ಹೂಡಿಕೆ ಮಾಡಿದ ಹಣಕ್ಕಿಂತ ದುಪ್ಪಟ್ಟು, ಮೂರು ಪಟ್ಟು ಹಣ ಲಾಭವಾಗಿ ಲಭಿಸಿದರೆ ಆ ಹಣ ಯಾರು ಬೇಡ ಎನ್ನುತ್ತಾರೆ ಹೇಳಿ. ನಿಮ್ಮ ಹಣವನ್ನು ಮೂರು ಪಟ್ಟು ಹೆಚ್ಚು ಮಾಡುವ ಯೋಜನೆಗಳ ಬಗ್ಗೆ ನಾವಿಲ್ಲಿ ವಿವರಿಸಿದ್ದೇವೆ. ಈ ರೀತಿಯ ಹೂಡಿಕೆ ಯಾವಾಗಲೂ ಅಪಾಯಕಾರಿ ಆಗಿರುತ್ತದೆ. ಆದರೆ ಈ ಯೋಜನೆಯಲ್ಲಿ ಯಾವುದೇ ಅಪಾಯವಿಲ್ಲ. ಆ ಯೋಜನೆ ಯಾವುದು ಎಂದು ತಿಳಿಯೋಣ ಮುಂದೆ ಓದಿ....
ಸುರಕ್ಷಿತ ಹೂಡಿಕೆಗಳ ಬಗ್ಗೆ ನಾವು ಚರ್ಚೆ ಮಾಡುವಾಗ ಯಾವಾಗಲೂ ನಮಗೆ ತಕ್ಷಣಕ್ಕೆ ಹೊಳೆಯುವುದು ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಯೋಜನೆಗಳು. ಎಲ್‌ಐಸಿಯಲ್ಲಿ ಹೂಡಿಕೆ ಮಾಡುವುದು ಸುರಕ್ಷಿತ ಎಂದು ಜನರು ಬಹಳ ಹಿಂದಿನಿಂದಲೂ ನಂಬಿಕೊಂಡು ಬಂದಿದ್ದಾರೆ. ಹಾಗೆಯೇ ಇದು ಪ್ರಸ್ತುತ ಕೂಡಾ ಹೌದು. ಇತರ ಹೂಡಿಕೆ ಆಯ್ಕೆಗಳು ಇದ್ದರೂ ಕೂಡಾ ಜನರು ಈಗಲೂ ಎಲ್‌ಐಸಿಯ ಸುರಕ್ಷಿತ ಹೂಡಿಕೆಯತ್ತ ಗಮನಹರಿಸುತ್ತಾರೆ.
ರಾಷ್ಟ್ರದ ಅತಿದೊಡ್ಡ ವಿಮಾ ಸಂಸ್ಥೆಯಾದ ಎಲ್‌ಐಸಿ ಹಲವಾರು ಯೋಜನೆಗಳನ್ನು ಹೊಂದಿದೆ. ನೀವು ಎಲ್‌ಐಸಿಯಲ್ಲಿ ಹೂಡಿಕೆ ಮಾಡಲು ಬಯಸಿದರೆ, ನೀವು ಎಲ್‌ಐಸಿಯ ನಿಯಮಿತ ಪ್ರೀಮಿಯಂ ಯುನಿಟ್ ಲಿಂಕ್ಡ್ ಪ್ಲಾನ್, ಎಸ್‌ಐಐಪಿಗೆ ಹೂಡಿಕೆ ಮಾಡಬಹುದು. ನೀವು 21 ವರ್ಷಗಳವರೆಗೆ ಸರಿಸುಮಾರು 10 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ ಸರಿಸುಮಾರು 35 ಲಕ್ಷಗಳ ಲಾಭವನ್ನು ಪಡೆಯಲು ಸಾಧ್ಯವಾಗಲಿದೆ. ಈ ಹೂಡಿಕೆಯ ಮೆಚ್ಯೂರಿಟಿ ಅವಧಿ ಬಳಿಕ ನಿಮಗೆ 45 ಲಕ್ಷ ರೂಪಾಯಿ ಲಭ್ಯವಾಗಲಿದೆ. ಈ ಯೋಜನೆಯ ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ ಮುಂದೆ ಓದಿ.....
ಲಾಭ ಗಳಿಸುವುದು ಹೇಗೆ ಎಂದು ತಿಳಿಯಿರಿ
ಎಸ್‌ಐಐಪಿ ಒಂದು ಸಂಘಟಿತ ಹೂಡಿಕೆ ವಿಮಾ ಯೋಜನೆಯಾಗಿದೆ. ನೀವು ಎಲ್‌ಐಸಿ ಎಸ್‌ಐಐಪಿ ಯೋಜನೆಯಲ್ಲಿ ಮಾಸಿಕ ಸುಮಾರು ನಾಲ್ಕು ಸಾವಿರ ರೂಪಾಯಿ ಹೂಡಿಕೆ ಮಾಡಬೇಕು. ಈ ಹೂಡಿಕೆಯನ್ನು 21 ವರ್ಷಗಳ ಕಾಲ ಮಾಡಬೇಕಾಗುತ್ತದೆ. ನೀವು ಪ್ರತಿ ತಿಂಗಳು 4 ಸಾವಿರ ರೂಪಾಯಿಯಂತೆ ಹೂಡಿಕೆ ಮಾಡಿದರೆ ಒಂದು ವರ್ಷಕ್ಕೆ 48,000 ರೂಪಾಯಿ ಹೂಡಿಕೆ ಮಾಡಿದಂತೆ ಆಗುತ್ತದೆ. 21 ವರ್ಷಗಳಲ್ಲಿ ನೀವು 10,08,000 ರೂಪಾಯಿ ಹೂಡಿಕೆ ಮಾಡಿದಂತೆ ಆಗುತ್ತದೆ. ಆದರೆ ಈ ಯೋಜನೆಯ ಕೊನೆಯಲ್ಲಿ ಅಂದರೆ ಮೆಚ್ಯೂರಿಟಿ ಸಮಯದಲ್ಲಿ ನೀವು ಒಟ್ಟು 45 ಲಕ್ಷ ರೂಪಾಯಿಗಳನ್ನು ಪಡೆಯಲು ಸಾಧ್ಯವಾಗಲಿದೆ. ಅಂದರೆ ಒಮ್ಮೆ ಯೋಜನೆ ಮುಗಿದ ನಂತರ ನೀವು ರೂ 34,92,000 ಅಥವಾ ಸುಮಾರು ರೂ 35 ಲಕ್ಷ ಲಾಭವನ್ನು ಪಡೆಯುತ್ತೀರಿ.
ಪ್ರೀಮಿಯಂನಲ್ಲಿ ಠೇವಣಿ ಮಾಡಲು ನಾಲ್ಕು ಆಯ್ಕೆ
ಎಸ್‌ಐಐಪಿ ಯೋಜನೆಯಲ್ಲಿ ಪ್ರೀಮಿಯಂ ಪಾವತಿಸಲು ನಿಮಗೆ ನಾಲ್ಕು ಆಯ್ಕೆಗಳಿವೆ. ಮಾಸಿಕ, ತ್ರೈಮಾಸಿಕ, ಅರ್ಧ-ವಾರ್ಷಿಕ ಮತ್ತು ವಾರ್ಷಿಕವಾಗಿ ನೀವು ಪ್ರೀಮಿಯಂ ಅನ್ನು ಪಾವತಿ ಮಾಡಬಹುದು. ನೀವು ಇಡೀ ವರ್ಷಕ್ಕೆ ಪ್ರೀಮಿಯಂ ಅನ್ನು ಮೊದಲೇ ಪಾವತಿ ಮಾಡುವುದಾದರೆ, ನೀವು ಪ್ರತಿ ತಿಂಗಳು 4000ದಂತೆ ವಾರ್ಷಿಕ 48,000 ರೂಪಾಯಿಗಳಿಗೆ ಬದಲಾಗಿ 40,000 ರೂಪಾಯಿಗಳನ್ನು ಮಾತ್ರ ಪಾವತಿಸುವ ಆಫರ್ ನೀಡಲಾಗುತ್ತದೆ. ನೀವು ಅರ್ಧ ವಾರ್ಷಿಕವಾಗಿ ಪ್ರೀಮಿಯಂ ಅನ್ನು ಪಾವತಿ ಮಾಡುವುದಾದರೆ ರೂ. 22,000 ಪಾವತಿ ಮಾಡಬಹುದು. ತ್ರೈಮಾಸಿಕವಾಗಿ ಪ್ರೀಮಿಯಂ ಪಾವತಿಸುವುದಾದರೆ 12,000 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ತ್ರೈಮಾಸಿಕ, ಅರ್ಧ-ವಾರ್ಷಿಕ ಮತ್ತು ವಾರ್ಷಿಕ ಪ್ರೀಮಿಯಂ ಪಾವತಿಗಳಿಗೆ, 30 ದಿನಗಳ ಗ್ರೇಸ್ ಅವಧಿ ಇರುತ್ತದೆ. ಮಾಸಿಕ ಪ್ರೀಮಿಯಂ ಪಾವತಿಗಳಿಗೆ, ಗ್ರೇಸ್ ಅವಧಿಯು 15 ದಿನ ಆಗಿದೆ.
ವಿಮೆ ರಕ್ಷಣೆಯೂ ಇದೆ!
ಈ ಎಸ್‌ಐಐಪಿ ಯೋಜನೆಯ ಭಾಗವಾಗಿ ಹೂಡಿಕೆದಾರರು 4,80,000 ರೂಪಾಯಿವರೆಗೆ ವಿಮಾ ರಕ್ಷಣೆಯನ್ನು ಸಹ ಪಡೆಯುತ್ತಾರೆ. ಈ ವಿಮೆ ಆಫ್‌ಲೈನ್ ಮತ್ತು ಆನ್‌ಲೈನ್‌ನಲ್ಲಿ ಲಭ್ಯವಿದೆ. ಇದಕ್ಕಾಗಿ ಡಿಮ್ಯಾಟ್ ಖಾತೆಯ ಅಗತ್ಯವಿಲ್ಲ. ಐದು ವರ್ಷಗಳು ಎಸ್‌ಐಐಪಿ ಲಾಕ್-ಇನ್ ಅವಧಿಯಾಗಿದೆ. ಐದು ವರ್ಷಗಳ ನಂತರ, ಹೂಡಿಕೆದಾರರು ಯಾವುದೇ ಕ್ಷಣದಲ್ಲಿ ಹೂಡಿಕೆಯನ್ನು ರದ್ದುಗೊಳಿಸಬಹುದು. ಯಾವುದೇ ಸರೆಂಡರ್ ಶುಲ್ಕಗಳಿಲ್ಲ. ಸರಾಸರಿ ಮೆಚ್ಯೂರಿಟಿ ಮೊತ್ತವು ಶೇಕಡ 15 ಎಂದು ಊಹಿಸಲಾಗಿದೆ. ಆದಾಗ್ಯೂ, ಯಾವುದೇ ಹೂಡಿಕೆ ಮಾಡುವ ಮೊದಲು ನೀವು ಇನ್ನೂ ವೃತ್ತಿಪರ ಸಲಹೆಯನ್ನು ಪಡೆಯುವುದು ಉತ್ತಮ.


Click it and Unblock the Notifications