ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ತನ್ನ ಅತಿದೊಡ್ಡ ಆರಂಭಿಕ ಸಾರ್ವಜನಿಕ ಕೊಡುಗೆಯನ್ನು (ಐಪಿಒ) ಬುಧವಾರ ಪ್ರಾರಂಭ ಮಾಡಲಿದೆ. ಮೇ 4 ರಂದು ಚಂದಾದಾರಿಕೆ ಆರಂಭವಾಗಲಿದ್ದು, ಮೇ 9ರವರೆಗೆ ಚಂದಾದಾರಿಕೆ ತೆರೆದಿರಲಿದೆ. ಬಹುನಿರೀಕ್ಷಿತ ಭಾರತದ ಅತಿದೊಡ್ಡ ಐಪಿಒ ಅಂತಿಮವಾಗಿ ಆರಂಭವಾಗಲಿದ್ದು, ಹೂಡಿಕೆದಾರರು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಈ ನಡುವೆ ಯಾರು ಎಲ್‌ಐಸಿ ಷೇರನ್ನು ಖರೀದಿ ಮಾಡಬಹುದು, ಯಾರು ಖರೀದಿ ಮಾಡುವಂತಿಲ್ಲ ಎಂಬ ಬಗ್ಗೆ ಹಲವಾರು ಮಂದಿಗೆ ಅನುಮಾನವಿದೆ.
ಈ ಎಲ್‌ಐಸಿ ಐಪಿಒ ಮೂಲಕ ಕೇಂದ್ರ ಸರ್ಕಾರವು ನಿಗಮದಲ್ಲಿನ ತನ್ನ 3.5 ಪ್ರತಿಶತ ಪಾಲನ್ನು ಮಾರಾಟ ಮಾಡಲಿದೆ. ಪ್ರತಿ ಷೇರಿಗೆ ರೂ 902 - 949 ರ ಬೆಲೆ ಇದ್ದು ಒಟ್ಟು ಸುಮಾರು 21,000 ಕೋಟಿ ರೂಪಾಯಿಗಳನ್ನು ಸಂಗ್ರಹ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ.
ಭಾರತದಲ್ಲಿ ಅತಿದೊಡ್ಡ ಜೀವ ವಿಮಾದಾರರಾಗಿರುವುದರಿಂದ, ಎಲ್‌ಐಸಿಯ ಹತ್ತಿರದ ಪ್ರತಿಸ್ಪರ್ಧಿಗೆ ಹೋಲಿಸಿದರೆ ಎಲ್‌ಐಸಿ ಎನ್‌ಬಿಪಿನಲ್ಲಿ (ಹೊಸ ವ್ಯಾಪಾರ ಪ್ರೀಮಿಯಂ) ಶೇಕಡ 61.4 ಮಾರುಕಟ್ಟೆ ಪಾಲನ್ನು ಹೊಂದಿದೆ. ಎನ್‌ಬಿಪಿ ಆಧಾರದ ಮೇಲೆ 9.16 ಶೇಕಡಾ ಮಾರುಕಟ್ಟೆ ಪಾಲನ್ನು ಹೊಂದಿದೆ. ಡಿಸೆಂಬರ್ 31, 2021 ರಂತೆ, ಎಲ್‌ಐಸಿ ಭಾರತದಲ್ಲಿ 2,048 ಶಾಖಾ ಕಚೇರಿಗಳನ್ನು ಮತ್ತು 1,559 ಉಪಗ್ರಹ ಕಚೇರಿಗಳನ್ನು ಹೊಂದಿದ್ದು, ದೇಶದ ಎಲ್ಲಾ ಜಿಲ್ಲೆಗಳಲ್ಲಿ 91 ಪ್ರತಿಶತವನ್ನು ಒಳಗೊಂಡಿದೆ.
ಯಾರು ಷೇರು ಖರೀದಿಸಬಹುದು
ಕೇಂದ್ರ ಸರ್ಕಾರವು ಎಲ್ಐಸಿಯಲ್ಲಿ 22,13,74,920 ಷೇರುಗಳನ್ನು ಮಾರಾಟ ಮಾಡುತ್ತಿದೆ. ಅಂದರೆ ಒಟ್ಟು ಸುಮಾರು 21,000 ಕೋಟಿ ರೂ. ಮೌಲ್ಯದ ಷೇರುಗಳನ್ನು ಎಲ್‌ಐಸಿ ಐಪಿಒ ಮೂಲಕ ಮಾರಾಟ ಮಾಡುತ್ತಿದೆ. ಈ ಆಫರ್ ಮೊದಲು ಚಿಲ್ಲರೆ ಖರೀದಿದಾರರಿಗೆ ತೆರೆದಿರುತ್ತದೆ. ಆಫರ್‌ನಲ್ಲಿರುವ 22.13 ಕೋಟಿ ಎಲ್‌ಐಸಿ ಷೇರುಗಳಲ್ಲಿ 9.88 ಕೋಟಿ ಷೇರುಗಳನ್ನು ಅರ್ಹ ಸಾಂಸ್ಥಿಕ ಖರೀದಿದಾರರಿಗೆ (ಬ್ಯಾಂಕ್, ವಿಮಾ ಕಂಪನಿ, ಇತ್ಯಾದಿ) ಮತ್ತು 2.96 ಕೋಟಿ ಷೇರುಗಳನ್ನು ಸಾಂಸ್ಥಿಕವಲ್ಲದ ಖರೀದಿದಾರರಿಗೆ ಕಾಯ್ದಿರಿಸಲಾಗಿದೆ. ಇದಲ್ಲದೆ, 15,81,249 ಷೇರುಗಳು ಮತ್ತು 2,21,37,492 ಷೇರುಗಳನ್ನು ಉದ್ಯೋಗಿಗಳು ಮತ್ತು ಪಾಲಿಸಿದಾರರಿಗೆ ಕಾಯ್ದಿರಿಸಲಾಗಿದೆ.
ಯಾರು ಖರೀದಿಸುವಂತಿಲ್ಲ?
ಎನ್‌ಆರ್‌ಐ ಪಾಲಿಸಿದಾರರು ಹಾಗೂ ಭಾರತದಲ್ಲಿ ವಾಸಿಸದ ಪಾಲಿಸಿದಾರರು ಪಾಲಿಸಿದಾರರಿಗೆ ಕಾಯ್ದಿರಿಸಿದ ಭಾಗದ ಅಡಿಯಲ್ಲಿ ಎಲ್‌ಐಸಿ ಐಪಿಒ ಅನ್ನು ಖರೀದಿ ಮಾಡಲು ಅರ್ಹರಾಗಿರುವುದಿಲ್ಲ. ಪಾಲಿಸಿದಾರರ ಮೀಸಲಾತಿ ವರ್ಗದ ಪ್ರಕಾರ, ಇದು ಜಂಟಿ ಹೋಲ್ಡರ್ ಪಾಲಿಸಿಯಾಗಿದ್ದರೆ, ಈಕ್ವಿಟಿ ಷೇರುಗಳಿಗೆ ಇಬ್ಬರಲ್ಲಿ ಒಬ್ಬರು ಮಾತ್ರ ಅರ್ಜಿ ಸಲ್ಲಿಸಬಹುದು.
ನೀವು ತಿಳಿದುಕೊಳ್ಳಬೇಕಾದ ಮಾಹಿತಿ
* ಎಲ್‌ಐಸಿ ಐಪಿಒಗಾಗಿ ಒಟ್ಟು ಮೌಲ್ಯವನ್ನು 21,000 ಕೋಟಿ ರೂ.ಗಳಿಗೆ ನಿಗದಿಪಡಿಸಲಾಗಿದೆ. ಇದು ಇಲ್ಲಿಯವರೆಗೆ ದೇಶದ ಅತಿದೊಡ್ಡ ಐಪಿಒ ಆಗಿದೆ.
* ಉದ್ಯೋಗಿಗಳಿಗೆ ಸುಮಾರು 15.81 ಲಕ್ಷ ಷೇರುಗಳನ್ನು ಮತ್ತು ಪಾಲಿಸಿದಾರರಿಗೆ ಸುಮಾರು 2.21 ಕೋಟಿ ಷೇರುಗಳನ್ನು ಕಾಯ್ದಿರಿಸಲಾಗಿದೆ.
* ಆಸಕ್ತ ಚಂದಾದಾರರು ಲಾಟ್‌ಗಳಲ್ಲಿ ಅರ್ಜಿ ಸಲ್ಲಿಸಬಹುದು, ಒಂದು ಎಲ್‌ಐಸಿ ಐಪಿಒ ಲಾಟ್ 15 ಎಲ್‌ಐಸಿ ಷೇರುಗಳನ್ನು ಒಳಗೊಂಡಿರುತ್ತದೆ
* ಒಬ್ಬ ಅರ್ಜಿದಾರರು ಕನಿಷ್ಠ ಒಂದು ಮತ್ತು ಗರಿಷ್ಠ 14 ಲಾಟ್‌ಗಳಿಗೆ ಅರ್ಜಿ ಸಲ್ಲಿಸಬಹುದು.
ಕನಿಷ್ಠ ಮೊತ್ತ 14,235 ರೂ
* ಎಲ್ಐಸಿ ಐಪಿಒಗೆ ಅರ್ಜಿ ಸಲ್ಲಿಸಲು ಕನಿಷ್ಠ ಮೊತ್ತ 14,235 ರೂ.
* ಈ ಹಿಂದೆ ಕೇಂದ್ರವು ಪಾಲಿಸಿದಾರರಿಗೆ 60 ರೂಪಾಯಿ ರಿಯಾಯಿತಿ ಮತ್ತು ಎಲ್‌ಐಸಿ ಉದ್ಯೋಗಿಗಳಿಗೆ 45 ರೂಪಾಯಿ ರಿಯಾಯಿತಿಯನ್ನು ಘೋಷಿಸಿದೆ.
* ಆರಂಭದಲ್ಲಿ, ಎಲ್‌ಐಸಿ ಐಪಿಒ ಅನ್ನು ಮಾರ್ಚ್ 31 ರ ಮೊದಲು ಪ್ರಾರಂಭಿಸಲು ಯೋಜಿಸಲಾಗಿತ್ತು. ಆದರೆ ರಷ್ಯಾ-ಉಕ್ರೇನ್ ಯುದ್ಧದ ಕಾರಣ ಐಪಿಒ ಅನ್ನು ಮುಂದೂಡಲಾಯಿತು.
* ಎಲ್‌ಐಸಿ ಷೇರುಗಳು ಮೇ 17 ರಂದು ಬಿಎಸ್‌ಇ ಮತ್ತು ಎನ್‌ಎಸ್‌ಇಯಲ್ಲಿ ಲಿಸ್ಟ್ ಆಗುವ ಸಾಧ್ಯತೆಯಿದೆ.
* ನಿಮ್ಮ ಷೇರುಗಳನ್ನು ಮೇ 16 ರೊಳಗೆ ನಿಮ್ಮ ಡಿಮ್ಯಾಟ್ ಖಾತೆಗೆ ಕ್ರೆಡಿಟ್ ಮಾಡಲಾಗುತ್ತದೆ.
* ನೀವು ಅರ್ಜಿ ಸಲ್ಲಿಸಿದಷ್ಟು ಷೇರು ನಿಮಗೆ ಲಭ್ಯವಾಗದಿದ್ದರೆ ನಿಮ್ಮ ಹಣವನ್ನು ಮೇ 13 ರೊಳಗೆ ಮರುಪಾವತಿಸಲಾಗುತ್ತದೆ.


Click it and Unblock the Notifications