ನವದೆಹಲಿ, ಅ. 17: ದೇಶದ ಬಹುತೇಕ ಬ್ಯಾಂಕುಗಳು ಬಡ್ಡಿ ದರಗಳನ್ನು ಏರಿಸುವ ಹಾದಿಯಲ್ಲಿದ್ದರೆ ಬ್ಯಾಂಕ್ ಆಫ್ ಮಹಾರಾಷ್ಟ್ರ ಇಳಿಕೆ ಮಾಡಿದೆ. ಬ್ಯಾಂಕ್ ಆಫ್ ಮಹಾರಾಷ್ಟ್ರದ ವಿವಿಧ ಗೃಹ ಸಾಲ ಮತ್ತು ವೈಯಕ್ತಿಕ ಸಾಲದ ಮೇಲಿನ ಬಡ್ಡಿದರಗಳು ಗಣನೀಯವಾಗಿ ಇಳಿದಿವೆ.
ಬಿಒಎಂನ ಗೃಹ ಸಾಲದ ಬಡ್ಡಿ ದರ 30 ರಿಂದ 70 ಬೇಸಿಸ್ ಪಾಯಿಂಟ್‌ವರೆಗೂ ಇಳಿಕೆಯಾಗಿದೆ. ಇನ್ನು ಪರ್ಸನಲ್ ಲೋನ್ ಮೇಲಿನ ಬಡ್ಡಿ ದರ ಕೂಡ 245 ಮೂಲಾಂಕಗಳಷ್ಟು ಕಡಿಮೆಯಾಗಿದೆ. ಅಂದರೆ ಬ್ಯಾಂಕ್ ಮಹಾರಾಷ್ಟ್ರದಲ್ಲಿ ಗೃಹ ಸಾಲದ ಮೇಲಿನ ವಾರ್ಷಿಕ ಬಡ್ಡಿ ದರ ಶೇ. 8ರಿಂದ ಆರಂಭವಾಗುತ್ತದೆ. ವೈಯಕ್ತಿಕ ಸಾಲಕ್ಕೆ ಶೇ. 11.35ರಷ್ಟಿದ್ದ ಬಡ್ಡಿ ದರವನ್ನು ಶೇ. 8.9ಕ್ಕೆ ಇಳಿಸಲಾಗಿದೆ.
ಹಬ್ಬದ ಸೀಸನ್‌ಗೆ ಬ್ಯಾಂಕ್ ಆಫ್ ಮಹಾರಾಷ್ಟ್ರ ತನ್ನ ಗ್ರಾಹಕರಿಗೆ ನೀಡಿರುವ ಗಿಫ್ಟ್ ಇದು. ಭಾರತೀಯ ರಿಸರ್ವ್ ಬ್ಯಾಂಕ್ ಕಳೆದ ಮೂರು ಬಾರಿ ಸತತವಾಗಿ ರೆಪೋ ದರ ಏರಿಕೆ ಮಾಡಿದೆ. ಆರ್‌ಬಿಐ ದರ ಹೆಚ್ಚಾದರೆ ಎಲ್ಲಾ ಬ್ಯಾಂಕುಗಳೂ ಬಡ್ಡಿ ಏರಿಸುವುದು ಸಾಮಾನ್ಯ. ಅಂತೆಯೇ ಬಹುತೇಕ ಬ್ಯಾಂಕುಗಳು ತಮ್ಮ ಬಡ್ಡಿ ದರಗಳನ್ನು ಏರಿಸುತ್ತಿವೆ. ಆದರೂ ಬ್ಯಾಂಕ್ ಆಫ್ ಮಹಾರಾಷ್ಟ್ರ ವಿಭಿನ್ನ ಹಾದಿ ತುಳಿದದ್ದು ವಿಶೇಷ.
ದೀಪಾವಳಿ ಆಫರ್
ಬ್ಯಾಂಕ್ ಆಫ್ ಮಹಾರಾಷ್ಟ್ರ ಕೆಲ ದಿನಗಳ ಹಿಂದಷ್ಟೇ ದೀಪಾವಳಿ ಹಬ್ಬದ ಪ್ರಯುಕ್ತ ದಿವಾಲಿ ಧಮಾಕ ಆಫರ್ ಪ್ರಕಟಿಸಿತ್ತು. ಚಿನ್ನದ ಸಾಲ, ಗೃಹ ಸಾಲ ಮತ್ತು ಕಾರು ಸಾಲಗಳನ್ನು ನೀಡಲು ಪ್ರೋಸಸಿಂಗ್ ಶುಲ್ಕದಿಂದ ವಿನಾಯಿತಿ ಕೊಟ್ಟಿತು.
ಗ್ರಾಹಕರ ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ ಬಡ್ಡಿದರಗಳು ವ್ಯತ್ಯಯವಾಗುತ್ತವೆ. 800ಕ್ಕೂ ಅಧಿಕ ಕ್ರೆಡಿಟ್ ಸ್ಕೋರ್ ಇರುವ ಗ್ರಾಹಕರಿಗೆ ಅತಿ ಕಡಿಮೆ ಬಡ್ಡಿಯಲ್ಲಿ ಸಾಲ ಸಿಗುತ್ತದೆ. ಅಂದರೆ ಈ ಗ್ರಾಹಕರಿಗೆ ಶೇ. 8ರ ಬಡ್ಡಿದರದಲ್ಲಿ ಸಾಲ ದೊರೆಯುತ್ತದೆ. 700-800ರವರೆಗಿನ ಕ್ರೆಡಿಟ್ ಸ್ಕೋರ್ ಹೊಂದಿರುವ ಗ್ರಾಹಕರಿಗೆ ಗೃಹ ಸಾಲ ಶೇ. 8.4ರ ಬಡ್ಡಿಗೆ ಸಿಗುತ್ತದೆ.
ಕರ್ನಾಟಕದಲ್ಲಿ ಎಷ್ಟಿವೆ ಶಾಖೆಗಳು?
ಬ್ಯಾಂಕ್ ಆಫ್ ಮಹಾರಾಷ್ಟ್ರ ದೇಶವ್ಯಾಪಿ ಶಾಖೆಗಳನ್ನು ಹೊಂದಿವೆ. ಬೆಂಗಳೂರು ಸೇರಿದಂತೆ ರಾಜ್ಯದ 27 ಜಿಲ್ಲೆಗಳಲ್ಲಿ ಬ್ಯಾಂಕ್ ಆಫ್ ಮಹಾರಾಷ್ಟ್ರದ 67 ಶಾಖೆಗಳಿವೆ. ಲಕ್ಷಾಂತರ ಜನರು ಈ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದಾರೆ. ಹೀಗಾಗಿ, ಬಹಳ ಮಂದಿಗೆ ಬಡ್ಡಿ ದರ ಕಡಿಮೆ ಆಗಿರುವುದು ಖುಷಿಯ ಸಂಗತಿ.
ಇದೇ ವೇಳೆ, ಬ್ಯಾಂಕ್ ಆಫ್ ಮಹಾರಾಷ್ಟ್ರದ ನೆಟ್ ಇಂಟರೆಸ್ಟ್ ಮಾರ್ಜಿನ್ (ಎನ್‌ಐಎಂ) ಜೂನ್ ಅಂತ್ಯದ ತ್ರೈಮಾಸಿಕದಲ್ಲಿ ಶೇ. 3.28ರಷ್ಟಿತ್ತು. ಇದು ಬೇರೆ ಬ್ಯಾಂಕುಗಳಿಗೆ ಹೋಲಿಸಿದರೆ ಬಹಳ ಉತ್ತಮ ಸ್ಥಿತಿ ಎನ್ನಲಾಗಿದೆ. ಇದೇ ಕಾರಣಕ್ಕೆ ಬಿಒಎಂ ತನ್ನ ಬಡ್ಡಿ ದರಗಳನ್ನು ಗಣನೀಯವಾಗಿ ಇಳಿಸಲು ಸಾಧ್ಯವಾಗಿದೆ ಎಂಬ ಅಭಿಪ್ರಾಯವಿದೆ.
ನೆಟ್ ಇಂಟ್ರೆಸ್ಟ್ ಮಾರ್ಜಿನ್
ಇಲ್ಲಿ ನೆಟ್ ಇಂಟರೆಸ್ಟ್ ಮಾರ್ಜಿನ್ ಎಂದರೆ ನಿವ್ವಳ ಬಡ್ಡಿ ಅಂತರ. ಇದು ಒಂದು ಬ್ಯಾಂಕ್‌ನ ಆರೋಗ್ಯಸ್ಥಿತಿ ಮತ್ತು ಪ್ರಗತಿಗೆ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಒಂದು ಬ್ಯಾಂಕ್ ತಾನು ನೀಡುವ ಸಾಲದ ಮೇಲಿನ ಬಡ್ಡಿಯಿಂದ ಗಳಿಸುವ ಆದಾಯ ಮತ್ತು ತನ್ನಲ್ಲಿರುವ ಠೇವಣಿಗೆ ಬಡ್ಡಿ ನೀಡಲು ಮಾಡುವ ವೆಚ್ಚ, ಇವೆರಡ ವ್ಯತ್ಯಾಸವೇ ನೆಟ್ ಇಂಟ್ರೆಸ್ಟ್ ಮಾರ್ಜಿನ್ ಎನ್ನುವುದು. ಈ ಮಾರ್ಜಿನ್ ಹೆಚ್ಚಿದಷ್ಟೂ ಬ್ಯಾಂಕ್ ಉತ್ತಮ ಸ್ಥಿತಿಯಲ್ಲಿದೆ ಎಂದರ್ಥ.
ಎಸ್‌ಬಿಐ ಬ್ಯಾಂಕ್ ಭಾರತದಲ್ಲಿ ಜೂನ್ ಅಂತ್ಯದ ತ್ರೈಮಾಸಿಕದಲ್ಲಿ ಶೇ. 3.15ರಷ್ಟು ಎನ್‌ಐಎಂ ಹೊಂದಿದೆ. ಬೇರೆ ಕೆಲ ಬ್ಯಾಂಕುಗಳ ನೆಟ್ ಇಂಟರೆಸ್ಟ್ ಮಾರ್ಜಿನ್ ಶೇ. 3ಕ್ಕಿಂತ ಕಡಿಮೆ ಇದೆ.


Click it and Unblock the Notifications