ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) 2000 ರೂಪಾಯಿಯ ನೋಟನ್ನು ಚಲಾವಣೆಯಿಂದ ವಾಪಾಸ್ ಪಡೆದುಕೊಂಡಿದೆ. ಜನರಲ್ಲಿ ಇರುವ 2000 ರೂಪಾಯಿಯ ನೋಟನ್ನು ಬದಲಾವಣೆ ಮಾಡಿಕೊಳ್ಳುವಂತೆ ಅಥವಾ ಬ್ಯಾಂಕ್ ಖಾತೆಗೆ ಡೆಪಾಸಿಟ್ ಮಾಡುವಂತೆ ಆರ್‌ಬಿಐ ತಿಳಿಸಿದೆ. ಈ ನಡುವೆ ಬ್ಯಾಂಕ್‌ನಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಳವಾಗಿದೆ.
ಹೌದು, ಆರ್‌ಬಿಐ 2000 ರೂಪಾಯಿ ನೋಟನ್ನು ಚಲಾವಣೆಯಿಂದ ಹಿಂಪಡೆದ ಬಳಿಕ ಜನರು ನೋಟು ಜಮೆ ಮಾಡಲು ಬ್ಯಾಂಕ್‌ಗಳಿಗೆ ಬರುತ್ತಿದ್ದಾರೆ. ಸೆಪ್ಟೆಂಬರ್ ಅಂತ್ಯದವರೆಗೆ ಸಮಯವಿರುವುದರಿಂದ ಆತುರಪಡಬೇಡಿ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈಗಾಗಲೇ ಜನರಿಗೆ ಆರ್‌ಬಿಐ ಹೇಳಿದೆ.

ಆದರೆ ನೀವು ನೋಟನ್ನು ಜಮೆ ಮಾಡುವ ಮುನ್ನ ಹಣಕಾಸು ವಹಿವಾಟಿನ ಹೇಳಿಕೆ (SFT) ನಿಯಮಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ. ಹೌದು, ಕೆಲವು ಮಾರ್ಗಸೂಚಿಗಳನ್ನು ಪೂರೈಸದಿದ್ದರೆ, ನೀವು ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಪಡೆಯುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...
ಆದಾಯ ತೆರಿಗೆ ಕಾಯ್ದೆ ಬಗ್ಗೆ ಮಾಹಿತಿ ತಿಳಿದಿರಿ
ಆದಾಯ ತೆರಿಗೆ ಕಾನೂನು ಆರ್ಥಿಕ ವಹಿವಾಟಿನ ಹೇಳಿಕೆ ಅಥವಾ ತೆರಿಗೆದಾರರಿಂದ ಹೆಚ್ಚಿನ ಮೌಲ್ಯದ ವಹಿವಾಟುಗಳ ಮೇಲೆ ಕಣ್ಣಿಡಲಿದೆ. ಹಣಕಾಸು ವರ್ಷದಲ್ಲಿ ವ್ಯಕ್ತಿಯು ಕೈಗೊಳ್ಳುವ ಹೆಚ್ಚಿನ ಮೌಲ್ಯದ ವಹಿವಾಟುಗಳ ಡೇಟಾವನ್ನು ಸಂಗ್ರಹಿಸಲು ತೆರಿಗೆ ಅಧಿಕಾರಿಗಳು ಈ ಹೇಳಿಕೆಯನ್ನು ಬಳಸುತ್ತಾರೆ.
ಎಸ್‌ಎಫ್‌ಟಿ ನಿಯಮದ ಪ್ರಕಾರ, ಯಾವುದೇ ಅಧಿಕ ನಗದು ವಹಿವಾಟಿನ ಬಗ್ಗೆ ಬ್ಯಾಂಕ್‌ಗಳು ಆದಾಯ ತೆರಿಗೆ ಇಲಾಖೆಗೆ ಎಚ್ಚರಿಕೆ ನೀಡಬೇಕಾಗುತ್ತದೆ. ಹೆಚ್ಚುವರಿಯಾಗಿ, ಈ ಮಾಹಿತಿಯನ್ನು ಡೆಪಾಸಿಟ್‌ದಾರರ ವಾರ್ಷಿಕ ಮಾಹಿತಿ ಹೇಳಿಕೆ (AIS) ಮತ್ತು ಫಾರ್ಮ್ 26AS ನಲ್ಲಿ ಕಾಣಬಹುದಾಗಿದೆ.
ಬ್ಯಾಂಕ್‌ಗಳಲ್ಲಿನ ನಗದು ಡೆಪಾಸಿಟ್‌ಗಳಿಗೆ ವಾರ್ಷಿಕ ಗರಿಷ್ಠ ಮಿತಿಯು ಉಳಿತಾಯ ಖಾತೆಗೆ 10 ಲಕ್ಷ ರೂಪಾಯಿ ಎಂದು ನೀವು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ಕರೆಂಟ್ ಖಾತೆಯ ವಿಚಾರಕ್ಕೆ ನಾವು ಬಂದಾಗ, ಒಬ್ಬ ವ್ಯಕ್ತಿಯು ತನ್ನ ಖಾತೆಯಲ್ಲಿ ಒಂದು ಆರ್ಥಿಕ ವರ್ಷದಲ್ಲಿ 50 ಲಕ್ಷದವರೆಗೆ ಡೆಪಾಸಿಟ್ ಮಾಡಬಹುದಾಗಿದೆ.
ನಿಮ್ಮ ಖಾತೆಗೆ ಅಧಿಕ ಮೊತ್ತವನ್ನು ಜಮೆ ಮಾಡುವ ಮುನ್ನ ಕೆಲವು ದಾಖಲೆಗಳನ್ನು ನೀವು ಹೊಂದುವುದು ಅತೀ ಮುಖ್ಯವಾಗುತ್ತದೆ. ಅದಕ್ಕಾಗಿ ನೀವು ಬ್ಯಾಂಕ್‌ಗೆ ಭೇಟಿ ನೀಡಬೇಕಾಗುತ್ತದೆ ಮತ್ತು ನಗದು ಡೆಪಾಸಿಟ್ ಸ್ಲಿಪ್ ಅನ್ನು ಪೂರ್ಣಗೊಳಿಸಬೇಕಾಗುತ್ತದೆ.
ಈ ಸ್ಲಿಪ್‌ನಲ್ಲಿ ಖಾತೆ ಸಂಖ್ಯೆ, ಹೆಸರು ಮತ್ತು ಇತರೆ ಮಾಹಿತಿಯನ್ನು ನೀವು ಭರ್ತಿ ಮಾಡಬೇಕಾಗುತ್ತದೆ. ಆದಾಯ ತೆರಿಗೆ ನಿಯಮದ ಪ್ರಕಾರ 50,000 ರೂಪಾಯಿಗಿಂತ ಅಧಿಕ ಮೊತ್ತವನ್ನು ಡೆಪಾಸಿಟ್ ಮಾಡುವುದಾದರೆ ನೀವು ಪ್ಯಾನ್ ದಾಖಲೆಯನ್ನು ಸಲ್ಲಿಸುವುದು ಮುಖ್ಯವಾಗುತ್ತದೆ.
2000 ರೂಪಾಯಿಯ 50 ಸಾವಿರ ರೂಪಾಯಿಗಿಂತ ಅಧಿಕ ಮೊತ್ತವನ್ನು ನೀವು ಬ್ಯಾಂಕ್ ಖಾತೆಗೆ ಡೆಪಾಸಿಟ್ ಮಾಡುವ ನಿರ್ಧಾರವನ್ನು ಮಾಡಿದ್ದರೆ, ನೀವು ಬ್ಯಾಂಕ್‌ಗೆ ಹೋಗುವಾಗ ಪ್ಯಾನ್ ಕಾರ್ಡ್ ಅನ್ನು ಹೊಂದಿರುವುದು ಮುಖ್ಯವಾಗುತ್ತದೆ. ಸಾಮಾನ್ಯವಾಗಿ ಅಧಿಕ ಮೊತ್ತವಿದ್ದಾಗ ಮೊತ್ತದ ಮೂಲವನ್ನು ಕೇಳಲಾಗುತ್ತದೆ, ನೀವು ಅದನ್ನು ಉಲ್ಲೇಖ ಮಾಡಬೇಕಾಗುತ್ತದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಕಳೆದ ವಾರ 2000 ರೂಪಾಯಿ ನೋಟನ್ನು ಚಲಾವಣೆಯಿಂದ ಹಿಂಪಡೆದಿದೆ. ಇದೇ ಸಂದರ್ಭದಲ್ಲಿ ನೋಟು ಕಾನೂನಾತ್ಮಕವಾಗಿ ಮುಂದುವರಿಯಲಿದೆ ಎಂದು ಸ್ಪಷ್ಟಣೆಯನ್ನು ಕೂಡಾ ನೀಡಿದೆ. ಹಾಗೆಯೇ ಈ ನೋಟು ಬದಲಾವಣೆಗಾಗಿ ಆರ್‌ಬಿಐ ಸೆಪ್ಟೆಂಬರ್ 30, 2023ರವರೆಗೆ ಸಮಯವನ್ನು ಕೂಡಾ ನೀಡಿದೆ.
ನಿಮ್ಮಲ್ಲಿ 2000 ರೂಪಾಯಿ ನೋಟುಗಳು ಇದ್ದರೆ ಆ ನೋಟುಗಳನ್ನು ಬ್ಯಾಂಕುಗಳಲ್ಲಿ ಮತ್ತು ಆರ್‌ಬಿಐ ಕಚೇರಿಗಳಲ್ಲಿ ನೀವು ಈ ಗಡುವಿಗೂ ಮುನ್ನ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಇನ್ನು ಬ್ಯಾಂಕುಗಳಲ್ಲಿ ನೀವು ಈ ನೋಟುಗಳನ್ನು ನೇರವಾಗಿ ನಿಮ್ಮ ಖಾತೆಗೆ ಡೆಪಾಸಿಟ್ ಕೂಡಾ ಮಾಡಬಹುದಾಗಿದೆ.


Click it and Unblock the Notifications