ಒಟಿಪಿ ಇಲ್ಲದೆಯೇ ಸ್ವಯಂಚಾಲಿತವಾಗಿ ಪಾವತಿ ಮಾಡುವ ಮಿತಿಯನ್ನು ಆರ್‌ಬಿಐ ಏರಿಕೆ ಮಾಡಿದೆ. ಒಟಿಪಿ ರಹಿತ ಆಟೋ ಪೇಮೆಂಟ್ ಮಿತಿಯನ್ನು ಆರ್‌ಬಿಐ 15000 ರೂಪಾಯಿಗೆ ಏರಿಕೆ ಮಾಡಲಾಗಿದೆ.
ಇನ್ನು ಮುಂದೆ ಬ್ಯಾಂಕ್ ಗ್ರಾಹಕರು 15000 ರೂಪಾಯಿವರೆಗಿನ ಆಟೋ ಪೇಮೆಂಟ್‌ಗಳನ್ನು ಒಟಿಪಿ ಇಲ್ಲದೆಯೇ ಮಾಡಬಹುದು. ಗ್ರಾಹಕರು 15000 ರೂಪಾಯಿವರೆಗಿನ ಈ ಆಟೋ ಪೇಮೆಂಟ್ ಅನ್ನು ಒಟಿಪಿ ಮೂಲಕ ದೃಢೀಕರಿಸಬೇಕಾಗಿಲ್ಲ ಎಂದು ಆರ್‌ಬಿಐ ಪ್ರಕಟಿಸಿದೆ.
ಈ ಬಗ್ಗೆ ಆರ್‌ಬಿಐ ಶೀಘ್ರವಾಗಿಯೇ ವಿವರವಾದ ಸೂಚನೆಯ್ನನು ನೀಡಲಿದೆ ಎಂದು ತಿಳಿಸಿದೆ. ಈ ಹಿಂದೆ ಆಟೋ ಪೇಮೆಂಟ್ ಎಂಬ ವ್ಯವಸ್ಥೆ ಇರಲಿಲ್ಲ. ಆದರೆ 2019ರಿಂದ ಈ ವಿಧಾನ ಜಾರಿಗೆ ಬಂದಿದೆ. ಇದರಿಂದಾಗಿ ಪ್ರತಿ ತಿಂಗಳು ನಿಮ್ಮ ಇಎಂಐ, ವಿಮೆ ಪ್ರೀಮಿಯಂ ಸ್ವಯಂಚಾಲಿತವಾಗಿ ಡೆಬಿಟ್ ಆಗುತ್ತದೆ.

ಇನ್ನು ಈ ಹಿಂದೆಯೇ ಆಟೋ ಡೆಬಿಟ್ ಮಿತಿಯನ್ನು ಹೆಚ್ಚಳ ಮಾಡಬೇಕು ಎಂಬ ಬೇಡಿಕೆ ಕೇಳಿ ಬಂದಿದೆ. ಈ ನಿಟ್ಟಿನಲ್ಲಿ ಆರ್‌ಬಿಐ ಚರ್ಚಿಸಿ ಮಿತಿಯನ್ನು ಹೆಚ್ಚಳ ಮಾಡಿದೆ. ಚಂದಾದಾರಿಕೆಗಳು, ವಿಮಾ ಪ್ರೀಮಿಯಂ, ಶಿಕ್ಷಣ ಶುಲ್ಕ ಮೊದಲಾದ ದೊಡ್ಡ ಮೌಲ್ಯದ ಪಾವತಿಗಳನ್ನು ಸುಲಭಗೊಳಿಸಲು ಮಿತಿ ಹೆಚ್ಚಳ ಮಾಡುವಂತೆ ಹಲವಾರು ಮಂದಿ ಆರ್‌ಬಿಐಗೆ ಮನವಿ ಮಾಡಿದ್ದರು.
ಈ ಹಿಂದೆ ಎಷ್ಟಿತ್ತು ಮಿತಿ?
ಈ ಹಿಂದೆ ಐದು ಸಾವಿರದವರೆಗಿನ ಮೊತ್ತವು ಆಟೋ ಡೆಬಿಟ್ ಆಗುತ್ತಿತ್ತು. ಅದಕ್ಕಿಂತ ಅಧಿಕ ಮೊತ್ತ ಪೇಮೆಂಟ್ ಆಗಲು ಗ್ರಾಹಕರು ಒಟಿಪಿ ನಮೂದಿಸುವ ಅಗತ್ಯ ಇತ್ತು. ಆದರೆ ಈಗ ಮಿತಿಯನ್ನು ಹೆಚ್ಚಳ ಮಾಡಲಾಗಿದೆ.
ಇನ್ನು ನೀವು ಈ ಆಟೋ ಪೇಮೆಂಟ್ ಅನ್ನು ನಿಷ್ಕ್ರೀಯ ಕೂಡಾ ಮಾಡುವ ಆಯ್ಕೆ ನಿಮಗೆ ಇದೆ. ನಿಮ್ಮ ಬ್ಯಾಂಕ್‌ನಿಂದ ಸಾಲದ, ವಿಮೆ ಅಥವಾ ಚಂದಾದಾರಿಕೆಯ ಮೊತ್ತವು ಆಟೋ ಡೆಬಿಟ್ ಆಗಬಾರದೆಂದರೆ ಅದನ್ನು ಬದಲಾವಣೆ ಮಾಡುವ ಆಯ್ಕೆಯು ನಿಮಗೆ ಸಂಸ್ಥೆಗಳು ನೀಡುತ್ತದೆ.
ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಡೆಬಿಟ್ ಆಗುವುದಕ್ಕೂ 24 ಗಂಟೆಗಳ ಮುನ್ನವೇ ನಿಮಗೆ ಈ ಬಗ್ಗೆ ಸಂದೇಶ ಬರಲಿದೆ. ಈ ವೇಳೆ ನಿಮ್ಮ ಖಾತೆಯಲ್ಲಿ ವಹಿವಾಟಿಗೆ ಬೇಕಾದಷ್ಟು ಮೊತ್ತ ಇದೆಯೇ ಎಂದು ಖಚಿತಪಡಿಸಿಕೊಳ್ಳಿ. ಇಲ್ಲವಾದರೆ ನಿಮಗೆ ಶುಲ್ಕ ಬೀಳುವ ಸಾಧ್ಯತೆ ಇದೆ.
ಆರ್‌ಬಿಐ ರುಪೇ ಕ್ರೆಡಿಟ್ ಕಾರ್ಡ್ ಬಳಸಿ ಯುಪಿಐ ಪಾವತಿ ಮಾಡಲು ಕೂಡಾ ಅವಕಾಶ ನೀಡಿದೆ. ವ್ಯಾಪಾರಿಗಳೊಂದಿಗೆ ವಹಿವಾಟು ನಡೆಸುವ ಸಂದರ್ಭದಲ್ಲಿ ಇದನ್ನು ಬಳಕೆ ಮಾಡಬಹುದಾಗಿದೆ. ಗ್ರಾಮೀಣ ಹಾಗೂ ನಗರ ಸಹಕಾರಿ ಬ್ಯಾಂಕ್‌ಗಳಲ್ಲಿ ಗೃಹ ಸಾಲದ ಮಿತಿಯನ್ನು ಹೆಚ್ಚಿಸಲಾಗಿದೆ.
ಕಳೆದ ದಶಕದಿಂದ ಗೃಹ ಸಾಲದ ಬೇಡಿಕೆ ಅಧಿಕವಾದ ಕಾರಣದಿಂದಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಆರ್‌ಬಿಐ ವಸತಿ ವಲಯಕ್ಕೆ ಸಾಲದ ಹರಿವು ಅಧಿಕ ಮಾಡುವ ನಿಟ್ಟಿನಲ್ಲಿ ವಸತಿ ಯೋಜನೆಗೆ ಹಣಕಾಸು ವಿಸ್ತರಣೆ ಮಾಡಲು ಗ್ರಾಮೀಣ ಸಹಕಾರಿ ಬ್ಯಾಂಕ್‌ಗಳಿಗೆ ಅನುಮತಿ ನೀಡಿದೆ. ಗ್ರಾಮೀಣ ಬ್ಯಾಂಕ್‌ಗಳು ಈಗ ವಾಣಿಜ್ಯ ರಿಯಲ್ ಎಸ್ಟೇಟ್ ಅಥವಾ ಗೃಹ ಯೋಜನೆಗೆ ತಮ್ಮ ಒಟ್ಟು ಆಸ್ತಿಯ ಶೇಕಡ ಐದರಷ್ಟು ಹಣವನ್ನು ಸಾಲವಾಗಿ ನೀಡಬಹುದು.


Click it and Unblock the Notifications