ಹಣ ಉಳಿತಾಯವೆಂಬ ವಿಶ್ವಾಮಿತ್ರನ ತಪಸ್ಸಿಗೆ 4 'ಮೇನಕೆಯರ' ಅಡ್ಡಿ

ಹಣ ಉಳಿತಾಯ ಮಾಡುವುದು ಅಂದರೆ ಶುದ್ಧಾನುಶುದ್ಧ ತಪಸ್ಸು ಮಾಡಿದಂತೆಯೇ. ನಾನಾ ಬಗೆಯ ಆಕರ್ಷಣೆ, ಪ್ರಲೋಭನೆಗಳನ್ನು ಮೀರಿ ನಿಮ್ಮ ಗುರಿಯನ್ನು ಅಥವಾ ಉದ್ದೇಶವನ್ನು ಸಾಧಿಸುವುದೇ ತಪಸ್ಸು ತಾನೇ? ಹಣ ಉಳಿತಾಯ ಕೂಡ ಹಾಗೆ. ನಿಮ್ಮ ಸುತ್ತಮುತ್ತಲಿನ ನಾನಾ ಬಗೆಯ ಆಕರ್ಷಣೆ, ಪ್ರಲೋಭನೆಯನ್ನೂ ಮೀರಿ ಹಣ ಉಳಿತಾಯ ಮಾಡಿದಿರಿ ಅಂದರೆ ಅದು ನಿಮ್ಮ 'ತಪಶ್ಶಕ್ತಿ'ಯಿಂದಲೇ.

ಎಲ್ಲೆಲ್ಲಿ ನಮ್ಮ ಮನಸ್ಸು ಬಯಕೆ ತೋಟದ ಬೇಲಿಯನ್ನು ಹಾರಿ, ಉಳಿತಾಯದ ಆಲೋಚನೆಗೆ ಎಳ್ಳು- ನೀರು ಬಿಡುವಂತೆ ಮಾಡುತ್ತದೆ ಎಂಬುದನ್ನು ಈ ಲೇಖನದಲ್ಲಿ ಉದಾಹರಣೆ ಸಹಿತವಾಗಿ ವಿವರಿಸಲಾಗುತ್ತಿದೆ. ನಿಮಗೂ ಇದು ಹೌದೆನಿಸಿದರೆ ಇನ್ನು ಮುಂದೆ ಹೀಗಾಗದಂತೆ ಎಚ್ಚರ ವಹಿಸಿ. ಏಕೆಂದರೆ, ಯಾವುದೇ ತಪಸ್ಸು ವ್ಯರ್ಥ ಆಗುವುದಿಲ್ಲ; ಅದರಲ್ಲೂ ಅದಕ್ಕೆ ಸದುದ್ದೇಶ ಇದ್ದಲ್ಲಿ ಪ್ರಯತ್ನ ಹುಸಿ ಹೋಗುವ ಮಾತೇ ಇಲ್ಲ.

ಮನೆಯಲ್ಲೂ ಮಳಿಗೆಯಲ್ಲೂ ಒಂದೇ ಲೆಕ್ಕ ಇರಬೇಕು

ಮನೆಯಲ್ಲೂ ಮಳಿಗೆಯಲ್ಲೂ ಒಂದೇ ಲೆಕ್ಕ ಇರಬೇಕು

ಯಾವುದನ್ನೇ ಖರೀದಿ ಮಾಡಲು ಹೋಗುವಾಗ ಏನು ಬೇಕು ಮತ್ತು ಅದೆಷ್ಟು ಬೆಲೆ ಕೊಡಬೇಕು ಎಂಬ ಬಗ್ಗೆ ಸ್ಪಷ್ಟತೆ ಇರಲಿ. ಉದಾಹರಣೆಗೆ ರಾಯಲ್ ಎನ್ ಫೀಲ್ಡ್ ಕ್ಲಾಸಿಕ್ 350 ಬೈಕ್ ತೆಗೆದುಕೊಳ್ಳಬೇಕು ಅಂದುಕೊಂಡಲ್ಲಿ, ನೀವು ಅಂಗಡಿಗೆ ಹೋದ ಮೇಲೂ ಅದೇ ಮನಸ್ಥಿತಿಯಲ್ಲಿ ಇರುವುದು ಮುಖ್ಯ. ಬಹಳ ಮಂದಿ 350 ಸಿ.ಸಿ. ಬೈಕ್ ಗೂ 500 ಸಿ.ಸಿ.ಯದಕ್ಕೂ ಮೂವತ್ತು ಸಾವಿರ ಅಥವಾ ನಲವತ್ತು ಸಾವಿರ ರುಪಾಯಿ ವ್ಯತ್ಯಾಸ. 500 ಸಿ.ಸಿ. ಬೈಕ್ ತೆಗೆದುಕೊಂಡು ಬಿಡೋಣ ಎಂದುಕೊಳ್ಳುತ್ತಾರೆ. ಇದು ನಿಮ್ಮ ಆಲೋಚನೆಯಾದರೆ ಬಹಳ ವಿಚಾರದಲ್ಲಿ ಲೆಕ್ಕಾಚಾರ ತಪ್ಪುತ್ತಿದ್ದೀರಿ ಅಂತಲೇ ಅರ್ಥ. ಈಗ ಒಂದೊಂದಾಗಿ ಯೋಚನೆ ಮಾಡಿ. 500 ಸಿ.ಸಿ. ಬೈಕ್ ಖರೀದಿಗೆ ಹೆಚ್ಚುವರಿಯಾಗಿ ಎಷ್ಟು ದುಡ್ಡು ನೀಡಬೇಕಾಗುತ್ತದೆ, ಈ ಮುಂಚೆ ನಿರ್ಧರಿಸಿದ್ದ ಬೈಕ್ ಗೂ ಈಗಿನದಕ್ಕೂ ಮೈಲೇಜ್ ನಲ್ಲಿ ಎಷ್ಟು ವ್ಯತ್ಯಾಸ- ಇದರಿಂದ ತಿಂಗಳಿಗೆ ಪೆಟ್ರೋಲ್ ಗೆ ಹೆಚ್ಚುವರಿಯಾಗಿ ಎಷ್ಟು ಖರ್ಚು ಮಾಡಬೇಕಾಗುತ್ತದೆ? ನಿಮ್ಮ ಅಗತ್ಯ ಏನು ಎಂಬುದನ್ನು ಮುಂಚೆಯೇ ಲೆಕ್ಕ ಹಾಕಿಟ್ಟುಕೊಂಡಿದ್ದರೆ ನಿರ್ಧಾರ ಬದಲಿಸುವ ಅಗತ್ಯವೇ ಇರುವುದಿಲ್ಲ. ಮನೆಯಲ್ಲಿ ಇರುವ ಲೆಕ್ಕಾಚಾರ ಮಳಿಗೆಗೆ ಹೋದ ಮೇಲೆ ಬದಲಾದರೆ ಅದು ಯಾವತ್ತಿದ್ದರೂ ಆತಂಕವೇ.

ಆಫರ್ ಇದ್ದಲ್ಲಿ ಅಗತ್ಯ ಇಲ್ಲದಿದ್ದರೂ ಖರೀದಿ

ಆಫರ್ ಇದ್ದಲ್ಲಿ ಅಗತ್ಯ ಇಲ್ಲದಿದ್ದರೂ ಖರೀದಿ

'ಒಂದು ಸೀರೆ ಕೊಂಡರೆ ಮತ್ತೊಂದು ಉಚಿತ'- ಇಂಥದ್ದೊಂದು ಆಫರ್ ಅದೆಷ್ಟು ಬಾರಿಗೆ ನೀವು ಕೇಳಿರ್ತೀರಿ ಅಥವಾ ಅದರಲ್ಲಿ ಖರೀದಿ ಮಾಡಿರ್ತೀರಿ! ಆದರೆ ಆಫರ್ ಇದೆ ಎಂಬ ಕಾರಣಕ್ಕೆ ಖರೀದಿ ಮಾಡಿದರೋ ಅಥವಾ ನಿಮಗೆ ಅಗತ್ಯ ಇದೆ ಅಂತಲೋ? ಇದು ಕಸ್ಟಮರ್ ಸೈಕಾಲಜಿ. ಯಾವುದಾದರೂ ಆಫರ್ ಇದೆ ಅಂದಾಗ ಅಗತ್ಯ ಇಲ್ಲದಿದ್ದರೂ ಖರೀದಿಗೆ ಮುಂದಾಗುತ್ತಾರೆ. ಅದಕ್ಕೆ ನಾನಾ ಬಗೆಯ ಸಮರ್ಥನೆಯನ್ನೂ ನೀಡುತ್ತಾರೆ. ಆಗ ಬಹು ಮುಖ್ಯವಾದ ತರ್ಕವೊಂದನ್ನು ಮರೆಯುತ್ತಾರೆ. ಅದೇನೆಂದರೆ, ಅದೆಂಥ ವ್ಯಾಪಾರಿ ಆದರೂ ಲಾಭ ಇಲ್ಲದೆ ಏನನ್ನಾದರೂ ಮಾರುತ್ತಾರಾ? ಲಾಭದ ಪ್ರಮಾಣದಲ್ಲಿ ಸ್ವಲ್ಪ ಭಾಗ ಬಿಟ್ಟುಕೊಡಬಹುದು. ಆದರೆ ಲಾಭವೇ ಇಲ್ಲದಂತೆ ಕೊಡಲು ಸಾಧ್ಯವಾ? ಆದ್ದರಿಂದ 'ಆಫರ್' ಇದೆ ಎಂಬ ವಿಷಯ ಕಿವಿಗೆ ಬೀಳುತ್ತಿದ್ದಂತೆಯೇ ಮುಗಿ ಬಿದ್ದು ಖರೀದಿ ಮಾಡುವ ಮನಸ್ತತ್ವವನ್ನು ಬಿಡಿ.

ಸಾಲ ಸಿಗುತ್ತದೆ ಅಂತಲೇ ಮನೆಗೆ ತರುವುದು

ಸಾಲ ಸಿಗುತ್ತದೆ ಅಂತಲೇ ಮನೆಗೆ ತರುವುದು

ಇತ್ತೀಚಿನ ವರ್ಷಗಳಲ್ಲಿ ಎಲ್ಲರಿಗೂ ಇನ್ವೆಸ್ಟ್ ಮೆಂಟ್ ಮಾಡಬೇಕು. ಅದು ಕೂಡ ರಿಯಲ್ ಎಸ್ಟೇಟ್ ಅಂದುಬಿಟ್ಟರೆ ಮುಗಿದೇ ಹೋಯಿತು. ಸಾಲವಾದರೂ ಮಾಡಿ ದುಡ್ಡು ಹಾಕುತ್ತಾರೆ. ನೆನಪಿರಲಿ, ಹೂಡಿಕೆ ಅಂದರೆ ಸಾಲ ಮಾಡಿ ಹಣ ತಂದು ಹಾಕುವುದು ಅಂತಲ್ಲ. ಅದರಲ್ಲೂ ಯಾವುದಾದರೂ ಪ್ರಾಪರ್ಟಿಗೆ ಸಾಲ ಸಿಗುತ್ತದೆ ಅಂದರೆ, ಪೂರ್ವಾಪರ ಆಲೋಚಿಸದೆ ಹಣ ಸಾಲ ಪಡೆದು, ಹೂಡಿಕೆ ಮಾಡಿಬಿಡುತ್ತಾರೆ. ಹೂಡಿಕೆ ಒಂದೇ ಅಲ್ಲ, ಟೀವಿ, ವಾಷಿಂಗ್ ಮಷೀನ್, ಲ್ಯಾಪ್ ಟಾಪ್... ಹೀಗೆ ಏನಾದರೂ ಸರಿ, ಸಾಲ ಸಿಗುತ್ತದೆ ಮತ್ತು ಕೆಲವು ಬಾರಿ ಬಡ್ಡಿ ಇಲ್ಲದೆ ಸಾಲ ದೊರೆಯುತ್ತದೆ ಅಂದಾಕ್ಷಣ ತಮಗೆ ಧರ್ಮಕ್ಕೆ ಏನೋ ಸಿಗುತ್ತಿದೆ ಎಂದು ಖರೀದಿ ಮಾಡಿಬಿಡುತ್ತಾರೆ. ತಿಂಗಳುಗಟ್ಟಲೆ ಅದಕ್ಕೆ ತಾವೇ ದುಡ್ಡು ಕಟ್ಟಬೇಕು, ಅದರ ಬದಲಿಗೆ ಹಣ ಉಳಿಸಬಹುದು. ಅದರಿಂದ ಭವಿಷ್ಯದಲ್ಲಿ ಸಹಾಯ ಆಗುತ್ತದೆ ಎಂಬ ಆಲೋಚನೆ ಇಲ್ಲದಿದ್ದಲ್ಲಿ ಹೇಗೆ?

ನಾಲ್ಕು ಜನರು ಏನೆಂದುಕೊಳ್ಳುತ್ತಾರೋ ಎಂಬ ಚಿಂತೆ

ನಾಲ್ಕು ಜನರು ಏನೆಂದುಕೊಳ್ಳುತ್ತಾರೋ ಎಂಬ ಚಿಂತೆ

ಕೆಲವರಿಗೆ ಬೇರೆಯವರು ಏನೆನ್ನುತ್ತಾರೋ ಎಂಬುದೇ ಸದಾ ಆತಂಕ. ಆ ಕಾರಣಕ್ಕೆ ದುಬಾರಿಯಾದರೂ ಬ್ರ್ಯಾಂಡ್ ವಸ್ತುಗಳ ಖರೀದಿ ಮಾಡುತ್ತಾರೆ. ಅಗತ್ಯ ಇಲ್ಲದಿದ್ದರೂ ಫ್ರಿಜ್, ವಾಷಿಂಗ್ ಮಷೀನ್, ದೊಡ್ಡ ಟೀವಿಗೆ... ಹಣ ಹಾಕುತ್ತಾರೆ. ಮನೆ ಕಟ್ಟುವಾಗ, ಮದುವೆ ಮಾಡುವಾಗ ಕೈ ಮೀರಿ ಖರ್ಚು ಮಾಡುತ್ತಾರೆ. ಮುಖ್ಯವಾಗಿ ಬೇರೆಯವರು ಏನಂದು ಬಿಡುತ್ತಾರೋ ಎಂಬುದೇ ಅವರ ಚಿಂತೆ. ತಮ್ಮ ಮಕ್ಕಳನ್ನು ಶಕ್ತಿ ಮೀರಿ ದುಬಾರಿ ಶಾಲೆಗೆ ಕಳಿಸುತ್ತಾರೆ. ಸಿಕ್ಕಾಪಟ್ಟೆ ಖರ್ಚಿನ ಛತ್ರದಲ್ಲಿ ಮದುವೆ ಮಾಡುತ್ತಾರೆ. ಸಾಲ ತಂದಾದರೂ ಒಡವೆ- ವಸು, ಕಾರು, ಸೈಟು ಕೊಡುತ್ತಾರೆ. ಒಟ್ಟಿನಲ್ಲಿ ನಾಲ್ಕು ಜನ ಮೆಚ್ಚುವಂತೆ ಇರಬೇಕು ಅಥವಾ ನಾಲ್ಕು ಮಂದಿ ನಮ್ಮ ಕಡೆ ಕೈ ತೋರಿಸಬಾರದು ಎಂಬುದು ಅವರ ಚಿಂತೆಯಾಗಿರುತ್ತದೆ. ಹೌದು, ವಿಪರೀತ ಖರ್ಚು ಮಾಡಿ ಸಮಸ್ಯೆ ಎದುರಾದಾಗಲೂ ಆ ನಾಲ್ಕು ಜನರೇ ತುಚ್ಛವಾಗಿ ಮಾತನಾಡಬಹುದಲ್ವಾ? ಆದ್ದರಿಂದ ನಾಲ್ಕು ಜನರು ಏನಂದುಕೊಳ್ಳುತ್ತಾರೆ ಎಂಬ ಕಾರಣಕ್ಕೆ ಉಳಿತಾಯದ ಮನೋಭಾವ ಬಿಡಬಾರದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+