ಕಳೆದ ಎರಡು ತಿಂಗಳಲ್ಲಿ ಟೊಮೆಟೊ ದರವು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಕಳೆದ ಕೆಲವು ದಿನಗಳಲ್ಲಿ ಕೊಂಚ ಇಳಿಕೆ ಕಾಣುತ್ತಿದೆ. ಇದರಿಂದಾಗಿ ಗ್ರಾಹಕರು ಕೊಂಚ ನಿಟ್ಟುಸಿರು ಬಿಡುತ್ತಿದ್ದಂತೆ ಈಗ ಗಗನಕ್ಕೆ ಏರುತ್ತಿರುವ ಈರುಳ್ಳಿ ಬೆಲೆಯು ಭಾರತೀಯ ನಾಗರಿಕರ ಜೇಬಿಗೆ ಕತ್ತರಿ ಹಾಕಿದೆ. ಈ ಬೆಲೆ ಏರಿಕೆಗೆ ಕಡಿವಾಣ ಹಾಕುವ ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ.
ಹಣದುಬ್ಬರದ ಮೇಲಿನ ಈ ಈರುಳ್ಳಿ ದರದ ಪ್ರಭಾವವನ್ನು ನಿಭಾಯಿಸುವ ನಿಟ್ಟಿನಲ್ಲಿ ಹಣಕಾಸು ಸಚಿವಾಲಯವು ಈರುಳ್ಳಿಯ ಮೇಲೆ ಶೇಕಡ 40 ರಷ್ಟು ರಫ್ತು ಸುಂಕವನ್ನು ವಿಧಿಸಿದೆ. ಹಾಗೆಯೇ ಸಂಗ್ರಹಣೆ ಮಿತಿಯನ್ನು ಹೆಚ್ಚಿಸಿದೆ. ಇನ್ನು ಈರುಳ್ಳಿ ಬೆಲೆ ಏರಿಕೆಯೂ ಟೊಮೆಟೊ ಬೆಲೆ ಏರಿಕೆಗೆ ಹೋಲಿಸಿದರೆ ಸರ್ಕಾರಕ್ಕೆ ಅಧಿಕ ಹಾನಿ ಉಂಟು ಮಾಡುವ ನಿರೀಕ್ಷೆಯಿದೆ. ಆದರೆ ಈ ವೇಳೆಯೇ ರೈತರು ಇದರಿಂದ ಲಾಭವನ್ನು ಪಡೆಯುವ ಸಾಧ್ಯತೆಯಿದೆ.

ಈರುಳ್ಳಿ ದರ ಏರಿಕೆ
ಈರುಳ್ಳಿ ಬೆಲೆ ಜೂನ್ ತಿಂಗಳಿನಿಂದ ಗಮನಾರ್ಹ ಏರಿಕೆ ಕಂಡಿದೆ. ಹಿಂದಿನ, ಗ್ರಾಹಕ ವ್ಯವಹಾರಗಳ ಇಲಾಖೆಯ ಅಂಕಿಅಂಶಗಳು ಪಶ್ಚಿಮ ವಲಯವಾರು ಮಾಸಿಕ ಸರಾಸರಿ ಈರುಳ್ಳಿಯ ಸರಾಸರಿ ಸಗಟು ಬೆಲೆಗಳು ಮೂರು ತಿಂಗಳಲ್ಲಿ ವೇಗವಾಗಿ ಏರಿದೆ ಎಂದು ತೋರಿಸಿದೆ.
ಈರುಳ್ಳಿ ಬೆಲೆಯು ಮೇ 2023 ರಲ್ಲಿ ಕ್ವಿಂಟಲ್‌ಗೆ 1,656.45 ರೂಪಾಯಿ ಆಗಿತ್ತು. ಆದರೆ ಜೂನ್ ತಿಂಗಳ ವೇಳೆಗೆ ಈರುಳ್ಳಿ ಬೆಲೆಯು 1,729.73 ರೂಪಾಯಿಗೆ ಏರಿಕೆಯಾಗಿದೆ. ಜುಲೈನಲ್ಲಿ ಕ್ವಿಂಟಲ್‌ಗೆ 1,999.16 ರೂಪಾಯಿಗೆ ಹೆಚ್ಚಳವಾಗಿದೆ. ಆಗಸ್ಟ್‌ನಲ್ಲಿ ನಾವು ನೋಡಿದಾಗ ಈವರೆಗೆ ಈರುಳ್ಳಿ ಬೆಲೆಯು ಕ್ವಿಂಟಲ್‌ಗೆ 2,189.17 ರೂಪಾಯಿಗೆ ಜಿಗಿತ ಕಂಡಿದೆ.
ತಿಂಗಳಿನಿಂದ ತಿಂಗಳಿಗೆ ನಾವು ಲೆಕ್ಕಾಚಾರವನ್ನು ನೋಡಿದಾಗ, ಜುಲೈನಲ್ಲಿ ಈರುಳ್ಳಿ ಬೆಲೆಗಳು ಶೇಕಡ 15.6 ರಷ್ಟು ಏರಿಕೆಯಾಗಿದೆ. ಆಗಸ್ಟ್‌ನಲ್ಲಿ ಈವರೆಗೆ ಶೇಕಡ 9.5 ರಷ್ಟು ಈರುಳ್ಳಿ ದರವು ಹೆಚ್ಚಳವಾಗಿದೆ.
ತರಕಾರಿ ಹಣದುಬ್ಬರವು ಏರಿಕೆ
ತರಕಾರಿ ಬೆಲೆಗಳು ಜುಲೈನಲ್ಲಿ ಹಣದುಬ್ಬರದ ಮೇಲೆ ಪರಿಣಾಮ ಬೀರಿವೆ. ತರಕಾರಿ ಹಣದುಬ್ಬರವು ಜುಲೈನಲ್ಲಿ ಸುಮಾರು ಶೇಕಡ 7.44ಕ್ಕೆ ಹೆಚ್ಚಳವಾಗಿದ್ದು, ಇದು ಏಪ್ರಿಲ್ 2022 ರಿಂದ ಅತ್ಯಧಿಕ ದರವಾಗಿದೆ. ಹಣದುಬ್ಬರವು ಮಾರ್ಚ್‌ನಿಂದ ಜೂನ್ 2023 ರವರೆಗೆ ಕೊಂಚ ಕೊಂಚವೇ ಇಳಿಕೆ, ಏರಿಕೆ ಕಂಡು, ಕೊನೆಗೂ ಆರ್‌ಬಿಐನ ಸಹಿಷ್ಣು ಮಟ್ಟಕ್ಕಿಂತ ಕೆಳಕ್ಕೆ ಇಳಿದಿದೆ.
ಈ ನಿಟ್ಟಿನಲ್ಲಿಯೇ ಸರ್ಕಾರವು ಎರಡು ಪ್ರಮುಖ ನಿರ್ಧಾರಗಳನ್ನು ಮಾಡಿದೆ. ಅದರಲ್ಲಿ ಒಂದು ಶೇಕಡ 40ರಷ್ಟು ರಫ್ತು ಸುಂಕವನ್ನು ವಿಧಿಸುವುದು, ಎರಡನೆಯದ್ದು ಈರುಳ್ಳಿ ಸಂಗ್ರಹ ಪ್ರಮಾಣವನ್ನು ಈ ವರ್ಷ 5 ಲಕ್ಷ ಮೆಟ್ರಿಕ್ ಟನ್‌ಗಳಿಗೆ ಏರಿಕೆ ಮಾಡುವುದು.
ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪಿಯೂಷ್ ಗೋಯಲ್ ಸುದ್ದಿಗಾರರೊಂದಿಗೆ ಮಾತನಾಡಿ, ಎನ್‌ಸಿಸಿಎಫ್ ಮತ್ತು ಎನ್‌ಎಎಫ್‌ಇಡಿ ಐತಿಹಾಸಿಕ ದರದಲ್ಲಿ ಪ್ರತಿ ಕ್ವಿಂಟಲ್‌ಗೆ 2,410 ರೂಪಾಯಿಗೆ ಐದು ಲಕ್ಷ ಟನ್ ಈರುಳ್ಳಿಯನ್ನು ಖರೀದಿಸಲಿದೆ. ಇದರಿಂದಾಗಿ ರೈತರಿಗೆ ಸಹಾಯವಾಗಲಿದೆ. ಈ ಹಿಂದೆ 3 ಲಕ್ಷ ಮೆಟ್ರಿಕ್ ಟನ್ ಈರುಳ್ಳಿ ಸಂಗ್ರಹಣೆ ಗುರಿ ಹೊಂದಲಾಗಿತ್ತು.
ಈರುಳ್ಳಿ ಮೇಲೆ ಸುಂಕ- ಗ್ರಾಹಕರು, ರೈತರ ಮೇಲೆ ಪ್ರಭಾವ
ರಫ್ತು ಸುಂಕದ ಕುರಿತು, ಮಾತನಾಡಿದ ಜಿಯೋಜಿತ್ ಫೈನಾನ್ಷಿಯಲ್ ಸರ್ವಿಸಸ್‌ನ ಮುಖ್ಯ ಹೂಡಿಕೆ ತಂತ್ರಜ್ಞ ಡಾ ವಿ ಕೆ ವಿಜಯಕುಮಾರ್, "ಕೃಷಿ ಉತ್ಪನ್ನಗಳ ಬೆಲೆ ಏರಿಕೆಯಾದಾಗ ರೈತರಿಗೆ ಲಾಭ ಮತ್ತು ಗ್ರಾಹಕರಿಗೆ ನಷ್ಟವಾಗುತ್ತದೆ. ರೈತರಿಗೆ ಲಾಭದಾಯಕ ಬೆಲೆ ಮತ್ತು ಸಮಂಜಸವಾದ ಬೆಲೆಗಳಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವುದು ಸರ್ಕಾರದ ಪಾತ್ರವಾಗಿದೆ. ಈ ಕಾರಣದಿಂದಾಗಿ ಈರುಳ್ಳಿ ರಫ್ತಿನ ಮೇಲೆ ಶೇ.40ರಷ್ಟು ಸುಂಕ ವಿಧಿಸುವ ನಿರ್ಧಾರ ಸಮರ್ಥನೀಯ. ಹಲವು ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆಗಳು ಸಮೀಪಿಸುತ್ತಿರುವಾಗ ಬೆಲೆಗಳನ್ನು ಹಿಡಿದಿಟ್ಟುಕೊಳ್ಳುವುದು ಸರ್ಕಾರಕ್ಕೆ ಮುಖ್ಯವಾಗಿದೆ," ಎಂದು ಹೇಳಿದ್ದಾರೆ.


Click it and Unblock the Notifications