ಹಣದುಬ್ಬರವು ಗಗನಕ್ಕೇರುತ್ತಿದೆ. ಈ ನಡುವೆ ನಿಮ್ಮ ದಿನ ನಿತ್ಯದ ಖರ್ಚು ನಿಭಾಯಿಸುವುದರ ಜೊತೆಗೆ ನಿಮ್ಮ ಮಗುವಿನ ಬಗ್ಗೆಯೂ ಕೊಂಚ ಗಮನ ಹರಿಸುವುದು ಮುಖ್ಯವಾಗುತ್ತದೆ. ನಿಮ್ಮ ಮಗುವಿನ ಉನ್ನತ ಶಿಕ್ಷಣ, ಮದುವೆ, ಮನೆ ಇಂತಹ ದೊಡ್ಡ ಕನಸುಗಳನ್ನು ಈಡೇರಿಸಲು ಈ ಹಣದುಬ್ಬರವೇ ದೊಡ್ಡ ಸಮಸ್ಯೆಯಾಗಬಹುದು.
ಈ ವೆಚ್ಚಗಳನ್ನು ಮಾಡುತ್ತಾ ಮಾಡುತ್ತಾ ನೀವು ಸಾಲಕ್ಕೆ ಬೀಳುವುದನ್ನು ತಪ್ಪಿಸಲು, ಕೊಂಚ ಬುದ್ಧಿವಂತಿಕೆಯಿಂದ ಈಗಲೇ ಹೂಡಿಕೆ ಮಾಡಿದರೆ ಉತ್ತಮವಲ್ಲವೇ?. ನಿಮ್ಮ ಮಗುವಿನ ಉನ್ನತ ಶಿಕ್ಷಣ ಮತ್ತು ಮದುವೆಗಾಗಿ ನೀವು ಆರ್ಥಿಕವಾಗಿ ಸಿದ್ಧರಾಗಿರಲು ನಿಮ್ಮ ಮಗುವಿನ ಭವಿಷ್ಯಕ್ಕಾಗಿ ಏಕೆ ಉಳಿತಾಯವನ್ನು ಪ್ರಾರಂಭಿಸಬಾರದು?.

ನಿಮ್ಮ ಮಗಳ ವಿದ್ಯಾಭ್ಯಾಸ ಮತ್ತು ಮದುವೆಯ ಆರ್ಥಿಕ ಹೊರೆಯನ್ನು ತಗ್ಗಿಸುವ ನಿಟ್ಟಿನಲ್ಲಿಯೇ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಸರ್ಕಾರವು ಆರಂಭ ಮಾಡಿದೆ. ಈ ಯೋಜನೆಯು ನೀವು ನಿಮ್ಮ ಹೆಣ್ಣು ಮಕ್ಕಳ ಶಿಕ್ಷಣ, ವಿವಾಹ, ಮನೆ, ಇಂತಹ ಕನಸುಗಳನ್ನು ನನಸಾಗಿಸಲು ಸಹಾಯ ಮಾಡುತ್ತದೆ. ಮೆಚ್ಯೂರಿಟಿ ವೇಳೆ 64 ಲಕ್ಷ ರೂಪಾಯಿ ಪಡೆಯಲೂ ಸಾಧ್ಯವಾಗುತ್ತದೆ. ಹೇಗೆ ತಿಳಿಯೋಣ.
ಸುಕನ್ಯಾ ಸಮೃದ್ಧಿ ಖಾತೆಯನ್ನು ಯಾವಾಗ ತೆರೆಯಬೇಕು?
ನಿಮ್ಮ ಮಗಳಿಗೆ ಸುಕನ್ಯಾ ಸಮೃದ್ಧಿ ಖಾತೆ (ಎಸ್‌ಎಸ್‌ವೈ ಖಾತೆ) ತೆರೆಯಲು ಉತ್ತಮ ಸಮಯವೆಂದರೆ ಅವಳು ಹುಟ್ಟಿದ ತಕ್ಷಣವಾಗಿದೆ. ನಿಮ್ಮ ಮಗಳಿಗೆ 10 ವರ್ಷ ತುಂಬುವ ಮೊದಲು ನೀವು ಈ ಯೋಜನೆಯಲ್ಲಿ ಖಾತೆಯನ್ನು ತೆರೆಯಬಹುದು. ಆಕೆಯ ಜನನದ ನಂತರ ಖಾತೆಯನ್ನು ತೆರೆಯುವ ಮೂಲಕ, ನೀವು 15 ವರ್ಷಗಳವರೆಗೆ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
ಬಡ್ಡಿದರ ಎಷ್ಟಿದೆ?
ಪ್ರತಿ ಮೂರು ತಿಂಗಳಿಗೊಮ್ಮೆ ಈ ಯೋಜನೆಯ ಬಡ್ಡಿ ದರವನ್ನು ಸರ್ಕಾರ ಪರಿಷ್ಕರಣೆ ಮಾಡುತ್ತದೆ. ಜುಲೈನಿಂದ ಸೆಪ್ಟೆಂಬರ್ 2023 ತ್ರೈಮಾಸಿಕದಲ್ಲಿ, ಬಡ್ಡಿದರವನ್ನು ಸ್ಥಿರವಾಗಿರಿಸಲಾಗಿದೆ. ಅಂದರೆ ಈಗ ಬಡ್ಡಿದರವು ವಾರ್ಷಿಕವಾಗಿ ಶೇಕಡ 8 ರಷ್ಟಿದೆ. ನಿಮ್ಮ ಮಗಳಿಗೆ 18 ವರ್ಷ ತುಂಬಿದ ಮೇಲೆ, ನೀವು ಮೆಚ್ಯೂರಿಟಿ ಮೊತ್ತದ ಶೇಕಡ 50 ರಷ್ಟು ವಿತ್‌ಡ್ರಾ ಮಾಡಬಹುದು. ಅವಳು 21 ವರ್ಷವನ್ನು ತಲುಪಿದಾಗ ಉಳಿದ ಬಾಕಿ ಮೊತ್ತವನ್ನು ವಿತ್‌ಡ್ರಾ ಮಾಡಬಹುದು.
64 ಲಕ್ಷ ರೂಪಾಯಿ ಪಡೆಯುವುದು ಹೇಗೆ?
ನೀವು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಪ್ರತಿ ತಿಂಗಳು 12,500 ರೂಪಾಯಿ ಅಐವಾ ಪ್ರತಿ ದಿನಕ್ಕೆ 416 ರೂಪಾಯಿ ಡೆಪಾಸಿಟ್ ಮಾಡಿದರೆ, ವಾರ್ಷಿಕ ಹೂಡಿಕೆಯು 1.5 ಲಕ್ಷ ರೂಪಾಯಿ ಆಗಿರುತ್ತದೆ. ಇದು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿರುತ್ತದೆ. ಮೆಚ್ಯೂರಿಟಿ ಬಡ್ಡಿದರ ಶೇಕಡ 7.6 ಎಂದಿಟ್ಟುಕೊಳ್ಳಿ. ಆಕೆಗೆ 21 ವರ್ಷ ತುಂಬಿದಾಗ ನೀವು ಸಂಪೂರ್ಣ ಮೊತ್ತವನ್ನು ಹಿಂಪಡೆದರೆ, ಮೆಚ್ಯೂರಿಟಿ ಮೊತ್ತವು 63,79,634 ಲಕ್ಷ ರೂಪಾಯಿ ಆಗಿರುತ್ತದೆ.
ಈ ಪೈಕಿ 22,50,000 ಲಕ್ಷ ರೂಪಾಯಿ ನೀವು ಹೂಡಿಕೆ ಮಾಡಿರುವ ಮೊತ್ತವಾಗಿದೆ, 41,29,634 ಲಕ್ಷ ರೂಪಾಯಿ ಬಡ್ಡಿಯ ಮೂಲಕ ಲಭ್ಯವಾಗುವ ಮೊತ್ತ ಆಗಿದೆ. ಮಾಸಿಕ 12,500 ರೂಪಾಯಿಗಳನ್ನು ತಪ್ಪದೇ ಡೆಪಾಸಿಟ್ ಮಾಡುವ ಮೂಲಕ ನಿಮ್ಮ ಮಗಳ ಭವಿಷ್ಯಕ್ಕಾಗಿ ನೀವು 64 ಲಕ್ಷ ರೂಪಾಯಿಗಳನ್ನು ಪಡೆಯಬಹುದು.


Click it and Unblock the Notifications