"ಕೈಯಲ್ಲಿ ಹಣ ಇರುವವರು ಕೂಡ ಇನ್ವೆಸ್ಟ್ ಮಾಡುವುದಕ್ಕೆ ಹಿಂದೆ- ಮುಂದೆ ಆಲೋಚನೆ ಮಾಡ್ತಿದ್ದಾರೆ. ಮುಂದೆ ಇನ್ನೂ ಏನೇನಾಗಬಹುದು ಅನ್ನೋ ಭಯ. ಅದಕ್ಕೇ ನೋಡಿ ಅದೆಷ್ಟು ಅಪಾರ್ಟ್ ಮೆಂಟ್ ಗಳು ಸೇಲ್ ಆಗದೆ ಹಾಗೇ ಇವೆ. ಟೀವಿಯಲ್ಲಿ, ಆನ್ ಲೈನ್ ಪೋರ್ಟಲ್ ನಲ್ಲಿ, ನ್ಯೂಸ್ ಪೇಪರ್ ನಲ್ಲಿ ಎಲ್ಲದರಲ್ಲೂ ಅದೇ ಸುದ್ದಿ..."
-ಆ ಇಬ್ಬರ ಮಧ್ಯದ ಮಾತು ಹಾಗೇ ಮುಂದುವರಿದಿತ್ತು. ಆ ಇಬ್ಬರಲ್ಲಿ ಒಬ್ಬರು ರಿಯಲ್ ಎಸ್ಟೇಟ್ ಏಜೆಂಟ್. ಮತ್ತೊಬ್ಬರು ತಮ್ಮದೊಂದು ವಿಲಾಸಿ ಬಂಗಲೆಯನ್ನು ಮಾರಾಟಕ್ಕೆ ಇಟ್ಟಿದ್ದ ರಿಯಲ್ ಎಸ್ಟೇಟ್ ವ್ಯವಹಾರಸ್ಥರು. ಈ ಹಿಂದೆ ರಿಯಲ್ ಎಸ್ಟೇಟ್ ವ್ಯವಹಾರದಲ್ಲೇ ಒಳ್ಳೆ ಲಾಭ ಬಂದಿತ್ತು. ಆ ನಂಬಿಕೆಯಲ್ಲೇ ಸಿಕ್ಕಾಪಟ್ಟೆ ಸಾಲ ಮಾಡಿ, ಅದ್ಭುತವಾದ ಬಂಗಲೆ ಕಟ್ಟಿಸಿದ್ದಾರೆ.
ಆದರೆ, ಮುಂಚಿನ ರೀತಿ ರಿಯಲ್ ಎಸ್ಟೇಟ್ ವ್ಯವಹಾರ ಆಹಾ ಓಹೋ ಎಂಬಂತಿಲ್ಲ. ದಿನದಿಂದ ದಿನಕ್ಕೆ ಬಡ್ಡಿ ಕೊಟ್ಟವರು ಸಹ ಪೀಡಿಸುತ್ತಿದ್ದಾರೆ. ಸರಿ, ಇರುವ ಭೂಮಿ- ಮನೆಯನ್ನು ಮಾರಾಟಕ್ಕೆ ಇಟ್ಟಿದ್ದರೆ, ಬೆಲೆ ಕೇಳುವವರು ಅರ್ಧಕ್ಕಿಂತ ಕಡಿಮೆಗೆ ಕೇಳುತ್ತಾರೆ. ಕೆಲವರು ನೋಡಿಕೊಂಡು ಹೋದರೆ ವಾಪಸ್ ಬರುವುದೇ ಇಲ್ಲ.
ಏನಾಗಿದೆ ಈ ಭೂಮಿ- ಮನೆ ಮಾರಾಟದ ವ್ಯವಹಾರಕ್ಕೆ? ಅದನ್ನು ವಿವರಿಸುವ ಪ್ರಯತ್ನವೇ ನೀವು ಓದುತ್ತಿರುವ ಈ ವರದಿ.
ರಿಯಲ್ ಎಸ್ಟೇಟ್ ನಲ್ಲಿ ಕೆಲವರು ಕೋಟ್ಯಧಿಪತಿಗಳೂ ಆಗಿಬಿಟ್ಟರು
ಅರ್ಥ ವ್ಯವಸ್ಥೆ ಅನ್ನೋದು ಒಂದು ಸೈಕಲ್ ಇದ್ದ ಹಾಗೆ. ಯಾವುದೇ ಚಕ್ರ ತಿರುಗುವುದು ಸ್ವಲ್ಪ ನಿಧಾನವಾದರೂ ಕಷ್ಟ. ಅದಕ್ಕೆ ಒಂದು ಉದಾಹರಣೆ ಅಂದರೆ, ಲಕ್ಷ ರುಪಾಯಿ ಸಂಬಳ ಬರುವಾಗ ಒಬ್ಬ ವ್ಯಕ್ತಿ ಅದಕ್ಕೆ ತಕ್ಕಂತೆ ರಿಸ್ಕ್ ಮೇಲೆ ಎಳೆದುಕೊಂಡು ಹೂಡಿಕೆ, ಉಳಿತಾಯ ಅಂತೆಲ್ಲ ಮಾಡುತ್ತಾರೆ. ಆದರೆ ಆ ಒಂದು ಲಕ್ಷ ರುಪಾಯಿ ಬರುವ ಕೆಲಸ ಇನ್ನೆಷ್ಟು ತಿಂಗಳೋ ಏನೋ ಅಂತಾಗಿಬಿಟ್ಟರೆ ಯಾವ ಹೂಡಿಕೆ- ಯಾವ ಉಳಿತಾಯ? ರಿಯಲ್ ಎಸ್ಟೇಟ್ ವ್ಯವಹಾರ ನಿಂತಿದ್ದದ್ದು ಈ ರೀತಿ ದೊಡ್ಡ ಸಂಬಳ ಬರುವ ಜನರ ಹೂಡಿಕೆ ಪ್ರವೃತ್ತಿಯಿಂದ. ತಮಗೆ ಅಗತ್ಯ ಇದೆಯೋ ಇಲ್ಲವೋ ಒಂದು ಸೈಟ್ ಇರಲಿ, ಮನೆ ಇರಲಿ ಅಥವಾ ಫ್ಲ್ಯಾಟ್ ಇರಲಿ ಎಂದು ಯೋಚಿಸಿ, ಸಾಲ ತಂದಾದರೂ ಹಣ ಹೂಡಿಕೆ ಮಾಡುತ್ತಿದ್ದರು. ಕೊನೆ ಕೊನೆಗೆ ನಗರ- ಪಟ್ಟಣ ಪ್ರದೇಶದಿಂದ ಹೊರ ಭಾಗಗಳಲ್ಲಿ ಇದ್ದ ಕೃಷಿ ಭೂಮಿ ಮೇಲೂ ಇಂಥವರ ಹೂಡಿಕೆ ಕಣ್ಣು ಬಿತ್ತು. ಕೃಷಿ ಚಟುವಟಿಕೆ ಮಾಡದಿದ್ದರೂ ಕೃಷಿ ಭೂಮಿ ಖರೀದಿಸಲು ಶುರು ಮಾಡಿದರು. ನಾಲ್ಕೈದು ಜನ ಸೇರಿ, ಹಣ ಹಾಕಿದರೆ ಮುಂದೆ ಲೇಔಟ್ ಮಾಡಿ, ಮಾರಿದರೆ ಲಾಭ ಬರುತ್ತದೆ ಎಂಬ ಲೆಕ್ಕಾಚಾರ ಇತ್ತು. ಅದಕ್ಕೆ ತಕ್ಕಂತೆ ನೋಡನೋಡುತ್ತಲೇ ರಿಯಲ್ ಎಸ್ಟೇಟ್ ನಲ್ಲಿ ಕೆಲವರು ಕೋಟ್ಯಧಿಪತಿಗಳೂ ಆಗಿಬಿಟ್ಟರು.
ಬಾಯಿಗೆ ಬಂದಿದ್ದೇ ಬೆಲೆ ಎಂಬಂತಾಯಿತು
ಅಂಥ ಸನ್ನಿವೇಶದಲ್ಲೇ ಮೊದಲ ಹಾಗೂ ಎರಡನೇ ಹಂತದ ನಗರ, ಪಟ್ಟಣ ಪ್ರದೇಶಕ್ಕೆ ಕಾಲಿಟ್ಟಿತು ರಿಯಲ್ ಎಸ್ಟೇಟ್ ದಂಧೆ. ಈ ವ್ಯವಹಾರ ಷೇರು ಮಾರ್ಕೆಟ್, ಚಿನ್ನ- ಬೆಳ್ಳಿ, ಪೆಟ್ರೋಲ್- ಡೀಸೆಲ್ ಈ ರೀತಿಯಾದ್ದಲ್ಲ. ಇವಕ್ಕೆಲ್ಲ ಮಾರ್ಕೆಟ್ ನಲ್ಲಿ ಬೆಲೆ ನಿಗದಿ ಆಗುತ್ತದೆ. ಹಾಗೆ ಬೆಲೆ ನಿಗದಿ ಮಾಡುವುದಕ್ಕೆ ಕೆಲವು ಮಾನದಂಡಗಳೂ ಇವೆ. ಸೈಟ್ ಹೋದ ವರ್ಷ ಆರು ಲಕ್ಷ ಇದ್ದದ್ದು, ಈ ವರ್ಷ ಹದಿನಾಲ್ಕು ಲಕ್ಷ, ಇನ್ನು ಎರಡೇ ವರ್ಷದಲ್ಲಿ ಕೋಟಿ ರುಪಾಯಿ ಕೊಟ್ಟರೂ ಇಲ್ಲಿ ಖರೀದಿ ಮಾಡಲು ಸೈಟು ಸಿಗಲ್ಲ ಎನ್ನುತ್ತಿದ್ದ ರಿಯಲ್ ಎಸ್ಟೇಟ್ ನವರನ್ನು, ಅದ್ಯಾಕೆ ಅಷ್ಟೊಂದು ಬೆಲೆ ಆಗುತ್ತದೆ- ಯಾವ ಆಧಾರದಲ್ಲಿ ಎಂದೆಲ್ಲ ಖರೀದಿ ಮಾಡುವವರು ಕೇಳಲಿಲ್ಲ, ಆ ನಂತರ ಆ ಸೈಟ್ ಗಳನ್ನು ರೀಸೇಲ್ ಮಾಡುವಾಗಲೂ ಯಾರೂ ಕೇಳಲಿಲ್ಲ. ಬಾಯಿಗೆ ಬಂದಿದ್ದೇ ಬೆಲೆ ಎಂಬಂತಾಯಿತು. ದೇಶದಲ್ಲಿ ಎಲ್ಲರೂ ಸ್ವಂತ ಮನೆ ಕಟ್ಟಿಕೊಳ್ಳುವಂತಾಗಲಿ ಎಂಬ ಕಾರಣಕ್ಕೆ ಹೌಸಿಂಗ್ ಲೋನ್ ಸುಲಭವಾಗಿ ಸಿಗಲು ಆರಂಭಿಸಿತು. ಬ್ಯಾಂಕ್ ನವರು ಸರ್ಕಾರದ ಸೂಚನೆಯಂತೆ ಕೆಲವು ನಿಯಮಗಳನ್ನು ಸಡಿಲಗೊಳಿಸಿದರು. ಸಂಬಳ ಹೆಚ್ಚಿಗೆ ಬರುತ್ತಿತ್ತು, ಸಾಲ ಸುಲಭಕ್ಕೆ ಸಿಗುತ್ತಿತ್ತು. ಏನೇನೂ ಯೋಚನೆ ಮಾಡದೆ ಸಾಲ ಮಾಡಿಯಾದರೂ ರಿಯಲ್ ಎಸ್ಟೇಟ್ ಮೇಲೆ ಹೂಡಿಕೆ ಮಾಡಲು ಜನ ಆರಂಭಿಸಿದರು. ರಿಯಲ್ ಎಸ್ಟೇಟ್ ಆಕರ್ಷಕವಾಗಿ ಕಾಣಲು ಆರಂಭಿಸಿತು.
ಬೆಳ್ಳಿ ಒಂದು ಕೇಜಿಗೆ 75 ಸಾವಿರ ತಲುಪಿದ್ದು ನೆನಪಿದೆಯಾ?
ಹೇಗೆ ಚಿನ್ನದ ಬೆಲೆ ಒಂದೇ ವರ್ಷದಲ್ಲಿ ಹತ್ತು ಗ್ರಾಮ್ ಗೆ 30-32 ಸಾವಿರ ಇದ್ದದ್ದು 45 ಸಾವಿರಕ್ಕೆ ಏರಿತೋ ಅದೇ ರೀತಿ ಭೂಮಿಯ ಬೆಲೆಯೂ ಆಯಿತು. ಆದರೆ ನೆನಪಿರಲಿ ಯಾವುದು ಏರಿಕೆ ಕಾಣುತ್ತಲೇ ಇರುತ್ತದೋ ಒಂದು ಹಂತದಲ್ಲಿ ನಿಲ್ಲುತ್ತದೆ. ಅಲ್ಲಿಂದ ಬೀಳಲು ಆರಂಭಿಸುತ್ತದೆ. ಅಥವಾ ಖರೀದಿ ಮಾಡುವವರೇ ಇಲ್ಲದಂತಾಗುತ್ತದೆ. ಏಕೆಂದರೆ ಅಷ್ಟು ದುಬಾರಿ ಆಗಿರುತ್ತದೆ. ಈಗಲೂ ಹಲವರು ಚಿನ್ನದ ಬೆಲೆ ಹತ್ತು ಗ್ರಾಮ್ ಗೆ 50 ಸಾವಿರ ಮುಟ್ಟುತ್ತದೆ ಎಂಬ ಕಾರಣಕ್ಕೆ ಸಾಲ ತಂದಾದರೂ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಈ ಹಿಂದೊಮ್ಮೆ ಬೆಳ್ಳಿ ಒಂದು ಕೇಜಿಗೆ 75 ಸಾವಿರ ರುಪಾಯಿ ಮುಟ್ಟಿತ್ತು. ಆ ವೇಳೆ ಕೇಜಿಗೆ 1 ಲಕ್ಷ ರುಪಾಯಿ ಆಗುತ್ತಂತೆ ಎಂಬ ಗುಲ್ಲಾಯಿತು. ಅದನ್ನು ನಂಬಿ, ಎಷ್ಟೋ ಮಂದಿ ತಮ್ಮ ಉಳಿತಾಯದ ಹಣ ತಂದು ಹೂಡಿಕೆ ಮಾಡಿದರು. ಕೆಲವರು ಸಾಲ ತಂದು ಹಾಕಿದರು. ಆದರೆ ಬೆಳ್ಳಿ ಕೇಜಿಗೆ ಮೂವತ್ತು ಸಾವಿರದ ತನಕ ಬಂದು ತಲುಪಿತು. ಬೆಳ್ಳಿ ಮತ್ತೆ ಕೇಜಿಗೆ 60 ಸಾವಿರ ರುಪಾಯಿ ಕೂಡ ಮುಟ್ಟಿಲ್ಲ. ಸಾಲಕ್ಕೆ ಹಣ ತಂದು, ರಿಯಲ್ ಎಸ್ಟೇಟ್ ಗೆ ಎಂದು ಹಣ ಹಾಕಿದವರೂ ಅದೇ ಪ್ರಮಾಣದಲ್ಲಿ ಕಾಣಲು ಸದ್ಯದ ಪರಿಸ್ಥಿತಿಯಲ್ಲಿ ಸಿಗುತ್ತಾರೆ.
ಯಾವ ಪಾತಾಳ ತಲುಪಬಹುದು ಎಂಬ ಅಂದಾಜು ಯಾರಿಗೂ ಇಲ್ಲ
ವಾಸ್ತವದಲ್ಲಿ ಈ ರಿಯಲ್ ಎಸ್ಟೇಟ್ ಬೆಲೆ ಏನಿದೆ ಅದು ಯಾವುದೇ ವೈಜ್ಞಾನಿಕ ತಳಹದಿ ಇಲ್ಲದೆ ಕೃತಕವಾಗಿ ಏರಿಕೆ ಮಾಡುತ್ತಾ ಹೋದ ಮೊತ್ತ. ಆರ್ಥಿಕತೆ ಕುಸಿಯುತ್ತಿರುವ ಈ ಹೊತ್ತಿನಲ್ಲಿ ಇದು ಯಾವ ಪಾತಾಳ ತಲುಪಬಹುದು ಎಂಬ ಅಂದಾಜು ಯಾರಿಗೂ ಇಲ್ಲ. ವರ್ಷದ ಹಿಂದೆ ಹತ್ತು ರುಪಾಯಿಗೆ ಮಾರಾಟ ಆಗುತ್ತಿದ್ದದ್ದು ಈಗ ಆರು ರುಪಾಯಿಗೆ ಕೇಳುತ್ತಿದ್ದಾರೆ. ಆದರೆ ಇದಕ್ಕಿಂತ ಕೆಳಗೆ ಹೋಗುವುದಿಲ್ಲ ಎಂಬ ಖಾತ್ರಿ ಯಾರಿಗೂ ಇಲ್ಲ. ಬ್ಯಾಂಕ್ ಬಡ್ಡಿ ದರದ ಲೆಕ್ಕದಲ್ಲಿ ಒಂದಿಷ್ಟು ಲಾಭ ಬಂದರೂ ವ್ಯವಹಾರವನ್ನು ಮುಗಿಸಿಕೊಂಡು ಆಚೆಗೆ ಬರುವುದಕ್ಕೆ ಅಂತಲೇ ಎಲ್ಲರೂ ಎದುರು ನೋಡುತ್ತಿದ್ದಾರೆ. ಆ ಕಾರಣಕ್ಕೆ ಖರೀದಿ ಮಾಡುವವರಿಗಿಂತ ಮಾರುವವರ ಸಂಖ್ಯೆಯೇ ಹೆಚ್ಚಾಗಿದೆ. ಇದೇ ವೇಳೆ ಬ್ಯಾಂಕ್ ಗಳಿಂದ ಸಾಲ ಪಡೆದವರಿಗೆ ಹಿಂತಿರುಗಿಸಲು ಸಹ ಕಷ್ಟವಾಗುತ್ತಿದೆ. ಹೌಸಿಂಗ್ ಲೋನ್ ಬಡ್ಡಿ ದರವೇನೋ ಕಡಿಮೆ ಆಗಿದೆ. ಆದರೆ ಸಾಲ ತೆಗೆದುಕೊಂಡರೆ ಹಿಂತಿರುಗಿಸುವುದಕ್ಕೆ ಸಾಧ್ಯವಾ ಎಂಬ ಭಯ ಶುರುವಾಗಿದೆ. ಏಕೆಂದರೆ, ಇರುವ ಕೆಲಸ ಯಾವಾಗಲಾದರೂ ಕಳೆದುಕೊಳ್ಳಬಹುದು. ಜತೆಗೆ ಆರ್ಥಿಕ ಸ್ಥಿತಿ ಚೇತರಿಸಿಕೊಂಡು ಮತ್ತೆ ಎಲ್ಲ ವ್ಯವಹಾರಗಳು ಮೊದಲಿನಂತೆ ಯಾವಾಗ ಆಗಬಹುದು ಎಂಬುದು ಯಾರಿಗೂ ಅಂದಾಜಿಲ್ಲ. ಇಂಥ ಪರಿಸ್ಥಿತಿಯಲ್ಲಿ ನಿಜದ ಅರ್ಥದಲ್ಲೂ ಕ್ಯಾಶ್ ಇಸ್ ಕಿಂಗ್. ಯಾರ ಬಳಿ ನಗದು ಮೊತ್ತ ಇರುತ್ತದೋ ಅಂಥವರು ಸರಿಯಾದ ಹಾಗೂ ನ್ಯಾಯ ಸಮ್ಮತ ಎನ್ನಿಸುವ ಬೆಲೆಗೆ ಆಸ್ತಿ ಖರೀದಿ ಮಾಡುವುದಕ್ಕೆ ಅವಕಾಶ ಹೆಚ್ಚಿರುತ್ತದೆ. ಆದರೂ ಜೋಪಾನವಾಗಿರಬೇಕು.


Click it and Unblock the Notifications