ಸಾಮಾನ್ಯವಾಗಿ ನಮ್ಮ ಜೀವನದಲ್ಲಿ ಯಾವುದೇ ಹಣಕಾಸು ತೊಂದರೆ ಉಂಟಾದರೂ ನಾವು ಇನ್ನೊಬ್ಬರಿಂದ ಸಾಲವನ್ನು ಪಡೆದು ಪರಿಸ್ಥಿತಿ ಸುಧಾರಿಸಿದ ಬಳಿಕ ಮರುಪಾವತಿ ಮಾಡುತ್ತೇವೆ. ಆದರೆ ದಿಡೀರ್ ಆಗಿ ಹೆಚ್ಚು ಮೊತ್ತ ನಮಗೆ ಬೇಕಾದಾಗ ಅಷ್ಟು ಮೊತ್ತವನ್ನು ಯಾರಿಂದಲೂ ಪಡೆಯುವುದು ಕಷ್ಟಸಾಧ್ಯ. ಬಡ್ಡಿ ಮೇಲೆ ಪಡೆಯಬಹುದಾದರೂ ಅದು ಚಕ್ರಬಡ್ಡಿ, ನಾವು ಮರುಪಾವತಿ ಮಾಡುವಷ್ಟರಲ್ಲಿ ಮುಪ್ಪಾಗುತ್ತದೆ.
ಇಂತಹ ಸಂದರ್ಭದಲ್ಲಿ ನಮ್ಮ ಮುಂದೆ ಬರುವ ಆಯ್ಕೆ ಬ್ಯಾಂಕು ಅಥವಾ ಹಣಕಾಸು ಸಂಸ್ಥೆಗಳಿಂದ ಸಾಲವನ್ನು ಪಡೆಯುವುದು. ನೀವು ಇಲ್ಲಿಯೂ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ಪಡೆಯಬೇಕಾದರೆ, ಉತ್ತಮ ಕ್ರೆಡಿಟ್ ಸ್ಕೋರ್ ಅನ್ನು ಹೊಂದಿರುವುದು ಮುಖ್ಯವಾಗುತ್ತದೆ. ಆದರೆ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆ ಇದೆಯೇ?, ಹಾಗಿರುವಾಗ ನೀವು ಅಧಿಕ ಬಡ್ಡಿದರಕ್ಕೆ ಸಾಲ ಪಡೆಯಬೇಕಾಗುತ್ತದೆ ಎಂಬ ಚಿಂತೆ ಮಾಡಬೇಕಾಗಿಲ್ಲ.

ಸರಳವಾಗಿ ಸಾಲ ಪಡೆದುಕೊಳ್ಳಿ
ಕ್ರೆಡಿಟ್ ಸ್ಕೋರ್ ಕಡಿಮೆಯಿರುವಾಗ ನೀವು ಫಿಕ್ಸಿಡ್ ಡೆಪಾಸಿಟ್ ಮೇಲೆ ಕಡಿಮೆ ಬಡ್ಡಿದರಕ್ಕೆ ಸಾಲವನ್ನು ಪಡೆಯಲು ಸಾಧ್ಯವಾಗುತ್ತದೆ. ಇದು ಸುಲಭವು ಕೂಡಾ ಹೌದು. ನೀವು ಫಿಕ್ಸಿಡ್ ಡೆಪಾಸಿಟ್ ಮೇಲೆ ಸಾಲವನ್ನು ಪಡೆಯುವುದರಿಂದ ನಿಮಗೆ ಹಲವಾರು ಪ್ರಯೋಜನಗಳು ಲಭ್ಯವಿರುತ್ತದೆ. ಕಡಿಮೆ ಬಡ್ಡಿದರದಲ್ಲಿಯೂ ಸಾಲ ಲಭ್ಯವಾಗುತ್ತದೆ. ಅಧಿಕ ದಾಖಲೆಗಳನ್ನು ಸಲ್ಲಿಸದೆ, ಸರಳವಾಗಿ ನೀವು ಸಾಲವನ್ನು ಪಡೆಯಲು ಸಾಧ್ಯವಾಗುತ್ತದೆ.
ಫಿಕ್ಸಿಡ್ ಡೆಪಾಸಿಟ್ ಮೇಲೆ ಸಾಲವನ್ನು ಪಡೆಯುವುದಕ್ಕೆ ಯಾವುದೇ ಕ್ಲಿಷ್ಟವಾದ ವಿಧಾನಗಳನ್ನು ನಾವು ಪಾಲಿಸಬೇಕಾಗಿಲ್ಲ. ಹಾಗೆಯೇ ಕ್ರೆಡಿಟ್ ಕಾರ್ಡ್ ಹಿಸ್ಟರಿ ಬಗ್ಗೆಯೂ ನೀವು ತಲೆ ಬಿಸಿ ಮಾಡಬೇಕಾಗಿಲ್ಲ. ಸಾಲ ಪಡೆಯುವ ಪ್ರಕ್ರಿಯೆಯು ಶೀಘ್ರವಾಗಿ ನಡೆಯಲಿದೆ. ಪ್ರಸ್ತುತ ಸಾಲವನ್ನು ಪಡೆಯಲು ಬಯಸುವವರು ಹೆಚ್ಚಾಗಿ ಫಿಕ್ಸಿಡ್ ಡೆಪಾಸಿಟ್ ಮೇಲೆ ಸಾಲ ಪಡೆಯುವುದು ಹೆಚ್ಚಾಗುತ್ತಿದೆ.
ರಿಟೇಲ್ ಗ್ರಾಹಕರಿಗೆ ಸಾಮಾನ್ಯವಾಗಿ ಮೂರು ರೀತಿಯಲ್ಲಿ ಫಿಕ್ಸಿಡ್ ಡೆಪಾಸಿಟ್ ಮೇಲೆ ಸಾಲ ಸೌಲಭ್ಯ ಲಭ್ಯವಿರುತ್ತದೆ. ಹಾಗೆಯೇ ಸಾಲ ಮರುಪಾವತಿ ಅವಧಿಯಲ್ಲಿ ಬೇರೆ ಬೇರೆ ಆಯ್ಕೆಗಳು ಕೂಡಾ ಇದೆ. ನಿಗದಿತ ಅವಧಿ ಅಥವಾ ಮೆಚ್ಯೂರಿಟಿಗೂ ಮುನ್ನ ಸಾಲ ಮರುಪಾವತಿ ಮಾಡಬೇಕಾಗುತ್ತದೆ.
ಎಷ್ಟು ಮೊತ್ತ ಸಾಲ ಪಡೆಯಬಹುದು?
ಬ್ಯಾಂಕ್‌ನ ಪಾಲಿಸಿ ಆಧಾರದಲ್ಲಿ ಸಾಲದ ಮೊತ್ತವು ನಿರ್ಧಾರವಾಗುತ್ತದೆ. ಸಾಮಾನ್ಯವಾಗಿ ಓವರ್‌ಡ್ರಾಫ್ಟ್ ಫೆಸಿಲಿಟಿ ಇರುತ್ತದೆ. ಸಾಮಾನ್ಯವಾಗಿ ಎಫ್‌ಡಿ ಹೂಡಿಕೆಯ ಶೇಕಡ 70ರಿಂದ ಶೇಕಡ 95ರಷ್ಟು ಮೊತ್ತವನ್ನು ಸಾಲವನ್ನು ನೀಡಲಾಗುತ್ತದೆ. ಆದರೆ ಕೆಲವು ಬ್ಯಾಂಕುಗಳು ಕೊಂಚ ಅಧಿಕ ಸಾಲವನ್ನು ನೀಡಬಹುದು. ನೀವು ಹೂಡಿಕೆ ಮಾಡಿದ ಸಂಪೂರ್ಣ ಎಫ್‌ಡಿ ಮೊತ್ತವನ್ನು ಸಾಲವಾಗಿ ಪಡೆಯಲು ಸಾಧ್ಯವಾಗುವುದಿಲ್ಲ ಎಂಬುವುದು ನೆನಪಿರಲಿ.
ಸಾಲದ ಬಡ್ಡಿದರ ಕಡಿಮೆ
ನಾವು ವೈಯಕ್ತಿಕ ಸಾಲಕ್ಕೆ ಹೋಲಿಕೆ ಮಾಡಿದಾಗ ಫಿಕ್ಸಿಡ್ ಡೆಪಾಸಿಟ್ ಮೇಲೆ ಪಡೆಯುವ ಸಾಲಕ್ಕೆ ಬಡ್ಡಿದರವು ಕಡಿಮೆಯಾಗಿರುತ್ತದೆ. ಆದ್ದರಿಂದಾಗಿ ಪ್ರಸ್ತುತ ಹಲವಾರು ಮಂದಿ ಎಫ್‌ಡಿ ಮೇಲೆ ಸಾಲವನ್ನು ಪಡೆಯಲು ಬಯಸುತ್ತಾರೆ. ಬ್ಯಾಂಕುಗಳು ಸಾಮಾನ್ಯವಾಗಿ ಫಿಕ್ಸಿಡ್ ಡೆಪಾಸಿಟ್ ಮೇಲೆ ನೀಡುವ ಬಡ್ಡಿದರಕ್ಕಿಂತ ಹೆಚ್ಚುವರಿಯಾಗಿ 50ರಿಂದ 200 ಬೇಸಿಕ್ ಪಾಯಿಂಟ್ ಬಡ್ಡಿದರವನ್ನು ಸಾಲದ ಮೇಲೆ ವಿಧಿಸುತ್ತಾರೆ.
ತಜ್ಞರ ಪ್ರಕಾರ ಇಂತಹ ಸಾಲದ ಮೇಲೆ ಬಡ್ಡಿದರವು ಸಾಮಾನ್ಯವಾಗಿ ಶೇಕಡ 5ರಿಂದ 8ರಷ್ಟಿರುತ್ತದೆ ಎಂದು ಹೇಳುತ್ತಾರೆ. ಇನ್ನು ಈ ಫಿಕ್ಸಿಡ್ ಡೆಪಾಸಿಟ್ ಮೇಲೆ ನೀಡುವ ಸಾಲವು ಸಾಮಾನ್ಯವಾಗಿ ಸುರಕ್ಷಿತ ಎಂದು ನಂಬಲಾಗುತ್ತದೆ. ನೀವು ಸಾಲವನ್ನು ಮರುಪಾವತಿ ಮಾಡದಿದ್ದರೆ, ನಿಮ್ಮ ಫಿಕ್ಸಿಡ್ ಡೆಪಾಸಿಟ್‌ನಿಂದ ಸಾಲದ ಮೊತ್ತವನ್ನು ಮೆಚ್ಯೂರಿಟಿ ವೇಳೆ ಕಡಿತಗೊಳಿಸಲಾಗುತ್ತದೆ. ಹಾಗೆಯೆ ಯಾವುದೇ ಪ್ರಕ್ರಿಯೆ ಶುಲ್ಕ ಇರುವುದಿಲ್ಲ.


Click it and Unblock the Notifications