ಜೀವನವೆಂದಾಗ ಅದರಲ್ಲಿ ಮುಖ್ಯ ಪಾತ್ರವನ್ನು ವಹಿಸುವುದು ಹಣ. ನಾವು ಹಣವನ್ನು ಎಷ್ಟು ಉಳಿತಾಯ ಮಾಡುತ್ತೇವೋ ಅಷ್ಟು ನಮ್ಮ ಭವಿಷ್ಯ ಭದ್ರವಾಗಿರಲಿದೆ. ನಾವು ಉಳಿತಾಯ ಮಾಡಿದ ಹಣವೇ ಎಂದಿಗೂ ನಮ್ಮ ಕಷ್ಟ ಕಾಲಕ್ಕೆ ಸಹಾಯವಾಗುವುದು. ಹಣ ಉಳಿತಾಯದ ಜೊತೆಗೆ ನಾವು ಕೋಟ್ಯಾಧಿಪತಿಯಾದರೆ ಜೀವನ ಸುಖಮಯ ಎಂಬ ಕನಸು ಕಾಣುವವರು ಎಷ್ಟೋ ಮಂದಿ ಇದ್ದಾರೆ.
ಹೀಗಿರುವಾಗ ನಾವು ನಿವೃತ್ತಿ ವೇಳೆಗೆ ಕೋಟ್ಯಾಧಿಪತಿಯಾಗಲು ಸಾಧ್ಯವಿರುವ ವಿಧಾನದ ಬಗ್ಗೆ ತಿಳಿಯುವುದು ಬೇಡವೇ?. ಹೌದು ಈ 15x15x15 ನಿಯಮವನ್ನು ನಾವು ಪಾಲನೆ ಮಾಡಿದರೆ ನಾವು ನಿವೃತ್ತಿ ವೇಳೆಗೆ ಕೋಟ್ಯಾಧಿಪತಿಯಾಗಲು ಸಾಧ್ಯವಾಗಲಿದೆ. 15 ವರ್ಷಗಳ ಕಾಲ ಮಾಸಿಕವಾಗಿ 15 ಸಾವಿರ ರೂಪಾಯಿಯನ್ನು ಶೇಕಡ 15ರಷ್ಟು ವಾರ್ಷಿಕ ರಿಟರ್ನ್ ಲೆಕ್ಕಾಚಾರದಲ್ಲಿ ಸ್ಟಾಕ್/ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವುದು ಈ ವಿಧಾನವಾಗಿದೆ.

ಅಧಿಕ ರಿಟರ್ನ್ ಲಭ್ಯವಾಗಲು ಸಂಪೂರ್ಣವಾಗಿ ಕಾಂಪೋಂಡಿಂಗ್ ಕಾರಣವಾಗಿದೆ. ನಾವು 15x15x15 ನಿಯಮವನ್ನು ಅರ್ಥಮಾಡಿಕೊಳ್ಳುವ ಮೊದಲು ಕಂಪೋಂಡಿಂಗ್ ಎಂದರೆ ಏನೆಂದು ಅರ್ಥಮಾಡಿಕೊಳ್ಳೋಣ. ಕಾಂಪೋಂಡಿಂಗ್ ಎಂಬ ಪದವನ್ನು ಹೆಚ್ಚಾಗಿ ಮ್ಯೂಚುವಲ್ ಫಂಡ್‌ನಲ್ಲಿ ಬಳಕೆ ಮಾಡಲಾಗುತ್ತದೆ. ಸಣ್ಣ ಮೊತ್ತವನ್ನು ನಿರಂತರವಾಗಿ ಹೂಡಿಕೆ ಮಾಡಿ ಮೊತ್ತವು ಬಡ್ಡಿದರ ಸೇರಿ ಅಧಿಕವಾಗುವ ಪ್ರಕ್ರಿಯೆ ಇದಾಗಿದೆ.
ನಿರ್ದಿಷ್ಟ ಕಾಂಪೋಂಡಿಂಗ್ ಅವಧಿಯಲ್ಲಿ ಗಳಿಸಿದ ಬಡ್ಡಿಯು ಮುಂದಿನ ಕಾಂಪೋಂಡಿಂಗ್ ಅವಧಿಯಲ್ಲಿ ಬಡ್ಡಿಯನ್ನು ಗಳಿಸುತ್ತದೆ. ಪ್ರಿನ್ಸಿಪಲ್ ಮೊತ್ತವು ಮ್ಯೂಚುವಲ್ ಫಂಡ್ ಹೂಡಿಕೆಯ ಮೂಲವಾಗಿರುತ್ತದೆ. ಈ ಮೊತ್ತವು ಬಡ್ಡಿದರ ಸೇರಿ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಾ ಸಾಗುತ್ತದೆ. ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸುವ ಮೂಲಕ ಅಧಿಕ ಕಾಂಪೋಂಡಿಂಗ್ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತದೆ.
ಕಾಂಪೋಂಡಿಂಗ್‌ನಿಂದಾಗುವ ಲಾಭಗಳು
ನಾವು ಈ ಕಾಂಪೋಂಡಿಂಗ್‌ನಿಂದ ಆಗುವ ಲಾಭ ಅಥವಾ ಇದರ ಪ್ರಯೋಜನವನ್ನು ಉದಾಹರಣೆಯ ಮೂಲಕ ಉತ್ತಮವಾಗಿ ಅರ್ಥ ಮಾಡಿಕೊಳ್ಳು ಸಾಧ್ಯವಾಗುತ್ತದೆ. ರಾಮ್ ಮತ್ತು ಶಾಮ್ ಎಂಬ ಇಬ್ಬರು ವ್ಯಕ್ತಿಗಳನ್ನು ಕಲ್ಪಿಸಿಕೊಳ್ಳಿ. ರಾಮ 20 ವರ್ಷದವನಿದ್ದಾಗ ಹೂಡಿಕೆ ಮಾಡಲು ಪ್ರಾರಂಭಿಸಿ ಹತ್ತು ವರ್ಷಗಳ ನಂತರ ಹೂಡಿಕೆಯನ್ನು ನಿಲ್ಲಿಸಿದರು, ಆದರೆ ಹೂಡಿಕೆಯನ್ನು ವಿತ್‌ಡ್ರಾ ಮಾಡಿಕೊಂಡಿಲ್ಲ. 60 ವರ್ಷದವರೆಗೆ ಹೂಡಿಕೆಯನ್ನು ಹಾಗೆಯೇ ಇರಿಸಿದ್ದರು ಎಂದುಕೊಳ್ಳೋಣ.
ಇನ್ನೊಂದೆಡೆ ಶ್ಯಾಮ್ 30 ವರ್ಷದವರಾಗಿದ್ದಾಗ ಹೂಡಿಕೆ ಮಾಡಲು ಆರಂಭ ಮಾಡಿ ತನಗೆ 60 ವರ್ಷವಾಗುವವರೆಗೂ ಹೂಡಿಕೆ ಮಾಡಿದರು ಅಂದುಕೊಳ್ಳಿ. ಆದರೆ 60 ವರ್ಷವಾದಾಗ ಶ್ಯಾಮ್‌ಗಿಂತ ಅಧಿಕ ರಾಮ್ ರಿಟರ್ನ್ ಪಡೆಯುತ್ತಾರೆ. ಇದಕ್ಕೆ ಮುಖ್ಯ ಕಾರಣ ಕಾಂಪೋಂಡಿಂಗ್ ಆಗಿದೆ. ಈ ಕೆಳಗಿನ ಗ್ರಾಫ್ ಮೂಲಕ ಅದನ್ನು ತಿಳಿದುಕೊಳ್ಳಿ.
ಲೆಕ್ಕಾಚಾರ ಹೇಗಿದೆ ನೋಡಿ
ಹೂಡಿಕೆ ಆರಂಭ ಮಾಡಿದ ವರ್ಷ: ರಾಮ್ 20, ಶ್ಯಾಮ್ 30
ಹೂಡಿಕೆ ಸ್ಥಗಿತಗೊಳಿಸಿದ ವರ್ಷ: ರಾಮ್ 60, ಶ್ಯಾಮ್ 60
ಹೂಡಿಕೆ ಅವಧಿ: ರಾಮ್ 10 ವರ್ಷ, ಶ್ಯಾಮ್ 30 ವರ್ಷ
ಹೋಲ್ಡಿಂಗ್ ಅವಧಿ: ರಾಮ್ 40 ವರ್ಷ, ಶ್ಯಾಮ್ 30 ವರ್ಷ
ಹೂಡಿಕೆ ಮಾಡಿದ ಮೊತ್ತ: ಇಬ್ಬರೂ ಮಾಸಿಕ 2000 ರೂಪಾಯಿ
ಒಟ್ಟು ಹೂಡಿಕೆ ಮಾಡಿದ ಮೊತ್ತ: ರಾಮ್ 2,40,000 ರೂಪಾಯಿ, ಶ್ಯಾಮ್ 7,20,000 ರೂಪಾಯಿ
ಲಭ್ಯವಾದ ರಿಟರ್ನ್: ಇಬ್ಬರಿಗೂ ವಾರ್ಷಿಕವಾಗಿ ಶೇಕಡ 10
ವಿತ್‌ಡ್ರಾ ಸಂದರ್ಭದಲ್ಲಿನ ಲೆಕ್ಕಾಚಾರ: ರಾಮ್ 81,27,183 ರೂಪಾಯಿ (33.9 ಪಟ್ಟು ಹೆಚ್ಚಳ), ಶ್ಯಾಮ್ 45,20,796 (6.3 ಪಟ್ಟು ಹೆಚ್ಚಳ)
15x15x15 ನಿಯಮ ಎಂದರೇನು?
15 ವರ್ಷಗಳ ಕಾಲ ಮಾಸಿಕವಾಗಿ 15 ಸಾವಿರ ರೂಪಾಯಿಯನ್ನು ಶೇಕಡ 15ರಷ್ಟು ವಾರ್ಷಿಕ ರಿಟರ್ನ್ ಲೆಕ್ಕಾಚಾರದಲ್ಲಿ ಸ್ಟಾಕ್/ ಮ್ಯೂಚುವಲ್ ಫಂಡ್‌ನಲ್ಲಿ ಹೂಡಿಕೆ ಮಾಡುವುದನ್ನು 15x15x15 ನಿಯಮ ಎಂದು ಕರೆಯಲಾಗುತ್ತದೆ. ನೀವು ಈ ರೀತಿ ಹೂಡಿಕೆ ಮಾಡಿದರೆ, 15 ವರ್ಷಗಳ ಬಳಿಕ ಬಡ್ಡಿದರ ಸೇರ್ಪಡೆಯಾಗಿ 1,0027,601 ರೂಪಾಯಿ ನಿಮಗೆ ಲಭ್ಯವಾಗಲಿದೆ. ನೀವು ಹೂಡಿಕೆ ಮಾಡಿದ ಮೊತ್ತ 27 ಲಕ್ಷ ಆಗಿರಲಿದೆ, 73 ಲಕ್ಷ ಬಡ್ಡಿದರದ ಮೂಲಕ ಲಭ್ಯವಾಗುತ್ತದೆ.


Click it and Unblock the Notifications