ಚಿನ್ನದ ಮೇಲೆ ಹೂಡಿಕೆ ಮಾಡಬಹುದಾ? ಏನಂತಾರೆ ಆಭರಣ ವ್ಯಾಪಾರಿಗಳು?
"ಇನ್ನೇನಿದ್ದರೂ ಈಗಿನ ಚಿನ್ನದ ಬೆಲೆ ಐದರಿಂದ ಹತ್ತು ಪರ್ಸೆಂಟ್ ಕಡಿಮೆ ಆಗಬಹುದು. ಅದಕ್ಕಿಂತ ಹೆಚ್ಚಿನದನ್ನು ನಿರೀಕ್ಷೆ ಮಾಡುವುದಕ್ಕೆ ಸಾಧ್ಯವಿಲ್ಲ" ಎಂದರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಅನ್ನಪೂರ್ಣೇಶ್ವರಿ ಜ್ಯುವೆಲ್ಲರ್ಸ್ ನ ದಿನೇಶ್ ರಾವ್. ಚಿನ್ನದ ಬೆಲೆ ಒಂದು ವರ್ಷದಲ್ಲಿ ಇಪ್ಪತ್ತೈದರಿಂದ ಮೂವತ್ತು ಪರ್ಸೆಂಟ್ ಹೆಚ್ಚಳವಾಗಿದ್ದ ಬಗ್ಗೆ ಮತ್ತು ಚಿನ್ನದ ಮುಂದಿನ ಟ್ರೆಂಡ್ ಬಗ್ಗೆ 'ಗುಡ್ ರಿಟರ್ನ್ಸ್ ಕನ್ನಡ'ದಿಂದ ಅವರನ್ನು ಮಾತನಾಡಿಸಲಾಯಿತು.
ಡಿಸೆಂಬರ್ ಇಪ್ಪತ್ಮೂರನೇ ತಾರೀಕು ಮಧ್ಯಾಹ್ನದ ಹೊತ್ತಿಗೆ ಇಪ್ಪತ್ತೆರಡು ಕ್ಯಾರಟ್ ನ ಚಿನ್ನ ಒಂದು ಗ್ರಾಮ್ 3,570 ರುಪಾಯಿ ಇತ್ತು. ಈಗಾಗಲೇ ಸಾರ್ವಕಾಲಿಕ ಬೆಲೆಯಿಂದ ಹತ್ತು ಪರ್ಸೆಂಟ್ ಬೆಲೆ ಇಳಿಕೆ ಆಗಿದೆ. ಇನ್ನು ಮುಂದೆ ಈಗಿನ ಬೆಲೆಗಿಂತ ಐದರಿಂದ ಹತ್ತು ಪರ್ಸೆಂಟ್ ಬೆಲೆ ಇಳಿಯಬಹುದು. ಅದಕ್ಕಿಂತ ಹೆಚ್ಚಿನದನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ ಎಂಬುದು ಚಿನ್ನದ ವ್ಯವಹಾರಸ್ಥರ ಅಭಿಪ್ರಾಯ.

ಆಹಾರ ಧಾನ್ಯಗಳ ಬೆಲೆಯಲ್ಲೂ ಏರಿಕೆ
ಈಗ ಏರಿರುವ ಚಿನ್ನದ ಬೆಲೆಯ ಕಾರಣಕ್ಕೆ ಗ್ರಾಹಕರು ಖರೀದಿಯಲ್ಲಿ ಆಸಕ್ತಿ ತೋರಿಸುತ್ತಿಲ್ಲ. ನೇರವಾಗಿ ಆಸಕ್ತಿ ತೋರಿಸುತ್ತಿಲ್ಲ ಎನ್ನುವುದಕ್ಕಿಂತ ಇನ್ನೂ ಕಡಿಮೆ ಆಗುತ್ತದೆ, ಮತ್ತಷ್ಟು ಕಡಿಮೆ ಆಗುತ್ತದೆ ಎಂಬ ನಿರೀಕ್ಷೆಯಲ್ಲಿ ಇದ್ದಾರೆ. ಚಿನ್ನದ ಆಭರಣ ವ್ಯಾಪಾರಿಗಳಾದ ದಿನೇಶ್ ರಾವ್ ಅವರು ಹೇಳುವಂತೆ, ಈಗ ಚಿನ್ನದ ಬೆಲೆ ಜಾಸ್ತಿಯಾಗಿರುವುದು ಜಾಗತಿಕ ಕಾರಣಗಳಿಂದ. ಇನ್ನೊಂದು ಅಂಶವನ್ನೂ ಗಮನಿಸಿ ನೋಡಿ, ರಿಯಲ್ ಎಸ್ಟೇಟ್, ಷೇರು ಮಾರುಕಟ್ಟೆ ಕೂಡ ಹೂಡಿಕೆಯ ಮುಖ್ಯ ಕ್ಷೇತ್ರಗಳು. ಆದರೆ ಅಲ್ಲಿ ಒಂದೋ ಬೇಡಿಕೆ ಕಡಿಮೆಯಾಗಿದೆ. ಮತ್ತೊಂದರಲ್ಲಿ ಅಪಾಯದ ಆತಂಕ ಎದುರಾಗಿದೆ. ಆ ಕಾರಣದಿಂದಾಗಿ ಕಮಾಡಿಟಿ ಮಾರ್ಕೆಟ್ ಮೇಲೆ ಹೂಡಿಕೆ ಮಾಡಲಾಗುತ್ತಿದೆ. ಚಿನ್ನ ಅಷ್ಟೇ ಅಲ್ಲ, ಆಹಾರ ಧಾನ್ಯಗಳ ಮೇಲೆ ಸಟ್ಟಾ ವ್ಯವಹಾರ ಮಾಡಲಾಗುತ್ತಿದೆ. ಆ ಕಾರಣಕ್ಕೆ ಅವುಗಳ ಬೆಲೆ ಕೂಡ ಜಾಸ್ತಿ ಆಗುತ್ತಿರುವುದನ್ನು ಗಮನಿಸಬಹುದು.

ಈಗಿನ ದರಕ್ಕಿಂತ ಕೆಳಗೆ ಇಳಿಯುವುದು ಕಷ್ಟ
ಆದರೆ, ಕಳೆದ ಮೂರು ವರ್ಷದ ಸರಾಸರಿಗೆ ಹೋಲಿಸಿದರೆ ಶೇಕಡಾ ನಲವತ್ತು ಪರ್ಸೆಂಟ್ ವ್ಯಾಪಾರ ಕಡಿಮೆ ಆಗಿದೆ. ಎಕಾನಮಿಗೆ ಹೊಡೆತ ಬಿದ್ದಿದೆಯೇನೋ ಎಂಬ ಮಾತಿಗೆ ಸಾಕ್ಷ್ಯ ಎನ್ನುವಂತಿದೆ ನಮಗೆ ಆಗುತ್ತಿರುವ ವ್ಯಾಪಾರ. ಆರಂಭದಲ್ಲಿ ಹೇಳಿದ ಹಾಗೆ ಬೆಲೆ ಏರಿಕೆ ಆಗಿದೆ ಎನ್ನುವ ಕಾರಣ ಇರಬಹುದು. ಆದರೆ ಈ ಹಿಂದೆ ಕೂಡ ಅಂದರೆ, ಪ್ರತಿ ಮೂರು- ನಾಲ್ಕು ವರ್ಷಗಳಿಗೊಮ್ಮೆ ಚಿನ್ನದ ದರದಲ್ಲಿ ಹೀಗೆ ಏರಿಕೆ ಆಗುತ್ತದೆ. ಆದರೆ ವ್ಯಾಪಾರ ಈ ಪ್ರಮಾಣದಲ್ಲಿ ಕಡಿಮೆ ಆಗುವುದಿಲ್ಲ. ಜನರು ಖರೀದಿಯೇ ಮಾಡುತ್ತಿಲ್ಲವಾ ಎಂಬ ಅನುಮಾನ ಬರುವಷ್ಟರ ಮಟ್ಟಿಗೆ ಪರಿಸ್ಥಿತಿ ಇದೆ. ಈಗ ಚಿನ್ನದ ರೇಟ್ ಗ್ರಾಮ್ ಗೆ ತುಂಬ ಕೆಳಗೆ ಬರುವುದು ಅಸಾಧ್ಯದ ಮಾತು. ಹಾಗೆ ನಿರೀಕ್ಷೆ ಮಾಡುವಂಥವರು ತೀರಾ ತುರ್ತು ಇಲ್ಲದಿದ್ದರೆ ಕಾಯಬಹುದು. ಇಲ್ಲದಿದ್ದಲ್ಲಿ ಅಗತ್ಯ ಇರುವ ಆಭರಣ ಖರೀದಿ ಮಾಡಿದರೆ ಏನೂ ನಷ್ಟ ಆಗುವುದಿಲ್ಲ ಎನ್ನುತ್ತಾರೆ ದಿನೇಶ್.

ದುಬೈನಲ್ಲಿ ಚಿನ್ನದ ಬೆಲೆ ಕಡಿಮೆಯಿದೆ
ಭಾರತಕ್ಕಿಂತ ಚಿನ್ನದ ಬೆಲೆ ಬಹಳ ಕಡಿಮೆ ಅಂದರೆ ದುಬೈನಲ್ಲಿ. ಅಲ್ಲಿಂದ ತಂದರೆ ಕಡಿಮೆ ಆಗುತ್ತದೆ. ಏಕೆಂದರೆ ಭಾರತಕ್ಕೆ ಆಮದಾಗುವ ಚಿನ್ನಕ್ಕೆ ಹನ್ನೆರಡು ಪರ್ಸೆಂಟ್ ತೆರಿಗೆ ಬೀಳುತ್ತದೆ. ಈ ತೆರಿಗೆ ಮೊತ್ತವೇ ಸಾಕು, ದುಬೈಗೂ ಇಲ್ಲಿಗೂ ಚಿನ್ನದ ಬೆಲೆಯಲ್ಲಿ ದೊಡ್ಡ ವ್ಯತ್ಯಾಸ ಆಗುವುದಕ್ಕೆ. ಇದೇ ಕಾರಣಕ್ಕೆ ದುಬೈಗೆ ಹೋದವರು ಅಲ್ಲಿಂದ ಚಿನ್ನ ಖರೀದಿಸಿ ತರುತ್ತಾರೆ. ಸದ್ಯದ ಪರಿಸ್ಥಿತಿಯಲ್ಲಿ ಇದು ಒಳ್ಳೆ ಆಯ್ಕೆ. ಅಲ್ಲಿಗೆ ಪ್ರವಾಸವೋ ಅಥವಾ ಬೇರೆ ಯಾವುದೇ ಕೆಲಸದ ಮೇಲೆ ಹೋದವರು ಚಿನ್ನವನ್ನು ಅಲ್ಲಿಂದ ತರಬಹುದು. ಕಾನೂನುಬದ್ಧವಾಗಿ ಎಷ್ಟು ಚಿನ್ನವನ್ನು ಖರೀದಿಸಲು ಸಾಧ್ಯವೋ ಅಷ್ಟನ್ನು ತಂದರೆ ಒಳ್ಳೆಯದು. ಇಂಥ ಸಂದರ್ಭಗಳಲ್ಲಿ ಚಿನ್ನದ ಕಳ್ಳ ಸಾಗಣೆ ಪ್ರಮಾಣ ಜಾಸ್ತಿ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

ಚಿನ್ನದ ಮೇಲೆ ಹೂಡಿಕೆ ಮಾಡಬಹುದಾ?
ಹಾಗಿದ್ದರೆ ಈಗಿನ ಸನ್ನಿವೇಶಕ್ಕೆ ಚಿನ್ನವೋ ರಿಯಲ್ ಎಸ್ಟೇಟೋ ಅಥವಾ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದೋ ಎಂಬ ಗೊಂದಲದಲ್ಲಿ ಇರುವವರಿಗೆ ಸ್ವಲ್ಪ ಮಟ್ಟಿಗೆ ಈ ಮೇಲಿನ ಅಭಿಪ್ರಾಯಗಳಿಂದ ಉತ್ತರ ಸಿಕ್ಕಂತಾಗಬಹುದು. ಚಿನ್ನದ ಬೆಲೆ ಕೂಡ ಇನ್ನೂ ಹೆಚ್ಚಾದರೆ ಖರೀದಿಗೆ ಆಸಕ್ತಿ ಕಡಿಮೆ ಆಗಲಿದೆ. ಇನ್ನು ವಿಪರೀತ ಬೆಲೆ ಹೆಚ್ಚಾಗುವ ಸಾಧ್ಯತೆಯೂ ಇಲ್ಲ. ಸದ್ಯದ ಆರ್ಥಿಕ ಸ್ಥಿತಿಯಲ್ಲಿ ಮುಂದೆ ಹೇಗೋ ಏನೋ ಎಂಬ ಆತಂಕ ಜನರನ್ನು ಕಾಡುತ್ತಿದೆ. ಒಮ್ಮೆ ಚಿಂತೆಯ ಕಾರ್ಮೋಡ ಸರಿದರೆ ಆಗ ಮುಂದಿನ ಹಾದಿ ಸುಸ್ಪಷ್ಟವಾಗಲಿದೆ. ಯಾವ ಕಾರಣಕ್ಕೆ ಚಿನ್ನ ಖರೀದಿ ಮಾಡಬೇಕು ಎಂದಿದ್ದೀರಿ ಎಂಬುದು ಮುಖ್ಯ. ಮದುವೆಯೋ ಮತ್ತೊಂದು ಕಾರಣಕ್ಕೋ ಖರೀದಿ ಅನಿವಾರ್ಯವಾದಲ್ಲಿ ಕಾಯುವುದು ಉಪಯೋಗ ಇಲ್ಲ. ಹೂಡಿಕೆ ಉದ್ದೇಶದಿಂದ ಅನ್ನೋದಾದರೆ, ಮುಂದೆ ಏನಾಗಬಹುದು ಎಂಬ ಲೆಕ್ಕಾಚಾರವೂ ಇಲ್ಲಿದೆ.