ಅಪಾಯ ಇಲ್ಲದ ಹೂಡಿಕೆಗಳ ಕಡೆಗೆ ವಿಶ್ವದಾದ್ಯಂತ ಹೂಡಿಕೆದಾರರು ಗಮನ ಹರಿಸುತ್ತಾ ಇದ್ದಾರೆ. ಸರ್ಕಾರಿ ಬಾಂಡ್ ಗಳು, ಚಿನ್ನ... ಇಂಥ ಹೂಡಿಕೆಯೆಡೆಗೆ ಹೊಳಪು ಕಣ್ಣುಗಳಿಂದ ನೋಡುತ್ತಿದ್ದಾರೆ. ಕಾರಣ ಇಷ್ಟೇ, ಕೊರೊನಾವೈರಸ್ ಎಂಬ ಜಾಗತಿಕ ಪಿಡುಗು ಆರ್ಥಿಕತೆಯನ್ನು ಅಲುಗಾಡಿಸುತ್ತಿದೆ. ಇದು, ಅದು ಎಂದು ಬೊಟ್ಟು ಮಾಡಿ ತೋರಿಸಲು ಸಾಧ್ಯವಿಲ್ಲದೆ ಎಲ್ಲ ವಲಯಗಳೂ ಪತರುಗುಟ್ಟುತ್ತಿವೆ.
ಇನ್ನು ಭಾರತೀಯರ ಮನಸ್ಥಿತಿಯನ್ನು ಈಗ ಹೊಸದಾಗಿ ಹೇಳುವ ಅಗತ್ಯ ಇಲ್ಲ. ಏಕೆಂದರೆ, ಇಲ್ಲಿ ಬಹಳ ಹಿಂದಿನಿಂದಲೂ ಚಿನ್ನವನ್ನು ನಿಯಮಿತವಾಗಿ ಖರೀದಿ ಮಾಡುವ ಪ್ರವೃತ್ತಿ ಇದೆ. ಅದರಲ್ಲೂ ಹೂಡಿಕೆ ದೃಷ್ಟಿಯಿಂದ ಆಭರಣ, ಚಿನ್ನದ ಗಟ್ಟಿಯಲ್ಲಿ ಹೂಡಿಕೆದಾರರು ಹಣ ಹಾಕುತ್ತಾ ಬರುತ್ತಿದ್ದಾರೆ.
ಈಗಂತೂ 10 ಗ್ರಾಮ್ ಚಿನ್ನದ ಬೆಲೆ 43ರಿಂದ 47 ಸಾವಿರ ರುಪಾಯಿ, ಕೆಲವೊಮ್ಮೆ ಅದನ್ನೂ ಮೀರಿ ಹೋಗಿದ್ದಿದೆ. ಇಂಥ ಸನ್ನಿವೇಶದಲ್ಲಿ ಉದ್ಭವಿಸುವ ಪ್ರಶ್ನೆ ಏನೆಂದರೆ, ಈ ಬೆಲೆಯಲ್ಲಿ ಚಿನ್ನದ ಮೇಲೆ ಹೂಡಿಕೆ ಮಾಡಬಹುದಾ? 2020ರಲ್ಲೇ, ಅಂದರೆ ನಾಲ್ಕೂವರೆ ತಿಂಗಳು ಕಳೆಯುವಷ್ಟರಲ್ಲಿ ಚಿನ್ನದ ಬೆಲೆ 16 ಪರ್ಸೆಂಟ್ ಏರಿಕೆ ಕಂಡಿದೆ.
ಈಗ ಚಿನ್ನದ ಮೇಲೆ ಹೂಡಿಕೆ ಮಾಡಬಹುದಾ? ಈಗಿನ ಬೆಲೆಗೂ ಮೇಲೆ ಹಾಕಿದ ಬಂಡವಾಳಕ್ಕೆ ಲಾಭ ತಂದುಕೊಡಬಹುದಾ? ಎಷ್ಟು ಬೆಲೆಯಲ್ಲಿ ಇದ್ದಾಗ ಚಿನ್ನ ಖರೀದಿಸಬಹುದು? ಸದ್ಯಕ್ಕೆ ಆಭರಣ ಖರೀದಿಸಬಹುದೋ ಅಥವಾ ಚಿನ್ನದ ಗಟ್ಟಿಯೋ, ನಾಣ್ಯವೋ ಅಥವಾ ಎಲೆಕ್ಟ್ರಾನಿಕ್ ಸ್ವರೂಪದಲ್ಲಿನ ಚಿನ್ನವೋ ಎಂಬ ಪ್ರಶ್ನೆಗಳಿಗೆ ಇಲ್ಲಿ ಉತ್ತರ ನೀಡಲಾಗುತ್ತಿದೆ. ಮುಂದೆ ಓದಿ.
ಬಾಂಡ್ ಮಾರ್ಕೆಟ್ ಆಕರ್ಷಣೆ ಉಳಿಸಿಕೊಂಡಿಲ್ಲ
2000ನೇ ಇಸವಿ ಆರಂಭದ ನಂತರ ಕಂಡ ಎರಡು ಸಂಗತಿ, ಒಂದು ಡಾಟ್.ಕಾಮ್ ಗಳ ಹಂಗಾಮ ಮತ್ತು 2008ರ ಆರ್ಥಿಕ ಬಿಕ್ಕಟ್ಟು ಸನ್ನಿವೇಶದಲ್ಲಿ ಚಿನ್ನ ಒಳ್ಳೆ ರಿಟರ್ನ್ಸ್ ಕೊಟ್ಟಿದೆ. ಆದರೆ ಈ ಬಾರಿಯ ಕೊರೊನಾ ಇದೆಯಲ್ಲಾ, ಷೇರು ಮಾರ್ಕೆಟ್ ಗಳಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದೆ. ಅಷ್ಟೇ ಅಲ್ಲ, ತೈಲ ಬೆಲೆ ಪಾತಾಳ ತಲುಪಿದೆ. ಇತಿಹಾಸದಲ್ಲೇ ಎಂದೂ ನೆಗೆಟಿವ್ ಬೆಲೆಯನ್ನು ತೈಲ ತಲುಪಿರಲಿಲ್ಲ. ಸಾಮಾನ್ಯ ಜ್ಞಾನ ಏನೆಂದರೆ, ಷೇರು ಮಾರ್ಕೆಟ್ ಚೆನ್ನಾಗಿದ್ದಾಗ ಚಿನ್ನ ಹೊಳಪು ಕಳೆದುಕೊಳ್ಳುತ್ತದೆ. ಅದೇ ರೀತಿ ಚಿನ್ನ ಚೆನ್ನಾಗಿ ಆದಾಗ ಷೇರು ಮಾರ್ಕೆಟ್ ಬೀಳುತ್ತದೆ. ಆ ಕಾರಣಕ್ಕೆ ಸಾಂಸ್ಥಿಕ ಹೂಡಿಕೆದಾರರು (ಸಂಸ್ಥೆಗಳೇ ಹೂಡಿಕೆ ಮಾಡುತ್ತವೆ) ಷೇರು ಮಾರುಕಟ್ಟೆ ಬಿದ್ದಾಗ ಚಿನ್ನ ಮತ್ತು ಬಾಂಡ್ ಗಳ ಮೇಲೆ ಹೂಡಿಕೆ ಮಾಡುತ್ತಾರೆ. ಈಗಂತೂ ನಗದು ಸಮಸ್ಯೆ ಕಾರಣಕ್ಕೆ ಬಾಂಡ್ ಮಾರ್ಕೆಟ್ ಕೂಡ ಆಕರ್ಷಣೆ ಉಳಿಸಿಕೊಂಡಿಲ್ಲ. ಆ ಕಾರಣಕ್ಕೆ ಹೂಡಿಕೆದಾರರು ಸಂಪೂರ್ಣವಾಗಿ ಚಿನ್ನದ ಕಡೆ ದೃಷ್ಟಿ ನೆಟ್ಟಿದ್ದಾರೆ.
1973ರಿಂದ ವರ್ಷಕ್ಕೆ 14.10 ಪರ್ಸೆಂಟ್ ರಿಟರ್ನ್ಸ್
ರುಪಾಯಿ ಲೆಕ್ಕದಲ್ಲಿ ಹೇಳಬೇಕು ಅಂದರೆ, 1973ನೇ ಇಸವಿಯಿಂದ ಈಚೆಗೆ ಇಲ್ಲಿಯ ತನಕ ರುಪಾಯಿ ಲೆಕ್ಕದಲ್ಲಿ ವಾರ್ಷಿಕ 14.10 ಪರ್ಸೆಂಟ್ ರಿಟರ್ನ್ಸ್ ಕೊಡುತ್ತಿದೆ. ಈ ಅಂಶವನ್ನು ತಿಳಿಸಿರುವುದು ವರ್ಲ್ಡ್ ಗೋಲ್ಡ್ ಕೌನ್ಸಿಲ್. ಮಾರ್ಚ್ 24, 2020ರಂದು ಬಿಡುಗಡೆ ಮಾಡಿದ ಭಾರತದ ಅವತರಣಿಕೆಯಲ್ಲಿ ಇದನ್ನು ತಿಳಿಸಿದೆ. ಕಳೆದ ಏಪ್ರಿಲ್ ನಲ್ಲಿ ಅಮೆರಿಕ ಡಾಲರ್ ವಿರುದ್ಧ ರುಪಾಯಿ ಮೌಲ್ಯವು ಸಾರ್ವಕಾಲಿಕ ದಾಖಲೆಯ 77 ರುಪಾಯಿಗೆ ಕುಸಿದರೂ ಚಿನ್ನದ ಬೆಲೆಗೆ ಪಾಸಿಟಿವ್ ಆಗಿಯೇ ಇತ್ತು. ಈಗಿನ ಸ್ಥಿತಿ ನೋಡಿದರೆ, ಸರ್ಕಾರದ ವಿತ್ತೀಯ ಕೊರತೆ ಮತ್ತಷ್ಟು ಹೆಚ್ಚಾಗಲಿದೆ. ಆ ಮೂಲಕ ಡಾಲರ್ ವಿರುದ್ಧ ರುಪಾಯಿ ಮೌಲ್ಯ ಇನ್ನಷ್ಟು ಕುಸಿಯುತ್ತದೆ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯ. ಕೊರೊನಾ ವೈರಸ್ ವ್ಯಾಪಿಸಿರುವುದರಿಂದ ವಿಶ್ವದ ಬಹುತೇಕ ಚಿನ್ನದ ನಿಕ್ಷೇಪಗಳಲ್ಲಿ ಕೆಲಸ ನಡೆಯುತ್ತಿಲ್ಲ. ಆ ಕಾರಣಕ್ಕೂ ಚಿನ್ನದ ಬೆಲೆ ಮೇಲೆ ಪಾಸಿಟಿವ್ ಪರಿಣಾಮ ಆಗಿದೆ. ಕಡಿಮೆ ಪೂರೈಕೆ ಹೆಚ್ಚು ಬೇಡಿಕೆ ಎಂಬುದು ಈ ಸ್ಥಿತಿಯ ಹಿಂದೆ ಕೆಲಸ ಮಾಡುತ್ತಿರುವ ಎಕನಾಮಿಕ್ಸ್.
ನಾಲ್ಕೂವರೆ ತಿಂಗಳಲ್ಲಿ 16 ಪರ್ಸೆಂಟ್ ಬೆಲೆ ಏರಿದೆ
2019ನೇ ಇಸವಿ ಕೊನೆಗೆ, ಅಂದರೆ ಡಿಸೆಂಬರ್ ಕೊನೆ ಹೊತ್ತಿಗೆ ಆ ವರ್ಷದಲ್ಲಿ ಚಿನ್ನದ ಮೇ ಹೂಡಿಕೆ ಮಾಡಿದವರಿಗೆ 25 ಪರ್ಸೆಂಟ್ ರಿಟರ್ನ್ಸ್ ಕೊಟ್ಟಿತ್ತು. ಈಗಂತೂ ಕೊರೊನಾ ಅದ್ಯಾವ ಪರಿ ವ್ಯಾಪಿಸಿದೆ ಅನ್ನೋದನ್ನು ಹೇಳುವ ಅಗತ್ಯವೇ ಇಲ್ಲ. ನಾಲ್ಕೂವರೆ ತಿಂಗಳೊಳಗೆ 16 ಪರ್ಸೆಂಟ್ ರಿಟರ್ನ್ಸ್ ಕೊಟ್ಟಿದೆ. ಮುಂದಿನ ದಿನಗಳಲ್ಲಿ ಷೇರು ಮಾರುಕಟ್ಟೆ ಮೇಲೆ ಕೊರೊನಾ ಪರಿಣಾಮ ಮತ್ತು ಪ್ರಭಾವ ಇನ್ನಷ್ಟು ದಟ್ಟವಾಗಬಹುದು. ಚಿನ್ನದ ಮೇಲೆ ಮೇಲಕ್ಕೆ ಹೋಗಬಹುದು. ಈಗಿನ ಸನ್ನಿವೇಶದಲ್ಲಂತೂ ಚಿನ್ನ ಏರುಮುಖದಲ್ಲೇ ಸಾಗುವುದನ್ನು ಕಾಣಲಿಕ್ಕೆ ಸಿಗುತ್ತದೆ ಎಂಬುದು ತಜ್ಞರ ಅಭಿಪ್ರಾಯವೂ ಹೌದು. ಈ ಸಮಯದಲ್ಲಿ ಚಿನ್ನದ ಇಟಿಎಫ್ ಅಥವಾ ಭಾರತ ಸರ್ಕಾರದ ಸವರನ್ ಬಾಂಡ್ ಗಳು ಹೂಡಿಕೆಗೆ ಬಹಳ ಸೂಕ್ತ. ಬಾಂಡ್ ಬೆಲೆ ಏರಿಕೆ ಆಗುವ ಜತೆಗೆ ನಿರಂತರವಾಗಿ ಬಡ್ಡಿ ರೂಪದಲ್ಲಿ ಸಹ ಆದಾಯ ಬರಲು ಆರಂಭಿಸುತ್ತದೆ. ಇನ್ನೊಂದು ವಿಷಯ ಏನೆಂದರೆ, ಚಿನ್ನದ ಸವರನ್ ಬಾಂಡ್ ಮೆಚ್ಯೂರಿಟಿ ತನಕ ಇಟ್ಟುಕೊಂಡು, ಆ ನಂತರ ಮಾರಿದರೆ ಬಂದ ಹಣಕ್ಕೆ ಆದಾಯ ತೆರಿಗೆ ವಿನಾಯಿತಿ ಇದೆ. ಅದಕ್ಕೂ ಮುಂಚೆ ಮಾರಿದರೆ ಕ್ಯಾಪಿಟಲ್ ಗೇಯ್ನ್ ಎಂದು ಪರಿಗಣಿಸಲಾಗುತ್ತದೆ. ಆದರೆ ಇಂಡೆಕ್ಸೇಷನ್ ಅನುಕೂಲ ಇದೆ.
ಇಟಿಎಫ್ ಹಾಗೂ ಸವರನ್ ಬಾಂಡ್ ಖರೀದಿ ಉತ್ತಮ ಆಯ್ಕೆ
ಚಿನ್ನದ ಬೆಲೆ ಏರಿಕೆ ಆಗುತ್ತಿರುವುದರಿಂದ ಫಿಸಿಕಲ್ ಗೋಲ್ಡ್ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆ ಆಗಿ, ನಗದು ಸಮಸ್ಯೆ ಎದುರಾಗಬಹುದು. ಆದ್ದರಿಂದ ಇಟಿಎಫ್ ಹಾಗೂ ಸವರನ್ ಬಾಂಡ್ ಮೂಲಕ ಹೂಡಿಕೆ ಮಾಡುವುದು ಉತ್ತಮ ಆಯ್ಕೆ. ಇವುಗಳ ವ್ಯವಹಾರ ಷೇರು ಮಾರ್ಕೆಟ್ ನಲ್ಲಿ ಆಗುತ್ತದೆ. ನಗದು ಸಮಸ್ಯೆ ಬರಲಾರದು. ಬಾಂಡ್ ಖರೀದಿ ಮೇಲೆ ಯಾವುದೇ ಟಿಸಿಎಸ್ ಅಥವಾ ಇತರ ತೆರಿಗೆಗಳು ಇಲ್ಲ. ಆದರೆ ಫಿಸಿಕಲ್ ಆಗಿ ಚಿನ್ನವನ್ನು ಖರೀದಿಸುವಾಗ ಇವುಗಳನ್ನು ಪಾವತಿಸಬೇಕು. ಆ ಕಾರಣದಿಂದ ಇಟಿಎಫ್ ಹಾಗೂ ಸವರನ್ ಬಾಂಡ್ ಗಳಲ್ಲಿ ಹಣ ಹೂಡಿಕೆ ಮಾಡುವುದು ಉತ್ತಮ ಆಯ್ಲೆ ಎನಿಸಿಕೊಳ್ಳುತ್ತದೆ.


Click it and Unblock the Notifications