸಿಕ ಕಡಿಮೆ ಮೊತ್ತದ ಹಣವನ್ನುಪಾವತಿಸಬೇಕು. ಯಾರಾದರೂ 18 ವರ್ಷಕ್ಕೆ ಈ ಯೋಜನೆಗೆ ಸೇರುವುದಾದರೆ ಮಾಸಿಕವಾಗಿ 210 ರೂಪಾಯಿಯನ್ನು ಪಾವತಿಸಿ ಭವಿಷ್ಯದಲ್ಲಿ ತಿಂಗಳಿಗೆ 5000 ರೂಪಾಯಿ ಪಿಂಚಣಿ ಖಾತರಿಯನ್ನು ಪಡೆದುಕೊಳ್ಳಬಹುದು.
40 ವರ್ಷದಲ್ಲಿ ಈ ಯೋಜನೆಯಡಿ ಹೂಡಿಕೆ ಮಾಡುವವರು 60 ವರ್ಷದವರೆಗೆ ತಿಂಗಳಿಗೆ 1454 ರೂಪಾಯಿಯನ್ನು ಪಾವತಿಸುವುದರಿಂದ 5000 ರೂಪಾಯಿ ಪಿಂಚಣಿಯನ್ನು ಪಡೆಯಬಹುದು. ಇದು ಕೂಡ ನಿವೃತ್ತಿ ಬಳಿಕ ಮಾಸಿಕ 5000 ರೂಪಾಯಿ ಪಿಂಚಣಿಯನ್ನು ನೀಡುತ್ತದೆ. ಒಂದು ವೇಳೆ ತಿಂಗಳಿಗೆ 1454 ರೂಪಾಯಿ ಪಾವತಿಸಲು ಸಾಧ್ಯವಾಗದಿದ್ದರೆ ಅಂಥವರಿಗೂ ಈ ಯೋಜನೆಯಡಿ ಬೇರೆ ರೀತಿಯ ಆಯ್ಕೆಗೆ ಅವಕಾಶವಿದೆ.
ಅಂದರೆ 40 ವರ್ಷದವರು ತಿಂಗಳಿಗೆ 291 ರೂಪಾಯಿಯನ್ನು ಪಾವತಿಸಿ ಮಾಸಿಕ 1000 ರೂಪಾಯಿ ಪಿಂಚಣಿ ಪಡೆಯಬಹುದು. ಹಾಗೆಯೇ, 582 ರೂಪಾಯಿ ಪಾವತಿಸಿ ತಿಂಗಳಿಗೆ 2000 ರೂಪಾಯಿ ಪಿಂಚಣಿ ಪಡೆಯಬಹುದು. ಒಂದು ವೇಳೆ ತಿಂಗಳಿಗೆ 3000 ರೂಪಾಯಿ ಪಿಂಚಣಿ ಪಡೆಯಬೇಕಿದ್ದರೆ 60 ವರ್ಷದವರೆಗೆ 873 ರೂಪಾಯಿ ಪಾವತಿಸಬೇಕು. ಅದೇ ರೀತಿ ಮಾಸಿಕ 1164 ರೂಪಾಯಿ ಪಾವತಿಸಿದರೆ ತಿಂಗಳಿಗೆ 4000 ರೂಪಾಯಿ ಪಿಂಚಣಿ ಪಡೆಯಬಹುದು.
ಯೋಜನೆಯ ಅಂತ್ಯ ಹೇಗೆ?
60 ವರ್ಷ ತಲುಪಿದ ಬಳಿಕ ಶೇಕಡ 100 ಪಿಂಚಣಿ ಅನುಕೂಲತೆಗಳೊಂದಿಗೆ ಫಲಾನುಭವಿಗಳು ಅಟಲ್ ಪಿಂಚಣಿ ಯೋಜನೆಯಿಂದ ಹೊರಬರಬಹುದು. ಆ ಮೂಲಕ ಪಿಂಚಣಿ ಮೊತ್ತವು ಬರಲಾರಂಭಿಸುತ್ತದೆ. ಚಂದಾದಾರರು ಮೃತಪಟ್ಟರೆ ಅಂಥಹ ಸಂದರ್ಭದಲ್ಲಿ ಸಂಗಾತಿಯು ಹಾಗೂ ಇಬ್ಬರೂ ಮೃತಪಟ್ಟರೆ (ಚಂದಾದಾರರು ಮತ್ತು ಸಂಗಾತಿ), ಪಿಂಚಣಿ ನಿಧಿಯು ನಾಮಿನಿಗೆ ನೀಡಲಾಗುತ್ತದೆ.
ಈ ಯೋಜನೆಯಡಿ 60 ವರ್ಷಕಿಂತ ಮೊದಲೇ ಅದರಿಂದ ಹೊರಬರುವುದಕ್ಕೆ ಅಥವಾ ಯೋಜನೆಯನ್ನು ಕೊನೆಗೊಳಿಸುವುದಕ್ಕೆ ಅನುಮತಿಸುವುದಿಲ್ಲ. ಚಂದಾದಾರರು ಮೃತಪಟ್ಟರೆ, ಅನಾರೋಗ್ಯ ಸೇರಿದಂತೆ ಕೆಲವು ಸಂದರ್ಭದಲ್ಲಿ ಮಾತ್ರ ಯೋಜನೆಯನ್ನು ರದ್ದುಗೊಳಿಸಬಹುದು.


Click it and Unblock the Notifications